Advertisement

ಜೆಡಿಎಸ್‌ ಗಳಿಸಿದ್ದಕ್ಕಿಂತ ಕಳೆದುಕೊಂಡದ್ದೇ ಹೆಚ್ಚು

12:57 AM Mar 26, 2019 | Team Udayavani |

ಬೆಂಗಳೂರು: ಲೋಕಸಭೆ ಚುನಾವಣೆ ಸೀಟು ಹಂಚಿಕೆಯಲ್ಲಿ ಹನ್ನೆರಡು ಕ್ಷೇತ್ರಕ್ಕೆ ಬೇಡಿಕೆಯಿಟ್ಟು ಹತ್ತು ಕ್ಷೇತ್ರಕ್ಕೆ ಪಟ್ಟು ಹಿಡಿದು ಎಂಟು ಕ್ಷೇತ್ರಕ್ಕೆ ತೃಪ್ತಿಪಟ್ಟಿದ್ದ ಜೆಡಿಎಸ್‌, ಅಂತಿಮವಾಗಿ ಇನ್ನೂ ಒಂದು ಕ್ಷೇತ್ರ ಬಿಟ್ಟುಕೊಟ್ಟು ರಾಜಕೀಯವಾಗಿ ಹಿನ್ನಡೆ
ಅನುಭವಿಸಿದೆ.

Advertisement

ಎಂಟು ಕ್ಷೇತ್ರಗಳ ಪೈಕಿ ನಾಲ್ಕರಲ್ಲಿ ಸಮರ್ಥ ಅಭ್ಯರ್ಥಿಗಳು ಸಿಗದೆ ಹೆಣಗಾಡಿದ ಕಾರಣ ಹಾಗೂ ಒಳ ಏಟಿನ ಆತಂಕ ದಿಂದ ಬೆಂಗಳೂರು ಉತ್ತರ ಕ್ಷೇತ್ರ ಬಿಟ್ಟುಕೊಟ್ಟಿರುವ ಜೆಡಿಎಸ್‌ಗೆ ಗಟ್ಟಿಯಾಗಿ ಸಿಕ್ಕಿರುವುದು ಕೇವಲ ನಾಲ್ಕು ಕ್ಷೇತ್ರಗಳು ಮಾತ್ರ.

ಇದರ ಬದಲು ಮೊದಲೇ ಅಭ್ಯರ್ಥಿಗಳನ್ನು ಹುಡುಕಿಕೊಂಡು ಐದು ಕ್ಷೇತ್ರ ಮಾತ್ರ ಪಡೆದಿದ್ದರೆ ಅಥವಾ ಫ್ರೆಂಡ್ಲಿ ಫೈಟ್‌ ಎಂದು ನಿರ್ಧರಿಸಿ ಕೆಲವೊಂದು ಕ್ಷೇತ್ರ ಗಳಲ್ಲಿ ಮೌಖೀಕ ಒಪ್ಪಂದ ಮಾಡಿಕೊಂಡಿದ್ದರೂ ಹಾಸನ, ಮಂಡ್ಯ, ತುಮಕೂರು ಕ್ಷೇತ್ರಗಳಲ್ಲಿ “ರಂಪಾಟ’ಕ್ಕೆ ಅವಕಾಶ ಇರುತ್ತಿರಲಿಲ್ಲ. ಮೈತ್ರಿ ಪಕ್ಷ ಕಾಂಗ್ರೆಸ್‌ನ ಕೆಲವು ನಾಯಕರ ಜತೆ ಸಂಘರ್ಷವೂ ನಡೆಯುತ್ತಿರಲಿಲ್ಲ ಎಂದು ಪಕ್ಷದ ಆಂತರಿಕ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ.

ಸಿದ್ದರಾಮಯ್ಯ ತಂತ್ರಗಾರಿಕೆ?: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರ್ಯತಂತ್ರದಿಂದಲೇ ಜೆಡಿಎಸ್‌ ಮೈಸೂರು ಕಳೆದುಕೊಂಡು,ಬೆಂಗಳೂರು ಉತ್ತರ ಕ್ಷೇತ್ರ ಬಿಟ್ಟುಕೊಟ್ಟು, ಪಕ್ಷದ ಬಲ ಇಲ್ಲದ ಉತ್ತರ ಕನ್ನಡ ಹಾಗೂ ಉಡುಪಿ
ಚಿಕ್ಕಮಗಳೂರು, ಗೆಲ್ಲಲು ಕಷ್ಟವಾದ ವಿಜಯಪುರ ಕ್ಷೇತ್ರ ಪಡೆದುಕೊಳ್ಳು ವಂತಾಯಿತು.

ಸಿದ್ದರಾಮಯ್ಯ ಅವರು ಮೈಸೂರು ಕ್ಷೇತ್ರ ಯಾವುದೇ ಕಾರಣಕ್ಕೂ ಬಿಟ್ಟುಕೊಡುವುದಿಲ್ಲ ಎಂದು ಪಟ್ಟು ಹಿಡಿದು ಮಂಡ್ಯ, ಹಾಸನ,ತುಮಕೂರು, ಶಿವಮೊಗ್ಗ ಬಿಟ್ಟುಕೊಟ್ಟು ಶಕ್ತಿ ಇಲ್ಲದ ಮೂರು ಕ್ಷೇತ್ರ ಸೇರಿ 8 ಕ್ಷೇತ್ರ ಕೊಟ್ಟಂತೆ ಬಿಂಬಿಸಿದರು. ಬೆಂಗಳೂರು ಉತ್ತರದಲ್ಲೂ ಐವರು ಕಾಂಗ್ರೆಸ್‌ ಶಾಸಕರು ಜೆಡಿಎಸ್‌ನ ಯಾವುದೇ ಅಭ್ಯರ್ಥಿಯನ್ನೂ ಒಪ್ಪದೆ ಪರೋಕ್ಷ ಅಸಹಕಾರದ ಸೂಚನೆ ನೀಡಿ ಅಂತಿಮ ವಾಗಿ ತಮಗೇ ಪಡೆದುಕೊಂಡರು. ಇದೆಲ್ಲವೂ ಸಿದ್ದರಾಮಯ್ಯ ಅವರ ತಂತ್ರದ ಭಾಗವೇ ಎಂಬ ಅನುಮಾನವೂ ಪಕ್ಷದ ಕೆಲವರಲ್ಲಿ ಮೂಡಿದೆ.

Advertisement

ಮೂಲತಃ ಜೆಡಿಎಸ್‌ಗೆ ಮಂಡ್ಯ, ಮೈಸೂರು, ಹಾಸನ, ತುಮಕೂರು, ಬೆಂಗಳೂರು ಉತ್ತರ,ಕೋಲಾರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಬೆಂಗಳೂರು ಗ್ರಾಮಾಂತರ, ಶಿವಮೊಗ್ಗ, ದಾವಣಗೆರೆ,ಬೀದರ್‌ ಕ್ಷೇತ್ರಗಳಲ್ಲಿ ಬಲ ಇತ್ತು. ಅದರ ಆಧಾರದಲ್ಲಿ ಅಭ್ಯರ್ಥಿಗಳನ್ನು ಹುಡುಕಿಕೊಂಡು, ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿಯವರ ಜತೆಗಿನ ಮಾತುಕತೆ ಸಂದರ್ಭದಲ್ಲಿ ಐದರಿಂದ ಆರು ಕ್ಷೇತ್ರಕ್ಕೆ ಮಾತ್ರ ಬೇಡಿಕೆ ಇಡಬೇಕಿತ್ತು. ಸೀಟು ಹಂಚಿಕೆಯಾದ ನಂತರ ಅಭ್ಯರ್ಥಿಗಳಿಗೆ ತಲಾಷೆ ನಡೆಸಿದ್ದೇ ಹಿನ್ನಡೆಗೆ ಕಾರಣ.

ಆರು ಕ್ಷೇತ್ರ ಬಿಟ್ಟುಕೊಟ್ಟರೆ ಸರಿ, ಇಲ್ಲದಿದ್ದರೆ ಮೈತ್ರಿಯೇ ಬೇಡ. ಸಮ್ಮಿಶ್ರ ಸರ್ಕಾರ ಇದ್ದರೂ ಲೋಕಸಭೆ ಚುನಾವಣೆಯಲ್ಲಿ ಫ್ರೆಂಡ್ಲಿ ಫೈಟ್‌ ಮಾಡೋಣ ಎಂದು ನಿರ್ಧರಿಸಿ ಬಿಎಸ್‌ಪಿ ಜತೆ ವಿಧಾನಸಭೆ ಚುನಾವಣೆಯಲ್ಲಿ ಮಾಡಿಕೊಂ ಡಂತೆ ಮೈತ್ರಿ ಮಾಡಿಕೊಂಡು ಎರಡು ಸ್ಥಾನ ನೀಡಿದ್ದರೆ ಜೆಡಿಎಸ್‌ಗೆ ಲಾಭವಾಗುತ್ತಿತ್ತು. ಇದೀಗ ಸಿಕ್ಕಿದ್ದು 8, ಸ್ಪರ್ಧೆ ಮಾಡಿದ್ದು 7, ಅದರಲ್ಲೂ ಎರಡು ಕಡೆ ಕಾಂಗ್ರೆಸ್‌ನವರದೇ ಅಭ್ಯರ್ಥಿಗಳು ಎಂಬಂತಾಗಿದೆ.

ಈ ಮೂಲಕ ನಮಗೆ ಬೇರೆ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳೇ ಇಲ್ಲ ಎಂಬಂತೆಯೂ ಬಿಂಬಿತವಾಗಿದೆ ಎಂದು ಪಕ್ಷದ ವಲಯದಲ್ಲೇ ಆಪಸ್ವರ ಉಂಟಾಗಿದೆ.

ನೆಲೆ ಕಳೆದುಕೊಳ್ಳುವ ಭೀತಿ
ಜೆಡಿಎಸ್‌ ಪ್ರಬಲವಾಗಿರುವ ಮೈಸೂರು, ಕೋಲಾರ, ಚಿಕ್ಕ ಬಳ್ಳಾಪುರ, ಬೆಂಗಳೂರು ಉತ್ತರ, ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗ, ದಾವಣಗೆರೆ ಭಾಗದಲ್ಲಿ ಸ್ಪರ್ಧೆಯೇ ಮಾಡದಿರುವುದರಿಂದ ಪಕ್ಷದ ಕಾರ್ಯಕರ್ತರು ಮುಖಂಡರು ಒಲ್ಲದ ಮನಸ್ಸಿನಿಂದ ಕಾಂಗ್ರೆಸ್‌ ಬೆಂಬಲಿಸಬೇಕಾಗಿದೆ. ಮುಂದಿನ ದಿನಗಳಲ್ಲಿ ಇದರಿಂದ ಪಕ್ಷದ ನೆಲೆ ಕಳೆದುಕೊಳ್ಳುವ ಭೀತಿ ಎದುರಾಗಿದೆ. ಕೆಲವು ಜಿಲ್ಲೆಗಳಲ್ಲಿ ಕಾಂಗ್ರೆಸ್‌ ನಾಯಕರು ಜೆಡಿಎಸ್‌ನವರನ್ನು ಕ್ಯಾರೆ ಎನ್ನುವುದಿಲ್ಲ, ಲೆಕ್ಕಕ್ಕೂ ಇಟ್ಟಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.

– ಎಸ್‌. ಲಕ್ಷ್ಮಿನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next