Advertisement

ಲೋಕಸಭೆ ಚುನಾವಣೆ ಬಹಿಷ್ಕಾರ ಎಚ್ಚರಿಕೆ​​​​​​​

12:30 AM Mar 23, 2019 | Team Udayavani |

ಬೆಳ್ತಂಗಡಿ: ತಮ್ಮ ಸಂಕಷ್ಟವನ್ನು ಸರಕಾರ ಆಲಿಸಿಲ್ಲ ಎಂದು ಆರೋಪಿಸಿ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ನೀಡುವ ನೌಕರರ ಸಂಘವು ಚುನಾವಣೆ ಬಹಿಷ್ಕರಿಸಲು ನಿರ್ಧರಿಸಿರುವುದು ಚುನಾವಣಾಧಿಕಾರಿಗಳಿಗೆ ತಲೆನೋವಾಗಿ ಪರಿಣಾಮಿಸಿದೆ.

Advertisement

ಬಿಸಿಯೂಟ ತಯಾರಿಸುವವರು ಒಂದು ವೇಳೆ ತಮ್ಮ ನಿರ್ಧಾರ ಬದಲಾಯಿಸದಿದ್ದರೆ ಸರ್ವತ್ರ ಮತದಾನದ ಸ್ವೀಪ್‌ ಉದ್ದೇಶ ವಿಫ‌ಲವಾಗುವುದಕ್ಕಿಂತ ಮಿಗಿಲಾಗಿ ತೀರಾ ಹಳ್ಳಿಗಾಡು ಮತಗಟ್ಟೆಗಳಲ್ಲಿ ಕರ್ತವ್ಯ ನಿರ್ವಹಿಸುವ ಚುನಾವಣ ಅಧಿಕಾರಿಗಳಿಗೆ ಊಟೋಪಹಾರಕ್ಕೆ ತತ್ವಾರವಾಗುವ ಸಾಧ್ಯತೆ ಇದೆ.

ಬೆಳ್ತಂಗಡಿ ಹಾಗೂ ಪುತ್ತೂರು ತಾಲೂಕು ಬಿಸಿಯೂಟ ನೌಕರರ ಸಂಘವು ಈಗಾಗಲೇ ಹಲವು ಸುತ್ತಿನ ಸಭೆ ಕರೆದಿದೆ. ನೌಕರರ ಹಿತಾಸಕ್ತಿ ಗಮನಿಸಿ ಚುನಾವಣ ಪ್ರಣಾಳಿಕೆಯಲ್ಲಿ ನೀಡುವ ಆಶ್ವಾಸನೆಗಳು ಸರಿಹೊಂದದಿದ್ದಲ್ಲಿ ನಿರ್ಧಾರ ಕೈಬಿಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದೆ.

ಕನಿಷ್ಠ 10 ಸಾವಿರ ವೇತನಕ್ಕೆ ಒತ್ತಾಯ?
2003ರಲ್ಲಿ 1ನೇ ಅಡುಗೆಯವರಿಗೆ ಮಾಸಿಕ 600 ರೂ., 2ನೇ ಅಡುಗೆಯವರಿಗೆ ಮಾಸಿಕ 450 ರೂ., 3ನೇ ಅಡುಗೆಯವರು/ ಸಹಾಯಕರಿಗೆ 300ರೂ. ವೇತನ ನಿಗದಿಪಡಿಸಲಾಗಿತ್ತು.

2004ರಿಂದ ರಾಜ್ಯಾದ್ಯಂತ ಬಿಸಿಯೂಟ ಕಾರ್ಮಿಕರ ಸಂಘಟನೆ ಬಲಗೊಂಡು ತೀವ್ರ ಹೋರಾಟಗಳು ನಡೆದಾಗ ಎಲ್ಲ ಅಡುಗೆಯವರಿಗೂ ತಲಾ 1,000 ರೂ. ವೇತನವನ್ನು ಕೇಂದ್ರ ಸರಕಾರ ನಿಗದಿಗೊಳಿಸಿತು. ಬಳಿಕ ರಾಜ್ಯ ಸರಕಾರ ತಲಾ 500 ರೂ. ಏರಿಕೆ ಮಾಡಿತ್ತು. ಆದರೆ ಕನಿಷ್ಠ ವೇತನ ಜಾರಿಗಾಗಿ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಹಲವು ಹೋರಾಟ ನಡೆದರೂ ಪ್ರಯೋಜನವಾಗಿಲ್ಲ ಎಂಬುದು ನೌಕರರ ಅಳಲು.

Advertisement

ಐದು ವರ್ಷಗಳಲ್ಲಿ ರಾಜ್ಯ ಸರಕಾರ 500 ರೂ.ಗಳಂತೆ ಎರಡು ಬಾರಿ ವೇತನ ಏರಿಸಿದ್ದರಿಂದ 2,500 ರೂ. ನಿಗದಿಯಾಗಿದೆ. ಆದರೆ ಕನಿಷ್ಠ ಮಾಸಿಕ 10,000 ರೂ. ಮತ್ತು ತುಟ್ಟಿ ಭತ್ತೆ, ಪಿಂಚಣಿ, ಪಿಎಫ್‌, ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು ಇತ್ಯಾದಿ ಬೇಡಿಕೆಗಳು ಈಡೇರಿಲ್ಲ. ಹೀಗಾಗಿ ಹೋರಾಟದ ತೀವ್ರತೆ ಹೆಚ್ಚಿದ್ದು, ರಾಜಕೀಯ ಪಕ್ಷಗಳನ್ನು ಇಕ್ಕಟ್ಟಿಗೆ ಗುರಿಮಾಡಿದೆ.

ಹಣ ನಿಗದಿ
ದುರ್ಗಮ-ಕುಗ್ರಾಮಗಳ ಮತಗಟ್ಟೆಯಲ್ಲಿ ಸಮಸ್ಯೆಯಾಗದಂತೆ ಈಗಾಗಲೇ ಕ್ರಮ ಕೈಗೊಳ್ಳಲಾಗಿದ್ದು, ಚುನಾವಣಾಧಿಕಾರಿಗಳಿಗೆ ಬೆಳಗ್ಗೆ ಉಪಾಹಾರ, ಮಧ್ಯಾಹ್ನದ ಊಟ ಸೇರಿ ಒಬ್ಬರಿಗೆ 200 ರೂ. ಗಳಂತೆ 8 ಜನ ಕರ್ತವ್ಯ ನಿರತ ನೌಕರರಿಗೆ 1,600 ರೂ. ನಿಗದಿ ಪಡಿಸಲಾಗಿದೆ. ಇದನ್ನು ಬಿಸಿಯೂಟ ನೌಕರರು ಹಂಚಿಕೊಳ್ಳುವ ವ್ಯವಸ್ಥೆ ಕಳೆದ ವರ್ಷ ಜಾರಿಯಾಗಿದ್ದು, ಈ ಬಾರಿಯೂ ಮುಂದುರಿಯಲಿದೆ ಎಂದು ಚುನಾವಣ ಅಧಿಕಾರಿಗಳು ತಿಳಿಸಿದ್ದಾರೆ. 

ಮಾಸಿಕ ವೇತನ ಹೆಚ್ಚಳ ಕುರಿತು ರಾಷ್ಟ್ರ ಮಟ್ಟದಲ್ಲಿ ಹಲವು ಬಾರಿ ಹೋರಾಟ ಕೈಗೊಂಡರೂ ನಿರೀಕ್ಷಿತ ಮಟ್ಟದ ಸ್ಪಂದನೆ ಸಿಕ್ಕಿಲ್ಲ. ಹೀಗಾಗಿ ಈ ಬಾರಿ ಚುನಾವಣೆ ಬಹಿಷ್ಕಾರ ಅನಿವಾರ್ಯವಾಗಿದೆ.
– ಮೋಹಿನಿ ಪಿಲ್ಯ, ಅಧ್ಯಕ್ಷೆ, ತಾಲೂಕು ಬಿಸಿಯೂಟ ನೌಕರರ ಸಂಘ 

ಬೆಳಗ್ಗೆ 9.30ರಿಂದ ಮಧ್ಯಾಹ್ನ 2.30ರ ವರೆಗೆ ಕೆಲಸ ನಿರ್ವಹಿಸುತ್ತಿದ್ದೇವೆ. ಕೆಲಸ ಹೆಚ್ಚು ಸಂಬಳ ಕಡಿಮೆ ನೀಡಲಾಗುತ್ತಿದೆ. ಇದರಿಂದ ಬೆಳ್ತಂಗಡಿ, ಪುತ್ತೂರು ತಾಲೂಕು ಸೇರಿದಂತೆ ಜಿಲ್ಲಾಮಟ್ಟದಲ್ಲಿ ಚುನಾವಣೆ ಬಹಿಷ್ಕರಿಸುವ ಕುರಿತು ನಿರ್ಧರಿಸಲಾಗಿದೆ.
– ಭಾರತಿ, ಕಾರ್ಯದರ್ಶಿ, 
ತಾಲೂಕು ಬಿಸಿಯೂಟ ನೌಕರರ ಸಂಘ 

ಬೆಳ್ತಂಗಡಿ ತಾಲೂಕಿನ 241 ಶಾಲೆಯಲ್ಲಿ 587 ಮಂದಿ ಬಿಸಿಯೂಟ ನೌಕರರಿದ್ದಾರೆ. 16 ಕ್ಲಸ್ಟರ್‌ಗಳಿವೆ. ಪುತ್ತೂರು/ಕಡಬ ತಾಲೂಕಿನ 230 ಶಾಲೆಗಳಿಂದ 625 ನೌಕರರು ಕೆಲಸ ನಿರ್ವಹಿಸುತ್ತಿದ್ದಾರೆ. 

ಚುನಾವಣೆ ನಮ್ಮ ಕರ್ತವ್ಯ ಎಂಬ ನಿಟ್ಟಿನಲ್ಲಿ ಬಿಸಿಯೂಟ ನೌಕರರು ಅಡ್ಡಿ ಮಾಡದಂತೆ ಮನವಿ ಮಾಡಲಾಗಿದೆ. ನಿಗದಿತ ರೂಪದಲ್ಲಿ ಬೇಡಿಕೆ ಈಡೇರಿಸುವಂತೆ ಸರಕಾರಕ್ಕೆ ಮನವಿ ಮಾಡಲಾಗಿದೆ. ಈಗಾಗಲೇ ಅಡುಗೆ ಸಿಬಂದಿಯೊಂದಿಗೆ ಸಭೆ ಕರೆದು ನಿರ್ಧಾರ ಹಿಂಪಡೆಯುವಂತೆ ಮನವಿ ಮಾಡಲಾಗಿದೆ.               
– ಲಕ್ಷ್ಮಣ್‌ ಶೆಟ್ಟಿ
ಬಿಸಿಯೂಟ ತಾಲೂಕು ನಿರ್ದೇಶಕರು 

– ಚೈತ್ರೇಶ್‌ ಇಳಂತಿಲ
 

Advertisement

Udayavani is now on Telegram. Click here to join our channel and stay updated with the latest news.

Next