ಮುಂಬಯಿ: ಕಳೆದ ಸೋಮವಾರ ನಡೆದ ಲೋಕಸಭಾ ಚುನಾವಣೆಯ ನಾಲ್ಕನೇ ಹಂತದ ಮತದಾನದಲ್ಲಿ ಮುಂಬಯಿಯಲ್ಲಿ ಮತದಾರರು ಕಳೆದ 30 ವರ್ಷಗಳ ದಾಖಲೆಯನ್ನು ಮುರಿದು ಶೇ.55.1ರಷ್ಟು ಮತದಾನವನ್ನು ಮಾಡಿದ್ದಾರೆ.
ಇದು 1991ರ ಬಳಿಕ ಮುಂಬಯಿಯಲ್ಲಿ ದಾಖಲಾಗಿರುವ ಅತ್ಯಧಿಕ ಮತದಾನವಾಗಿದೆ. ಮುಂಬ ಯಿಗರು ತಮ್ಮ ದಾಖಲೆಯನ್ನು ಮುರಿದಿರುವುದು ಮಾತ್ರವಲ್ಲದೆ ಬಾಕಿ ಮಹಾನಗರಗಳನ್ನು ಕೂಡ ಹಿಂದಿಕ್ಕಿದ್ದಾರೆ. ದೇಶದ 6 ಮೆಟ್ರೋ ಸಿಟಿಗಳಾದ ಮುಂಬಯಿ, ಪುಣೆ, ಚೆನ್ನೈ, ಅಹ್ಮದಾಬಾದ್, ಬೆಂಗಳೂರು ಮತ್ತು ಹೈದರಾಬಾದ್‌ಗಳಲ್ಲಿ ಅತ್ಯಧಿಕ ಮತದಾನ ಮುಂಬಯಿಯಲ್ಲಿ ದಾಖಲಾಗಿದೆ. 2014ರ ಲೋಕಸಭಾ ಚುನಾವಣೆಯ ತುಲನೆಯಲ್ಲಿ ಈ ಬಾರಿ ಮುಂಬಯಿಯಲ್ಲಿ ಶೇ.3.5ರಷ್ಟು ಅಧಿಕ ಮತದಾನವಾಗಿದೆ. ಈ ಹಿಂದೆ ಗ್ರಾಮೀಣ ಪ್ರದೇಶಗಳಲ್ಲಿ ಮತ್ತು ಇತರ ಮಹಾನಗರಗಳಲ್ಲಿ ಅಧಿಕ ಮತದಾನವಾಗುತ್ತಿತ್ತು. ಆದರೆ ಈ ಚುನಾವಣೆಯಲ್ಲಿ ಯುವ ಮತದಾರರ ಸಂಖ್ಯೆ ವೃದ್ಧಿಯಾಗಿದೆ. ಇದೇ ಯುವ ಮತದಾರರು ತಮ್ಮ ಮನೆಗಳಿಂದ ಹೊರಬಂದು ತಮ್ಮ ಹಕ್ಕಿನ ಮತವನ್ನು ಚಲಾಯಿಸಿ ಒಂದು ಹೊಸ ಇತಿಹಾಸವನ್ನು ಸೃಷ್ಟಿಸಿದ್ದಾರೆ.
ನಾಲ್ಕನೇ ಹಂತದಲ್ಲಿ ಮಹಾರಾಷ್ಟ್ರದ 17 ಸ್ಥಾನಗಳಲ್ಲಿ ಸುಮಾರು ಶೇ.57ರಷ್ಟು ಮತದಾನ ದಾಖಲಾಗಿದೆ. ಇದರೊಂದಿಗೆ ರಾಜ್ಯದ ಎಲ್ಲ 48 ಸ್ಥಾನಗಳ ಅಭ್ಯರ್ಥಿಗಳ ಭವಿಷ್ಯ ಇವಿಎಂ ಯಂತ್ರಗಳಲ್ಲಿ ಬಂಧಿಯಾಗಿದೆ. ರಾಜ್ಯದ ಎಲ್ಲ ಸ್ಥಾನಗಳಲ್ಲಿ ಸರಾಸರಿ ಶೇ.60.68ರಷ್ಟು ಮತದಾನವಾಗಿದೆ. ಮುಂಬಯಿಯ 6 ಸ್ಥಾನಗಳಲ್ಲಿ ಶೇ. 55.11ರಷ್ಟು ಮತದಾನವಾಗಿದೆ.
ಮುಂಬಯಿಯಲ್ಲಿ 2014ರಲ್ಲಿ ಶೇ. 51.5ರಷ್ಟು ಮತದಾರರು ತಮ್ಮ ಹಕ್ಕಿನ ಮತವನ್ನು ಚಲಾಯಿಸಿದ್ದರು. 2019ರಲ್ಲಿ ಈ ಸಂಖ್ಯೆಯು ಶೇ. 55.1ಕ್ಕೆ ಏರಿಕೆಯಾಗಿದೆ. ಅದೇ, ಇತರ ಮಹಾನಗರಗಳ ಬಗ್ಗೆ ಹೇಳುವುದಾದರೆ, ಪುಣೆಯಲ್ಲಿ ಈ ವರ್ಷ ಶೇ.50ರಷ್ಟೂ ಮತದಾನ ದಾಖಲಾಗಿಲ್ಲ. 2014ರಲ್ಲಿ ಶೇ.54.1ರಷ್ಟು ಪುಣೆ ನಿವಾಸಿಗರು ಮತದಾನ ಮಾಡಿದ್ದರು. 2019ರಲ್ಲಿ ಈ ಸಂಖ್ಯೆಯು ಶೇ.49.8ಕ್ಕೆ ಕುಸಿದಿದೆ. ಐಟಿ ನಗರ ಬೆಂಗಳೂರಿನಲ್ಲಿ ಮತದಾನ ಪ್ರಮಾಣವು ಶೇ.58.6ರಿಂದ ಈ ಬಾರಿ ಶೇ.54.7ಕ್ಕೆ ಕುಸಿದಿದೆ. 2014ರಲ್ಲಿ ಶೇ.63ರಷ್ಟು ಮತದಾನ ದಾಖಲಿಸಿಕೊಂಡಿದ್ದ ಅಹ್ಮದಾಬಾದ್‌ನಲ್ಲಿ ಈ ಬಾರಿ ಶೇ.62.6ರಷ್ಟು ಮತದಾನ ದಾಖಲಾಗಿದೆ. ಈ ರೀತಿಯಲ್ಲಿ ಎಲ್ಲ ಮೆಟ್ರೋ ನಗರಗಳಲ್ಲಿ ಮತದಾನ ಪ್ರಮಾಣವು ಕುಸಿದರೆ ಮುಂಬಯಿಯಲ್ಲಿ ಹೆಚ್ಚಾಗಿದೆ.
ಮತದಾನದ ಪ್ರಮಾಣ
ನಗರ 2014 2019
ಮುಂಬಯಿ 51.06 55.1
ಪುಣೆ 54.1 49.8
ಬೆಂಗಳೂರು 58.6 54.7
ಹೈದರಾಬಾದ್ 53.1 45.1
ಚೆನ್ನೈ 61.8 59.4
ಅಹ್ಮದಾಬಾದ್ 63.0 62.6