Advertisement

ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ್ ನಾಯ್ಕ ಸೋನಿ ?

07:12 PM Mar 29, 2024 | Team Udayavani |

ಗೋಕರ್ಣ: 2023 ರ ವಿಧಾನಸಭಾ ಚುನಾವಣೆಯಲ್ಲಿ ಕೆಲವೇ ಮತಗಳ ಅಂತರದಿಂದ ಸೋತಿದ್ದ ಜೆಡಿಎಸ್ ಅಭ್ಯರ್ಥಿ ಸೂರಜ್ ನಾಯ್ಕ ಸೋನಿ ಈಗ ಲೋಕಸಭಾ ಚುನಾವಣೆಯಲ್ಲಿ ಯಾವುದೇ ಪಕ್ಷದಿಂದ ಕರೆ ಬಾರದ ಹಿನ್ನೆಲೆಯಲ್ಲಿ ಅವರು ತಟಸ್ಥರಾಗಿ ಉಳಿಯಬಹುದು ಎಂದು ಸಹಜವಾಗಿಯೇ ಅಂದುಕೊಂಡಿದ್ದರು. ಆದರೆ ಅವರ ಅಭಿಮಾನಿಗಳ ಒತ್ತಾಸೆಯ ಮೇರೆಗೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಮುಂದಾಗಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ.

Advertisement

ಕುಮಟಾದಲ್ಲಿ ಯಾವುದೇ ಕಾರಣಕ್ಕೂ ಬಿಜೆಪಿ ಗೆಲ್ಲುವುದಿಲ್ಲ ಎನ್ನುವ ಸಂದರ್ಭದಲ್ಲಿ ಈ ಹಿಂದೆ ಸೂರಜ್ ನಾಯ್ಕ ಅವರಿಗೆ ಟಿಕೆಟ್ ನೀಡಲಾಗಿತ್ತು. ಸಹಜವಾಗಿಯೇ ಅವರು ಸೋಲನ್ನು ಅನುಭವಿಸಿದ್ದರು. ಆದರೆ 2018 ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲುವ ಅವಕಾಶ ಇದ್ದುದರಿಂದಾಗಿ ಅವರಿಗೆ ಅವಕಾಶ ತಪ್ಪಿಸಿ ಜೆಡಿಎಸ್‌ನಲ್ಲಿದ್ದ ದಿನಕರ ಶೆಟ್ಟಿ ಅವರನ್ನು ಕರೆದು ಬಿಜೆಪಿ ಟಿಕೆಟ್ ನೀಡಲಾಗಿತ್ತು. ಸಹಜವಾಗಿಯೇ ಆ ಸಮಯದಲ್ಲಿ ದಿನಕರ ಶೆಟ್ಟಿ ಗೆಲುವು ಸಾಧಿಸಿದ್ದರು.

ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸೂರಜ್ ನಾಯ್ಕ 20 ಸಾವಿರಕ್ಕೂ ಅಧಿಕ ಮತವನ್ನು ಪಡೆದು ಸೋಲನ್ನು ಅನುಭವಿಸಿದರು. ಇನ್ನು 2023 ರಲ್ಲಿ ನಡೆದ ಚುನಾವಣೆಯಲ್ಲಿ ಸೂರಜ ನಾಯ್ಕ ಸೋನಿ ಬಿಜೆಪಿಯ ದಿನಕರ ಶೆಟ್ಟಿ ವಿರುದ್ಧ ಕೇವಲ 600 ಮತಗಳ ಅಂತರದಲ್ಲಿ ಸೋಲನ್ನು ಅನುಭವಿಸಿದರು. ಇಡೀ ಕ್ಷೇತ್ರದ ಜನರು ಸೂರಜ್ ಸೋಲಿನ ಬಗ್ಗೆ ಅನುಕಂಪ ವ್ಯಕ್ತಪಡಿಸಿದ್ದರು.

ಈ ಬಾರಿಯ 2024 ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನಲ್ಲಿ ಹೇಳುವಂತಹ ಅಭ್ಯರ್ಥಿಗಳು ಇಲ್ಲದಿರುವುದರಿಂದ ಇನ್ನು ಬಿಜೆಪಿ ಭದ್ರಕೋಟೆ ಎನಿಸಿಕೊಂಡಿದ್ದ ಕೆನರಾ ಲೋಕಸಭಾ ಕ್ಷೇತ್ರದಲ್ಲಿ ಸೂರಜ್ ನಾಯ್ಕರನ್ನು ಸೇರಿಸಿಕೊಂಡು ಅವರಿಗೆ ಟಿಕೆಟ್ ನೀಡುತ್ತಾರೆ ಎಂಬ ಚರ್ಚೆಗಳು ನಡೆಯುತ್ತಿದ್ದವು. ಹಾಗೇ ಅನಂತಕುಮಾರ ಹೆಗಡೆ ಅವರಿಗೆ ಟಿಕೆಟ್ ತಪ್ಪಿಸಿ ಸೂರಜ ನಾಯ್ಕ ಅವರಿಗೆ ಟಿಕೆಟ್ ನೀಡಬಹುದು ಎಂದು ಜನರು ಕೂಡ ಅಭಿಪ್ರಾಯಪಟ್ಟಿದ್ದರು. ಆದರೆ ಎರಡು ಪಕ್ಷಗಳಿಂದ ಅವಕಾಶ ವಂಚಿತ ಸೂರಜ ನಾಯ್ಕ ಈಗ ಅಭಿಮಾನಿಗಳ ಒತ್ತಾಸೆಯ ಮೇರೆಗೆ ಮತ್ತೆ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.

ಕೆನರಾ ಲೋಕಸಭಾ ಕ್ಷೇತ್ರಕ್ಕೆ 14 ತಾಲೂಕುಗಳಿದ್ದು, ಜನಸಂಖ್ಯೆಯಲ್ಲಿ ಮರಾಠರ ಸಮುದಾಯ ಪ್ರಥಮ ಸ್ಥಾನದಲ್ಲಿದ್ದರೆ, ಈಡಿಗರು (ನಾಮಧಾರಿ) ದ್ವಿತೀಯ ಸ್ಥಾನದಲ್ಲಿದ್ದಾರೆ. ಕಾಂಗ್ರೆಸ್‌ನಿಂದ ಉತ್ತರ ಕನ್ನಡ ಜಿಲ್ಲೆಗೆ ಪರಿಚಿತರಲ್ಲದ ಖಾನಾಪುರ ಕ್ಷೇತ್ರದ ಮಾಜಿ ಶಾಸಕಿ ಅಂಜಲಿ ನಿಂಬಾಳ್ಕರ ಕಾಂಗ್ರೆಸ್ ಟಿಕೆಟ್ ನೀಡಿದೆ. ಅವರಿಗೆ ಕಿತ್ತೂರು, ಖಾನಾಪುರ ಬಗ್ಗೆ ಮಾಹಿತಿಯಿದೆ. ಹಾಗೇ ಒಮ್ಮೆ ಶಾಸಕಿಯೂ ಆಗಿದ್ದರು. ಆದರೆ ಉತ್ತರ ಕನ್ನಡದ 12 ತಾಲೂಕುಗಳು ಅವರಿಗೆ ಅಪರಿಚಿತ. ಹಾಗೇ 6 ಬಾರಿ ಶಾಸಕರಾಗಿ, ಸಚಿವರಾಗಿ, ವಿಧಾನಸಭಾ ಅಧ್ಯಕ್ಷರಾಗಿ ಕಳೆದ ಚುನಾವಣೆಯಲ್ಲಿ ಸೋತಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಬಿಜೆಪಿ ಟಿಕೆಟ್ ನೀಡಿದೆ. ಆದರೆ ಕಾಗೇರಿ ಬಗ್ಗೆ ಪಕ್ಷದಲ್ಲಿಯೇ ಸಾಕಷ್ಟು ಗೊಂದಲಮಯವಾಗಿದೆ. ಟಿಕೆಟ್ ಕೈತಪ್ಪಿದ ಕೋಪದಲ್ಲಿ ಸಂಸದ ಅನಂತಕುಮಾರ ಹೆಗಡೆ ವ್ಯಾಘ್ರರೂಪ ತಾಳಿದ್ದಾರೆ. ಹೀಗಾಗಿ ಬಿಜೆಪಿಯಲ್ಲಿ ಹಾಗೂ ಕಾಂಗ್ರೆಸ್‌ನಲ್ಲಿ ಒಮ್ಮತವಿಲ್ಲದಿರುವುದರಿಂದ ಸೂರಜ ನಾಯ್ಕ ಅವರನ್ನು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಬೇಕು ಎಂದು ಸಾಕಷ್ಟು ಒತ್ತಡಗಳು ಬರುತ್ತಿರುವುದರಿಂದಾಗಿ ಅಭಿಮಾನಿಗಳಿಗೆ ಮುಂದಿನ ನಡೆಯ ತೀರ್ಮಾನ ತೆಗೆದುಕೊಳ್ಳಲು ಎರಡು ದಿನಗಳ ಕಾಲಾವಕಾಶ ನೀಡಿರುವುದಾಗಿ ಹೇಳಲಾಗಿದೆ.

Advertisement

ಒಟ್ಟಿನಲ್ಲಿ ಸೂರಜ ನಾಯ್ಕ ಸೋನಿ ಸ್ಫರ್ಧಿಸುತ್ತಾರೆ ಎನ್ನುವ ವಿಷಯ ತಿಳಿಯುತ್ತಿದ್ದಂತೆ ಎರಡು ಪಕ್ಷದಲ್ಲಿ ಇನ್ನಷ್ಟು ಗೊಂದಲಮಯವಾದ ವಾತಾವರಣ ಸೃಷ್ಟಿಯಾಗಿದೆ. ಒಟ್ಟಿನಲ್ಲಿ ಕೆಲವೇ ದಿನಗಳಲ್ಲಿ ಸ್ಪಷ್ಟತೆ ದೊರೆಯಲಿದೆ.

ಇದನ್ನೂ ಓದಿ : Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಣೆ ಮಾಡಿದ NIA

Advertisement

Udayavani is now on Telegram. Click here to join our channel and stay updated with the latest news.

Next