ಕಲಬುರಗಿ: ಕೋವಿಡ್ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಕಲಬುರಗಿ ನಗರವನ್ನು ಒಂದು ವಾರದ ಮಟ್ಟಿಗೆ ಲಾಕ್‌ಡೌನ್ ಮಾಡಲು ಅನುಮತಿ ನೀಡುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಜಿಲ್ಲಾಧಿಕಾರಿಗಳು ಪತ್ರ ಬರೆದಿದ್ದಾರೆ ಎಂದು ವರದಿಯಾಗಿದೆ.
ಸದ್ಯ ಜಿಲ್ಲೆಯಲ್ಲಿ ಒಟ್ಟು 528 ಸಕ್ರಿಯ ಪ್ರಕರಣಗಳು ಇವೆ. ಈ ಪೈಕಿ ಶೇ.50ರಷ್ಟು (269) ಪ್ರಕರಣಗಳು ಕಲಬುರಗಿ ನಗರದಲ್ಲೇ ಇದೆ. ಮಾ.3ರಿಂದ ಜು.9ರವರೆಗೆ 23 ಜನ ಸೋಂಕಿತರು ಸಾವನ್ನಪ್ಪಿದ್ದಾರೆ. ಅಲ್ಲದೇ, ನಗರ ವ್ಯಾಪ್ತಿಯ ಆರು ಪೊಲೀಸ್ ಠಾಣೆಯ ಸಿಬ್ಬಂದಿಗೆ ಸೋಂಕು ಕಂಡು ಬಂದಿದೆ. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಮಂಡಳಿ ಸೇರಿ ಕೆಲ ಸರ್ಕಾರಿ ಕಚೇರಿಗಳು ಸಹ ಸೀಲ್‌ಡೌನ್ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಶರತ್ ಬಿ. “ಉದಯವಾಣಿ’ಗೆ ತಿಳಿಸಿದರು.
ಆದರೆ, ಲಾಕ್ ಡೌನ್ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಸೋಮವಾರ ಬೆಳಿಗ್ಗೆ 11 ಗಂಟೆಗೆ ಮುಖ್ಯಮಂತ್ರಿಗಳು ವಿಡಿಯೋ ಕಾನ್ಫರೆನ್ಸ್ ಕರೆದಿದ್ದಾರೆ. ಅಲ್ಲಿ ನಮ್ಮಿಂದ ಮಾಹಿತಿ ಸಂಗ್ರಹಿಸಿ, ಲಾಕ್‌ಡೌನ್ ಬಗ್ಗೆ ಮುಖ್ಯಮಂತ್ರಿಗಳೇ ನಿರ್ಧಾರ ಕೈಗೊಳ್ಳುತ್ತಾರೆ. ಈ ಬಗ್ಗೆ ನಾನು ಏನೂ ಹೇಳುವುದಿಲ್ಲ ಎಂದರು.
ಲಾಕ್ ಡೌನ್ ಗೆ ಉತ್ತಮ ಸ್ಪಂದನೆ: ಇನ್ನು, ರವಿವಾರದ ಲಾಕ್‌ಡೌನ್ ಜಿಲ್ಲಾದ್ಯಂತ ಉತ್ತಮ ಸ್ಪಂದನೆ ವ್ಯಕ್ತವಾಯಿತು. ಲಾಕ್‌ಡೌನ್ ಕಾರಣ ಸಂಪೂರ್ಣ ವ್ಯಾಪಾರ ವಹಿವಾಟು ಬಂದ್ ಆಗಿತ್ತು. ವಾಹನ, ಜನ ಸಂಚಾರ ಸ್ತಬ್ಧಗೊಂಡಿತ್ತು.
ಲಾಕ್‌ಡೌನ್ ಕಟ್ಟುನಿಟ್ಟಿನ ಅನುಷ್ಠಾನಕ್ಕಾಗಿ ಬೆಳಿಗ್ಗೆಯೇ ಪೊಲೀಸರು ವಾಹನಗಳ ಸೈರನ್ ಹಾಕಿಕೊಂಡು ಪಹರೆ ನಡೆಸಿದರು. ಇದರ ಮಧ್ಯೆಯೂ ಬೈಕ್, ಕಾರುಗಳಲ್ಲಿ ಓಡಾಡುತ್ತಿದ್ದವರನ್ನು ಪೊಲೀಸರು ತಡೆದು ನಿಖರ ಕಾರಣ ಕೊಟ್ಟವರರಿಗೆ ಮಾತ್ರ ಮುಂದೆ ಹೋಗಲು ಬಿಟ್ಟರು. ಅಗತ್ಯವಾಗಿ ರಸ್ತೆಗೆ ಬಂದಿದ್ದವರಿಗೆ ಲಾಠಿ ಏಟು ನೀಡಿದರು.
ಅಲ್ಲದೇ, ಮಹಾನಗರ ಪಾಲಿಕೆ ಅಧಿಕಾರಿಗಳು ರಸ್ತೆಯಲ್ಲಿ ಉಗುಳಿದವರಿಗೆ 500 ರೂ. ಮತ್ತು ಮಾರ್ಸ್ ಧರಿಸದೆ ಓಡಾಡುತ್ತಿದ್ದರಿಗೆ 100 ರೂ. ದಂಡ ವಿಧಿಸಿ ಬುದ್ಧಿ ಕಲಿಸಿದರು