Advertisement
ಒಂದೆಡೆ ಸ್ವತಃ ಸಿಎಂ ಕುಮಾರಸ್ವಾಮಿ ಅವರೇ, “”ತಮ್ಮ ಮಗನನ್ನು ಸೋಲಿಸಲು ಕಾಂಗ್ರೆಸ್, ಬಿಜೆಪಿ ಮತ್ತು ರೈತಸಂಘದವರು ಚಕ್ರವ್ಯೂಹ ನಿರ್ಮಿಸಿಕೊಂಡಿದ್ದಾರೆ” ಎಂದು ತಮ್ಮ ಮಿತ್ರ ಪಕ್ಷವನ್ನು ಸೇರಿಸಿಕೊಂಡು ವಾಗ್ಧಾಳಿ ನಡೆಸಿದ್ದಾರೆ. ಇನ್ನೊಂದೆಡೆ, ಮೈಸೂರಿನಲ್ಲಿ ಸಚಿವ ಜಿ.ಟಿ.ದೇವೇಗೌಡ ಅವರೂ, ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸೋತರೆ ನಾವು ಜವಾಬ್ದಾರರಲ್ಲ ಎಂದು ಹೇಳಿದ್ದಾರೆ. ಜತೆಗೆ ಮಂಡ್ಯದಲ್ಲಿದ್ದ ದೋಸ್ತಿಗಳ ಭಿನ್ನಮತ ಈಗ, ಮೈಸೂರು, ಹಾಸನ ಮತ್ತು ತುಮಕೂರಿಗೂ ವ್ಯಾಪಿಸಿದೆ.
ಮಂಡ್ಯದಲ್ಲಿ ದೋಸ್ತಿಗಳ ನಡುವೆ ಸಮನ್ವಯ ಬಾರದೇ ಇರುವುದರ ಬಗ್ಗೆ ಆಕ್ರೋಶಗೊಂಡಿರುವ ಸಿಎಂ ಕುಮಾರಸ್ವಾಮಿ, ತಮ್ಮ ಮಗನ ವಿರುದ್ಧ ಚಕ್ರವ್ಯೂಹ ರೂಪಿಸಲಾಗಿದೆ ಎಂದು ಆರೋಪಿಸಿದ್ದಾರೆ. ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, ಕಾಂಗ್ರೆಸ್, ಬಿಜೆಪಿ, ರೈತಸಂಘದವರು ಸೇರಿಕೊಂಡು ಪುತ್ರ ನಿಖೀಲ್ ವಿರುದ್ಧ ಚಕ್ರವ್ಯೂಹ ರಚಿಸಿಕೊಂಡಿದ್ದಾರೆ ಎಂದು ಹೇಳುವ ಮೂಲಕ ದೋಸ್ತಿ ಪಕ್ಷವಾದ ಕಾಂಗ್ರೆಸ್ ವಿರುದ್ಧವೇ ಸಿಡಿಮಿಡಿಗೊಂಡಿದ್ದಾರೆ. ಸದ್ಯ ಮಂಡ್ಯದ ಬೆಳವಣಿಗೆಗಳು ನಮ್ಮೆಲ್ಲರ ಕೈ ಮೀರಿ ಹೋಗಿವೆ. ಸ್ವತಂತ್ರ ಅಭ್ಯರ್ಥಿಯು ಭಾರೀ ಬೆಂಬಲ ಪಡೆಯುತ್ತಿದ್ದಾರೆ. ಅವರು ಪಕ್ಷೇತರ ಅಭ್ಯರ್ಥಿಯಂತೆ ಕಂಡರೂ, ಅವರಿಗೆ ಕಾಂಗ್ರೆಸ್, ಬಿಜೆಪಿ, ರೈತಸಂಘದವರು ಬೆಂಬಲ ನೀಡುತ್ತಿದ್ದಾರೆ ಎಂದು ಬಹಿರಂಗವಾಗಿಯೇ ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಆದರೆ, ಮಂಡ್ಯದ ಜನತೆ ಯಾವುದೇ ಕಾರಣಕ್ಕೂ ನಿಖೀಲ್ ಕೈಬಿಡುವುದಿಲ್ಲ. ಅವರಾಗಲೇ, ನಿಖೀಲ್ ಗೆಲ್ಲಿಸಬೇಕು ಎಂದು ನಿರ್ಧರಿಸಿದ್ದಾರೆ ಎಂದು ಅಭಿಪ್ರಾಯಪಟ್ಟರು. ಮೈಸೂರಲ್ಲಿ ಕೈ ಎತ್ತಿದ ಜಿಟಿಡಿ?
ಮೈಸೂರು ಬೇಕೇ ಬೇಕು ಎಂದು ಪಟ್ಟುಹಿಡಿದು ಕ್ಷೇತ್ರವನ್ನು ಕಾಂಗ್ರೆಸ್ ಪಾಲಿಗೆ ಪಡೆದಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಜೆಡಿಎಸ್ ನಾಯಕರು ಬಿಸಿ ಮುಟ್ಟಿಸಿದ್ದಾರೆ. ಮೈಸೂರು -ಕೊಡಗು ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ಸೋತರೆ ನಾವು ಹೊಣೆಯಲ್ಲ ಎಂದು ಸಚಿವ ಜಿ.ಟಿ.ದೇವೇಗೌಡ ಹೇಳಿದ್ದಾರೆ. 2014ರಲ್ಲಿ ವಿಶ್ವನಾಥ್ ಅವರು ಸೋತಾಗ ಸಿದ್ದರಾಮಯ್ಯ ಅವರು ಹೊಣೆ ಹೊತ್ತಿದ್ದಾರಾ ಎಂದು ಅವರು ಪ್ರಶ್ನಿಸಿದ್ದಾರೆ.
Related Articles
Advertisement
ವಿಚಿತ್ರವೆಂದರೆ, ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಬೆಂಬಲಿಸುವ ಸಂಬಂಧ ಖಾಸಗಿ ಹೋಟೆಲ್‌ನಲ್ಲಿ ಕರೆಯಲಾಗಿದ್ದ ಜೆಡಿಎಸ್ ಸಭೆಯಲ್ಲೇ ಪಕ್ಷದ ಕಾರ್ಯಕರ್ತರು ಮೋದಿ.. ಮೋದಿ.., ಎಂದು ಘೋಷಣೆ ಕೂಗುವ ಮೂಲಕ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಬೆಂಬಲಿಸುವುದಿಲ್ಲ ಎಂಬ ಸಂದೇಶ ರವಾನಿಸಿದ್ದಾರೆ.
ಸಭೆಯಲ್ಲಿ ಜಿಲ್ಲೆಯ ಜೆಡಿಎಸ್ ಶಾಸಕರು, ಜೆಡಿಎಸ್ ತಾಲೂಕು ಅಧ್ಯಕ್ಷರು, ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲಾ ಕಾರ್ಯಕರ್ತರು, ಮುಖಂಡರು ಹಾಗೂ ಜಿಪಂ ಸದಸ್ಯರು, ಮೈಸೂರು ಮಹಾ ನಗರಪಾಲಿಕೆ ಜೆಡಿಎಸ್ ಸದಸ್ಯರು ಪಾಲ್ಗೊಂಡಿದ್ದರು. ಪರಿಷತ್ ಸದಸ್ಯ ಮರಿತಿಬ್ಬೇಗೌಡ ಮಾತನಾಡುತ್ತಿದ್ದಾಗ, ಕೆಲವು ಜೆಡಿಎಸ್ ಕಾರ್ಯಕರ್ತರು, ಚಾಮುಂಡೇಶ್ವರಿ ಕ್ಷೇತ್ರದ ಉಪಚುನಾವಣೆಯಲ್ಲಿ ಕೇಸ್ ಹಾಕಿಸಿಕೊಂಡ ಬಗ್ಗೆ ಮಾತನಾಡಿ, ಬಿಜೆಪಿಗೆ, ನರೇಂದ್ರ ಮೋದಿಗೆ ಜೈ ಎಂದರು. ಆಗ ಜಿ.ಟಿ.ದೇವೇಗೌಡರು ಸಮಾಧಾನಿಸಿದರೂ, ಕಾರ್ಯಕರ್ತರು ತೃಪ್ತರಾಗಿಲ್ಲ.
ಜಿಟಿಡಿ ಜತೆ ಚರ್ಚೆದೋಸ್ತಿ ಪಕ್ಷದ ನಡುವಿನ ಗೊಂದಲಗಳ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಸಚಿವ ಸಿದ್ದರಾಮಯ್ಯ, ನಾನು ಜಿ.ಟಿ.ದೇವೇಗೌಡರ ಜತೆ ಮಾತನಾಡುತ್ತೇನೆ. ಏಪ್ರಿಲ್ 7 ಕ್ಕೆ ಜಂಟಿ ಪತ್ರಿಕಾಗೋಷ್ಠಿ ಹಾಗೂ ಸಮಾವೇಶ ಹಮ್ಮಿಕೊಂಡಿದ್ದೇವೆ. ಆ ಕಾರ್ಯಕ್ರಮಕ್ಕೆ ಎಲ್ಲರೂ ಬಂದು ವಿಜಯಶಂಕರ್ ಪರ ಕೆಲಸ ಮಾಡುವುದಾಗಿ ತಿಳಿಸಿದ್ದಾರೆ. ಜಿ.ಟಿ.ದೇವೇಗೌಡರು ಎಲ್ಲ ಕಡೆಯೂ ಮನಸ್ಸು ಒಡೆದು ಹೋಗಿದೆ ಎಂದು ಹೇಳಿಲ್ಲ. ಮಂಡ್ಯ ವಿಚಾರದಲ್ಲಿ ಕೆಲವು ಕಡೆ ಅದೇ ರೀತಿ ಸಮಸ್ಯೆ ಇದೆ. ಭಾನುವಾರ ಎಲ್ಲ ನಾಯಕರನ್ನೂ ಕರೆದಿದ್ದೇನೆ. ಸಮಸ್ಯೆ ಸರಿಪಡಿಸಲಾಗುವುದು ಎಂದು ತಿಳಿಸಿದರು. ಈ ಸಭೆಗೆ ಬರುವಂತೆ ಮಾಜಿ ಸಚಿವ ಚೆಲುವರಾಯಸ್ವಾಮಿ, ಮಾಜಿ ಶಾಸಕರಾದ ಪಿ.ಎಂ.ನರೇಂದ್ರಸ್ವಾಮಿ, ರಮೇಶ್ ಬಂಡಿಸಿದ್ದೇಗೌಡರಿಗೆ ಖುದ್ದು ಸಿದ್ದರಾಮಯ್ಯ ಬುಲಾವ್ ನೀಡಿದ್ದಾರೆ. ತುಮಕೂರಲ್ಲೂ ಗೈರು
ತುಮಕೂರಿನಲ್ಲಿ ನಡೆದ ಕಾಂಗ್ರೆಸ್ -ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲೂ ದೋಸ್ತಿಗಳ ನಡುವೆ ಎಲ್ಲವೂ ಸರಿ ಇಲ್ಲ ಎಂಬುದನ್ನು ಬಹಿರಂಗಪಡಿಸಿದೆ. ಸಭೆಗೆ ಹಲವಾರು ಕಾಂಗ್ರೆಸ್ಸಿಗರು ಬಂದಿದ್ದರೂ ಸಂಸದ ಮುದ್ದಹನುಮೇಗೌಡ, ಮಾಜಿ ಶಾಸಕ ಕೆ.ಎನ್.ರಾಜಣ್ಣ ಹಾಗೂ ಅವರ ಬೆಂಬಲಿಗರು ಗೈರಾಗಿದ್ದರು. ತಾಪಂ ಅದ್ಯಕ್ಷರು, ಸದಸ್ಯರು, ಜಿಪಂ ಸದಸ್ಯರು ಹಾಗೂ ಪುರಸಭೆ ಸದಸ್ಯರು ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಹಲವಾರು ಮುಖಂಡರು ಸಭೆಯಲ್ಲಿ ಪಾಲ್ಗೊಂಡಿಲ್ಲ. ಆದರೆ, ದೇವೇಗೌಡರ ಗೆಲುವಿಗೆ ನಾವು ಪ್ರತ್ಯೇಕ ಸಭೆ ನಡೆಸುವುದಾಗಿ ತಿಳಿಸಿರುವ ಮಾಜಿ ಶಾಸಕ ಕೆ.ಎನ್.ರಾಜಣ್ಣ, ಪಟ್ಟಣದಲ್ಲಿದ್ದರೂ ಪರಮೇಶ್ವರ್ ಕರೆದಿದ್ದ ಸಭೆಗೆ ಬಾರಲಿಲ್ಲ. ಮತ್ತೆ ಕಾಣಿಸಿದ ಕಾಂಗ್ರೆಸ್ ಧ್ವಜ
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರ ಎಚ್ಚರಿಕೆಯ ಹೊರತಾಗಿಯೂ, ಶುಕ್ರವಾರವೂ ಕಾಂಗ್ರೆಸ್ ಕಾರ್ಯಕರ್ತರು, ಕೈ ಧ್ವಜ ಹಿಡಿದು ಸುಮಲತಾ ಪರ ಪ್ರಚಾರ ನಡೆಸಿದ್ದಾರೆ. ಇದಷ್ಟೇ ಅಲ್ಲ, ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್‌ನ ಬಾವುಟಗಳೂ ಕಂಡುಬಂದಿವೆ. ಸಂತೆಕಸಲಗೆರೆ ಗ್ರಾಮಕ್ಕೆ ತೆರಳಿದ್ದ ವೇಳೆ ಹಲವರು ಬಿಜೆಪಿ, ಕಾಂಗ್ರೆಸ್ ಬಾವುಟದ ನಡುವೆ ಜೆಡಿಎಸ್ ಬಾವುಟಗಳನ್ನೂ ಹಿಡಿದು ಸುಮಲತಾ ಪರ ಜೈಕಾರ ಹಾಕುತ್ತಿದ್ದುದು ಕಂಡು ಬಂದಿತು. ನನ್ನ ವಿರುದ್ಧ ಇಡೀ ಸರ್ಕಾರ, ಸಚಿವರು, ಶಾಸಕರು ನನ್ನ ಹೆಸರಿಗೆ ಮಸಿ ಬಳಿಯಲು ನಿಂತಿದ್ದಾರೆ. ನನ್ನ ಹೆಸರಿನವರನ್ನೇ ಮೂವರನ್ನು ಕಣಕ್ಕಿಳಿಸಿ, ಅವರಿಗೆ ನನ್ನ ರೀತಿಯೇ ಬಟ್ಟೆ ಹಾಕಿಸಿ, ಕನ್ನಡಕವನ್ನೂ ಹಾಕಿಸಿ ಗೊಂದಲ ಸೃಷ್ಟಿ ಮಾಡಲು ಯತ್ನಿಸಿದ್ದಾರೆ. ಇದು ಯಾವ ವ್ಯೂಹ?
– ಸುಮಲತಾ ಅಂಬರೀಷ್, ಪಕ್ಷೇತರ ಅಭ್ಯರ್ಥಿ