ವಿಟ್ಲ: ವಿಟ್ಲ ದೂರವಾಣಿ ವಿನಿಮಯ ಕೇಂದ್ರಕ್ಕೆ ಸೋಮವಾರ ಬೆಳಗ್ಗೆ ಸೇವೆಗಾಗಿ ತೆರಳಿದ ಗ್ರಾಹಕರು ತಬ್ಬಿಬ್ಟಾಗಿದ್ದಾರೆ. ಕಾರಣ ದೂರವಾಣಿ ಕೇಂದ್ರದ ಬಾಗಿಲು ತೆರೆಯುವ ಸಮಯವಾದರೂ ತೆರೆಯದೇ ಇರುವುದು. ವಿಟ್ಲದ ಪ್ರಮುಖ ಕೇಂದ್ರದಲ್ಲಿ ಸಿಬಂದಿ ತಡವಾಗಿಯಾದರೂ ಬರಬಹುದು ಎಂಬ ನಂಬಿಕೆಯಿಂದ ಕಾದ ಗ್ರಾಹಕರು ಕೊನೆಗೂ ಯಾವುದೇ ಕಾರ್ಯ ಪೂರೈಸಲಾಗದೇ ನಿರಾಸೆಯಿಂದ ಹಿಂದಿರುಗಬೇಕಾಯಿತು.
ದೂರವಾಣಿ ಕೇಂದ್ರದಲ್ಲಿ ಜೆಟಿಒ ಇಲ್ಲ. ಬಂಟ್ವಾಳ ಜೆಟಿಒ ಅವರಿಗೆ ಚಾರ್ಜ್ ಇದೆ ಮತ್ತು ಒಬ್ಬರು ಮಹಿಳಾ ಸಿಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸೋಮವಾರ ಜೆಟಿಒ ಇರಲಿಲ್ಲ. ಮಹಿಳಾ ಸಿಬಂದಿ ರಜೆ ಹಾಕಿದ್ದಾರೆ. ಅದೇ ಕಾರಣಕ್ಕೆ ಒಳಗೆ ಯಾರೂ ಇಲ್ಲ. ಆದ್ದರಿಂದ ಬೀಗ ಹಾಕಲಾಗಿದೆ ಎಂದು ಮತ್ತೆ ತಿಳಿದುಬಂದಿದೆ.
ಸಂಪೂರ್ಣ ವಿಫಲ
ಲಕ್ಷಗಟ್ಟಲೆ ಅನುದಾನದಲ್ಲಿ ನಿರ್ಮಾ ಣವಾದ ವಿಟ್ಲ ದೂರವಾಣಿ ವಿನಿಮಯ ಕೇಂದ್ರ ಗ್ರಾಹಕರಿಗೆ ಸೇವೆ ಕೊಡುವಲ್ಲಿ ಸಂಪೂರ್ಣ ವಿಫಲವಾಗಿದೆ. ಗ್ರಾಹಕರಿಗೆ ತೀವ್ರ ತೊಂದರೆಯಾಗುತ್ತಿದ್ದು, ಸಮಸ್ಯೆ ಆಲಿಸುವವರೇ ಇಲ್ಲ. ಆದರೆ ಆವಶ್ಯಕತೆ ಹೊಂದಿರುವ ಗ್ರಾಹಕರಿಗೆ ಫೈಬರ್ ಕೇಬಲ್ ಸಂಪರ್ಕ ಹೇರಲಾಗುತ್ತಿದೆ. ಫೈಬರ್ ಕೇಬಲ್ ಸಂಪರ್ಕ ಹೊಂದಲು ಗ್ರಾಹಕರು ಕೇಬಲ್ ಖರೀದಿಸಬೇಕು. ಪ್ರತೀ ಮೀಟರಿಗೆ 18 ರೂಪಾಯಿ ತೆರಬೇಕಾಗುತ್ತದೆ. ಅತ್ಯಂತ ದೂರದಲ್ಲಿದ್ದರೆ ಗ್ರಾಹಕರು ಹತ್ತಾರು ಸಾವಿರ ತೆರಬೇಕಾಗುತ್ತದೆ. ಡೋಲಾಯಮಾನ ಸ್ಥಿತಿಯಲ್ಲಿರುವ ವಿಟ್ಲ ದೂರವಾಣಿ ವಿನಿಮಯ ಕೇಂದ್ರ ವನ್ನು ಶಾಶ್ವತವಾಗಿ ಮುಚ್ಚಿಬಿಡುವ ಹುನ್ನಾರವಿದೆಯೇ ಎಂದು ಗ್ರಾಹಕರು ಪ್ರಶ್ನಿಸುತ್ತಿದ್ದಾರೆ.
ದುರಸ್ತಿ ಮಾಡುವವರಿಲ್ಲ
ಈ ಕೇಂದ್ರದಲ್ಲಿ 185 ಮಂದಿ ದೂರವಾಣಿ ಸಂಪರ್ಕ ಹೊಂದಿದ್ದು, ಇದರಲ್ಲಿ 62 ದೂರವಾಣಿಗೆ ಇಂಟರ್ ನೆಟ್ (ಬ್ರಾಡ್‌ಬ್ಯಾಂಡ್) ಸೌಲಭ್ಯ ಇದೆ. ಹಲವಾರು ದೂರವಾಣಿ ಲೈನ್ ಸ್ತಬ್ಧಗೊಂಡಿದೆ. ದೂರವಾಣಿ ಸಂಪರ್ಕ ಕಡಿದುಹೋಗುವುದು, ಇಂಟರ್‌ನೆಟ್ ಸೌಲಭ್ಯ ತಪ್ಪಿಹೋಗುವುದು ಇತ್ಯಾದಿ ದೂರುಗಳು ಬಂದರೆ ದುರಸ್ತಿ ಮಾಡುವವರಿಲ್ಲ. ಕಾರಣ ದೂರವಾಣಿ ಲೈನ್ ಸರಿಪಡಿಸುವ ಸಿಬಂದಿಯ ಟೆಂಡರ್ ಜು.20ಕ್ಕೆ ಅಂತ್ಯಗೊಂಡಿದೆ. ಗುತ್ತಿಗೆಯನ್ನೂ ರದ್ದುಪಡಿಸಿ, ಸಿಬಂದಿಯೂ ಇಲ್ಲದೇ ಕಂಗಾಲಾದ ವಿಟ್ಲ ಬಿಎಸ್‌ಎನ್‌ಎಲ್ ಕೇಂದ್ರ ನಿಷ್ಪ್ರಯೋಜಕವಾಗಿದೆ.