Advertisement
ಈಗಾಗಲೇ 7 ಕ್ಷೇತ್ರಗಳ ಮೊದಲ ಪಟ್ಟಿ ಬಿಡುಗಡೆ ಮಾಡಿರುವ ಕಾಂಗ್ರೆಸ್ 2ನೇ ಪಟ್ಟಿ ಬಿಡುಗಡೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ನಿರೀಕ್ಷಿಸುತ್ತಿರುವುದು ಒಂದೆಡೆಯಾದರೆ, ಹಲವು ಕ್ಷೇತ್ರಗಳಿಗೆ ಇನ್ನು ಸಮರ್ಥ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸಲು ಸಾಧ್ಯವಾಗಿಲ್ಲ.
Related Articles
Advertisement
ಸಚಿವದ್ವಯರಿಗೆ ಒತ್ತಡ:ಅಭ್ಯರ್ಥಿಗಳ ಕೊರತೆ ನೀಗಿಸುವ ಸಲುವಾಗಿ ಕೋಲಾರದಿಂದ ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಹಾಗೂ ಚಾಮರಾಜನಗರದಿಂದ ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರು ಕಣಕ್ಕಿಳಿಯಬೇಕೆಂಬ ಒತ್ತಡ ದಿನೇದಿನೆ ಹೆಚ್ಚಾಗುತ್ತಿದೆ. ಆದರೆ ಈ ಇಬ್ಬರು ಸಚಿವರು ತಮ್ಮ ಬದಲಿಗೆ ಕ್ರಮವಾಗಿ ತಮ್ಮ ಪುತ್ರಿ ಹಾಗೂ ಪುತ್ರನಿಗೆ ಟಿಕೆಟ್ ಕೊಡಬೇಕೆಂದು ಪಟ್ಟು ಹಿಡಿದಿದ್ದಾರೆ. ಆದರೆ ಹೈಕಮಾಂಡ್ ಆಗಲಿ ರಾಜ್ಯದ ನಾಯಕರಾಗಲಿ ಈ ಬೇಡಿಕೆಗೆ ಸುತಾರಂ ಒಪ್ಪಿಗೆ ನೀಡಿಲ್ಲ. ವಿಶೇಷವಾಗಿ ಮಹದೇವಪ್ಪ ಅವರು ತಮ್ಮ ಬದಲಿಗೆ ಪುತ್ರ ಸುನಿಲ್ ಬೋಸ್‌ಗೆ ಚಾಮರಾಜನಗರದಿಂದ ಟಿಕೆಟ್ ಕೊಡಬೇಕೆಂದು ಬಲವಾಗಿ ಪಟ್ಟು ಹಿಡಿದಿದ್ದಾರೆ. ಆದರೆ ಸಚಿವರೇ ಸ್ಪರ್ಧಿಸಿದರೆ ಮಾತ್ರ ಗೆಲುವು ಗ್ಯಾರಂಟಿ ಎಂಬುದು ಪಕ್ಷ ನಡೆಸಿದ ಹಲವು ಸಮೀಕ್ಷೆಗಳಿಂದ ವ್ಯಕ್ತವಾಗಿರುವುದರಿಂದ ಸಚಿವರ ಸ್ಪರ್ಧೆಗೆ ಒತ್ತಡ ಹೆಚ್ಚಿದೆ. ಕೆಎಚ್‌ಎಂಗೆ ವಿರೋಧ
ಈ ಮಧ್ಯೆ ಸಚಿವ ಮುನಿಯಪ್ಪ ಅವರಿಗಾಗಲಿ ಅಥವಾ ಅವರ ಕುಟುಂಬದ ಯಾವುದೇ ಸದಸ್ಯರಿಗಾಗಲಿ ಲೋಕಸಭಾ ಚುನಾವಣೆಯ ಟಿಕೆಟ್ ಕೊಡಬಾರದೆಂದು ಕೋಲಾರ ಜಿಲ್ಲೆಯ ಕಾಂಗ್ರೆಸ್ ಶಾಸಕರು ಹಾಗೂ ಮಾಜಿ ಶಾಸಕರು, ಮಾಜಿ ಸಚಿವರು ಪಟ್ಟು ಹಿಡಿದಿರುವುದರಿಂದ ಕಾಂಗ್ರೆಸ್ ಪಕ್ಷ ಈಗ ಅಕ್ಷರಶಃ ಇಕ್ಕಟ್ಟಿಗೆ ಸಿಲುಕಿದೆ. ಯಾವುದೇ ತೀರ್ಮಾನ ಕೈಗೊಂಡರೂ ಪಕ್ಷಕ್ಕೆ ಹಾನಿ ತಪ್ಪಿದ್ದಲ್ಲ ಎಂಬ ಆತಂಕ ಶುರುವಾಗಿದೆ. ಎಸ್‌ಟಿಎಸ್, ಹೆಬ್ಬಾರ್ ಸ್ಟಾಂಡ್‌ಬೈ ಅಭ್ಯರ್ಥಿಗಳು
ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಅಡ್ಡಮತದಾನ ಮಾಡಿದ ಬಿಜೆಪಿಯ ಯಶವಂತಪುರ ಶಾಸಕ ಎಸ್.ಟಿ.ಸೋಮಶೇಖರ್ ಹಾಗೂ ಮತದಾನಕ್ಕೆ ಗೈರು ಹಾಜರಾದ ಯಲ್ಲಾಪುರದ ಬಿಜೆಪಿ ಶಾಸಕ ಶಿವರಾಮ ಹೆಬ್ಬಾರ್ ಅವರು ಕಾಂಗೆಸ್‌ನ ಸ್ಟಾಂಡ್‌ಬೈ ಅಭ್ಯರ್ಥಿಗಳಾಗಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸ್ವಂತ ಜಿಲ್ಲೆ ಮೈಸೂರು ಅಭ್ಯರ್ಥಿ ಬಗ್ಗೆ ಇನ್ನೂ ಸಾಕಷ್ಟು ಗೊಂದಲಗಳಿವೆ, ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಮೂಡಿರುವ ಅನಿಶ್ಚಿತತೆ ಇನ್ನೂ ನಿವಾರಣೆಯಾಗಿಲ್ಲ. ಸಿಎಂ ಪುತ್ರ ಡಾ. ಯತೀಂದ್ರ ಅವರನ್ನು ಕಣಕ್ಕಿಳಿಸಬೇಕೆಂದು ಕಾಂಗ್ರೆಸ್ ಹೈಕಮಾಂಡ್ ಒತ್ತಡ ಹೇರುತ್ತಿದ್ದರೂ ಸಿಎಂ ಸಮ್ಮತಿ ನೀಡಿಲ್ಲ. ಮೈಸೂರಿನ ಬಿಜೆಪಿ ಅಭ್ಯರ್ಥಿ ಯಾರಾಗಲಿದ್ದಾರೆ ಎಂಬುದರ ಮೇಲೆ ಸಿಎಂ ತೀರ್ಮಾನ ಕೈಗೊಳ್ಳಲಿದ್ದಾರೆ. ಅದೇ ರೀತಿ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರಕ್ಕೂ ಕಾಂಗ್ರೆಸ್ ಅಭ್ಯರ್ಥಿ ಕೊರತೆ ಎದುರಿಸುತ್ತಿದೆ. ಹೀಗಾಗಿ ಎಸ್.ಟಿ.ಸೋಮಶೇಖರ್ ಕೊನೇ ಗಳಿಗೆಯಲ್ಲಿ ಮೈಸೂರು ಇಲ್ಲವೇ ಬೆಂಗಳೂರು ಉತ್ತರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದರೂ ಅಚ್ಚರಿ ಇಲ್ಲ. ಇನ್ನೊಂದೆಡೆ ಉತ್ತರ ಕನ್ನಡ ಕ್ಷೇತ್ರದಲ್ಲೂ ಕಾಂಗ್ರೆಸ್ ಅಭ್ಯರ್ಥಿತನದ ಕೊರತೆ ಎದುರಿಸುತ್ತಿದೆ. ಮಾಜಿ ಶಾಸಕಿ ಅಂಜಲಿ ನಿಂಬಾಳ್ಕರ್, ರವೀಂದ್ರ ನಾಯ್ಕ ಜತೆಗೆ ಬಿಜೆಪಿ ಶಾಸಕ ಶಿವರಾಮ ಹೆಬ್ಬಾರ್ ಹೆಸರು ಚಲಾವಣೆಯಲ್ಲಿದೆ. ಸೂಕ್ತ ಅಭ್ಯರ್ಥಿ ಸಿಗದಿದ್ದರೆ ಬಿಜೆಪಿಗೆ ರಾಜೀನಾಮೆ ಕೊಡಿಸಿ ಹೆಬ್ಬಾರ್ ಅವರನ್ನೇ ಅಭ್ಯರ್ಥಿಯಾಗಿ ಮಾಡಬಹುದೆಂಬ ಲೆಕ್ಕಾಚಾರಗಳು ನಡೆದಿವೆ.