Advertisement

Lok Sabha Election 2024 ಕೊಡುವವನ ಪಾತ್ರ ನಿರ್ವಹಿಸಲು ಮತದಾರ ಸಜ್ಜು

12:33 AM Apr 23, 2024 | Team Udayavani |

ಕಾರ್ಕಳ: ಚುನಾವಣೆ ಹತ್ತಿರ ಬರುತ್ತಿದ್ದರೂ ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲೂ ನಿಧಾನವಾಗಿ ರಾಜಕೀಯ ಚರ್ಚೆ, ಊಹೆ, ವಾದ ಮೆಲು ಧ್ವನಿ ಯಲ್ಲಿ ಕೇಳಿಬರಲಾರಂಭವಾಗಿದೆ.

Advertisement

ರಾಜ್ಯಕ್ಕೆ ಮುಖ್ಯಮಂತ್ರಿ, ಸಚಿವರು ಹಾಗೂ ಕೇಂದ್ರ ಸಚಿವ ಸ್ಥಾನದ ವರೆಗೆ ಆಯ್ಕೆ ಮಾಡಿ ಕಳುಹಿಸಿಕೊಟ್ಟ ಮತದಾರರಿರುವ ಕ್ಷೇತ್ರ ಕಾರ್ಕಳ.

ಅದರಲ್ಲೂ ಲೋಕಸಭೆಗೆ ಈ ಹಿಂದೆ ನಡೆದ ಉಪಚುನಾವಣೆಯಲ್ಲಿ ಇಂದಿರಾ ಗಾಂಧಿಯವರಿಗೆ ಮತ ನೀಡಿ ಅವರು ಗೆಲುವು ಸಾಧಿಸುವಂತೆ ಮಾಡಿದ, ಅವರು ಪ್ರಧಾನಿಯಾಗುವುದಕ್ಕೆ ಕಾರಣ ವಾಗಿಯೂ ಕ್ಷೇತ್ರ ಗಮನ ಸೆಳೆಯುತ್ತಿದೆ. ಮಲೆನಾಡಿನ ಸೆರಗಿನಲ್ಲಿ ಹೆಬ್ರಿ ಹಾಗೂ ಕಾರ್ಕಳ -ಎರಡೂ ತಾಲೂಕುಗಳನ್ನು ಒಳಗೊಂಡ ಕ್ಷೇತ್ರವಾಗಿದೆ.
ಮಾರುಕಟ್ಟೆ, ಅಂಗಡಿ, ಪೇಟೆ, ಧಾರ್ಮಿಕ ಕಾರ್ಯಕ್ರಮಗಳು-ಹೀಗೆ ಜನ ಗುಂಪು ಸೇರಿದ ಕಡೆಗಳಲ್ಲಿ, ಜನ ಪರಸ್ಪರ ಯಾವ ಪಕ್ಷ ಬರ ಬಹುದು, ಯಾರು ಗೆಲ್ಲಬಹುದು, -ಎಂಬಿತ್ಯಾದಿಯಾಗಿ ಸಾಮಾನ್ಯ ರೀತಿ ಯಲ್ಲಿ ಮಾತನಾಡಿ ಕೊಳ್ಳುವುದು ಬಿಟ್ಟರೆ ದೊಡ್ಡ ಮಟ್ಟಿನ ಆಸಕ್ತಿ ಕಂಡು ಬಂದಿಲ್ಲ.

ಹೇಗಿದೆ ನಾಡಿಮಿಡಿತ?
ಮತದಾರರ ನಾಡಿಮಿಡಿತ ಅರಿಯುವ ನಿಮಿತ್ತ ಬೈಲೂರಿನ ಕಡೆಗೆ ಪ್ರಯಾಣ ಬೆಳೆಸಿದಾಗ ಮಾತಿಗೆ ಸಿಕ್ಕಿದ್ದು ಹೆದ್ದಾರಿ ಬದಿ ಕಬ್ಬಿನ ಹಾಲು ಮಾರಾಟ ಮಾಡುತ್ತಿದ್ದ ಗುಡ್ಡೆಯಂಗಡಿ ನಿವಾಸಿ ಸಂತೋಷ್‌ ನಾಯ್ಕ. ಅವರ ಪ್ರಕಾರ ಇಲ್ಲಿ ಕಣದಲ್ಲಿರುವ ಪಕ್ಷಗಳ ಅಭ್ಯರ್ಥಿಗಳಿಬ್ಬರೂ ಪ್ರಬಲರಾಗಿದ್ದಾರೆ. ಪ್ರಬಲ ಪೈಪೋಟಿ ಇದೆ. ಯಾರು ಗೆಲ್ಲುತ್ತಾರೆ ಎನ್ನುವುದನ್ನು ಹೇಳುವುದಕ್ಕೆ ಆಗದು ಎನ್ನುತ್ತಾರೆ. ಇನ್ನು ಮುಂದೆ ಸಾಗುತ್ತ ರಸ್ತೆ ಬದಿ ಮನೆಗೆ ಮೀನು ಕೊಂಡೊಯ್ಯುತ್ತಿದ್ದ ಕಾರ್ಮಿಕ ಮಹಿಳೆ ಲತಾ ಅವರನ್ನು ಮಾತನಾಡಿಸಿದಾಗ, ರಾಜ್ಯ ಸರಕಾರದಿಂದ ನಮಗೆ ಪ್ರಯೋ ಜನವಾಗಿದೆ. ಆದರೆ ಎಲ್ಲರೂ ಬಿಜೆಪಿ ಬಂದರೆ ಒಳ್ಳೆಯದು ಎನ್ನುತ್ತಾರೆ. ಆದರೂ ಅಭ್ಯರ್ಥಿ ನೋಡಿ ಮತ ಹಾಕಬೇಕು ಎಂದರು. ನಿಟ್ಟೆ ಭಾಗಕ್ಕೆ ತೆರಳಿ ಗೇರು ಬೀಜ ಕಾರ್ಖಾನೆಯ ಕಾರ್ಮಿಕ ಮಹಿಳೆ ಸುಜಾತಾ ಪರಪ್ಪಾಡಿ ಅವರನ್ನು ಮಾತನಾಡಿಸಿದಾಗ, ಕಾಂಗ್ರೆಸ್‌ ಗ್ಯಾರಂಟಿ ಕೊಟ್ಟಿದೆ. ಪ್ರಯೋಜನ ಆಗಿಲ್ಲ ಅಂತ ನಾನು ಹೇಳುವುದಿಲ್ಲ. ಆದರೆ ಬೇರೆಯದಕ್ಕೆಲ್ಲ ರೇಟ್‌ ಜಾಸ್ತಿ ಮಾಡಿದ್ದಾರೆ ಎಂದರು. ರಸ್ತೆ ಬದಿ ವ್ಯಾಪಾರಿ ಕುಕ್ಕುಂದೂರಿನ ಶಹೀದ್‌ ಅಹಮ್ಮದ್‌ ಮಾತಿಗಿಳಿಯುತ್ತಲೇ ಪಕ್ಷ, ಅಭ್ಯರ್ಥಿಯನ್ನು ನೋಡಿ ಮತ ಹಾಕುತ್ತೇನೆ ಎಂದರು. ಈದು ಭಾಗದ ಕೃಷಿಕ ಸಂತೋಷ್‌ ಅವರನ್ನು ಮಾತ ನಾಡಿಸಿದಾಗ ಯಾವ ಪಕ್ಷ ಬಂದರೂ ಏನೂ ಪ್ರಯೋಜನ? ಕೃಷಿಕರಿಗೆ ಪ್ರಯೋಜನ ಆಗುತ್ತಿಲ್ಲ ಎಂದರು.

ಕಾರ್ಕಳದ ಖಾಸಗಿ ಉದ್ಯೋಗಿ ಉಮೇಶ್‌ ಪ್ರಕಾರ, ಬಿಜೆಪಿ ಅಥವಾ ಕಾಂಗ್ರೆಸ್‌- ಯಾರೇ ಬರಲಿ; ಜನರಿಗೆ ಉಪಕಾರ ಆಗುವ ಕೆಲಸ ಮಾಡಬೇಕು ಎಂದರು. ನಗರದ ವ್ಯಾಪಾರಿ ಗುಣಪಾಲ್‌ ಕೂಡ ಇದೇ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದರು. ಉದ್ಯಮಿ ನಿತ್ಯಾನಂದ ಅವರು ಮೂಲ ಸೌಕರ್ಯದ ಜತೆ ದೇಶದ ಹಿತದೃಷ್ಟಿಯೂ ಮುಖ್ಯ ಎಂದರು.

Advertisement

ನಾನು ಯಾವ ಸರಕಾರವನ್ನೂ ದೂರುವುದಿಲ್ಲ, ಆದರೆ ದೇಶಕ್ಕೆ ಸುಭದ್ರ ಸರಕಾರ ಸಿಗಬೇಕು ಎಂದವರು ಮಿಯ್ಯಾರಿನ ಗೃಹಿಣಿ ಶೋಭಾಲಕ್ಷ್ಮೀ.

- ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next