Advertisement

ಬೆಲೆ ಏರಿಕೆಗೆ ಸದನ ಬಲಿ: ಸತತ 2ನೇ ದಿನವೂ ಕೊಚ್ಚಿಹೋದ ಕಲಾಪ ; ವಿಪಕ್ಷಗಳಿಂದ ಗದ್ದಲ

12:44 AM Jul 20, 2022 | Team Udayavani |

ಹೊಸದಿಲ್ಲಿ: ಅಗತ್ಯ ವಸ್ತುಗಳ ಬೆಲೆಯೇರಿಕೆ, ಜಿಎಸ್‌ಟಿ ಹೆಚ್ಚಳ, ಅಗ್ನಿಪಥ ಯೋಜನೆ ಕುರಿತಂತೆ ಚರ್ಚೆಗೆ ಆಗ್ರಹಿಸಿ ಕಾಂಗ್ರೆಸ್‌ ಪ್ರತಿಭಟಿಸಿದ ಕಾರಣ 2ನೇ ದಿನವಾದ ಮಂಗಳವಾರವೂ ಸಂಸತ್‌ನ ಉಭಯ ಸದನಗಳ ಕಲಾಪ ವ್ಯರ್ಥವಾಗಿವೆ. ವಿಪಕ್ಷಗಳ ಗದ್ದಲ ತೀವ್ರ­ಗೊಂಡ ಹಿನ್ನೆಲೆಯಲ್ಲಿ ಕಲಾಪಗಳನ್ನು ಹಲವು ಬಾರಿ ಮುಂದೂಡಿ, ಅನಂತರ ದಿನದ ಮಟ್ಟಿಗೆ ಮುಂದೂಡಲಾಯಿತು.

Advertisement

ರಾಜ್ಯಸಭೆ ಕಲಾಪ ಆರಂಭವಾಗುತ್ತಿದ್ದಂತೆ, ಬೆಲೆಯೇರಿಕೆ ವಿಚಾರ ಚರ್ಚಿಸುವಂತೆ ಆಗ್ರಹಿಸಿ ಕಾಂಗ್ರೆಸ್‌, ವಿಪಕ್ಷಗಳು, ಆಪ್‌ ಸದಸ್ಯರು ಮನವಿ ಮಾಡಿದರು. ಇದಕ್ಕೆ ಅವಕಾಶ ಸಿಗದೇ ಇದ್ದಾಗ, ಘೋಷಣೆಗಳನ್ನು ಕೂಗುತ್ತಾ ಪ್ರತಿಭಟಿಸಲು ಆರಂಭಿಸಿದರು.

ಗದ್ದಲದ ನಡುವೆಯೇ ವಿದೇಶಾಂಗ ಸಚಿವ ಜೈಶಂಕರ್‌, ಸಮೂಹನಾಶ ಶಸ್ತ್ರಾಸ್ತ್ರಗಳು ಮತ್ತು ಅವುಗಳ ಸರಬರಾಜು ವ್ಯವಸ್ಥೆ (ಕಾನೂನುಬಾಹಿರ ಚಟುವಟಿಕೆಗಳ ನಿರ್ಬಂಧ) ತಿದ್ದುಪಡಿ ವಿಧೇಯಕ­ಮಂಡಿಸಿದರು. ಗದ್ದಲ ಮುಂದುವರಿದ ಕಾರಣ ಕಲಾಪ­ವನ್ನು ಬುಧವಾರಕ್ಕೆ ಮುಂದೂಡಲಾಯಿತು.ಲೋಕ­ಸಭೆ­ಯಲ್ಲೂ ಇದೇ ಬೆಳವಣಿಗೆಗಳು ನಡೆದವು.

ಪೌರತ್ವ ತೊರೆದವರು: 2021ರಲ್ಲಿ ಭಾರತದ ಪೌರತ್ವ ಬಿಟ್ಟುಕೊಟ್ಟವರ ಸಂಖ್ಯೆ ಗಣನೀಯ ಏರಿಕೆಯಾಗಿದ್ದು, 1. 63 ಲಕ್ಷ ಮಂದಿ ಬೇರೆ ದೇಶಗಳ ಪೌರತ್ವವನ್ನು ಪಡೆದಿದ್ದಾರೆ ಎಂದು ಲೋಕಸಭೆಗೆ ಸರಕಾರ ಮಾಹಿತಿ ನೀಡಿದೆ. ಈ ಪೈಕಿ ಬಹುತೇಕ ಮಂದಿ ಅಮೆರಿಕ, ಆಸ್ಟ್ರೇ­ಲಿಯಾ, ಕೆನಡಾ ಕಡೆ ಮುಖಮಾಡಿದ್ದಾರೆ ಎಂದಿದೆ.

ಲಂಕಾದಿಂದ “ಉಚಿತ’ ಸಂಸ್ಕೃತಿ ಸರಿಯಲ್ಲ ಎಂಬ ಪಾಠ
ನೆರೆದೇಶ ಶ್ರೀಲಂಕಾವು ಅತ್ಯಂತ ಗಂಭೀರ ಬಿಕ್ಕಟ್ಟಿನ ಪರಿಸ್ಥಿತಿಯನ್ನು ಎದುರಿಸುತ್ತಿದ್ದು, ಇದು ಸಹಜವಾಗಿಯೇ ಭಾರತದ ಆತಂಕಕ್ಕೆ ಕಾರಣವಾಗಿದೆ. ಹಣಕಾಸು ವಿವೇಕ, ಜವಾಬ್ದಾರಿಯುತ ಆಡಳಿತ ಮತ್ತು “ಉಚಿತಗಳ ಕೊಡುಗೆ ಸಂಸ್ಕೃತಿ’ಯಿಂದ ದೂರವಿರಬೇಕು ಎಂಬ ಪಾಠವನ್ನು ಇದು ನಮಗೆ ಕಲಿಸಿದೆ ಎಂದು ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಹೇಳಿದ್ದಾರೆ. ಮಂಗಳವಾರ ನಡೆದ ಸರ್ವಪಕ್ಷ ಸಭೆಯಲ್ಲಿ ಅವರು ಲಂಕಾ ಬಿಕ್ಕಟ್ಟಿನ ವಿವರಣೆ ನೀಡಿದ್ದಾರೆ. ಇದೇ ವೇಳೆ, ಭಾರತದಲ್ಲಿ ಇಂಥ ಸ್ಥಿತಿ ಎದುರಾಗುವುದಿಲ್ಲ ಎಂದೂ ಸ್ಪಷ್ಪಪಡಿಸಿದ್ದಾರೆ. ಸಭೆಯಲ್ಲಿ ಸಚಿವ ಪ್ರಹ್ಲಾದ್‌ ಜೋಷಿ, ಪ್ರತಿಪಕ್ಷಗಳ ನಾಯಕರಾದ ಚಿದಂಬರಂ, ಶರದ್‌ ಪವಾರ್‌, ಟಿ.ಆರ್‌.ಬಾಲು, ಎಂ.ಎಂ.ಅಬ್ದುಲ್ಲಾ ಮತ್ತಿತರರು ಉಪಸ್ಥಿತರಿದ್ದರು.

Advertisement

ಸಂಸತ್‌ಗೆ ಸರಕಾರದ ಮಾಹಿತಿ
-ಕಳೆದ 5 ವರ್ಷಗಳಲ್ಲಿ ದೇಶದ ಸಶಸ್ತ್ರಪಡೆಗಳಲ್ಲಿ 819 ಆತ್ಮಹತ್ಯೆ ಪ್ರಕರಣಗಳು ನಡೆದಿವೆ
-ಭಾರತದ ಕಂಪೆನಿಗಳೊಂದಿಗೆ ಡಿಆರ್‌ಡಿಒ 1,464 “ತಂತ್ರಜ್ಞಾನ ವಿನಿಮಯ’ ಒಪ್ಪಂದಗಳಿಗೆ ಸಹಿ ಹಾಕಿದೆ
-ಕಳೆದ 3 ವರ್ಷಗಳಲ್ಲಿ ಕೋಮು ಪ್ರಚೋದನೆ ನೀಡುವಂಥ ಸುದ್ದಿ ಪ್ರಸಾರ ಮಾಡಿದ 163 ಘಟನೆಗಳ ಬಗ್ಗೆ ಖಾಸಗಿ ಟಿವಿ ಚಾನೆಲ್‌ಗ‌ಳಿಗೆ ಎಚ್ಚರಿಕೆ ನೀಡಲಾಗಿದೆ.
-ದೇಶದಲ್ಲಿ ಮಂಕಿಪಾಕ್ಸ್‌ ರಿಸ್ಕ್ ತಗ್ಗಿಸಲು ಸರಕಾರ ಹಲವು ಕ್ರಮಗಳನ್ನು ಕೈಗೊಂಡಿದೆ
-ಕಳೆದ 5 ವರ್ಷಗಳಲ್ಲಿ 7 ನಗರಗಳು, ಪಟ್ಟಣಗಳ ಹೆಸರು ಬದಲಾವಣೆಗೆ ಕೇಂದ್ರ ಒಪ್ಪಿಗೆ ನೀಡಿದೆ.

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next