Advertisement

Lok Sabha Elections: ಮಾ.16, 18: ಮೋದಿ ರಾಜ್ಯ ಪ್ರವಾಸ

11:37 PM Mar 13, 2024 | Team Udayavani |

ಬೆಂಗಳೂರು: ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರ ಕರ್ನಾಟಕ ಭೇಟಿಗೆ ದಿನಾಂಕ ನಿಗದಿಯಾಗಿದ್ದು, ಮಾ.16ರಂದು ಕಲಬುರಗಿ ಹಾಗೂ ಮಾ.18ರಂದು ಶಿವಮೊಗ್ಗಕ್ಕೆ ಭೇಟಿ ನೀಡಲಿದ್ದಾರೆ.

Advertisement

ಬುಧವಾರ ರಾಜ್ಯ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರಿಗೆ ಈ ಮಾಹಿತಿ ನೀಡಿರುವ ಪಕ್ಷದ ಪ್ರಧಾನ ಕಾರ್ಯದರ್ಶಿ ವಿ.ಸುನಿಲ್‌ ಕುಮಾರ್‌, ರಾಜ್ಯದಲ್ಲಿ ಎರಡು ದಿನಗಳ ಕಾಲ ಪ್ರಧಾನಿ ಮೋದಿ ಪ್ರವಾಸ ಕೈಗೊಳ್ಳುತ್ತಿದ್ದು, ಇದಕ್ಕಾಗಿ ಬಿಜೆಪಿ ಸಿದ್ಧತೆ ಮಾಡಿಕೊಳ್ಳುತ್ತಿದೆ ಎಂದರು.

ಲೋಕಸಭಾ ಚುನಾವಣೆ ದೃಷ್ಟಿಯಿಂದ 28 ಲೋಕಸಭಾ ಕ್ಷೇತ್ರಗಳನ್ನು 8 ಕ್ಲಸ್ಟರ್‌ಗಳನ್ನಾಗಿ ನಾವು ವಿಂಗಡಿಸಿದ್ದೇವೆ. ಸ್ಥಳೀಯ ರಾಜಕೀಯ ಮತ್ತು ಭೌಗೋಳಿಕ ಹಿನ್ನೆಲೆಯನ್ನು ಕಣ್ಮುಂದೆ ಇಟ್ಟುಕೊಂಡು ಆ 8 ಕ್ಲಸ್ಟರ್‌ಗಳಲ್ಲಿ ಬೇರೆ ಬೇರೆ ರೀತಿಯ ಕಾರ್ಯಕ್ರಮ ಮತ್ತು ತಂತ್ರಗಾರಿಕೆಗಳನ್ನು ಮಾಡಲಾಗುತ್ತಿದೆ.

ಈಗಾಗಲೇ ಆ 8 ಕ್ಲಸ್ಟರ್‌ಗಳಿಗೆ ರಾಷ್ಟ್ರೀಯ ನಾಯಕರ ಪ್ರವಾಸಗಳು ಮುಕ್ತಾಯವಾಗಿವೆ. ಮೈಸೂರಿಗೆ ಅಮಿತ್‌ ಶಾ, ಕಲಬುರಗಿಗೆ ಶಿವರಾಜ್‌ ಸಿಂಗ್‌ ಚೌಹಾಣ್‌, ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಬೆಳಗಾವಿಗೆ, ದೇವೇಂದ್ರ ಫಡ್ನವೀಸ್‌ ಮಂಗಳೂರಿಗೆ ಬಂದಿದ್ದರು. 8 ಕ್ಲಸ್ಟರ್‌ಗಳಲ್ಲೂ ಪ್ರವಾಸ ಮುಗಿದಿದೆ.

ಮಾ.16ರಂದು ಕಲಬುರಗಿಯ ಎನ್‌ವಿ ಆಟದ ಮೈದಾನದಲ್ಲಿ ಹಾಗೂ ಮಾ.18ರಂದು ಶಿವಮೊಗ್ಗದ ಅಲ್ಲಮಪ್ರಭು ಮೈದಾನದಲ್ಲಿ ಬೃಹತ್‌ ಸಾರ್ವಜನಿಕ ಸಭೆ ನಡೆಯಲಿದೆ. ಇದರಲ್ಲಿ ಪ್ರಧಾನಿ ಮಾತನಾಡಲಿದ್ದಾರೆ ಎಂದರು.

Advertisement

ಮುಂದಿನ ದಿನಗಳಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಕೇಂದ್ರ ಗೃಹಸಚಿವ ಅಮಿತ್‌ ಶಾ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಸಹಿತ ಅನೇಕ ಗಣ್ಯರು ಬೇರೆ ಬೇರೆ ಲೋಕಸಭಾ ಕ್ಷೇತ್ರಗಳಿಗೆ ಭೇಟಿ ನೀಡಲಿದ್ದಾರೆ ಎಂದು ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next