Advertisement

ರಿಲಯನ್ಸ್‌ ಮಾರ್ಕೆಟ್‌ಗೆ ಬೀಗ ಜಡಿದ ಪಾಲಿಕೆ

03:57 PM Oct 27, 2018 | Team Udayavani |

ದಾವಣಗೆರೆ: ನಿಷೇಧಿತ ಪ್ಲಾಸ್ಟಿಕ್‌ ಬಳಕೆ, ನಿರ್ವಹಣೆಯಲ್ಲಿ ಅವ್ಯವಸ್ಥೆ, ಅವಧಿ ಮೀರಿದ ಪದಾರ್ಥಗಳ ಮಾರಾಟ ಮತ್ತು ನಗರ ಪಾಲಿಕೆಗೆ ತೆರಿಗೆ ವಂಚನೆ ಹಿನ್ನೆಲೆಯಲ್ಲಿ ನಗರದ ಪಿಬಿ ರಸ್ತೆಯಲ್ಲಿರುವ ರಿಲಯನ್ಸ್‌ ಮಾರ್ಕೆಟ್‌ ಗೆ ಶುಕ್ರವಾರ ಪಾಲಿಕೆ ಆರೋಗ್ಯಾಧಿಕಾರಿಗಳ ನೇತೃತ್ವದ ತಂಡ ದಾಳಿ ನಡೆಸಿ, ಬೀಗ ಜಡಿದಿದೆ.

Advertisement

ಸಾರ್ವಜನಿಕರ ದೂರಿನ ಮೇರೆಗೆ ರಿಲಯನ್ಸ್‌ ಮಾರ್ಕೆಟ್‌ಗೆ ಕಳೆದ ಅ. 13ರಂದು ಪಾಲಿಕೆ ಆಯುಕ್ತರು ಮತ್ತು ಆರೋಗ್ಯ ಶಾಖೆ ಅಧಿಕಾರಿಗಳ ತಂಡ ದಿಢೀರ್‌ ಭೇಟಿ ನೀಡಿದಾಗ ಸುಮಾರು 1.5 ಟನ್‌ನಷ್ಟು ಅಪಾರ ಪ್ರಮಾಣದ ನಿಷೇಧಿತ ಪ್ಲಾಸ್ಟಿಕ್‌ ಪತ್ತೆ ಆಗಿತ್ತು. ಜತೆಗೆ ಅವಧಿ ಮುಗಿದ, ಹಳಸಿದ ಕೇಕ್‌ ಸೇರಿದಂತೆ ಆಹಾರ ಪದಾರ್ಥಗಳು ಮತ್ತು ಅವುಗಳ ಮೇಲಿನ ಲೇಬಲ್‌ ಕಿತ್ತು ಮಾರಾಟ, ಅಸಮರ್ಪಕ ತ್ಯಾಜ್ಯ ವಿಲೇವಾರಿ ಸೇರಿದಂತೆ ಉದ್ದಿಮೆಯಲ್ಲಿ ಹಲವು ನ್ಯೂನ್ಯತೆಗಳು ಮತ್ತು ಕಾನೂನು ಉಲಂಘನೆ ಎಸಗಿರುವುದು ಕಂಡು ಬಂದಿತ್ತು. ಪಾಲಿಕೆಯಿಂದ ನೀಡಲಾಗಿರುವ ಉದ್ದಿಮೆ ಪರವಾನಗಿ ಪರಿಶೀಲಿಸಿದಾಗ ಪರವಾನಗಿ ಪಡೆಯಲು ವಾಸ್ತವದಲ್ಲಿ ಒಟ್ಟು ವಿಸ್ತೀರ್ಣಕ್ಕೆ ಬದಲಾಗಿ ಕಡಿಮೆ ವಿಸ್ತೀರ್ಣವೆಂದು ತಪ್ಪು ಮಾಹಿತಿ ನೀಡಿರುವುದಲ್ಲದೆ, ಸೂಪರ್‌ ಮಾರ್ಕೆಟ್‌ ಎಂದು ಪರವಾನಗಿ ಪಡೆದು ತೆರೆದ ಆಹಾರ ಪದಾರ್ಥಗಳನ್ನು ಮಾರುವ ಮೂಲಕ ಕರ್ನಾಟಕ ಪೌರ ನಿಗಮಗಳ ಕಾಯ್ದೆಯಡಿ ಪ್ರಮಾದವೆಸಗಲಾಗಿದೆ.

ಅವಧಿ ಮುಗಿದ ಆಹಾರ ಪದಾರ್ಥಗಳನ್ನು ನಾಶಪಡಿಸದೇ ತ್ಯಾಜ್ಯದೊಂದಿಗೆ ಸುರಿದು ಸಾಗಾಣಿಕೆ ಮಾಡುವ ಮೂಲಕ ಘನತ್ಯಾಜ್ಯ ನಿರ್ವಹಣಾ ನಿಯಮಗಳನ್ನು ಉಲ್ಲಂಘಿ ಸಿರುವುದು ದಾಳಿ ವೇಳೆ ಬೆಳಕಿಗೆ ಬಂದಿತ್ತು.  ಕಟ್ಟಡ ನಿರ್ಮಾಣಕ್ಕೆ ಪಾಲಿಕೆಯಿಂದ ಮಂಜೂರಾದ ಪರವಾನಗಿ ಮತ್ತು ನೀಲನಕ್ಷೆಗೆ ವಿರುದ್ಧವಾಗಿ ಕಾನೂನು ಬಾಹಿರವಾಗಿ ಕಟ್ಟಡ ನಿರ್ಮಿಸಿರುವ ಬಗ್ಗೆ ಜಾರಿ ಮಾಡಿದ್ದ ನೋಟಿಸ್‌ ಗೆ ರಿಲಯನ್ಸ್‌ ಮಾರ್ಕೆಟ್‌ನವರು ಸಮಂಜಸ ಉತ್ತರ ಕೊಟ್ಟಿರಲಿಲ್ಲ. ಹಾಗಾಗಿ ಪಾಲಿಕೆ ಆರೋಗ್ಯಾಧಿಕಾರಿಗಳು, ಪರಿಸರ ಅಭಿಯಂತರ ಅಧಿಕಾರಿಗಳ ತಂಡ ಮಾರ್ಕೆಟ್‌ನ 6 ಗೇಟ… ಬಂದ್‌ಗೊಳಿಸಿ ಜಪ್ತಿಗೊಳಿಸಲಾಗಿದೆ ಎಂದು ಪಾಲಿಕೆ ಆರೋಗ್ಯ ಶಾಖೆಯ ಸಹಾಯಕ ನಿರ್ದೇಶಕ ಡಾ. ಚಂದ್ರಶೇಖರ್‌ ಸುಂಕದ್‌
ತಿಳಿಸಿದ್ದಾರೆ. 

ಪರಿಸರ ಅಭಿಯಂತರ ಸುನೀಲ್‌, ಆರೋಗ್ಯ ನಿರೀಕ್ಷಕ ಸಂತೋಷ್‌ ಕುಮಾರ್‌, ಅಲ್ತಮಷ್‌, ರಾಜಪ್ಪ, ಪ್ರಕಾಶ…, ಉಷಾ, ಲಕ್ಷ್ಮೀ, ಮಹಾಂತೇಶ್‌, ಜಯಪ್ರಕಾಶ್‌, ಮಹಾಂತೇಶ್‌, ಕರಿಬಸಪ್ಪ, ಕಾಂತರಾಜ್‌ ಇತರರು ದಾಳಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next