Advertisement

ಲಾಕ್‌ಡೌನ್‌ ಮುಗಿದರೂ ಮೀನುಗಾರಿಕೆಗೆ ತೊಡಕು? ಊರಿಗೆ ಹೋಗಿರುವ ಹೊರರಾಜ್ಯಗಳ ಕಾರ್ಮಿಕರು

06:59 PM Apr 11, 2020 | sudhir |

ಉಡುಪಿ/ಕುಂದಾಪುರ: ಕೋವಿಡ್ 19 ಹಿನ್ನೆಲೆಯಲ್ಲಿ ದೇಶವ್ಯಾಪಿ ಎ.14 ರವರೆಗೆ ಕರ್ಫ್ಯೂ ವಿಧಿಸಲಾಗಿದೆ. ಆ ಬಳಿಕ ಲಾಕ್‌ಡೌನ್‌ ತೆರವಾದರೂ, ಮೀನುಗಾರಿಕೆ ಪೂರ್ಣ ಮಟ್ಟದಲ್ಲಿ ಆರಂಭಗೊಳ್ಳುವುದು ಸಂಶಯವೆನಿಸಿದೆ. ಮೀನುಗಾರಿಕೆಯಲ್ಲಿದ್ದ ಹೊರ ರಾಜ್ಯಗಳ ಬಹುತೇಕ ಕಾರ್ಮಿಕರು ತಮ್ಮ ಊರುಗಳಿಗೆ ಹೋಗಿದ್ದಾರೆ.

Advertisement

ಮೇ 31ಕ್ಕೆ ಈ ಮೀನುಗಾರಿಕಾ ಋತು ಮುಕ್ತಾಯಗೊಳ್ಳಲಿದೆ. ಅಂದರೆ ಎ.14 ರ ಅನಂತರ ಮೀನುಗಾರಿಕೆಗೆ ಅವಕಾಶ ಕಲ್ಪಿಸಿದರೂ ಒಂದೂವರೆ ತಿಂಗಳ ಕಾಲವಷ್ಟೇ ಮೀನುಗಾರಿಕೆ ನಡೆಯಲಿದೆ. ಈಗಾಗಲೇ ಮಂಗಳೂರು, ಮಲ್ಪೆ, ಕಾರವಾರ, ಗಂಗೊಳ್ಳಿ, ಭಟ್ಕಳ ಮತ್ತಿತರ ಬಂದರುಗಳಲ್ಲಿ ಮೀನುಗಾರಿಕೆ ವೃತ್ತಿಯಲ್ಲಿದ್ದ ಆಂಧ್ರ ಪ್ರದೇಶ, ಒಡಿಸ್ಸಾ ಮತ್ತಿತರ ರಾಜ್ಯಗಳ ಕಾರ್ಮಿಕರು ಕೋವಿಡ್ 19 ಭೀತಿಯಲ್ಲಿ ಊರಿಗೆ ತೆರಳಿದ್ದಾರೆ. ಅವರೆಲ್ಲ ಮತ್ತೆ ವಾಪಾಸು ಬರುವುದು ಅನುಮಾನ.

ಇದರಿಂದ ನಾಡದೋಣಿಗಳು, ತ್ರಿ ಸೆವೆಂಟಿ, ಪಾತಿ ದೋಣಿಗಳು, ಸಣ್ಣ ಬೋಟಿನಲ್ಲಿ ಮೀನುಗಾರಿಕೆ ನಡೆಸುವವರಿಗೆ ಅಷ್ಟೇನು ಸಮಸ್ಯೆಯಾಗದಿದ್ದರೂ, ಆಳ ಸಮುದ್ರ ಮೀನುಗಾರಿಕೆಯಲ್ಲಿ ತೊಡಗಿಸಿಕೊಳ್ಳುವ ದೊಡ್ಡ ದೊಡ್ಡ ಬೋಟ್‌ಗಳಿಗೆ ಸಮಸ್ಯೆಯಾಗಲಿದೆ. ಮೀನು ಹಿಡಿದು ತಂದರೂ, ಅದನ್ನು ಬೋಟಿನಿಂದ ಇಳಿಸಲು, ಕಂಟೈನರ್‌ ಮತ್ತಿತರ ವಾಹನಗಳಿಗೆ ಲೋಡ್‌ ಮಾಡಲು ಜನರ ಕೊರತೆಯಾಗಲಿದೆ.

ಸಾವಿರಾರು ಮಂದಿ
ದ.ಕ., ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಸಾವಿರಾರು ಮಂದಿ ಈ ಮೀನುಗಾರಿಕೆ ವೃತ್ತಿಯನ್ನೇ ಅವಲಂಬಿಸಿದ್ದಾರೆ. ಮಂಗಳೂರಿನಲ್ಲಿ ಸುಮಾರು 1,200 ದಷ್ಟು ಬೋಟ್‌ಗಳಿದ್ದರೆ, 2 ಸಾವಿರಕ್ಕೂ ಮಿಕ್ಕಿ ಯಾಂತ್ರಿಕೃತ ಬೋಟುಗಳಿವೆ. ಇನ್ನು ಉಡುಪಿಯಲ್ಲಿ 4,332 ನಾಡ ದೋಣಿಗಳು, ದ.ಕ.ದ 1,416 ನಾಡ ದೋಣಿಗಳಿವೆ. ಇದಲ್ಲದೆ ಗಂಗೊಳ್ಳಿ, ಹೆಜಮಾಡಿ, ಮರವಂತೆ, ಕೋಡಿ ಕನ್ಯಾನ ಮತ್ತಿತರ ಬಂದರುಗಳಲ್ಲಿ ಸೇರಿದಂತೆ ಒಟ್ಟಾರೆ 50 ಸಾವಿರಕ್ಕೂ ಮಿಕ್ಕಿ ಮಂದಿ ಈ ಮೀನುಗಾರಿಕೆಯನ್ನು ಅವಲಂಬಿಸಿದ್ದಾರೆ.

ಕೋಟ್ಯಾಂತರ ರೂ. ನಷ್ಟ
ಕೋವಿಡ್ 19 ಹಿನ್ನೆಲೆಯಲ್ಲಿ ಕೋಟ್ಯಾಂತರ ರೂ. ನಷ್ಟ ಸಂಭವಿಸಿದೆ. ಸಣ್ಣ – ಸಣ್ಣ ಬೋಟು, ದೋಣಿಗಳಿಗೆ ದಿನವೊಂದಕ್ಕೆ 10 ರಿಂದ 20 ಸಾವಿರ ರೂ. ವರೆಗಿನ ಮೀನುಗಾರಿಕೆಯಾಗುತ್ತಿತ್ತು. ತ್ರಿಸೆವೆಂಟಿ ಬೋಟುಗಳು ಒಮ್ಮೆ ತೆರಳಿದರೆ 2 ರಿಂದ 3 ಲಕ್ಷ ರೂ.ವರೆಗಿನ ಮೀನು ಸಿಗುತ್ತಿತ್ತು. ಪರ್ಸಿನ್‌ ಬೋಟುಗಳಿಗೆ ಮೀನು ಸಿಕ್ಕರೆ 5 ರಿಂದ 6 ಲಕ್ಷ ರೂ. ಸಿಗುತ್ತಿತ್ತು. ಜತೆಗೆ ಮಂಜುಗಡ್ಡೆ, ಮೀನು ವ್ಯಾಪಾರಿಗಳು, ಸಾಗಣೆದಾರರು ಸಹಿತ ಎಲ್ಲ ಕ್ಷೇತ್ರಗಳಿಗೂ ಹೊಡೆತ ಬಿದ್ದಂತಾಗಿದೆ. ಸರಕಾರ ಮೀನುಗಾರರಿಗೆ ವಿಶೇಷ ಪ್ಯಾಕೇಜ್‌ ಘೋಷಿಸುವಂತೆ ಮೀನುಗಾರರು ಆಗ್ರಹಿಸಿದ್ದಾರೆ.

Advertisement

ಸಿಎಂ ಗಮನಕ್ಕೆ
ಮೀನುಗಾರರ ಸಂಕಷ್ಟದ ಬಗ್ಗೆ ಗಮನವಿದೆ. ಸದ್ಯ ಆರ್ಥಿಕ ಸಂಕಷ್ಟದಿಂದಾಗಿ ವಿಶೇಷ ಪ್ಯಾಕೇಜ್‌ನಂತಹ ಘೋಷಣೆ ಕಷ್ಟ. ಆದರೂ ಈ ಎಲ್ಲದರ ಬಗ್ಗೆ ಸಿಎಂ ಬಿ.ಎಸ್‌. ಯಡಿಯೂರಪ್ಪ ಅವರ ಗಮನಕ್ಕೆ ತರಲಾಗಿದ್ದು, ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ.
– ಕೋಟ ಶ್ರೀನಿವಾಸ ಪೂಜಾರಿ, ಮೀನುಗಾರಿಕೆ, ಬಂದರು ಖಾತೆ ಸಚಿವ

ಮತ್ತಷ್ಟು ಸಂಕಷ್ಟ
ಮೀನುಗಾರರನ್ನು ಕೋವಿಡ್ 19 ಮತ್ತಷ್ಟು ಸಂಕಷ್ಟಕ್ಕೀಡು ಮಾಡಿದೆ. ಹೆಚ್ಚಿನ ಕಾರ್ಮಿಕರು ಊರಿಗೆ ಹೋಗಿದ್ದಾರೆ. ಮತ್ತೆ ಶೀಘ್ರ ಅವರು ಇಲ್ಲಿಗೆ ಬರುವುದು ಕಷ್ಟ. ಇದರಿಂದ ಆಳ ಸಮುದ್ರ ಮೀನುಗಾರಿಕೆಗೆ ಸಮಸ್ಯೆ ಎದುರಾಗಲಿದೆ.
– ರಮೇಶ್‌ ಕುಂದರ್‌,
ಅಧ್ಯಕ್ಷರು, ಪರ್ಸಿನ್‌ ಮೀನುಗಾರರ ಸಹಕಾರ ಸಂಘ, ಗಂಗೊಳ್ಳಿ

ಸಬ್ಸಿಡಿಯೂ ಇಲ್ಲ
ಸರಕಾರ ಕೊಡುತ್ತಿರುವ ಡೀಸೆಲ್‌ ಸಬ್ಸಿಡಿಯನ್ನು ಕಳೆದ ಸೆಪ್ಟೆಂಬರ್‌ನಿಂದ ಡಿಸೆಂಬರ್‌ವರೆಗಿದ್ದನ್ನು ಮಾರ್ಚ್‌ನಲ್ಲಿ ಮೀನುಗಾರರ ಖಾತೆಗೆ ಹಾಕಲಾಗಿದೆ. ಆದರೆ ಜನವರಿಯಿಂದ ಮಾರ್ಚ್‌ವರೆಗಿನ ಡೀಸೆಲ್‌ ಸಬ್ಸಿಡಿಯನ್ನು ಇನ್ನೂ ಕೊಟ್ಟಿಲ್ಲ. ಈ ಸಮಯದಲ್ಲಾದರೂ ನೀಡಬೇಕು.
– ಸತೀಶ್‌ ಕುಂದರ್‌, ಮೀನುಗಾರ ಮುಖಂಡರು, ಮಲ್ಪೆ

Advertisement

Udayavani is now on Telegram. Click here to join our channel and stay updated with the latest news.

Next