Advertisement
ಸೋಮವಾರ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ದೇಶದ ಎಲ್ಲ ರಾಜ್ಯಗಳ ಕೆಪಿಸಿಸಿ ಅಧ್ಯಕ್ಷರು ಹಾಗೂ ಸಿಎಲ್‌ಪಿ ನಾಯಕರ ಜತೆ ಸಭೆ ನಡೆಸಿದರು. ದೇಶದ ಎಲ್ಲ ರಾಜ್ಯಗಳಲ್ಲಿಯೂ ಪ್ರಾದೇಶಿಕ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುವ ಕುರಿತಂತೆ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಸಿದ್ದು, ಕರ್ನಾಟಕದಲ್ಲಿ ಜೆಡಿಎಸ್ ಸೇರಿ ಇತರ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುವ ಕುರಿತಂತೆ ರೂಪುರೇಷೆ ಸಿದ್ಧಪಡಿಸುವಂತೆ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಸೂಚಿಸಿದ್ದಾರೆಂದು ತಿಳಿದು ಬಂದಿದೆ.
ಲೋಕಸಭೆ ಚುನಾವಣೆಗೆ ಭರ್ಜರಿ ತಯಾರಿ ನಡೆಸಿರುವ ಕಾಂಗ್ರೆಸ್, ಈಗಾಗಲೇ ರಾಷ್ಟ್ರಮಟ್ಟದಲ್ಲಿ ಸಮಿತಿಗಳನ್ನು ರಚಿಸಿದೆ. ಅದೇ ರೀತಿ, ರಾಜ್ಯಗಳಿಗೂ ಪ್ರತ್ಯೇಕ ಸಮಿತಿಗಳನ್ನು ರಚನೆ ಮಾಡಿ ಹೈಕಮಾಂಡ್ ಶೀಘ್ರವೇ ಆದೇಶ ಹೊರಡಿಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಸೋಮವಾರ ಸಿದ್ದರಾಮಯ್ಯ ಹಾಗೂ ದಿನೇಶ್ ಗುಂಡೂರಾವ್ ಜತೆಗೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ನಡೆಸಿರುವ ಸಭೆಯಲ್ಲಿ ಸಮಿತಿ ರಚನೆಯ ಬಗ್ಗೆಯೇ ಸುದೀರ್ಘ ಚರ್ಚೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ.
Related Articles
ಲೋಕಸಭೆ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿರುವ ಕಾಂಗ್ರೆಸ್ ಹೈಕಮಾಂಡ್, ಈಗಿನಿಂದಲೇ ಬೂತ್ ಮಟ್ಟದ ಸಮಿತಿಗಳನ್ನು ಸಕ್ರಿಯಗೊಳಿಸಿ ಚುನಾವಣಾ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಪಕ್ಷದ ಎಲ್ಲಾ ರಾಜ್ಯಗಳ ರಾಜ್ಯಘಟಕಗಳಿಗೆ ಸೂಚಿಸಿದೆ ಎಂದು ತಿಳಿದು ಬಂದಿದೆ. ಈಗಾಗಲೇ ಜಾರಿಗೆ ತಂದಿರುವ ಶಕ್ತಿ ಯೋಜನೆಯನ್ನು ಕಡ್ಡಾಯವಾಗಿ ಅನುಷ್ಠಾನಗೊಳಿಸಲು ರಾಹುಲ್ ಗಾಂಧಿ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.
Advertisement
ಅ.10ರ ನಂತರ ಸಂಪುಟ ವಿಸ್ತರಣೆ ?:ಈ ಮಧ್ಯೆ, ವಿಧಾನ ಪರಿಷತ್ ಚುನಾವಣೆಯ ಕಾರಣದಿಂದ ಮುಂದೂಡಿದ್ದ ಸಚಿವ ಸಂಪುಟ ವಿಸ್ತರಣೆಯನ್ನು ಅಕ್ಟೋಬರ್ 10ರ ನಂತರ ಮಾಡಲು ಹೈಕಮಾಂಡ್ ಸೂಚಿಸಿದೆ ಎಂದು ತಿಳಿದು ಬಂದಿದೆ. ವಿಧಾನ ಪರಿಷತ್ ಚುನಾವಣೆಗೆ ಬಿಜೆಪಿ ಸ್ಪರ್ಧೆ ಮಾಡದಿರುವುದರಿಂದ ಕಾಂಗ್ರೆಸ್ ಹಾಗೂ ಜೆಡಿಎಸ್‌ನ ಮೂವರು ಅವಿರೋಧವಾಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ. ಹೀಗಾಗಿ, ಸಚಿವಾಕಾಂಕ್ಷಿಗಳು ಈಗಲೇ ಸಂಪುಟ ವಿಸ್ತರಣೆಗೆ ಪಟ್ಟು ಹಿಡಿಯುವ ಸಾಧ್ಯತೆಯಿದೆ. ಆದರೆ, ಪಿತೃ ಪಕ್ಷ ಇರುವುದರಿಂದ ಅ.10ರ ನಂತರ ಸಂಪುಟ ವಿಸ್ತರಣೆ ಮಾಡಲು ನಿರ್ಧರಿಸಲಾಗಿದೆ. ಈ ಬಗ್ಗೆ ಹೈಕಮಾಂಡ್ ಜತೆ ಚರ್ಚಿಸಲು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಮತ್ತೂಂದು ಬಾರಿ ದೆಹಲಿಗೆ ತೆರಳಲಿದ್ದಾರೆ. ಆಗ ಸಂಪುಟ ಸೇರುವವರ ಅಂತಿಮ ಪಟ್ಟಿ ಸಿದ್ಧಪಡಿಸಿಕೊಂಡು ಬರುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ.