Advertisement

ಲಾಕ್‌ಡೌನ್‌; ಔಷಧ ಅಭಾವ ಸಾಧ್ಯತೆ

06:46 PM Apr 04, 2020 | Suhan S |

ಶಿವಮೊಗ್ಗ: ಲಾಕ್‌ಡೌನ್‌ ವೇಳೆ ಅಗತ್ಯ ವಸ್ತುಗಳ ಪೂರೈಕೆಗೆ ಸರಕಾರ ನಿರ್ಬಂಧ ಹೇರಿಲ್ಲ. ಆದರೂ ವಾಹನ ಚಾಲಕರ ಅಸಹಕಾರದಿಂದ ಕೆಲ ಅಗತ್ಯ ವಸ್ತುಗಳು ನಿಗದಿತ ಸ್ಥಳಕ್ಕೆ ತಲುಪುತ್ತಿಲ್ಲ.  ಹೌದು.. ಲಾಕ್‌ಡೌನ್‌ ನಂತರ ಜಿಲ್ಲೆಯಲ್ಲಿ ಔಷಧ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಆದರೆ ಸದ್ಯ ಪರಿಸ್ಥಿತಿ ಗಂಭೀರವಾಗಿಲ್ಲದಿದ್ದರೂ, ಇದೇ ರೀತಿ ಮುಂದುವರಿದರೆ ಔಷಧ ಅಭಾವ ಉಂಟಾಗೋದು ನಿಶ್ಚಿತವಾಗಿದೆ.

Advertisement

ಜಿಲ್ಲೆಯಲ್ಲಿ ಖಾಸಗಿ ಆಸ್ಪತ್ರೆ ಒಪಿಡಿಗಳು ಬಂದ್‌ ಆಗಿರುವ ಕಾರಣ ಔಷಧ ಅಗತ್ಯತೆ ಸಾಮಾನ್ಯ ದಿನಗಳಿಗಿಂತ ಕಡಿಮೆ ಇದೆ. ಲಾಕ್‌ಡೌನ್‌ ಆದ ನಂತರ ಬೆಂಗಳೂರು ಹಾಗೂ ಹುಬ್ಬಳ್ಳಿಯಿಂದ ಬರಬೇಕಾದ ಲಾರಿಗಳು ಕಡಿಮೆಯಾಗಿವೆ. ಕೆಲ ಕಂಪನಿಗಳು ಸ್ವಂತ ವಾಹನಗಳನ್ನು ಮಾತ್ರ ಕಳುಹಿಸಿಕೊಡುತ್ತಿವೆ. ಇದರಿಂದ ದೊಡ್ಡಮಟ್ಟದಲ್ಲಿ ಅಭಾವ ಕಂಡುಬರುತ್ತಿಲ್ಲ.

ಬೆಂಗಳೂರು ಹಾಗೂ ಹುಬ್ಬಳ್ಳಿಯಿಂದ ಬರುವ ಲಾರಿಗಳಿಗೆ ಲಾಕ್‌ಡೌನ್‌ನಿಂದ ತೀವ್ರ ಸಮಸ್ಯೆಯಾಗಿದೆ. ಹುಬ್ಬಳ್ಳಿಯಿಂದ ಶಿವಮೊಗ್ಗಕ್ಕೆ ಬರಲು ಕನಿಷ್ಠ 5 ಗಂಟೆ ಬೇಕು. ಬೆಂಗಳೂರಿನಿಂದ ಕನಿಷ್ಠ 6 ಗಂಟೆ ಬೇಕು. ರಸ್ತೆ ಬದಿಯ ಎಲ್ಲ ಹೋಟೆಲ್‌, ಗ್ಯಾರೇಜ್‌ಗಳು ಬಂದ್‌ ಆಗಿರುವುದರಿಂದ ಲಾರಿ ಚಾಲಕರು ಇಲ್ಲಿಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಪೆಟ್ರೋಲ್‌ ಬಂಕ್‌ಗಳನ್ನು ಸೀಮಿತ ಅವ ಧಿಗೆ ಮಾತ್ರ ಓಪನ್‌ ಮಾಡಲಾಗುತ್ತಿದೆ. ಇದು ಸಹ ಚಾಲಕರ ಭಯಕ್ಕೆ ಕಾರಣವಾಗಿದೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಔಷಧ ಪೂರೈಕೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ. ಜಿಲ್ಲೆಯಲ್ಲಿ ಅಂದಾಜು 600 ಮೆಡಿಕಲ್‌ ಶಾಪ್‌ ಗಳಿದ್ದು, ಶಿವಮೊಗ್ಗ ನಗರವೊಂದರಲ್ಲೇ 250 ಶಾಪ್‌ಗ್ಳಿವೆ. ಶಿವಮೊಗ್ಗ ನಗರ ಆಸ್ಪತ್ರೆಗಳ ಹಬ್‌ ಆಗಿರುವುದರಿಂದ ದಿನನಿತ್ಯ ಸಾವಿರಾರು ಮಂದಿ ಆಸ್ಪತ್ರೆಗಳಿಗೆ ಭೇಟಿ ಕೊಡುತ್ತಾರೆ. ಖಾಸಗಿ ಆಸ್ಪತ್ರೆಗಳು ಒಪಿಡಿ ಬಂದ್‌ ಮಾಡಿರುವುದರಿಂದ ಜನದಟ್ಟಣೆ ಕಂಡುಬರುತ್ತಿಲ್ಲ.

ಹುಬ್ಬಳ್ಳಿ ಹಾಗೂ ಬೆಂಗಳೂರಿನ ಸಿ ಆ್ಯಂಡ್‌ ಎಫ್‌ (ಕ್ಲಿಯರಿಂಗ್‌ ಆ್ಯಂಡ್‌ ಫಾರ್ವಡಿಂಗ್‌ ಏಜೆನ್ಸಿ) ಮೂಲಕ ಶಿವಮೊಗ್ಗದಲ್ಲಿರುವ 100ಕ್ಕೂ ಹೆಚ್ಚು ಹಂಚಿಕೆದಾರರಿಗೆ ತಲುಪುತ್ತದೆ. ನಂತರ ಅಂಗಡಿಗಳಿಗೆ ತಲುಪುತ್ತದೆ. ಈಗ ಲಾರಿಗಳಲ್ಲಿದ್ದ ಸ್ಟಾಕ್‌ ಖಾಲಿಯಾಗಿದ್ದು, ಹಂತ ಹಂತವಾಗಿ ಹೊಸ ಗೂಡ್ಸ್‌ ಬಂದು ಸೇರುತ್ತಿದೆ.

ಅನಿರೀಕ್ಷಿತ ಬೆಳವಣಿಗೆ ಕಾರಣಕ್ಕೆ ಆರಂಭದಲ್ಲಿ ಕೆಲವೊಂದು ಔಷಧಗಳು ಬರುತ್ತಿರಲಿಲ್ಲ. ಕೆಲ ಕಂಪನಿಗಳು ಸ್ವಂತ ವಾಹನದಲ್ಲಿ ಕಳುಹಿಸುತ್ತಿವೆ. ನಮ್ಮ ಜಿಲ್ಲಾ ಹಾಗೂ ರಾಜ್ಯ ಅಸೋಸಿಯೇಶನ್‌ ವತಿಯಿಂದ ಔಷಧ ಸರಬರಾಜಿಗೆ ತೊಂದರೆ ಮಾಡದಂತೆ ಮನವಿ ಮಾಡಲಾಗಿದೆ. ಹಂತಹಂತವಾಗಿ ವಾಹನಗಳ ಓಡಾಟ ಶುರುವಾಗಿದೆ. ಸದ್ಯಕ್ಕೆ ಕೊರತೆ ಕಾಣುತ್ತಿಲ್ಲ. ಆದರೆ ಪರಿಸ್ಥಿತಿ ಹೀಗೆ ಮುಂದುವರಿದರೆ ಸಮಸ್ಯೆ ಕಾಣಬಹುದು. ಮೊದಲು ಪ್ರತಿದಿನ ಲಾರಿಗಳು ಬರುತ್ತಿದ್ದವು. ಈಗ ಮೂರು ದಿನಕ್ಕೊಮ್ಮೆ ಬರುತ್ತಿದೆ.  ವಿವೇಕ್‌ ನಾಯ್ಕ, ಅಧ್ಯಕ್ಷ , ಶಿವಮೊಗ್ಗ ಡಿಸ್ಟ್ರಿಕ್ಟ್ ಕೆಮಿಸ್ಟ್‌ ಆ್ಯಂಡ್‌ ಡ್ರಗ್ಗಿಸ್ಟ್‌ ಅಸೋಸಿಯೇಶನ್‌

Advertisement

 

-ಶರತ್‌ ಭದ್ರಾವತಿ

Advertisement

Udayavani is now on Telegram. Click here to join our channel and stay updated with the latest news.

Next