ನವದೆಹಲಿ : ಭಾರತದ ರಾಜಕೀಯದಲ್ಲಿ ಪ್ರಧಾನಿಯ ‘ಹನುಮಾನ್’ ಎಂದು ಬಣ್ಣಿಸಿಕೊಳ್ಳುವ ಚಿರಾಗ್ ಪಾಸ್ವಾನ್ ಅವರು ಇನ್ನು ವಿಶೇಷ ಭದ್ರತೆಯ ಅಡಿಯಲ್ಲಿರುತ್ತಾರೆ. ಚಿರಾಗ್ ಅವರಿಗೆ ಕೇಂದ್ರ ಗೃಹ ಸಚಿವಾಲಯ ಝಡ್ ಕೆಟಗರಿ ಭದ್ರತೆ ಒದಗಿಸಲಿದೆ.
ಕೇಂದ್ರ ಸಚಿವ ನಿತ್ಯಾನಂದ ರಾಯ್ ನಂತರ ಬಿಹಾರದ ನಾಯಕ ಚಿರಾಗ್ ಪಾಸ್ವಾನ್ ಅವರಿಗೆ ಈ ಸೌಲಭ್ಯ ಒದಗಿಸಲು ಸಚಿವಾಲಯ ನಿರ್ಧರಿಸಿದೆ. ಗಮನಾರ್ಹವೆಂದರೆ, ಐಬಿಯ ಬೆದರಿಕೆ ಗ್ರಹಿಕೆ ವರದಿಯ ಆಧಾರದ ಮೇಲೆ, ಪಾಸ್ವಾನ್ ಅವರಿಗೆ ಈ ಭದ್ರತೆಯನ್ನು ನೀಡಲಾಗಿದೆ.
ಈ ಹಿಂದೆ ಅವರ ಭದ್ರತೆಯನ್ನು ಹೆಚ್ಚಿಸಬೇಕು ಎಂಬ ಬೇಡಿಕೆಯೂ ಬಂದಿದ್ದು, ಅದರ ಆಧಾರದ ಮೇಲೆ ಈ ನಿರ್ಧಾರ ಕೈಗೊಳ್ಳಲಾಗಿದೆ. ಪಾಸ್ವಾನ್ ಅವರು ಬಿಹಾರದ ಜಮುಯಿ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿದ್ದಾರೆ ಮತ್ತು ಲೋಕ ಜನಶಕ್ತಿ ಪಕ್ಷದ (ರಾಮ್ ವಿಲಾಸ್) ಬಣದ ನಾಯಕರಾಗಿದ್ದಾರೆ.
ಚಿರಾಗ್ ಅವರ ಭದ್ರತೆಗಾಗಿ ಒಟ್ಟು 33 ಭದ್ರತಾ ಸಿಬಂದಿಗಳನ್ನು ನಿಯೋಜಿಸಲಾಗುತ್ತಿದ್ದು, ಇವರೊಂದಿಗೆ 10 ಶಸ್ತ್ರಸಜ್ಜಿತ ಸ್ಟ್ಯಾಟಿಕ್ ಗಾರ್ಡ್‌ಗಳು ವಿಐಪಿ ಮನೆಯಲ್ಲಿ ಉಳಿಯಲಿದ್ದಾರೆ. 6 ರೌಂಡ್ ದಿ ಕ್ಲಾಕ್ ಪಿಎಸ್‌ಒಗಳು, ಮೂರು ಪಾಳಿಗಳಲ್ಲಿ 12 ಸಶಸ್ತ್ರ ಬೆಂಗಾವಲು ಕಮಾಂಡೋಗಳು, ವಾಚರ್ಸ್ ಶಿಫ್ಟ್‌ನಲ್ಲಿ 2 ಕಮಾಂಡೋಗಳು ಮತ್ತು 3 ಗಂಟೆಯ ಟ್ರೆಂಡ್ ಡ್ರೈವರ್‌ಗಳು ಇರಲಿದ್ದಾರೆ.
Related Articles
ಚಿರಾಗ್ ಗೆ ವಿಐಪಿ ಭದ್ರತೆ ನೀಡುವ ರಾಜಕೀಯ ಅರ್ಥವನ್ನೂ ಕಲ್ಪಿಸಲಾಗಿದ್ದು, ಮುಂಬರುವ ಸಚಿವ ಸಂಪುಟ ವಿಸ್ತರಣೆಯಲ್ಲಿ ಅವರಿಗೆ ಸರ್ಕಾರದಲ್ಲಿ ದೊಡ್ಡ ಜವಾಬ್ದಾರಿ ಸಿಗಲಿದೆ ಎಂಬ ಊಹಾಪೋಹವಿದೆ. ಈ ಸಂಬಂಧ ಚಿರಾಗ್ ಗೆ ಕೇಂದ್ರ ಸರ್ಕಾರ ‘ಝಡ್’ ಕೆಟಗರಿ ಭದ್ರತೆ ನೀಡಿದೆ ಎನ್ನಲಾಗಿದ್ದು, ಕೆಲ ದಿನಗಳ ಹಿಂದೆ ಚಿರಾಗ್ ಅವರು ಕೇಂದ್ರ ಗೃಹ ಸಚಿವರನ್ನು ಭೇಟಿಯಾಗಿದ್ದು, ಸರ್ಕಾರದಲ್ಲಿ ಸ್ಥಾನ ಸಿಗಬಹುದು ಎಂಬ ಊಹಾಪೋಹಗಳು ಹರಿದಾಡಿದ್ದವು.
ದಿವಂಗತ ರಾಮ್ ವಿಲಾಸ್ ಪಾಸ್ವಾನ್ ಅವರ ಪುತ್ರ ಚಿರಾಗ್ ಪಾಸ್ವಾನ್ ಬಿಹಾರದ ರಾಜಕೀಯದಲ್ಲಿ ಸಕ್ರಿಯವಾಗಿದ್ದು ದಲಿತರು ಮತ್ತು ಮಹಾದಲಿತರನ್ನು ಒಗ್ಗೂಡಿಸುವ ಮೂಲಕ ನಿತೀಶ್ ವಿರುದ್ಧ ಹೋರಾಟಕ್ಕೆ ಸಜ್ಜಾಗುತ್ತಿದ್ದಾರೆ. ಇದಕ್ಕಾಗಿ ನಿತೀಶ್ ಕುಮಾರ್ ಅವರ ಕ್ಷೇತ್ರವಾದ ನಳಂದವನ್ನು ಪಕ್ಷದ ನೆಲೆಯನ್ನಾಗಿ ಮಾಡಲು ಆಯ್ಕೆ ಮಾಡಿಕೊಂಡು ತಮ್ಮ ಕಾರ್ಯಕರ್ತರಿಗೆ ತರಬೇತಿ ಶಿಬಿರಗಳನ್ನು ಆಯೋಜಿಸಿದ್ದಾರೆ.