ಉಡುಪಿ: ಜಾತಿ ಲೆಕ್ಕಾಚಾರ, ರಾಷ್ಟ್ರೀಯ ವಿಚಾರ, ಗ್ಯಾರಂಟಿ ಯೋಜನೆಗಳು ಕಾಪು ವಿಧಾನಸಭಾ ವ್ಯಾಪ್ತಿಯ ಮತದಾರರ ಪ್ರಮುಖ ಚರ್ಚಾ ವಿಷಯವಾದರೂ ಚುನಾವಣೆ ಪ್ರಚಾರ ಮಾತ್ರ ನಿರಾತಂಕವಾಗಿ ನಡೆಯುತ್ತಿದೆ.
ಎರಡೂ ಪಕ್ಷಗಳ ಅಭ್ಯರ್ಥಿಗಳು ತಮ್ಮ ನಾಯಕರ ಮೂಲಕ ರ್‍ಯಾಲಿ, ಪಾದಯಾತ್ರೆ, ಸಮಾವೇಶಗಳನ್ನು ಮಾಡಿದ್ದಾರೆ. ಕಾರ್ಯಕರ್ತರು ಮನೆ ಮನೆಗೆ ತೆರಳಿ ಪ್ರಚಾರ ನಡೆಸುತ್ತಿದ್ದಾರೆ. ಕಾಪು ಪುರಸಭೆ ವ್ಯಾಪ್ತಿಯಲ್ಲಿ 23 ವಾರ್ಡ್‌ಗಳು ಬರುತ್ತವೆ. ಉಳಿದಂತೆ 22ಕ್ಕೂ ಅಧಿಕ ಗ್ರಾ.ಪಂ. ಕ್ಷೇತ್ರ ವ್ಯಾಪ್ತಿಯಲ್ಲಿವೆ.
ಮೈಸೂರು ಸಂಸದ ಪ್ರತಾಪ್ ಸಿಂಹ ನೇತೃತ್ವದಲ್ಲಿ ಈಗಾಗಲೇ ಬಿಜೆಪಿ ರೋಡ್‌ಶೋ ನಡೆಸಿದರೆ, ಕಾಂಗ್ರೆಸ್ ಮಾಜಿ ಸಚಿವರನ್ನು ಒಳಗೊಂಡು ಪಡುಬಿದ್ರಿಯಿಂದ ಕಾಪು ವರೆಗೂ ವಾಹನ ಜಾಥಾ ನಡೆಸಿದೆ. ಶಾಸಕರು, ಮಾಜಿ ಸಚಿವರು, ಮಾಜಿ ಶಾಸಕರು ಕಾರ್ಯಕರ್ತರ ಜತೆ ಸೇರಿ ಮನೆ ಮನೆ ಪ್ರಚಾರ ನಿತ್ಯವೂ ಮಾಡುತ್ತಿದ್ದಾರೆ.
ಕ್ಷೇತ್ರದ ಗ್ರಾಮೀಣ ಹಾಗೂ ನಗರ ಭಾಗದಲ್ಲಿ ಚುನಾವಣೆ ಚರ್ಚೆ ಜೋರಾಗಿ ನಡೆಯುತ್ತಿದೆ. ಕಳೆದ 10 ವರ್ಷದಲ್ಲಿ ಕೇಂದ್ರ ಸರಕಾರ ನೀಡಿರುವ ಯೋಜನೆ, ಮಾಡದೇ ಇರುವ ಕಾರ್ಯಗಳು, ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಅನಂತರದಲ್ಲಿ ಜಾರಿ ಮಾಡಿದ ಗ್ಯಾರಂಟಿ ಪರಿಣಾಮ ಇತ್ಯಾದಿ ಕ್ಷೇತ್ರದ ಅಂಗಡಿ ಮುಂಗಟ್ಟು, ಬಸ್ ನಿಲ್ದಾಣ, ಸಂತೆ ಮಾರುಕಟ್ಟೆಯಲ್ಲಿ ಪ್ರಮುಖ ಚರ್ಚಾ ವಿಷಯವಾಗಿವೆ. ಎರಡೂ ಪಕ್ಷದ ಅಭ್ಯರ್ಥಿಗಳು ಜಿಲ್ಲೆಯವರೇ ಆಗಿದ್ದರಿಂದ ಕ್ಷೇತ್ರಾದ್ಯಂತ ಪರಿಚಿತರು. ಹೀಗಾಗಿ ಕಾರ್ಯಕರ್ತರು ಮನೆ ಮನೆ ಪ್ರಚಾರದ ವೇಳೆ ಅಭ್ಯರ್ಥಿಗಳ ಪರಿಚಯ ಅಗತ್ಯವಿಲ್ಲ. ಕೇಂದ್ರ ಹಾಗೂ ರಾಜ್ಯ ಸರಕಾರದ ಸಾಧನೆಯನ್ನೇ ತಿಳಿಸುತ್ತಿದ್ದಾರೆ. ಎರಡೂ ಪಕ್ಷದಿಂದಲೂ ರವಿವಾರ ಮಹಾ ಪ್ರಚಾರಾಭಿಯಾನ ನಡೆಸಲಾಗಿದೆ.
ಚುನಾವಣೆಯಲ್ಲಿ ಕೊಡವ ಆಶ್ವಾಸನೆಗಳೆಲ್ಲ ಈಡೇರಿದ್ದರೆ ದೇಶ ಅಥವಾ ನಮ್ಮ ಕ್ಷೇತ್ರದಲ್ಲಿ ಎಷ್ಟೋ ಅಭಿವೃದ್ಧಿ ಕಾಣುತ್ತಿತ್ತು. ಚುನಾವಣೆ ಪ್ರಚಾರದಲ್ಲಿ ರಾಜಕೀಯ ಪಕ್ಷಗಳು ತೋರಿಸುವ ಆಸಕ್ತಿಯನ್ನು ಚುನಾವಣೆ ಅನಂತರದಲ್ಲಿ ಯೋಜನೆಗಳ ಅನುಷ್ಠಾನದಲ್ಲೂ ತೋರಿಸಬೇಕು ಎನ್ನುತ್ತಾರೆ ಕುತ್ಯಾರಿನ ಸತೀಶ್.
ರಾಜ್ಯ ಸರಕಾರ ನೀಡಿರುವ ಗ್ಯಾರಂಟಿ ಮಹಿಳೆಯರಿಗೆ ಸಾಕಷ್ಟು ಅನುಕೂಲವಾಗಿದೆ. ಎಷ್ಟೋ ಮನೆಗಳಲ್ಲಿ ತಿಂಗಳ ದಿನಸಿ ಖರೀದಿಗೆ ಅದೇ ಹಣ ಬಳಸುತ್ತಿದ್ದಾರೆ. ಹಾಗೆಯೇ ಕೇಂದ್ರ ಸರಕಾರದ ಕಿಸಾನ್ ಸಮ್ಮಾನ ಯೋಜನೆಯ ದುಡ್ಡು ಬಹುಪಾಲು ಜನರಿಗೆ ಅನುಕೂಲವಾಗುತ್ತಿದೆ. ಎರಡೂ ಸರಕಾರಗಳು ಈ ರೀತಿಯ ಜನೋಪಯೋಗಿ ಯೋಜನೆಗಳನ್ನು ಹೆಚ್ಚಿಸಬೇಕು. ಯೋಜನೆಗಳನ್ನು ಯಾವುದೋ ಒಂದು ಸಮುದಾಯ ಅಥವಾ ವರ್ಗ ಸೀಮಿತವಾಗಿ ಮಾಡಬಾರದು ಎನ್ನುವುದು ಕಾಪುವಿನ ವೀಣಾ ಶೆಟ್ಟಿ, ಕಲ್ಪನಾ ಸುವರ್ಣ, ಅಸ್ಮಾ ಅವರ ಅಭಿಪ್ರಾಯವಾಗಿದೆ.
ದೇಶವೂ ಮುಖ್ಯ, ಅಭ್ಯರ್ಥಿಯೂ ಮುಖ್ಯ. ಸ್ಥಳೀಯ ಸಮಸ್ಯೆಗಳಿಗೆ ಆದ್ಯತೆ ನೀಡಿ ಬಗೆಹರಿಸುವವರು ಬೇಕು, ದೇಶದ ಹಿತಾಸಕ್ತಿ ಕಾಪಾಡುವವರು ಬೇಕು. ದೊಡ್ಡದೊಡ್ಡ ಭರವಸೆ ನೀಡಿ ಜನಪ್ರತಿನಿಧಿಯಾದ ಅನಂತರದಲ್ಲಿ ಕ್ಷೇತ್ರವನ್ನು ಮರೆಯಬಾರದು ಎನ್ನುತ್ತಾರೆ ಶಿವಕುಮಾರ್, ನವೀನ್ ಡಿ’ಸೋಜಾ, ನಾಗೇಶ್.
- ರಾಜು ಖಾರ್ವಿ ಕೊಡೇರಿ