ಬೆಂಗಳೂರು: ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಆರೋಪದ ಮೇಲೆ ನಗರದ 3 ಲಾಡ್ಜ್ ಗಳ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದು ಕಾಟನ್ ಪೇಟೆಯ ದುರ್ಗಾ ಲಾಡ್ಜ್ ನ ರಹಸ್ಯ ಕೋಣೆಯಲ್ಲಿ ನಡೆಯುತ್ತಿದ್ದ ದಂಧೆಯನ್ನು ಬಯಲಿಗೆಳೆದಿದ್ದಾರೆ.
ದಂಧೆ ನಡೆಯುತ್ತಿದ್ದ ಮಾಹಿತಿಯ ಹಿನ್ನೆಲೆ ಕಾಟನ್‌ಪೇಟೆಯ ದುರ್ಗಾ, ಕಲಾಸಿಪಾಳ್ಯದ ಸಫೇರಾ ಹಾಗೂ ಸಿಟಿ ಮಾರ್ಕೆಟ್ ವಾಸವಿ ಲಾಡ್ಜ್ ಗಳ ಮೇಲೆ ದಾಳಿ ನಡೆಸಲಾಗಿತ್ತು. ಈ ವೇಳೆ 6 ಮಹಿಳೆಯರನ್ನು ರಕ್ಷಿಸಲಾಯಿತು. ಈ ಸಂಬಂಧ ಲಾಡ್ಜ್ ಗಳ ವ್ಯವಸ್ಥಾಪಕರು ಹಾಗೂ ಸಿಬ್ಬಂದಿ ಸೇರಿ 9 ಮಂದಿಯನ್ನು ಬಂಧಿಸಲಾಗಿದೆ. ಉದ್ಯೋಗ ನೆಪದಲ್ಲಿ ಮಹಿಳೆಯರನ್ನು ವೇಶ್ಯಾವಾಟಿಕೆಗೆ ದೂಡಿದ್ದರೆಂದು ಸಿಸಿಬಿ ಮಾಹಿತಿ ನೀಡಿದೆ.
ರಹಸ್ಯ ಕೋಣೆ ಪತ್ತೆ ಕಾಟನ್‌ಪೇಟೆ ಮುಖ್ಯರಸ್ತೆ ಯಲ್ಲಿರುವ ದುರ್ಗಾ ಪ್ಯಾಲೇಸ್ ಲಾಡ್ಜ್ ನಲ್ಲಿ ಮೇಲೆ ದಾಳಿ ನಡೆಸಿದಾಗ ರಹಸ್ಯ ಕೋಣೆ ಪತ್ತೆಯಾಗಿದೆ. ರಹಸ್ಯ ಕೋಣೆಯಲ್ಲಿ ಅಡಗಿಸಿಟ್ಟಿದ್ದ ಇಬ್ಬರು ಮಹಿಳೆಯರನ್ನು ರಕ್ಷಣೆ ಮಾಡಲಾಗಿದೆ. ನಾಲ್ಕನೇ ಮಹಡಿಯಲ್ಲಿರುವ ಕೋಣೆಯ ಗೋಡೆಯನ್ನು 3 ಅಡಿಗಳಷ್ಟು ಸುತ್ತ ಕೊರೆದು ಅದರೊಳಗೆ ಕೋಣೆ ನಿರ್ಮಿಸಲಾಗಿದೆ. ಅದರಲ್ಲಿ ಐದಾರು ಮಂದಿ ಆರಾಮಾಗಿ ಕುಳಿತುಕೊಳ್ಳಬಹುದಾಗಿದೆ.
ಪೊಲೀಸರು ಲಾಡ್ಜ್ ಮೇಲೆ ದಾಳಿ ನಡೆಸುತ್ತಿದ್ದಂತೆ ಲಾಡ್ಜ್ ಸಿಬ್ಬಂದಿ ಅಲರಂ ಒತ್ತುತ್ತಾನೆ. ಆ ಶಬ್ಧದಿಂದ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಮಹಿಳೆಯರ ಕೂಡಲೇ ರಹಸ್ಯ ಕೋಣೆಗೆ ಹೋಗಿ ಕುಳಿತುಕೊಳ್ಳುತ್ತಾರೆ.ಸಿಸಿಬಿ ಪೊಲೀಸರು ದಾಳಿ ನಡೆ ಸಿದಾಗ ವೇಶ್ಯಾವಾಟಿಕೆ ನಡೆದ ಬಗ್ಗೆ ಕೆಲವೊಂದು ಸಾಕ್ಷ್ಯ ದೊರಕಿತ್ತು. ಆದರೆ, ಮಹಿಳೆಯರು ಪತ್ತೆಯಾಗಿರಲಿಲ್ಲ. ಬಳಿಕ ಎರಡೂವರೆ ಗಂಟೆಗಳ ಕಾಲ ಶೋಧಿಸಿದಾಗ ರಹಸ್ಯ ಕೋಣೆ ಪತ್ತೆಯಾಗಿದೆ ಎಂದು ಸಿಸಿಬಿ ಪೊಲೀಸರು ಹೇಳಿದರು.