ಶಿರ್ವ: ರಾಜ್ಯ ಸರಕಾರ ಲಾಕ್‌ಡೌನ್ ಸಡಿಲಿಕೆ ಮಾಡಿ ಆದೇಶ ನೀಡಿರುವ ಹಿನ್ನೆಲೆಯಲ್ಲಿ ಬೆಳ್ಳೆ ಮತ್ತು ಶಿರ್ವ ಸುತ್ತ ಮುತ್ತಲಿನ ಪರಿಸರದ ಅಗತ್ಯ ವಸ್ತುಗಳ ಅಂಗಡಿಗಳು ಮಧ್ಯಾಹ್ನ 2 ಗಂಟೆಯವರೆಗೆ ತೆರೆದಿದ್ದು, ಜನರು ಸಾಮಾಜಿಕ ಅಂತರ ಕಾಯ್ದುಕೊಂಡು ಅಗತ್ಯ ವಸ್ತುಗಳನ್ನು ಖರೀದಿಸಿ ಮಾಮೂಲಿ ಜನಜೀವನದೊಂದಿಗೆ ನಿರಾಳರಾಗಿದ್ದಾರೆ.
ಬೆಳ್ಳಂಬೆಳಿಗ್ಗೆ ಕಾಪು ತಹಶೀಲ್ದಾರ್ ಪ್ರತಿಭಾ ಆರ್.ಬೆಳಿಗ್ಗೆ ಶಿರ್ವಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ತೆರೆಯಲು ಅವಕಾಶವಿರದಿದ್ದ ಅಂಗಡಿ ಮತ್ತು ಮೊಬೈಲ್ ಶಾಪ್‌ಗ್ಳನ್ನು ಬಂದ್ ಮಾಡಿಸಿದ್ದಾರೆ. ಶಿರ್ವ ಗ್ರಾ.ಪಂ. ವ್ಯಾಪ್ತಿಯಲ್ಲಿ 50ಕ್ಕಿಂತ ಹೆಚ್ಚು ಕೊರೊನಾ ಸೋಂಕಿತರು ಇದ್ದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಯವರ ಆದೇಶದಂತೆ ಸುಮಾರು 10 ದಿನಗಳ ಕಾಲ ಸಂಪೂರ್ಣ ಲಾಕ್‌ಡೌನ್ ಇದ್ದು ಜನರು ಸ್ಥಳಿಯಾಡಳಿತದೊಂದಿಗೆ ಸಹಕರಿಸಿದ್ದರಿಂದಾಗಿ ವಾರದ ಹಿಂದೆ 92 ಇದ್ದ ಸೋಂಕಿತರ ಸಂಖ್ಯೆ ಸೋಮವಾರ 17ಕ್ಕೆ ಇಳಿದಿದೆ.
ಇದನ್ನೂ ಓದಿ: ಸಹೋದರನ ಪುತ್ರನ ಹುಟ್ಟುಹಬ್ಬದ ಪ್ರಯುಕ್ತ ಹುಲಿ ದತ್ತು ಪಡೆದ ಲಕ್ಷ್ಮೀ ಹೆಬ್ಬಾಳಕರ್
ಕಳೆದ ಒಂದೂವರೆ ತಿಂಗಳಿನಿಂದ ಲಾಕ್‌ಡೌನ್‌ಗೆ ಜನರು ಒಗ್ಗಿಕೊಂಡಿದ್ದರಿಂದಾಗಿ ಬೆಳಗ್ಗಿನ ಹೊತ್ತು ದಿನಬಳಕೆಯ ಸಾಮಾಗ್ರಿಗಳನ್ನು ಖರೀದಿಸುವಾಗ ಅಂಗಡಿಗಳಲ್ಲಿ ರಶ್ ಇತ್ತು. ಲಾಕ್‌ಡೌನ್ ಸಡಿಲಿಕೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಅವಕಾಶವಿರುವುದರಿಂದಾಗಿ ಭಾರೀ ಮಳೆಯ ನಡುವೆಯೂ ಜನತೆ ಗಡಿಬಿಡಿಯಿಲ್ಲದೆ ಅಗತ್ಯ ವಸ್ತುಗಳನ್ನು ಖರೀದಿಸುತ್ತಿದ್ದು ಎಲ್ಲಿಯೂ ರಶ್ ಕಂಡು ಬರಲಿಲ್ಲ.
ಬೆಳಗ್ಗಿನಿಂದಲೇ ಎಲ್ಲಾ ಅಂಗಡಿಗಳು ತೆರೆದಿದ್ದು ಸೆಲೂನ್,ಬ್ಯೂಟಿ ಪಾರ್ಲರ್,ಜುವೆಲ್ಲರಿ ಶಾಪ್, ಚಪ್ಪಲಿಯಂಗಡಿ ಮತ್ತು ಬಟ್ಟೆಯಂಗಡಿ ತೆರೆದಿರಲಿಲ್ಲ. ಕೆಲ ಹೊಟೇಲ್‌ಗಳು ತೆರೆದಿದ್ದು ಪಾರ್ಸೆಲ್ ವ್ಯವಸ್ಥೆಯಿತ್ತು. ಮಧ್ಯಾಹ್ನ 2ಗಂಟೆಯ ಬಳಿಕ ಮೆಡಿಕಲ್, ಪೆಟ್ರೋಲ್ ಪಂಪ್ ಮತ್ತು ಬ್ಯಾಂಕ್ ಹೊರತುಪಡಿಸಿ ಉಳಿದೆಲ್ಲಾ ಅಂಗಡಿಗಳು ಬಂದ್ ಆಗಿದ್ದವು.