ಬೀದರ: ಲೋಕ ಅದಾಲತ್ ಮೂಲಕ ಸೆಪ್ಟೆಂಬರನಲ್ಲಿ ಜನರ ಮನೆ ಬಾಗಿಲಿಗೆ ಹೋಗುತ್ತಿದ್ದೇವೆ. ರಾಜಿ ಸಂಧಾನದ ಮೂಲಕ ವ್ಯಾಜ್ಯ ಪ್ರಕರಣಗಳನ್ನು ಬಗೆಹರಿಸಿ ಜನರ ಕಷ್ಟ ಪರಿಹರಿಸಲು ಜಿಲ್ಲೆಯಲ್ಲಿ ಕೂಡ ಈ ಲೋಕ ಅದಾಲತ್ ನಡೆಸಲಾಗುತ್ತದೆ ಎಂದು ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಕಾಡ್ಲೂರ್ ಸತ್ಯನಾರಾಯಣಾಚಾರ್ಯ ಹೇಳಿದರು.
ನಗರದ ಜಿಲ್ಲಾ ನ್ಯಾಯಾಲಯದ ವಿಡಿಯೋ ಕಾನ್ಫೆರೆನ್ಸ್‌ನಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಎಲ್ಲಾ ತಾಲೂಕುಗಳಲ್ಲಿನ ನ್ಯಾಯಾಲಯ ಸೇರಿ ಜಿಲ್ಲೆಯಲ್ಲಿ ಒಟ್ಟು 27,492 ಪ್ರಕರಣಗಳಿವೆ. ಇವುಗಳಲ್ಲಿ 1646 ಕೇಸಗಳನ್ನು ಈ ಅದಾಲತ್‌ನಲ್ಲಿ ರಾಜಿ ಸಂಧಾನದ ಮೂಲಕ ಸರಿಪಡಿಸಬಹುದು ಎಂಬುದನ್ನು ಗುರುತಿಸಿದ್ದೇವೆ. ಉಭಯ ಪಾರ್ಟಿಗಳಲ್ಲಿ ಯಾರಿಗೂ ತೊಂದರೆಯಾಗದ ಹಾಗೆ ರಾಜಿ ಸಂಧಾನದ ಮೂಲಕ ಅವರನ್ನು ಒಟ್ಟುಗೂಡಿಸಿ ವ್ಯಾಜ್ಯವನ್ನು ರಾಜಿ ಮೂಲಕ ಪರಿಹರಿಸಲಾಗುವುದು ಎಂದು ತಿಳಿಸಿದರು.
ಈ ಲೋಕ ಅದಾಲತ್‌ನಲ್ಲಿ ಪಾರ್ಟಿಗಳು ನೇರವಾಗಿ ನ್ಯಾಯಾಲಯಕ್ಕೆ ಬರುವ ಅವಶ್ಯಕತೆ ಇರುವುದಿಲ್ಲ. ಇಬ್ಬರಿಗೂ ಗೆಲುವು ಇರುತ್ತದೆ. ದ್ವೇಷ ಭಾವನೆಗೆ ಪೂರ್ಣ ವಿರಾಮ ಇರುತ್ತೆ. ರಾಜಿ ಸಂಧಾನದ ಮೂಲಕ ವ್ಯಾಜ್ಯ ಪರಿಹಾರವಾಗುತ್ತದೆ. ಅವರನ್ನು ಪ್ರತಿನಿ ಧಿಸುವ ವಕೀಲರ ಕಚೇರಿಗೆ ಹೋಗಿ ಅವರ ಮೂಲಕ ರಾಜಿ ಸಂಧಾನದಲ್ಲಿ ಭಾಗವಹಿಸಬಹುದಾಗಿದೆ ಎಂದು ತಿಳಿಸಿದರು. ಚೆಕ್ ಬೌನ್ಸ್, ವಾಹನ ಅಪಘಾತ, ವೈವಾಹಿಕ ಸಂಬಂಧಗಳಲ್ಲಿನ ಬಿರುಕು ಇತ್ಯಾದಿ ಪ್ರಕರಣಗಳನ್ನು ಈ ಲೋಕ್ ಅದಾಲತ್ ಮೂಲಕ ಪರಿಹರಿಸಬಹುದಾಗಿದೆ. ಜಿಲ್ಲೆಯಲಿ ಹೆಚ್ಚಾಗಿ ಬಡವರಿದ್ದಾರೆ. ಕುಟುಂಬದ ಯಾರಾದರೂ ಅಪಘಾತಕ್ಕೀಡಾದಾಗ ಅವರಿಗೆ ಖರ್ಚು ಒದಗಿಸಬೇಕು. ಅಂಥವರಿಗೆ ಈ ಲೋಕ ಅದಾಲತ್ ಮೂಲಕ ವಾಹನ ವಿಮಾ ಹಣವನ್ನು ಶೀಘ್ರ ಒದಗಿಸಲು ಸಾಧ್ಯವಿದೆ ಎಂದರು.
ಸಾಮಾನ್ಯ ಜನರಿಗೆ ಕಾಯ್ದೆ ಕಾನೂನುಗಳನ್ನು ಓದಿ ತಿಳಿಸಲು ಸಾಧ್ಯವಾಗುವುದಿಲ್ಲ. ಆದರೆ, ಅವರಿಗೆ ಯಾವುದು ಸರಿ, ಯಾವುದು ತಪ್ಪು ಎಂದು ತಿಳಿಸಿದಲ್ಲಿ ಅವರು ಕಾನೂನು ಮೀರಿ ನಡೆದುಕೊಳ್ಳುವುದಿಲ್ಲ. ನ್ಯಾಯ ಅಂದರೇನು? ಯಾವ ಹಕ್ಕುಗಳು ನಮಗಿವೆ. ಹಕ್ಕು ಚ್ಯುತಿ ಆದಾಗ ಏನು ಮಾಡಬೇಕು. ಯಾರ ಬಳಿ ಹೋಗಬೇಕು. ಹೇಗೆ ಅರ್ಜಿ ಸಲ್ಲಿಸಬೇಕು ಎಂದು ಈ ಲೋಕ ಅದಾಲತ್ ಮೂಲಕ ತಿಳಿವಳಿಕೆ ನೀಡಲಾಗುತ್ತದೆ ಎಂದು ಅವರು ತಿಳಿಸಿದರು. ಪ್ರಾ ಧಿಕಾರದ ಸದಸ್ಯ ಕಾರ್ಯದರ್ಶಿ ಸಿದ್ರಾಮ ಟಿ.ಪಿ ಇದ್ದರು.