Advertisement

Lok Sabha Elections 2024: ಹಣ, ಸೊತ್ತು ಸಾಗಾಟ: ಜತೆಗಿರಲಿ ದಾಖಲೆ

01:13 AM Mar 18, 2024 | Team Udayavani |

ಮಂಗಳೂರು: ಚುನಾವಣ ನೀತಿ ಸಂಹಿತೆ ಹಿನ್ನೆಲೆ ಯಲ್ಲಿ ನಗದು, ಎಲೆಕ್ಟ್ರಾನಿಕ್‌ ಹಾಗೂ
ಉಡುಗೊರೆಯಂತಹ ಇತರ ಸೊತ್ತು ಗಳನ್ನು ಸಾಗಿಸುವಾಗ ಜತೆಯಲ್ಲಿ ಸೂಕ್ತ ದಾಖಲೆ ಇಟ್ಟುಕೊಳ್ಳುವುದು ಉತ್ತಮ.

Advertisement

50,000 ರೂ.ಗಿಂತ ಹೆಚ್ಚು ಹಣ ಸಾಗಾಟ ಮಾಡುವುದಾದರೆ ಸಂಬಂಧಿಸಿದ ಎಲ್ಲ ಅಗತ್ಯ ದಾಖಲೆ ಹೊಂದಿ ರಬೇಕು. ಹಣವನ್ನು ಎಲ್ಲಿಂದ ಎಲ್ಲಿಗೆ, ಯಾವ ಉದ್ದೇಶಕ್ಕೆ ಸಾಗಿಸಲಾಗುತ್ತಿದೆ ಎಂಬಿತ್ಯಾದಿ ಮಾಹಿತಿಯನ್ನು ತಪಾಸಣ ಅಧಿಕಾರಿಗಳಿಗೆ ತಿಳಿಸಬೇಕು. ಬ್ಯಾಂಕ್‌ ಸ್ಲಿಪ್‌, ಎಟಿಎಂನಿಂದ ವಿದ್‌ಡ್ರಾ ಮಾಡಿ ರುವ ಸ್ಲಿಪ್‌ ಮೊದಲಾದವುಗಳನ್ನು ನೀಡಬೇಕಾಗುತ್ತದೆ.

ಒಂದು ವೇಳೆ ನಿಯಮ ಉಲ್ಲಂಘನೆ ಕಂಡುಬಂದರೆ ಅಂತಹ ಹಣ, ಸೊತ್ತುಗಳನ್ನು ವಶಕ್ಕೆ ಪಡೆಯಲಾಗುತ್ತದೆ. ಸೂಕ್ತ ದಾಖಲೆಗಳನ್ನು ನೀಡಿದ ಬಳಿಕವೇ ವಾಪಸ್‌ ಕೊಡಲಾಗುತ್ತದೆ. ಇಲ್ಲವಾದರೆ ಎಫ್ಐಆರ್‌ ದಾಖಲಾಗುತ್ತದೆ. ಮದುವೆ ಮತ್ತಿತರ ಕಾರ್ಯಕ್ರಮ ಗಳಿಗೆ ಸಂಬಂಧಿಸಿದಂತೆ ಹಣ, ಇತರ ವಸ್ತುಗಳನ್ನು ಸಾಗಿಸುವ ಸಂದರ್ಭ
ದಲ್ಲಿ ಬಿಲ್‌ ಜತೆಗೆ ಆಮಂತ್ರಣ ಪತ್ರಗಳನ್ನು ಕೂಡ ಜತೆಯಲ್ಲಿಟ್ಟುಕೊಳ್ಳು ವುದು ಸೂಕ್ತ. ಅದೇ ರೀತಿ ವ್ಯಾವಹಾರಿಕ ಉದ್ದೇಶದ ಸಾಗಾಟದ ಸಂದರ್ಭದಲ್ಲಿಯೂ ವಾಣಿಜ್ಯ, ಅಬಕಾರಿ ಮೊದಲಾದ ಇಲಾಖೆಗಳಿಗೆ ಅಗತ್ಯವಿರುವ ಎಲ್ಲ ದಾಖಲೆಗಳನ್ನು ಇಟ್ಟುಕೊಳ್ಳಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಎಲ್ಲೆಲ್ಲಿ ಚೆಕ್‌ಪೋಸ್ಟ್‌ಗಳು?
ಈಗಾಗಲೇ ದ.ಕ. ಜಿಲ್ಲೆಯ ಚಾರ್ಮಾಡಿ, ನಾರಾವಿ, ಬೆಳುವಾಯಿ- ಕಾರ್ಕಳ, ಬಪ್ಪನಾಡು, ಮಾರೂರು, ತೋಡಾರ್‌- ಎಡಪದವು, ಕೂಳೂರು, ಮುಕ್ಕ, ಆಡಂಕುದ್ರು ನಂತೂರು, ಕೊಟ್ಟಾರ, ತಲಪಾಡಿ, ಮುಡಿಪು, ನೆತ್ತಿಲ ಪದವು, ಆನೆಕಲ್‌, ಸಾಲೆತ್ತೂರು, ನೆಲ್ಲಿಕಟ್ಟೆ, ಪಾಣಾಜೆ, ಈಶ್ವರಮಂಗಲ, ಸಾರಡ್ಕ, ಜಾಲ್ಸೂರು, ಸಂಪಾಜೆ, ಗುಂಡ್ಯ ಸೇರಿದಂತೆ ಅಂತಾರಾಜ್ಯ 9, ಅಂತರ್‌ ಜಿಲ್ಲಾ ಮತ್ತು ಸ್ಥಳೀಯ ತಲಾ 7 ಸೇರಿದಂತೆ ಒಟ್ಟು 23 ಚೆಕ್‌ಪೋಸ್ಟ್‌ಗಳು ಕಾರ್ಯಾರಂಭಗೊಂಡಿವೆ.

ಅಗತ್ಯ ಬಿದ್ದರೆ ಇನ್ನಷ್ಟು ಕಡೆ ಚೆಕ್‌ಪೋಸ್ಟ್‌ ಗಳನ್ನು ತೆರೆಯಲಾಗುತ್ತದೆ. ಚೆಕ್‌ಪೋಸ್ಟ್‌ಗಳಲ್ಲಿ ಮಾತ್ರವಲ್ಲದೆ ಇತರ ಕೆಲವು ಸ್ಥಳಗಳಲ್ಲಿಯೂ ಸಂಚಾರಿ ದಳಗಳು ನಿಗಾ ವಹಿಸುತ್ತಿವೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

Advertisement

7 ಮಂದಿ ಗಡೀಪಾರು
ಮಂಗಳೂರು: ಚುನಾವಣೆ ಸಂದರ್ಭ ಕಾನೂನು ಸುವ್ಯವಸ್ಥೆ ಸಲುವಾಗಿ ಪೊಲೀಸ್‌ ಕಮಿಷನರೆಟ್‌ ವ್ಯಾಪ್ತಿಯ 7 ಮಂದಿ ಕ್ರಿಮಿನಲ್‌ ಹಿನ್ನೆಲೆಯುಳ್ಳವರನ್ನು 3 ತಿಂಗಳ ಅವಧಿಗೆ ಗಡೀಪಾರು ಮಾಡಿ ಮಂಗಳೂರು ಪೊಲೀಸ್‌ ಆಯುಕ್ತ ಅನುಪಮ್‌ ಅಗರ್ವಾಲ್‌ ಆದೇಶ ಹೊರಡಿಸಿದ್ದಾರೆ.

ಕೋಡಿಕಲ್‌ನ ಪ್ರೀತಂ, ಉರ್ವದ ಹೇಮಂತ್‌ ಆಲಿಯಾಸ್‌ ಸೋನು, ಕೋಟೆಕಾರ್‌ನ ಶಿವರಾಜ್‌ ಆಲಿಯಾಸ್‌ ಶಿವು, ಸೋಮೇಶ್ವರ ಪಿಲಾರ್‌ನ ಎಡ್ವಿನ್‌ ರಾಹುಲ್‌ ಡಿ’ ಸೋಜಾ, ಉಳ್ಳಾಲ ಮೇಲಂಗಡಿಯ ಇಬ್ರಾಹಿಂ, ಕೋಡಿಕಲ್‌ನ ಪ್ರವೀಣ್‌ ಪೂಜಾರಿ, ದೇರಳಕಟ್ಟೆಯ ಮಹಮ್ಮದ್‌ ಮುಸ್ತಫಾ ಗಡಿಪಾರಾದವರು. ಇದಲ್ಲದೆ 286 ಮಂದಿಯಿಂದ ಮುಚ್ಚಳಿಕೆ ಪಡೆದುಕೊಳ್ಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next