Advertisement

ಲಾಕ್‌ಡೌನ್‌; ಚಿತ್ರಮಂದಿರಗಳು ಲಾಕ್‌ ಔಟ್‌; ಸಾಲದ ಸುಳಿಯಲ್ಲಿ ಟಾಕೀಸ್‌ ಮಾಲೀಕರು

06:33 PM Sep 08, 2021 | Nagendra Trasi |

ವಿಜಯಪುರ: ವಿಶ್ವವನ್ನೇ ತಲ್ಲಣಗೊಳಿಸಿರುವ ಕೋವಿಡ್‌ ತನ್ನ ಕರಿಛಾಯೆಯನ್ನು ಎಲ್ಲೆಡೆ ಬೀರಿದ್ದು, ಇದೀಗ ಚಿತ್ರಮಂದಿರಗಳು ಲಾಕ್‌ಔಟ್‌ ಆಗಿವೆ. ತಲೆಮಾರುಗಳಿಂದ ನಡೆಸಿಕೊಂಡು ಬಂದಿದ್ದ ಮಾಲಿಕರು ಆರ್ಥಿಕ ಸಂಕಷ್ಟದಿಂದಾಗಿ ಚಿತ್ರಮಂದಿರಗಳನ್ನು ಮುಚ್ಚಿದ್ದಾರೆ. ಇದನ್ನೇ ನಂಬಿದ್ದ ಕಾರ್ಮಿಕರು ಬೀದಿಗೆ ಬಿದ್ದಿದ್ದಾರೆ.

Advertisement

ಸರ್ಕಾರ ಹಲವು ವಲಯಗಳಕಾರ್ಮಿಕರ ಕೋವಿಡ್‌ ಪರಿಹಾರ ನೀಡಿದ್ದರೂ ಥೇಟರ್‌ ಕಾರ್ಮಿಕರನ್ನು ಪರಿಗಣಿಸಿಲ್ಲ. ಪಡಿತರ್‌ ಕಿಟ್‌ ಸೇರಿದಂತೆ ಇತರೆ ನೆರವು ನೀಡುವ ದಾನಿಗಳೂ ಇವರತ್ತ ದೃಷ್ಟಿ ನೆಟ್ಟಿಲ್ಲ. ಕಾರಣ ಚಿತ್ರೋದ್ಯಮದ ಹೃದಯ ಎನಿಸಿಕೊಂಡಿರುವ ಚಿತ್ರಮಂದಿಗಳು ಇದೀಗ ಸ್ತಬ್ಧವಾಗಿವೆ. ಸಾಮಾಜಿಕ ವ್ಯವಸ್ಥೆಯಲ್ಲಿ ಮನರಂಜನೆಗೆ ಶತಮಾನಗಳಿಂದ ಭಾವನಾತ್ಮಕ ಬಾಂಧವ್ಯ ಹೊಂದಿದ್ದ ಚಿತ್ರಮಂದಿರಗಳ ಆತ್ಮ ನಿರ್ಜೀವವಾಗಿದೆ.

ಈ ಹಿಂದೆ ಚಿತ್ರಮಂದಿಗಳ ಹೊರತಾಗಿ ಮನರಂಜನೆಗೆ ಮತ್ತೂಂದು ದೃಶ್ಯ ಮಾಧ್ಯಮ ಇರಲಿಲ್ಲ. ಹೀಗಾಗಿ ರಾಜ್ಯದಲ್ಲಿ ಈ ಹಿಂದೆ ಸುಮಾರು1200 ಚಿತ್ರಮಂದಿರಗಳು ರಾಜವೈಭವದಲ್ಲಿ ಮೆರೆದಿದ್ದವು. ಹಲವು ಕಾರಣಗಳಿಂದ ಕಳೆದ ಒಂದು ದಶಕದಿಂದ ಈ ಸಂಖ್ಯೆ ಅರ್ಧಕ್ಕೆ ಕುಸಿದಿತ್ತು. ಇಂಟರ್ನೆಟ್‌ ಕ್ರಾಂತಿ, ಮೊಬೈಲ್‌ ಯುಗ ಆರಂಭಗೊಳ್ಳುತ್ತಲೇ ಬೆರಳ ತುದಿಯಲ್ಲಿ ಬೇಕಿದ್ದೆಲ್ಲ ಸಿಗಲು ಆರಂಭಿಸಿದ್ದರಿಂದ ಈ ಸಂಖ್ಯೆ ಮತ್ತೆ ಕುಸಿದಿದ್ದು ಇದೀಗ 400 ಚಿತ್ರಮಂದಿರಗಳು ಮಾತ್ರ ಅಸ್ತಿತ್ವದಲ್ಲಿವೆ.

ಆನ್‌ಲೈನ್‌ನಲ್ಲಿ ಓಟಿಟಿ ವ್ಯವಸ್ಥೆ ಜಾರಿಗೆ ಬಂದ ಮೇಲಂತೂ ಪಾರಂಪರಿಕ ಚಿತ್ರಮಂದಿರಗಳು ಬಹುತೇಕ ಅಸ್ತಿತ್ವ ಕಳೆದುಕೊಳ್ಳುವ ದುಸ್ಥಿತಿಗೆ ಬಂದಿವೆ. ಇಂಥ ಆತಂಕದ ಸಂದರ್ಭದಲ್ಲೇ ಕಳೆದ ವರ್ಷ ಜನ್ಮ ತಳೆದ ಕೋವಿಡ್‌ ಸಾಂಕ್ರಾಮಿಕ ರೋಗದ ಸೋಂಕಿನ ನೇರ ಪರಿಣಾಮ ಚಿತ್ರಮಂದಿರಗಳ ಮೇಲಾಗಿದೆ. ಕೋವಿಡ್‌ ಹಾವಳಿಗೆ ಸರ್ಕಾರಗಳು ಪದೆ ಪದೇ ಲಾಕ್‌ ಡೌನ್‌ ಜಪಿಸಲು ಆರಂಭಿಸಿದವು.

ಚಿತ್ರಮಂದಿರ ಆರಂಭಕ್ಕೆ ಶೇ. 50 ವೀಕ್ಷಕರ ನಿರ್ಬಂಧ ಹೇರಿದ್ದರಿಂದ ಕೋಟಿ ಕೋಟಿ ಲೆಕ್ಕದಲ್ಲಿ ವಹಿವಾಟು ನಡೆಸುತ್ತಿದ್ದ ಚಿತ್ರಮಂದಿರಗಳ ಪ್ರದರ್ಶನ ಇಲ್ಲದೇ ಮಾಲಿಕರ ಆರ್ಥಿಕ ಸ್ಥಿತಿ ಏಕಾಏಕಿ ಶೂನ್ಯಕ್ಕೆ ಕುಸಿದಿದೆ. ಪರಿಣಾಮ ಹಲವು ತಲೆಮಾರುಗಳಿಂದ ಚಿತ್ರಮಂದಿರಗಳನ್ನೇ ನಂಬಿದ್ದವರು ಮುಂದೇನು ಎಂಬ ಚಿಂತೆಯಲ್ಲಿದ್ದಾರೆ. ಕೋವಿಡ್‌ ಹೊಡೆತದ ಅರಿವಿಲ್ಲದೇ ಆಧುನಿಕತೆಗೆ ತಕ್ಕಂತೆ ವಿವಿಧ ದರ್ಜೆಗೆ ಚಿತ್ರಮಂದಿರಗಳನ್ನು ಉನ್ನತೀಕರಿಸಿದ ಮಾಲಿಕರುಕೋಟಿ ಕೋಟಿ ರೂ. ಸಾಲದ ಸುಳಿಗೆ ಸಿಲುಕಿ, ದಿಕ್ಕೆಟ್ಟು ಕುಳಿತಿದ್ದಾರೆ.

Advertisement

ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚು ಬೇಡಿಕೆ ಇರುವ ಹಿಂದಿ ಚಿತ್ರಗಳು ನಿರ್ಮಾಣಗೊಳ್ಳುತ್ತಿಲ್ಲ, ಕನ್ನಡದ ಸ್ಟಾರ್‌ ನಟರ ಚಿತ್ರಗಳ ಹೊರತಾಗಿ ಇತರೆ ನಟರ ಹಾಗೂ ಕಡಿಮೆ ಬಂಡವಾಳದ ಚಿತ್ರಗಳು ಓಡುತ್ತಿಲ್ಲ. ಕಳೆದ ಒಂದೂವರೆ ವರ್ಷದಿಂದ ಚಿತ್ರ ಪ್ರದರ್ಶನ ಇಲ್ಲದೇ ಕನಿಷ್ಠ ಆದಾಯವೂ ಇಲ್ಲವಾಗಿದೆ. ಆದರೂ ಚಿತ್ರಮಂದಿಗಳ ಮಾಲಿಕರು ವಿದ್ಯುತ್‌ ಕನಿಷ್ಟ ಬಿಲ್‌, ಕಾವಲು ಸೇರಿದಂತೆ ವಿವಿಧ ತೆರಿಗೆ, ಖರ್ಚಿಗಾಗಿ ವ್ಯವಸ್ಥೆಗೆ ಮಾಸಿಕ ಅರ್ಧ ಲಕ್ಷದಿಂದ ಲಕ್ಷದ ರೂ.ವರೆಗೆ ತೆರಿಗೆ ಭರಿಸುತ್ತಲೇ ಇದ್ದಾರೆ. ಹೀಗಾಗಿ ಆದಾಯವಿಲ್ಲದೇ ಖರ್ಚು ಹೆಚ್ಚುತ್ತಿರುವ ಬಹುತೇಕ ಚಿತ್ರಮಂದಿರಗಳ ಮಾಲಿಕರು ಚಿತ್ರಮಂದಿರಗಳನ್ನು ಮುಚ್ಚುಲು ಯೋಜಿಸಿದ್ದಾರೆ. ಕೆಲವರು ಕಲ್ಯಾಣ ಮಂಟಪ ಹಾಗೂ ವಾಣಿಜ್ಯ ಸಂಕಿರ್ಣದಂಥ ವ್ಯವಸ್ಥೆಗೆ ಪರಿವರ್ತಿಸಲು ಮುಂದಾಗಿದ್ದಾರೆ. ಇನ್ನು ಕೆಲವರು ಪರ್ಯಾಯ ಯೋಚನೆ ಹೊಳೆಯದೇ ಕಂಗಾಗಿಲಾಗಿದ್ದಾರೆ.

ಕೆಲವರು ಅನ್ಯ ಉದ್ಯೋಗದ ಅರಿವಿಲ್ಲದಿದ್ದರೂ ಅನಿವಾರ್ಯವಾಗಿ ಹೊಸ ಉದ್ಯೋಗದತ್ತ ಹೆಜ್ಜೆ ಇರಿಸುತ್ತಿದ್ದಾರೆ. ಇತ್ತ ಚಿತ್ರಮಂದಿರಗಳು ಬಂದ್‌ ಆಗಿರುವ ಕಾರಣ ಕಾರ್ಮಿಕರು ಉದ್ಯೋಗ ಕಳೆದುಕೊಂಡಿದ್ದಾರೆ. ಟಿಕೆಟ್‌ ಕೌಂಟರ್‌, ಗೇಟ್‌ ಟಿಕೆಟ್‌ ಕಲೆಕ್ಟರ್‌, ಸಿನಿ ಆಪರೇಟರ್‌, ವಿದ್ಯುತ್‌ ಹಾಗೂ ಇತರೆ ವ್ಯವಸ್ಥೆಯಲ್ಲಿ ದುಡಿಯುವರು ಸೇರಿದಂತೆ ಕನಿಷ್ಟ ಒಂದು ಚಿತ್ರಮಂದಿರದಲ್ಲಿ 12-15 ಕಾರ್ಮಿಕರು ಸೇರಿದಂತೆ ರಾಜ್ಯದಲ್ಲಿಈವ್ಯವಸ್ಥೆಯನ್ನೇ ನಂಬಿದ್ದ ಹತ್ತಾರು ಸಾವಿರ ಜನರು ನಿರುದ್ಯೋಗಿಗಳಾಗಿ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ.

ಚಿತ್ರಮಂದಿರ ಮಾಲಿಕರೇ ದಿಕ್ಕಟ್ಟು ಹೋಗಿರುವಾಗ ಹಲವು ದಶಕಗಳಿಂದ ಇಲ್ಲಿಯೇ ದುಡಿದು ಬದುಕು ಕಟ್ಟುಕೊಂಡಿದ್ದ ಕಾರ್ಮಿಕರ ಬದುಕಂತೂ ಕೇಳ್ಳೋರಿಲ್ಲದೇ ಅಕ್ಷರಶಃ ಬೀದಿಗೆ ಬಿದ್ದಿದೆ. ಸರ್ಕಾರ ಕೋವಿಡ್‌ ಸಂಕಷ್ಟದ ಸಂದರ್ಭದಲ್ಲಿ ಹಲವು ರಂಗಗಳಿಗೆ ನೆರವು ನೀಡಿದ ಮಾದರಿಯಲ್ಲಿ ಚಿತ್ರಮಂದಿರಗಳ ಎರಡು ವರ್ಷದ ತೆರಿಗೆ ಮನ್ನಾ ಮಾಡಬೇಕು. ಚಿತ್ರಪ್ರದರ್ಶನಕ್ಕೆ ವೈಜ್ಞಾನಿಕ ಮಾನದಂಡ ರೂಪಿಸಬೇಕು. ಚಿತ್ರ ಮಂದಿರದ ಮಾಲಿಕರ ಸಾಲಗಳ ಮೇಲಿನ ಬಡ್ಡಿಯನ್ನಾದರೂ ಮನ್ನಾ ಮಾಡಬೇಕು. ಭವಿಷ್ಯದಲ್ಲಿ ಚಿಪ್ರದರ್ಶನಕ್ಕೆ ತೆರಿಗೆ ವಿನಾಯ್ತಿ ನೀಡಬೇಕು.

ಕಳೆದ ವರ್ಷವಷ್ಟೇ ಚಿತ್ರಮಂದಿರವನ್ನು ಮಲ್ಟಿಫ್ಲೆಕ್ಸ್‌ ದರ್ಜೆಗೇರಿಸಲು ಒಂದೂವರೆ ಕೋಟಿ ರೂ. ಸಾಲ ಮಾಡಿದ್ದು, ಕೆಲವೇ ತಿಂಗಳಲ್ಲಿಲಾಕ್‌ಡೌನ್‌ಆಗಿದೆ.ಅಲ್ಲಿಂದ ಒಂದು ರೂ. ಆದಾಯವಿಲ್ಲದೇ ಸಾಲದ ಸುಳಿಗೆ ಸಿಲುಕಿದ್ದೇವೆ. ಸರ್ಕಾರ ತಕ್ಷಣ ನೆರವಿಗೆಬರದಿದ್ದರೆ ನಮ್ಮ ಆಸ್ತಿಯನ್ನೆಲ್ಲ ಮಾರಿ ಬೀದಿಗೆ ನಿಲ್ಲುವ ದುಸ್ಥಿತಿಬರಲಿದೆ.
ಶ್ರವಣಕುಮಾರ ಮಹೇಂದ್ರಕರ,ಮಾಲೀಕ, ಅಪ್ಸರಾ ಚಿತ್ರಮಂದಿರ, ವಿಜಯಪುರ

ಸರ್ಕಾರ ಚಿತ್ರಮಂದಿಗಳ ಉಳಿವಿಗೆ ಎರಡು ವರ್ಷಗಳ ತೆರಿಗೆ ರದ್ದು ಮಾಡಬೇಕು. ಭರಿಸಿದ ತೆರಿಗೆಹಣಮರಳಿಸಬೇಕು. ಚಿತ್ರಮಂದಿರಗಳ ಸಬಲೀಕರಣಕ್ಕಾಗಿ ಬಡ್ಡಿರಹಿತ ಸಾಲ ನೀಡಬೇಕು. ನಮ್ಮನ್ನೇ ನಂಬಿದ್ದ ಕಾರ್ಮಿಕರ ಪಿಎಫ್‌ಹಾಗೂ ಇತರೆ ವೆಚ್ಚ ಭರಿಸಿ ನಮ್ಮ ನೆರವಿಗೆ ಬರಬೇಕು.
ಇಮ್ತಿಯಾಜ್‌-ಮೈನುದ್ದೀನ್‌
ಬೇಲ್ದಾರ, ಮಾಲೀಕರು, ಅಮೀರ್‌
ಚಿತ್ರಮಂದಿರ, ವಿಜಯಪುರ

ಎರಡು ವರ್ಷಗಳಿಂದ ಚಿತ್ರ ಪ್ರದರ್ಶನ ಇಲ್ಲದೇ ಚಿತ್ರಮಂದಿರಗಳ ಮಾಲೀಕರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರ ಅನುಭವ ಇಲ್ಲದಿದ್ದರೂ ಬದುಕಿನ ಅನಿವಾರ್ಯಕ್ಕಾಗಿ ಹೆದ್ದಾರಿ ಬಳಿ ಕೆಫೆ ಆರಂಭಿಸಿದ್ದೇನೆ. ನಮ್ಮ ಸಮಸ್ಯೆ ಆಲಿಸಿ ಪರಿಹಾರಕಂಡುಕೊಳ್ಳದಿದ್ದರೆ ರೈತರಂತೆ ನಾವೂ ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿ ಬರಲಿದೆ.
ಶ್ರೇಯಸ್‌ ಮಹೇಂದ್ರಕರ,
ಚಿತ್ರಮಂದಿರದ ಮಾಲೀಕ, ವಿಜಯಪುರ

ಎರಡು ವರ್ಷದಿಂದ ಉದ್ಯೋಗ ಕಳೆದುಕೊಂಡಿದ್ದರೂ ಲಾಕ್‌ಡೌನ್‌ ಸೇರಿದಂತೆಕೋವಿಡ್‌ ಸಂದರ್ಭದಲ್ಲಿ ಯಾರೂ ನಮ್ಮ ನೆರವಿಗೆ ಬರಲಿಲ್ಲ. ಸರ್ಕಾರ ಚಿತ್ರಮಂದಿರಗಳ ಕಾರ್ಮಿಕರನ್ನು ಇತರೆ ಅಸಂಘಟಿತ ಕಾರ್ಮಿಕರ ಪಟ್ಟಿಗೆ ಸೇರಿಸಿ, ಪರ್ಯಾಯ ಉದ್ಯೋಗ ತಿಳಿಯದ ನಮಗೆ ಸಹಾಯ ಮಾಡಬೇಕು. ಚಿತ್ರಮಂದಿರಗಳು ಆರಂಭಗೊಳ್ಳುವ ವರೆಗೆ ಮಾಸಿಕ ಧನ ಸಹಾಯ ನೀಡಬೇಕು.
ಮೆಹಬೂಬ್‌ ಶೇಖ್‌,
ಚಿತ್ರಮಂದಿರ ಕಾರ್ಮಿಕ, ವಿಜಯಪುರ

*ಜಿ.ಎಸ್‌. ಕಮತರ

Advertisement

Udayavani is now on Telegram. Click here to join our channel and stay updated with the latest news.

Next