ಬಂಗಾರಪೇಟೆ: ಸರ್ಕಾರ ಲಾಕ್‌ಡೌನ್ ಘೊಷಣೆ ಮಾಡುವ ಮುನ್ನ ಬಡವರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕಿತ್ತು. ಇದರಿಂದಾಗಿ ಸಾವಿರಾರು ಕುಟುಂಬಗಳು ಬೀದಿಗೆ ಬಂದಿವೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ.ಚಂದ್ರಾರೆಡ್ಡಿ ಆರೋಪಿಸಿದರು.
ಪಟ್ಟಣದ ಎಸ್.ಎನ್.ರೇಸಾರ್ಟ್ ಆವರಣದಲ್ಲಿ ಕೊರೊನಾ ನಿಯಂತ್ರಣಕ್ಕೆ ಮುಂಚೂಣಿಯಲ್ಲಿ ಶ್ರಮಿಸುತ್ತಿರುವ ಆಶಾ ಕಾರ್ಯಕರ್ತೆಯರು, ಪೌರಕಾರ್ಮಿಕರಿಗೆ ಮತ್ತು ಬಸ್ ಚಾಲಕರಿಗೆ ಎರಡು ಸಾವಿರ ಆಹಾರ ಮತ್ತು ತರಕಾರಿ ಕಿಟ್ ವಿತರಿಸಿ ಮಾತನಾಡಿದರು. ಜನರ ವಿರೋಧದ ಬಳಿಕ ಎಚ್ಚೆತ್ತ ರಾಜ್ಯ ಸರ್ಕಾರ ಹಲವರಿಗೆ ಪ್ಯಾಕೇಜ್ ಘೋಷಣೆ ಮಾಡಿದೆ. ಆದರೆ, ಅದು ಯಾರಿಗೂ ತಲುಪಿಲ್ಲ ಎಂದು ಹೇಳಿದರು.
ಬಡವರ ಜೊತೆ ಚೆಲ್ಲಾಟ: ಕಳೆದ 7 ವರ್ಷಗಳಿಂದ ಪ್ರಧಾನಿ ಮೋದಿ ದೇಶದ ಬಡವರಿಗೆ ಅಚ್ಚೇ ದಿನ್ ಬರಲಿದೆ ಎಂದು ಹೇಳಿ ಅಧಿಕಾರಕ್ಕೆ ಬಂದರೂ 7 ವರ್ಷಗಳಿಂದ ಬರಲೇಇಲ್ಲ, ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿಸುವ ಮೂಲಕ ಬಡವರು, ಮಧ್ಯಮ ವರ್ಗದ ಜನರ ಬದುಕಿನ ಜೊತೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಆರೋಪಿಸಿದರು.
ಸರ್ಕಾರದ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ, ಕೊರೊನಾ ಸೋಂಕನ್ನು ನಿಯಂತ್ರಿಸಲು ಶ್ರಮಿಸುತ್ತಿರುವ ಪೌರಕಾರ್ಮಿಕರು,ಆಶಾಕಾರ್ಯಕರ್ತೆಯರಿಗೆ ಸರ್ಕಾರ ಯಾವುದೇ ಪ್ಯಾಕೇಜ್ ನೀಡದಿದ್ದರೂ ಅವರು, ನಿಸ್ವಾರ್ಥದಿಂದ ತಮ್ಮ ಕೆಲಸವನ್ನುಮಾಡುತ್ತಿದ್ದಾರೆ. ಇಂತಹ ಶ್ರಮಜೀವಿಗಳಿಗೆ ಆಹಾರ ಮತ್ತು ತರಕಾರಿ ಕಿಟ್ ಅನ್ನು ಜಿಲ್ಲಾಕಾಂಗ್ರೆಸ್ ನೀಡುವ ಮೂಲಕ ಅವರನ್ನು ಉತ್ತೇಜಿಸಲಾಗುತ್ತಿದೆ ಎಂದರು.
ಶಾಸಕ ಎಸ್.ಎನ್.ನಾರಾಯಣಸ್ವಾಮಿ ಹಾಜರಿದ್ದರು.