ಉಡುಪಿ: ಹೋದ ವರ್ಷ ನಡೆದ ನಗರ ಸಂಸ್ಥೆಗಳ ಚುನಾವಣೆ, ವಿಧಾನ ಸಭೆ ಚುನಾವಣೆಯಲ್ಲಿ ಕಂಡು ಬಂದಿದ್ದ ಬೆಟ್ಟಿಂಗ್ ಹವಾ ಈ ಬಾರಿಯ ಲೋಕ ಸಭಾ ಚುನಾವಣೆಯಲ್ಲಿ ಕಂಡುಬಂದಿಲ್ಲ.
ಈ ವರೆಗಿನ ಚುನಾವಣೆಗಳಲ್ಲಿ ಕಾರ್ಯಕರ್ತರು, ನಾಯಕರು ಹಣ ಕಟ್ಟಿ ತಮ್ಮ ಅಭ್ಯರ್ಥಿ ಗೆಲ್ಲುತ್ತಾರೆಂದು ಬೆಟ್ಟಿಂಗ್ ಹೂಡುತ್ತಿರುವುದು ಸಾಮಾನ್ಯವಾಗಿತ್ತು. ಎರಡೂ ಪಕ್ಷಗಳಲ್ಲಿ ಗೆಲುವಿನ ಸಾಧ್ಯತೆ ಇರುವಾಗ ಬೆಂಬಲಿಗರು ಬೆಟ್ಟಿಂಗ್ ಕಟ್ಟುವುದು ಹೆಚ್ಚು.
ಈಗ ಚುನಾವಣೆ ನಡೆದು ಒಂದು ತಿಂಗಳು ಫಲಿತಾಂಶಕ್ಕೆ ಕಾಯಬೇಕಾಗಿರುವುದು ಬೆಟ್ಟಿಂಗ್‌ಗೆ ತೊಡಕಾಗಿದೆ. ಒಂದು ತಿಂಗಳು ಹಣವನ್ನು ಇಡಬೇಕಾಗಿರುವುದು ಮತ್ತು ಕಠಿನ ನೀತಿ ಸಂಹಿತೆ ಪರಿಣಾಮ ಬೆಟ್ಟಿಂಗ್ ಇಲ್ಲವಾಗಿದೆ. ಜತೆಗೆ ಈ ಬಾರಿ ಚುನಾವಣೆಯಲ್ಲಿ ಅಷ್ಟೊಂದು ತೀವ್ರ ಪೈಪೋಟಿ ಕಾಣದಿರುವುದೂ ಬೆಟ್ಟಿಂಗ್‌ಹಬ್ಬದಿರಲು ಪ್ರಮುಖ ಕಾರಣ ಎಂದು ಕಾರ್ಯಕರ್ತರು ಹೇಳುತ್ತಿದ್ದಾರೆ.
ಚುನಾವಣೆಗೆ ಹಿಂದೆ ಅಭ್ಯರ್ಥಿಗಳು ಖರ್ಚಿಗೆ ಕೊಟ್ಟ ಹಣದಲ್ಲಿ ಉಳಿಸಿ ಬೆಟ್ಟಿಂಗ್ ಕಟ್ಟುವವರಿದ್ದಾರೆ. ಆದರೆ ಈ ಬಾರಿ ಇದೂ ಕಂಡಿಲ್ಲ. ಘಟ್ಟದ ಮೇಲ್ಭಾಗದಲ್ಲಿ ಬೆಟ್ಟಿಂಗ್ ಕ್ರಮಕ್ಕೂ ಕರಾವಳಿಯಲ್ಲಿ ಬೆಟ್ಟಿಂಗ್ ಕ್ರಮಕ್ಕೂ ವ್ಯತ್ಯಾಸವಿದೆ. ಘಟ್ಟದ ಮೇಲೆ ಗ್ರಾಮಾಂತರ ಪ್ರದೇಶವಿರುವಲ್ಲಿ ಹೊಲ, ಗದ್ದೆ, ಜಾನುವಾರುಗಳನ್ನು ಬೆಟ್ಟಿಂಗ್‌ಗೆ ಪಣವಾಗಿರಿಸುವುದೂ ಇದೆ. ಕರಾವಳಿಯಲ್ಲಿ ಜನರಿಗೆ ಬೆಟ್ಟಿಂಗ್ ಚಟವಿಲ್ಲ. ಕೇವಲ ಸಾವಿರ ರೂ.ಗಳಲ್ಲಿ ಬೆಟ್ಟಿಂಗ್ ನಡೆಯುವುದಿದೆ. ಇಲ್ಲಿ ವ್ಯವಹಾರವಾಗಿರದೆ, ಪ್ರತಿಷ್ಠೆಗಾಗಿ ಬೆಟ್ಟಿಂಗ್ ನಡೆಸುತ್ತಾರೆ. ಹೀಗಾಗಿ ಈ ಮೊತ್ತವನ್ನು ಬಡವರಿಗೆ ನೆರವಾಗುವುದಕ್ಕೆ, ವಿಜಯೋತ್ಸವದಲ್ಲಿ ಖರ್ಚಿಗೆ ಬಳಸುತ್ತಾರೆ.
ಈಗ ಜಿಲ್ಲೆಯ ಬೈಂದೂರು ಕ್ಷೇತ್ರದಲ್ಲಿ ಚುನಾವಣೆ ನಡೆಯುವ ಕಾರಣ ನೀತಿ ಸಂಹಿತೆ ಬಿಗಿಯಾಗಿದೆ. ಎ. 23ರ ಬಳಿಕ ನೀತಿ ಸಂಹಿತೆ ಸಹಜವಾಗಿ ಸ್ವಲ್ಪ ಸಡಿಲವಾಗುತ್ತದೆ.
ಅನಂತರ ಫಲಿತಾಂಶದ ದಿನ ಹತ್ತಿರವಾಗುತ್ತಿದ್ದಂತೆ ಬೆಟ್ಟಿಂಗ್ ಹವಾ ಏರುವ ಸಾಧ್ಯತೆಯೂ ಇದೆ. ಮೊದಲು ಅಭ್ಯರ್ಥಿ ಗಳ ಪರವಾಗಿ ಬೆಟ್ಟಿಂಗ್ ನಡೆದರೆ ಬರಬರುತ್ತ ಬೂತ್, ವಾರ್ಡ್ ವಾರು ಬೆಟ್ಟಿಂಗ್ ನಡೆಯುವುದೂ ಇದೆ.
ಒಟ್ಟಾರೆಯಾಗಿ ಹಿಂದಿನ ಚುನಾವಣೆಗಳಲ್ಲಿದ್ದಷ್ಟು ಬೆಟ್ಟಿಂಗ್ ಜೋಷ್ ಮುಂದಿನ ದಿನಗಳಲ್ಲಿ ಏರಬಹುದೆ? ಎನ್ನುವುದನ್ನು ಕಾದು ನೋಡಬೇಕು.