Advertisement

ಯಾರ‍್ಯಾರ ಆಸ್ತಿ ಮೌಲ್ಯ ಎಷ್ಟೆಷ್ಟು?

12:36 AM Mar 26, 2019 | Sriram |

ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಕೆಲವು ಪ್ರಮುಖ ನಾಯಕರ ಆಸ್ತಿ ವಿವರ ಹೀಗಿದೆ…

Advertisement

56 ಕೋಟಿ ರೂ. ಒಡೆಯ ನಿಖೀಲ್‌
ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಮೈತ್ರಿ ಅಭ್ಯರ್ಥಿಯಾಗಿರುವ ನಿಖೀಲ್‌ ಕುಮಾರಸ್ವಾಮಿ 56 ಕೋಟಿ ರೂ. ಆಸ್ತಿಗೆ ಒಡೆಯರಾಗಿದ್ದಾರೆ. ಲೋಕಸಭಾ ಚುನಾವಣೆಗೆ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ನಿಖೀಲ್‌ ಕುಮಾರಸ್ವಾಮಿ, ಚುನಾವಣಾಧಿಕಾರಿಗೆ ನೀಡಿರುವ ಅಫಿಡೆವಿಟ್‌ನಲ್ಲಿ ಚರಾಸ್ತಿ 17 ಕೋಟಿ 53 ಲಕ್ಷ ರೂ., ಸ್ಥಿರಾಸ್ತಿ 22 ಕೋಟಿ 53 ಲಕ್ಷ ರೂ. ಹೊಂದಿರುವುದಾಗಿ ತಿಳಿಸಿರುವುದಲ್ಲದೆ, 2.40 ಕೋಟಿ ರೂ. ಸಾಲ ಇರುವುದಾಗಿಯೂ ಘೋಷಿಸಿಕೊಂಡಿದ್ದಾರೆ. ಬಿಬಿಎ ಪದವೀಧರರಾಗಿರುವ ನಿಖೀಲ್‌ 71.47 ಲಕ್ಷ ರೂ. ವಾರ್ಷಿಕ ಆದಾಯ ಹೊಂದಿದ್ದಾರೆ. 200 ಗ್ರಾಂ ಚಿನ್ನ, ಎರಡು ಐಶಾರಾಮಿ ಕಾರು ಇದೆ.

ಧ್ರುವ ಆಸ್ತಿಮೌಲ್ಯ 9 ಕೋಟಿ ರೂ.
ಚಾಮರಾಜನಗರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ, ಸಂಸದ ಆರ್‌. ಧ್ರುವನಾರಾಯಣ 4.34 ಕೋಟಿ ರೂ. ಮೌಲ್ಯದ ಚರಾಸ್ತಿ ಹಾಗೂ 4. 65 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ಬ್ಯಾಂಕ್‌ಗೆ 22 ಲಕ್ಷ ರೂ. ಸಾಲ ಪಾವತಿಸಬೇಕಾಗಿದೆ.

ಧ್ರುವನಾರಾಯಣ ಬಳಿ 15 ಲಕ್ಷ ರೂ. ನಗದು ಇದೆ. ಬೆಂಗಳೂರಿನಲ್ಲಿ ವ್ಯಾಪಾರಕ್ಕೆ ಹೂಡಿಕೆ ಮಾಡಿರುವ ಹಣ 3.35 ಕೋಟಿ ರೂ., ಬೆಂಗಳೂರಿನ ಯಲಹಂಕದ ಕೆನರಾ ಬ್ಯಾಂಕ್‌ನಲ್ಲಿ ಇದೇ ಮಾರ್ಚ್‌ನಲ್ಲಿ 11.29 ಲಕ್ಷ ರೂ. ಫಿಕ್ಸಡ್‌ ಡೆಪಾಸಿಟ್‌ ಇಟ್ಟಿದ್ದಾರೆ. ಅಫಿಡವಿಟ್‌ನಲ್ಲಿ ಸಲ್ಲಿಸಿರುವ ಪ್ರಕಾರ ಧ್ರುವನಾರಾಯಣ ಅವರ ಬಳಿ ಯಾವುದೇ ಚಿನ್ನಾಭರಣಗಳಿಲ್ಲ.

ಎ.ಮಂಜು ಆಸ್ತಿ 23.17 ಕೋಟಿ ರೂ.
ಹಾಸನ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎ.ಮಂಜು ಅವರು 23.17 ಕೋಟಿ ರೂ. ಆಸ್ತಿ ಘೋಷಣೆ ಮಾಡಿಕೊಂಡಿದ್ದಾರೆ. 3 ಕೋಟಿ ರೂ.ಗೂ ಅಧಿಕ ಮೌಲ್ಯದ ಚರಾಸ್ತಿ ಹಾಗೂ 9.17 ಕೋಟಿ ರೂ. ಸ್ಥಿರಾಸ್ತಿ ಸೇರಿ ಒಟ್ಟು 12,49,49,908 ರೂ. ಮೌಲ್ಯದ ಆಸ್ತಿ, ಪತ್ನಿ ತಾರಾ ಅವರ ಹೆಸರಿನಲ್ಲಿ 1.18 ಕೋಟಿ ಚರಾಸ್ತಿ ಹಾಗೂ 9.50 ಕೋಟಿ ಸ್ಥಿರಾಸ್ತಿ ಸೇರಿ ಒಟ್ಟು 10.68 ಕೋಟಿ ರೂ. ಮೌಲ್ಯದ ಆಸ್ತಿಯಿದೆ ಎಂದು ಘೋಷಿಸಿಕೊಂಡಿದ್ದಾರೆ. ಎ. ಮಂಜು ಬಳಿ ಅರ್ಧ ಕೆ.ಜಿ. ಚಿನ್ನ, ನಾಲ್ಕು ಕೆ.ಜಿ. ಬೆಳ್ಳಿ ಇದ್ದರೆ, ಪತ್ನಿ ತಾರಾ ಅವರ ಬಳಿ ಒಂದು ಕೆ.ಜಿ. ಚಿನ್ನ ಎರಡೂವರೆ ಕೆ.ಜಿ. ಬೆಳ್ಳಿ ಆಭರಣಗಳಿವೆ. ಜಗದೀಶ್‌ ಎಂಬುವವರಿಗೆ 50 ಲಕ್ಷ ಸಾಲ ಕೊಟ್ಟಿರುವುದಾಗಿ ಮಾಹಿತಿ ನೀಡಿರುವ ಅವರಿಗೆ 2.50 ಕೋಟಿ ರೂ. ಸಾಲವಿದೆ.

Advertisement

ಪ್ರತಾಪ್‌ ಸಿಂಹ ಬಳಿ ಚಿನ್ನಾಭರಣವಿಲ್ಲ
ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರತಾಪ್‌ ಸಿಂಹ ಅವರ 2018-19ನೇ ಹಣಕಾಸು ವರ್ಷದಲ್ಲಿನ ಒಟ್ಟು ಆದಾಯ 6,03,937 ರೂ., ಪತ್ನಿ ಡಾ.ಅರ್ಪಿತ ಜೆ.ಎಸ್‌.ಅವರ ಆದಾಯ 3,01,219 ರೂ. ಎಂದು ಪ್ರಮಾಣಪತ್ರದಲ್ಲಿ ಹೇಳಲಾಗಿದೆ.

ಕನ್ನಡ ಪತ್ರಿಕೆಯ ಅಂಕಣಕಾರ ಮತ್ತು ಬರಹಗಾರರಾಗಿರುವ ಪ್ರತಾಪ್‌ ಸಿಂಹ ಅವರಿಗೆ ಅಂಕಣಕಾರರ ಗೌರವಧನ ಮತ್ತು ಸಂಸದರ ವೇತನ ಆದಾಯದ ಮೂಲವಾದರೆ, ಅವರ ಪತ್ನಿ ಡಾ.ಅರ್ಪಿತಾ ಅವರಿಗೆ ಮೈಸೂರಿನ ಪ್ರೀಮಿಯರ್‌ ರೀಟೇಲ್‌ ಸಂಸ್ಥೆಯಲ್ಲಿನ ವ್ಯಾಪಾರ ಆದಾಯ ಮೂಲವಾಗಿದೆ.ಪ್ರತಾಪ್‌ ಸಿಂಹ ಅವರ ಬಳಿ ಯಾವುದೇ ಚಿನ್ನಾಭರಣವಿಲ್ಲ. ಅರ್ಪಿತಾ ಅವರ ಬಳಿ 15 ಲಕ್ಷ ರೂ. ಮೌಲ್ಯದ ಚಿನ್ನಾಭರಣವಿದೆ.

ಮುನಿಯಪ್ಪಗಿಂತ ಪತ್ನಿಯೇ ಶ್ರೀಮಂತೆ
ಕೋಲಾರ ಲೋಕಸಭಾ ಮೀಸಲು ಕ್ಷೇತ್ರದ ಅಭ್ಯರ್ಥಿ ಕೆ.ಎಚ್‌.ಮುನಿಯಪ್ಪರಿಗಿಂತ ಅವರ ಪತ್ನಿ ನಾಗರತ್ನಮ್ಮ ಶ್ರೀಮಂತೆಯಾಗಿದ್ದಾರೆ. ಕೆ.ಎಚ್‌.ಮುನಿಯಪ್ಪರ ಮೇಲೆ ಅಟ್ರಾಸಿಟಿ ಕಾಯ್ದೆಯಡಿ ಕೆಜಿಎಫ್ ರಾಬರ್ಟ್‌ಸನ್‌ ಪೇಟೆ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ. ಪ್ರಕರಣವು ಕೆಜಿಎಫ್ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ. ಕೆ.ಎಚ್‌.ಮುನಿಯಪ್ಪ ಒಟ್ಟು 96.35 ಲಕ್ಷ ರೂ. ಮೌಲ್ಯದ ಚರಾಸ್ತಿ ಹೊಂದಿದ್ದರೆ, ಅವರ ಪತ್ನಿ ನಾಗರತ್ನಮ್ಮ 3.45 ಕೋಟಿ ರೂ. ಚರಾಸ್ತಿ ಹೊಂದಿದ್ದಾರೆ. ಮುನಿಯಪ್ಪರ ಹೆಸರಿನಲ್ಲಿ 8.50 ಕೋಟಿ ರೂ. ಸ್ಥಿರಾಸ್ತಿ ಹೊಂದಿದ್ದರೆ, ಅವರ ಪತ್ನಿ ನಾಗರತ್ನಮ್ಮ ಹೆಸರಿನಲ್ಲಿ 14.11 ಕೋಟಿ ರೂ ಮೌಲ್ಯದ ಸ್ಥಿರಾಸ್ತಿ ಇದೆ.

ಡಿ.ವಿ. ಸದಾನಂದಗೌಡ
ಡಿ.ವಿ.ಸದಾನಂದ ಗೌಡರು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನಲ್ಲಿರುವ ಕೃಷಿ ಭೂಮಿ, ಕೃಷಿಯೇತರ ಭೂಮಿ ಹಾಗೂ ಬೆಂಗಳೂರಿನಲ್ಲಿರುವ ವಾಣಿಜ್ಯ ಕಟ್ಟಡಗಳ ಬಗ್ಗೆ ನಾಮಪತ್ರದಲ್ಲಿ ಮಾಹಿತಿ ನೀಡಿದ್ದಾರೆ. ಹಾಗೆಯೇ ಪತ್ನಿ ಹೆಸರಿನಲ್ಲಿರುವ ಕೃಷಿ ಜಮೀನಿನ ಮಾಹಿತಿ ಒದಗಿಸಿದ್ದಾರೆ. 2.55 ಲಕ್ಷ ನಗದು, ಒಂದು ಕಾರು, 5.24 ಲಕ್ಷ ಮೌಲ್ಯದ ಚಿನ್ನ, 2.07 ಲಕ್ಷ ಬೆಳ್ಳಿ, ಪತ್ನಿ ಬಳಿ 82488 ನಗದು, 14.24 ಲಕ್ಷ ಮೌಲ್ಯದ ಚಿನ್ನ, 83 ಸಾವಿರ ರೂ, ಮೌಲ್ಯದ ಬೆಳ್ಳಿ ಇರುವ ಬಗ್ಗೆ ಮಾಹಿತಿ ನೀಡಿದ್ದಾರೆ.
ನಗದು : 3.38 ಲಕ್ಷ
ಚರಾಸ್ತಿ : 3,32,52,539
ಸ್ಥಿರಾಸ್ತಿ : 32.50 ಕೋಟಿ
ಸಾಲ :10.43 ಕೋಟಿ

ರಿಜ್ವಾನ್‌ ಅರ್ಷದ್‌
ರಿಜ್ವಾನ್‌ ಅರ್ಷದ್‌ ಅವರ ಬಳಿ ಕೃಷಿ ಭೂಮಿ ಇಲ್ಲ. ಕೃಷಿಯೇತರ ಭೂಮಿ ಇರುವ ಬಗ್ಗೆ ಉಲ್ಲೇಖ ಮಾಡಿದ್ದಾರೆ. 2.42 ಲಕ್ಷ ನಗದು, 2 ಕಾರು, 6.75 ಲಕ್ಷ ಮೌಲ್ಯದ ಚಿನ್ನ, ಪತ್ನಿ ಹೆಸರಿನಲ್ಲಿ 2.53 ಲಕ್ಷ ನಗದು, 18.75 ಲಕ್ಷ ಮೌಲ್ಯದ ಚಿನ್ನ ಹಾಗೂ ಮಕ್ಕಳ ಹೆಸರಿನಲ್ಲಿ 3.50 ಲಕ್ಷ ನಗದು, ಹಾಗೂ 4.80 ಲಕ್ಷ ಮೌಲ್ಯದ ಚಿನ್ನ ಹೊಂದಿದ್ದಾರೆ.
ನಗದು : 8.55 ಲಕ್ಷ
ಚರಾಸ್ತಿ : 1,62,74,648
ಸ್ಥಿರಾಸ್ತಿ: 15.30 ಕೋಟಿ
ಸಾಲ : 4.50 ಕೋಟಿ

ಪ್ರಮೋದ್‌ 87 ಕೋ.ರೂ. ಆಸ್ತಿ
ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಪ್ರಮೋದ್‌
ಮಧ್ವರಾಜ್‌ ಅವರ ಬಳಿ 87 ಕೋ.ರೂ. ಆಸ್ತಿ, ಪತ್ನಿ 8 ಕೋ.ರೂ., ಪುತ್ರಿ 3.19 ಕೋ.ರೂ. ಆಸ್ತಿ ಹೊಂದಿದ್ದಾರೆ.

ನಾರಾಯಣಸ್ವಾಮಿಗಿಂತ ಪತ್ನಿಯೇ ಶ್ರೀಮಂತೆ
ಚಿತ್ರದುರ್ಗ ಬಿಜೆಪಿ ಅಭ್ಯರ್ಥಿ ನಾರಾಯಣಸ್ವಾಮಿ ಅವರಿಗಿಂತ ಅವರ ಪತ್ನಿಯೇ ಶ್ರೀಮಂತೆ. ನಾರಾಯಣಸ್ವಾಮಿ ಲಕ್ಷಾಧೀಶ್ವರರಾದರೆ, ಪತ್ನಿ ವಿಜಯಕುಮಾರಿ ಕೋಟ್ಯಧೀಶೆ. 2017-18 ಸಾಲಿನ ನಾರಾಯಣಸ್ವಾಮಿ ವಾರ್ಷಿಕ ಆದಾಯ 8,16,400 ರೂ., ವಿಜಯ ಕುಮಾರಿ ಆದಾಯ 18,69,512 ರೂ. ಎಂದು ಘೋಷಿಸಿಕೊಂಡಿದ್ದಾರೆ.

ಎಚ್‌.ಡಿ. ದೇವೇಗೌಡರ ಬಳಿ 5,97,115 ರೂ. ನಗದು
ತುಮಕೂರು ಕ್ಷೇತ್ರದ ಮೈತ್ರಿ ಅಭ್ಯರ್ಥಿ ಎಚ್‌.ಡಿ.ದೇವೇಗೌಡ ಅವರ ಬಳಿ ನಗದು 5,97,115 ರೂ. ಇದ್ದು 48.500 ರೂ. ಮೌಲ್ಯದ ಚಿನ್ನ ಹೊಂದಿದ್ದಾರೆ. ಪತ್ನಿ ಚನ್ನಮ್ಮ ಅವರ ಬಳಿ 4,50,000 ರೂ. ಮೌಲ್ಯ ಚಿನ್ನವಿದೆ. 3,67,55,000ರೂ. ಮೌಲ್ಯದ ಕಟ್ಟಡ ಹೊಂದಿರುವ ದೇವೇಗೌಡರು 21 ಎಕರೆ ಜಮೀನು ಹೊಂದಿದ್ದಾರೆ. ಪತ್ನಿ ಹೆಸರಲ್ಲಿ,
3 ಎಕರೆ, 28 ಗುಂಟೆ ಜಮೀನಿದೆ. ಬ್ಯಾಂಕ್‌ ಡಿಪಾಸಿಟ್‌ 24,06,044 ರೂ.ಇದ್ದು, ಚನ್ನಮ್ಮ ಅವರು 63,27,785 ರೂ. ಹೊಂದಿದ್ದಾರೆ. ದೇವೇಗೌಡರು 15,75,000 ರೂ. ಸಾಲ ಹೊಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next