Advertisement

ಪಾಟ್ನಾಗೆ ಯಾರು ಸಾಹೇಬ್‌?

09:56 AM May 13, 2019 | Team Udayavani |

ಬಿಹಾರದ ಪಾಟ್ನಾ ಸಾಹಿಬ್‌ ಕ್ಷೇತ್ರದ ಮೇಲೀಗ ದೇಶದ ದೃಷ್ಟಿ ನೆಟ್ಟಿದೆ. ಅತ್ಯಂತ ಹೈಪ್ರೊಫೈಲ್‌ ಕಣವೆಂದೇ ಈ ಕ್ಷೇತ್ರವನ್ನು ಕರೆಯಲಾಗುತ್ತಿದೆ. ಬಿಜೆಪಿ ತೊರೆದು ಕಾಂಗ್ರೆಸ್‌ ಸೇರಿರುವ ಶತ್ರುಘ್ನ ಸಿನ್ಹಾರಿಗೆ ಎದುರಾಳಿಯಾಗಿ ಕೇಂದ್ರ ಸಚಿವ, ಬಿಜೆಪಿ ನಾಯಕ ರವಿಶಂಕರ್‌ ಪ್ರಸಾದ್‌ ಅಖಾಡಕ್ಕೆ ಇಳಿದಿದ್ದಾರೆ.

Advertisement

ತಮ್ಮ ನಲವತ್ತು ವರ್ಷಗಳ ರಾಜಕೀಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಲೋಕಸಭಾ ಚುನಾವಣೆ ಎದುರಿಸಲಿದ್ದಾರೆ ರವಿಶಂಕರ್‌ ಪ್ರಸಾದ್‌. ಹೀಗಾಗಿ ಈ ಚುನಾವಣೆ ಅವರಿಗೂ ಕೂಡ ಪ್ರತಿಷ್ಠೆಯ ವಿಷಯವಾಗಿ ಬದಲಾಗಿದೆ. ಸಿನ್ಹಾರನ್ನು ಏನಕೇನ ಸೋಲಿಸಬೇಕು ಎಂದು ಅಮಿತ್‌ ಶಾ- ಮೋದಿ ಜೋಡಿಯೂ ಪಣ ತೊಟ್ಟಿರುವಂತೆ ಕಾಣುತ್ತಿದೆ. ಹಾಗಿದ್ದರೆ 2009 ಮತ್ತು 2014ರಲ್ಲಿ ಪಾಟ್ನಾ ಸಾಹಿಬ್‌ನಿಂದ ಸುಲಭವಾಗಿ ಗೆಲುವು ದಕ್ಕಿಸಿಕೊಂಡಿದ್ದ ಶತ್ರುಘ್ನ ಸಿನ್ಹಾರ ದಾರಿ ಈ ಬಾರಿ ಕಠಿಣವಾಗಿದೆಯೇ ಅಥವಾ ಗೆಲ್ಲಲಿದ್ದಾರೆಯೇ ಎನ್ನುವುದು ಕುತೂಹಲಕಾರಿ ಸಂಗತಿ.

ಗಮನಿಸಬೇಕಾದ ಸಂಗತಿಯೆಂದರೆ, ಶತ್ರುಘ್ನ ಸಿನ್ಹಾ ಮತ್ತು ರವಿಶಂಕರ್‌ ಪ್ರಸಾದ್‌ ಕಾಯಸ್ಥ ಸಮುದಾಯಕ್ಕೆ ಸೇರಿದವರು. ಜಾತೀಯ ಸಮೀಕರಣದ ಆಧಾರದ ಮೇಲೆ ನೋಡಿದರೆ ಪಾಟ್ನಾ ಸಾಹಿಬ್‌ನಲ್ಲಿ ಕಾಯಸ್ಥ ಮತದಾರರ ಶಕ್ತಿ ಅಧಿಕವಿದೆ. ನಂತರ ರಜಪೂತ, ಯಾದವ, ದಲಿತ ಮತ್ತು ಮುಸ್ಲಿಂ ಮತದಾರರಿದ್ದಾರೆ. ಈ ಬಾರಿ ಶತ್ರುಘ್ನ ಸಿನ್ಹಾ ಅವರಿಗೆ ಮಹಾಘಟಬಂಧನದ ಸಾಥ್‌ ಇರುವುದರಿಂದ ಕೊನೆಯ ಮೂರು ವರ್ಗಗಳ ಮತಗಳು ಬರುತ್ತವೆ ಎನ್ನುವ ಭರವಸೆಯಲ್ಲಿದೆ ಕಾಂಗ್ರೆಸ್‌. ಆದರೆ ಈ ಬಾರಿ ಮೇಲ್ವರ್ಗದ ಮತಗಳಷ್ಟೇ ಅಲದೆ, ಕೆಳವರ್ಗದ ಮತಗಳೂ ರವಿಶಂಕರ್‌ ಪ್ರಸಾದ್‌ ಅವರತ್ತ ಹರಿದುಬರಲಿದೆ ಎನ್ನುತ್ತದೆ ಬಿಜೆಪಿ.

ಶತ್ರುಘ್ನ ಸಿನ್ಹಾ ಈಗ ಪಾಟ್ನಾ ಸಾಹಿಬ್‌ನ ಬದಲು ಲಕ್ನೋದಲ್ಲೇ ಹೆಚ್ಚು ಸಮಯ ಕಳೆಯುತ್ತಿದ್ದಾರೆ(ಲಕ್ನೋದಲ್ಲಿ ಶತ್ರುಘ್ನ ಸಿನ್ಹಾ ಅವರ ಪತ್ನಿ ಪೂನಂ ಸಿನ್ಹಾ ಸ್ಪರ್ಧಿಸುತ್ತಿದ್ದಾರೆ) ಎನ್ನುವ ಅಸಮಾಧಾನವಂತೂ ಸ್ಥಳೀಯರಿಗೆ ಇದೆ. ಇದಕ್ಕೆ ಪೂರಕವೆಂಬಂತೆ, ಶತ್ರುಘ್ನ ಸಿನ್ಹಾ ಅವರೂ ಪಾಟ್ನಾದತ್ತ ಹೆಚ್ಚು ಗಮನ ಹರಿಸುತ್ತಿಲ್ಲ, ಒಂದು ಚುನಾವಣಾ ಕಚೇರಿಯನ್ನೂ ಅವರು ತೆರೆದಿಲ್ಲ.

ಈ ಹೊತ್ತಲ್ಲೇ ರವಿಶಂಕರ್‌ ಪ್ರಸಾದ್‌ ಚುನಾವಣೆಗೆ ನಿಂತಿರುವುದು ನಿಜಕ್ಕೂ ಕಾಂಗ್ರೆಸ್‌ಗೆ ಆತಂಕವನ್ನಂತೂ ತರಿಸಿದೆ. ಏಕೆಂದರೆ, ರವಿಶಂಕರ್‌ ಪ್ರಸಾದ್‌ ಪಾಟ್ನಾದವರು. ಅವರು ಓದಿ ಬೆಳೆದದ್ದು, ವಕೀಲರಾಗಿ ಕಾರ್ಯನಿರ್ವಹಿಸಿದ್ದು ಪಾಟ್ನಾದಲ್ಲೇ, ಅವರ ಪರಿವಾರವೂ ಇದೇ ಕ್ಷೇತ್ರದಲ್ಲೇ ಇದೆ. ಇನ್ನು ರವಿಶಂಕರ್‌ರ ತಂದೆ ಠಾಕೂರ್‌ ಪ್ರಸಾದ್‌ ಅವರು ಜನಸಂಘದ ಸ್ಥಾಪಕರಲ್ಲಿ ಒಬ್ಬರು. ಅವರು ಪಾಟ್ನಾದಲ್ಲಿ ಬಹಳ ವರ್ಚಸ್ಸು ಹೊಂದಿದ್ದ ನಾಯಕ. ಈಗ ಅವರ ಮಗ ತಮ್ಮ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವುದರಿಂದ ಜನರಲ್ಲಿ ಹೊಸ ಉಮೇದು ಕಾಣಿಸುತ್ತಿದೆ ಎನ್ನುತ್ತಾರೆ ರಾಜಕೀಯ ಪಂಡಿತರು. ಪಾಟ್ನಾ ಸಾಹಿಬ್‌ ಕ್ಷೇತ್ರವು ಸಾಂಪ್ರದಾಯಿಕವಾಗಿ ಬಿಜೆಪಿಯ ಬಲಿಷ್ಠ ಕ್ಷೇತ್ರವಾಗಿದ್ದು, ಈ ಕ್ಷೇತ್ರದಲ್ಲಿನ ಆರು ವಿಧಾನಸಭಾ ಕ್ಷೇತ್ರಗಳಲ್ಲಿ 5 ವಿಧಾನಸಭಾ ಕ್ಷೇತ್ರಗಳು ಬಿಜೆಪಿಯ ಹಿಡಿತದಲ್ಲೇ ಇವೆ.

Advertisement

ಇದೆಯೇ ಅಸಮಾಧಾನ?: ಶತ್ರುಘ್ನ ಸಿನ್ಹಾ ಪಾಟ್ನಾಗಾಗಿ ಒಳ್ಳೆಯ ಕೆಲಸ ಮಾಡಿಲ್ಲ ಎನ್ನುತ್ತಾರೆ ಬಿಜೆಪಿಯ ಸಾಂಪ್ರದಾಯಿಕ ಮತದಾರರು. ಒಂದು ಕಾಲದಲ್ಲಿ ಅಭಿವೃದ್ಧಿ ಸ್ತರದಲ್ಲಿ ಕೋಲ್ಕತ್ತಾ ಮತ್ತು ಲಕ್ನೋಗೆ ಸಮಾನಾಂತರವಾಗಿ ಇದ್ದ ಪಾಟ್ನಾ ಈಗ ಹಿಂದುಳಿದಿರುವುದಕ್ಕೆ ಶತ್ರುಘ್ನ ಸಿನ್ಹಾ ಕಾರಣ ಎನ್ನುವುದು ಅವರ ವಾದ. ಹಾಗಿದ್ದರೆ ರವಿಶಂಕರ್‌ ಪ್ರಸಾದ್‌ ಅವರು ಪಾಟ್ನಾಗಾಗಿ ಏನು ಮಾಡಿದ್ದಾರೆ ಎಂಬ ಪ್ರಶ್ನೆ ಎದುರಿಟ್ಟರೆ, ಪಾಟ್ನಾಗೆ ಮೆಟ್ರೋ ರೈಲು ಯೋಜನೆ, ಸಾಫ್ಟ್ವೇರ್‌ ಟೆಕ್ನಾಲಜಿ ಪಾರ್ಕ್‌ ಬರು ವುದಕ್ಕೆ ಪ್ರಸಾದ್‌ ಅವರೇ ಕಾರಣ ಎನ್ನು ವುದು ಬಿಜೆಪಿಯ ವಾದ. ಆದರೆ ಈ ಕೆಲಸಗಳೆಲ್ಲ ಆಗಿರುವುದು ಶತ್ರುಘ್ನ ಸಿನ್ಹಾ ಒತ್ತಾಸೆಯಿಂದಲೇ ಎನ್ನುತ್ತಿದೆ ಕಾಂಗ್ರೆಸ್‌.

ರವಿಶಂಕರ್‌ ಪ್ರಸಾದ್‌ ಅವರಂತೂ ಗೆಲುವಿನ ಭರವಸೆಯಲ್ಲಿ ಇದ್ದಾರೆ. ಗೆಲ್ಲುವುದಷ್ಟೇ ಅಲ್ಲ, ಅತಿ ಹೆಚ್ಚು ಅಂತರದಿಂದ ಗೆಲ್ಲುವ ಗುರಿ ಅವರಿಗಿದೆ ಎನ್ನುತ್ತಿದ್ದಾರೆ ರಾಜಕೀಯ ಪಂಡಿತರು. ಆದರೆ ಇವರ ಲೆಕ್ಕಾಚಾರವನ್ನೆಲ್ಲ ಶತ್ರುಘ್ನ ಸಿನ್ಹಾ ಉಲ್ಟಾ ಮಾಡುತ್ತಾರಾ? ಅಥವಾ ತಾವೇ ಖಾಮೋಷ್‌ ಆಗುತ್ತಾರಾ? ಮೇ 19 ರಂದು 7ನೇ ಹಂತದ ಚುನಾವಣೆ ಇಲ್ಲಿ ನಡೆಯಲಿದ್ದು, ಪಾಟ್ನಾ ಸಾಹಿಬ್‌ನ ಸಾಹೇಬ್‌ ಯಾರಾಗುತ್ತಾರೆ ಎನ್ನುವುದನ್ನು ಮತದಾರ ನಿರ್ಧರಿಸಲಿದ್ದಾನೆ.

ಕೇಂದ್ರ ಸಚಿವ ರವಿಶಂಕರ ಪ್ರಸಾದ್‌ ಅವರನ್ನು ಗೆಲ್ಲಿಸಲು ಖುದ್ದು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರೇ ರೋಡ್‌ ಶೋ, ಸಾರ್ವಜನಿಕ ರ್ಯಾಲಿಗಳನ್ನು ನಡೆಸಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ಬಿಜೆಪಿ ಅಭ್ಯರ್ಥಿ ಇನ್ನು ಮುಂದೆ ಪಾಟ್ನಾ ಸಾಹಿಬ್‌ ಕ್ಷೇತ್ರ ಮೌನವಾಗಿ ಉಳಿಯುವುದಿಲ್ಲ ಎಂದು ಹೇಳಿದ್ದಾರೆ. ಈ ಮೂಲಕ ಹಾಲಿ ಸಂಸದ ಶತ್ರುಘ್ನ ಸಿನ್ಹಾ ಎರಡು ಅವಧಿಯಲ್ಲಿ ಏನನ್ನೂ ಕೆಲಸ ಮಾಡಿಲ್ಲ ಎಂದು ಸೂಚನೆ ನೀಡಿದ್ದಾರೆ. ಒಂದರ್ಥದಲ್ಲಿ ಈ ಕ್ಷೇತ್ರ ಬಿಜೆಪಿಯ ಮಾಜಿ ಪ್ರಭಾವಿ ನಾಯಕ ಮತ್ತು ಆಡಳಿತ ಪಕ್ಷದ ಹಾಲಿ ಪ್ರಭಾವಿ ನಾಯಕರ ನಡುವಿನ ಹೋರಾಟವಾಗಿದೆ ಎಂದು ಬಣ್ಣಿಸಲಾಗುತ್ತಿದೆ.

ಈ ಬಾರಿ ಕಣದಲ್ಲಿ
ರವಿಶಂಕರ ಪ್ರಸಾದ್‌ (ಬಿಜೆಪಿ)
ಶತ್ರುಘ್ನ ಸಿನ್ಹಾ (ಕಾಂಗ್ರೆಸ್‌)

Advertisement

Udayavani is now on Telegram. Click here to join our channel and stay updated with the latest news.

Next