Advertisement
ಇತ್ತೀಚೆಗೆ ಇಂಡಿಯನ್ ಸೈಕಿಯಾಟ್ರಿ ಸೊಸೈಟಿ ನಡೆಸಿದ ಸಮೀಕ್ಷೆಯೂ, ಲಾಕ್‌ಡೌನ್ ನಂತರದಿಂದ ಭಾರತದಲ್ಲಿ ಮಾನಸಿಕ ಸಮಸ್ಯೆಗಳ ಪ್ರಮಾಣ ಶೇ. 20ರಷ್ಟು ಅಧಿಕವಾಗಿದೆ ಎಂದು ಹೇಳುತ್ತಿದೆ…ಹೀಗಾಗಿ, ಕೈ ಸ್ವಚ್ಛಗೊಳಿಸಿಕೊಳ್ಳುವಷ್ಟೇ ಮುಖ್ಯವಾಗಿ, ಮನಸ್ಸನ್ನು ಸ್ವಸ್ಥವಾಗಿಟ್ಟುಕೊಳ್ಳುವ ಅಗತ್ಯವೂ ಅಧಿಕವಿದೆ.
ಹೃದಯ ಬಡಿತದಲ್ಲಿ ಹೆಚ್ಚಳ, ಹೊಟ್ಟೆಯಲ್ಲಿ ಕಲಸಿದಂತಾಗುವುದು, ಸುಸ್ತು, ಉಸಿರಾಟದಲ್ಲಿ ಏರುಪೇರಾಗುವುದು…ಇವೆಲ್ಲ ಆತಂಕದ ದೈಹಿಕ ಲಕ್ಷಣಗಳು. ಭಾವನಾತ್ಮಕವಾಗಿ ಆತಂಕವು ಹಲವು ರೀತಿಯಲ್ಲಿ ಪ್ರಕಟಗೊಳ್ಳುತ್ತದೆ. ಪದೇ ಪದೇ ನ್ಯೂಸ್ ನೋಡುವುದು, ಕೋವಿಡ್ 19 ವೈರಸ್ ಸಾವಿನ ಸಂಖ್ಯೆಗಳನ್ನು ನೋಡಿ ಆತಂಕಗೊಳ್ಳುವುದು, ಮನೆಯವರ ಮೇಲೆ ಸಿಟ್ಟಾಗುವುದು, ಕಿರಿಕಿರಿ ಮಾಡಿಕೊಳ್ಳುವುದು, ಅಳುವುದು ಅಥವಾ ಏಕಾಏಕಿ ಮಾತು ನಿಲ್ಲಿಸಿ ರೂಮಿಗೆ ಸೇರಿಕೊಳ್ಳುವುದು ಇತ್ಯಾದಿ. ಹಾಗೆಂದು ಮಾನಸಿಕ ಅಸ್ವಸ್ಥತೆಯೇ ಈ ಲಕ್ಷಣಗಳಿಗೆ ಕಾರಣ ಎಂದೇನಲ್ಲ. ಈ ಲಾಕ್‌ಡೌನ್ ಸಮಯದಲ್ಲಿ ಅನೇಕರು ಈ ರೀತಿಯ ಸಮಸ್ಯೆಗಳನ್ನು ಅನುಭವಿಸಬಹುದು
Related Articles
ಭವಿಷ್ಯದ ಬಗ್ಗೆ ಅನಿಶ್ಚಿತತೆ, ಹಣಕಾಸಿನ ಅಭಾವ, ಒಂಟಿತನಗಳೆಲ್ಲವೂ ಈ ಸಮಯದಲ್ಲಿ ಕಾಡುವುದು ಸಹಜ. ಇದು ಖಿನ್ನತೆಯ ರೂಪ ಪಡೆಯದಂತೆ ಎಚ್ಚರಿಕೆ ವಹಿಸುವುದು ಬಹಳ ಮುಖ್ಯ. ಖಿನ್ನತೆಯು ದೈಹಿಕ ರೂಪದಲ್ಲೂ ಪ್ರಕಟಗೊಳ್ಳುತ್ತದೆ. ಉದಾಹರಣೆಗೆ, ಅಧಿಕ ಸಮಯ ನಿದ್ದೆ ಮಾಡುವುದು, ಅತಿಹೆಚ್ಚು ತಿನ್ನುವುದು-ಇಲ್ಲ ಆಹಾರ ಸೇವೆನೆಯನ್ನೇ ತೀರಾ ಕಡಿತಗೊಳಿಸುವುದು ಅಥವಾ ನಿಶ್ಶಕ್ತಿ ಅನುಭವಿಸುವುದು ಇತ್ಯಾದಿ.
Advertisement
ಇನ್ನು ಮಾನಸಿಕವಾಗಿ ಖನ್ನತೆಯು, ಜನರಿಂದ ದೂರವಾಗುವುದು, ಮಾತನಾಡುವುದನ್ನು ನಿಲ್ಲಿಸುವುದು, ಎಲ್ಲದರಲ್ಲೂ ನಿರಾಸಕ್ತಿ ಉಂಟಾಗುವುದು, ಪದೇ ಪದೆ ನೀವು ಹಿಂದೆ ಮಾಡಿದ ತಪ್ಪುಗಳನ್ನೇ ಮೆಲುಕು ಹಾಕುವುದು, ಕೀಳರಿಮೆಯಿಂದ ನರಳುವುದು ಹಾಗೂ ಸಿಗರೇಟ್-ಮದ್ಯದ ಅತಿಯಾದ ಸೇವನೆಯ ರೂಪದಲ್ಲಿ ಪ್ರಕಟಗೊಳ್ಳುತ್ತದೆ. ಮಾನಸಿಕ ಸಮಸ್ಯೆ ಇಲ್ಲದವರೂ ಕೂಡ ಈ ಸಮಯದಲ್ಲಿ ಇಂಥ ಸ್ಥಿತಿಯನ್ನು ತಲುಪುವ ಸಾಧ್ಯತೆ ಇರುತ್ತದೆ. ಈ ಲಕ್ಷಣಗಳು ವಾರಕ್ಕಿಂತ ಅಧಿಕ ದಿನಗಳವರೆಗೆ ಕಂಡುಬಂದರೆ, ಕೂಡಲೇ ತಜ್ಞರ ಸಲಹೆ ಪಡೆಯುವುದು ಒಳಿತು.
ಸ್ವಸ್ಥವಾಗಿರಲು ಆರು ಸೂತ್ರಅಮೆರಿಕನ್ ಕಾಲೇಜ್ ಆಫ್ ಲೈಫ್ಸ್ಟೈಲ್ ಮೆಡಿಸಿನ್, ಲಾಕ್‌ಡೌನ್ ಸಮಯದಲ್ಲಿ ಮಾನಸಿಕ ಸ್ವಾಸ್ಥ್ಯವನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳಲು ಆರು ಸಲಹೆಗಳನ್ನು ನೀಡುತ್ತದೆ: ಸರಿಯಾದ ನಿದ್ರೆ, ಪೌಷ್ಟಿಕ ಆಹಾರ, ಸಾಮಾಜಿಕ ಸಂಪರ್ಕ (ವರ್ಚುವಲ್ ಆಗಿ), ದೈಹಿಕ ಚಟುವಟಿಕೆ, ಒತ್ತಡ ನಿರ್ವಹಣೆ ಹಾಗೂ ಅಪಾಯಕಾರಿ ವ್ಯಸನ ಪದಾರ್ಥಗಳಿಂದ ದೂರವಿರುವುದು. ನಿದ್ದೆ
ನಿದ್ದೆಯ ಅಭಾವವು ಮಾನಸಿಕ ಆರೋಗ್ಯಕ್ಕೆ ಬಹಳ ಹಾನಿ ಮಾಡಬಲ್ಲದು. ಹೀಗಾಗಿ, ಏಳುವ ಮತ್ತು ಮಲಗುವ ಸಮಯದಲ್ಲಿ ಏರುಪೇರಾಗದಂತೆ ನೋಡಿಕೊಳ್ಳಿ. ಕಡಿಮೆ ಮಲಗುವುದು ಎಷ್ಟು ಕೆಟ್ಟದೋ, ಹೆಚ್ಚು ಮಲಗುವುದೂ ಅಷ್ಟೇ ಕೆಟ್ಟದ್ದು. ಎಲ್ಲಕ್ಕಿಂತ ಹೆಚ್ಚಾಗಿ ಸಮಯಕ್ಕೆ ಸರಿಯಾಗಿ ಮಲಗಿ. ಪ್ರತಿದಿನ 7-8 ಗಂಟೆ ನಿದ್ರೆ ಆವಶ್ಯಕ. ಕೋವಿಡ್ 19 ವೈರಸ್ ಭಯ ನಿಮ್ಮ ನಿದ್ದೆಗೆಡಿಸುತ್ತಿದ್ದರೆ, ಸಾಧ್ಯವಾದಷ್ಟೂ ಅದಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದುವುದನ್ನು ಕಡಿಮೆ ಮಾಡಿ. ಪೌಷ್ಟಿಕ ಆಹಾರ
ನಾವು ಸೇವಿಸುವ ಆಹಾರಕ್ಕೂ ನಮ್ಮ ಮಾನಸಿಕ ಆರೋಗ್ಯಕ್ಕೂ ನೇರ ಸಂಬಂಧವಿದೆ. ತರಕಾರಿ, ಹಣ್ಣು ಹಾಗೂ ಪೌಷ್ಟಿಕಾಂಶ ಹೆಚ್ಚಿರುವ ಆಹಾರ ಪದಾರ್ಥ ಸೇವಿಸಿ. ಸಮಯಕ್ಕೆ ಸರಿಯಾಗಿ, ಬ್ರೇಕ್‌ಫಾಸ್ಟ್ ಹಾಗೂ ಊಟ ಮಾಡಿ. ಅಧಿಕ ಜಿಡ್ಡು ಇರುವ ಆಹಾರ ಪದಾರ್ಥಗಳ ಸೇವನೆ ಕಡಿಮೆ ಮಾಡಿ. ಅಧಿಕ ಪ್ರಮಾಣದಲ್ಲಿ ಸಕ್ಕರೆ ಸೇವನೆ ಬೇಡ. ಸಾಮಾಜಿಕ ಸಂಪರ್ಕ
ಇನ್ನೊಬ್ಬರೊಂದಿಗೆ ಸಂಪರ್ಕದಲ್ಲಿರುವುದು ನಮ್ಮ ಮಾನಸಿಕ ಆರೋಗ್ಯಕ್ಕೆ ಅತಿ ಮುಖ್ಯ ಇಂಧನ. ಈಗ ಲಾಕ್‌ಡೌನ್ ಇದೆಯಾದ್ದರಿಂದ, ಫೋನ್ ಮೂಲಕ ನಿಮ್ಮ ಕುಟುಂಬಸ್ಥರು, ಗೆಳೆಯರೊಂದಿಗೆ ನಿರಂತರ ಸಂಪರ್ಕದಲ್ಲಿ ಇರಿ. ಪ್ರತಿ ದಿನ ಅರ್ಧ ಗಂಟೆಯಾದರೂ ಬಿಡುವು ಮಾಡಿಕೊಂಡು ಪ್ರೀತಿ ಪಾತ್ರರೊಂದಿಗೆ ಮಾತನಾಡಿ. ಇದರಿಂದ ಒತ್ತಡ, ಖಿನ್ನತೆಯಿಂದ ರಕ್ಷಣೆ ಸಿಗುತ್ತದೆ. ವ್ಯಾಯಾಮ
ವ್ಯಾಯಾಮ ಮಾಡುವುದರಿಂದ ನಿಮ್ಮ ದೇಹವು ಎಂಡಾರ್ಫಿನ್, ಡೋಪಮಿನ್, ಸೆರಾಟೋನಿನ್, ನೋರೆಪಿನಫ್ರಿನ್‌ನಂಥ ಹಾರ್ಮೋನುಗಳನ್ನು ಬಿಡುಗಡೆ ಮಾಡುತ್ತವೆ. ಈ ಹಾರ್ಮೋನುಗಳು ಒತ್ತಡ ನಿವಾರಣೆ ಮಾಡುವುದಷ್ಟೇ ಅಲ್ಲದೆ, ನಿಮ್ಮ ಮನಸ್ಸನ್ನು ಉಲ್ಲಸಿತವಾಗಿಸುತ್ತವೆ ಹಾಗೂ ಕಾನ್ಫಿಡೆನ್ಸ್ ವೃದ್ಧಿಸುತ್ತವೆ. ಇನ್ನು ಒತ್ತಡಕಾರಕ ಅಡ್ರಿನಲಿನ್ ಅನ್ನು ಸಮತೋಲನಕ್ಕೆ ತರುವುದಕ್ಕೂ ಕೂಡ ವ್ಯಾಯಾಮ ಸಹಕರಿಸುತ್ತದೆ. ವ್ಯಾಯಾಮವೆಂದರೆ, ತೂಕ ಎತ್ತುವುದೆಂದಷ್ಟೇ ಅಲ್ಲ…ಮನೆಯ ಮೇಲೆ ವಾಕಿಂಗ್ ಮಾಡುವುದು, ಯೋಗ ಮಾಡುವುದು, ಕೂಡ ಅಷ್ಟೇ ಪರಿಣಾಮಕಾರಿಯಾಗಬಲ್ಲದು. ಪ್ರತಿ ದಿನ ಒಂದು ಸಮಯ ನಿಗದಿ ಮಾಡಿ ವ್ಯಾಯಾಮ ಮಾಡಿ. ಒತ್ತಡ ನಿರ್ವಹಣೆ
ನಿಮಗೆ ಒತ್ತಡ ಸೃಷ್ಟಿಯಾಗಿದೆ, ದುಗುಡ ಕಾಡುತ್ತಿದೆ ಎನ್ನುವುದನ್ನು ಗುರುತಿಸುವುದು ಅತಿ ಮುಖ್ಯ. ಆತಂಕವಾಗುತ್ತಿದೆ, ಮನಸ್ಸು ಖನ್ನತೆಯತ್ತ ಜಾರುತ್ತಿದೆ ಎಂದು ಗುರುತಿಸಿದಾಗ ಮಾತ್ರ ಅದರ ನಿವಾರಣೆ ಸಾಧ್ಯವಲ್ಲವೇ? ಒತ್ತಡ, ಆತಂಕವಾದ ತಕ್ಷಣ ಮೊಬೈಲ್ ಹಿಡಿದುಕೊಳ್ಳಬೇಡಿ. ಅದು ಪಲಾಯನವಷ್ಟೇ, ಸಮಸ್ಯೆಯೇನೂ ದೂರವಾಗುವುದಿಲ್ಲ. ಬದಲಾಗಿ ಒಂದಷ್ಟು ಹೊತ್ತು ಸುಮ್ಮನೇ ಕುಳಿತು ನಿಮ್ಮಲ್ಲಿ ಏನಾಗುತ್ತಿದೆಯೋ ಗಮನಿಸಿ. ಧ್ಯಾನ ಮಾಡಿ. ಒತ್ತಡ ನಿವಾರಣೆಗೆ, ಸ್ವಲ್ಪ ಹೊತ್ತು ಮನೆಯ ಹಿತ್ತಲಲ್ಲಿ ಅಡ್ಡಾಡಿ, ಅಥವಾ ನಿಮ್ಮ ಬಾಲ್ಕನಿಯಲ್ಲಿ ಕೂತುಕೊಳ್ಳಿ. ನಿಮಗೇನಾಗುತ್ತಿದೆ ಎಂದು ಪರಿಚಿತರ ಬಳಿ ಹಂಚಿಕೊಳ್ಳುವುದೂ ಕೂಡ ಒತ್ತಡ ನಿವಾರಣೆಗೆ ಮದ್ದಾಗಬಲ್ಲದು. ವ್ಯಸನದಿಂದ ದೂರವಿರಿ
ಒತ್ತಡದಿಂದ ಮುಕ್ತರಾಗಲು ಧೂಮಪಾನ, ಮದ್ಯಪಾನದ ಮೊರೆ ಹೋಗುವವರಿದ್ದಾರೆ. ಆದರೆ, ಇದು ದೀರ್ಘಕಾಲಿಕ ಸಮಸ್ಯೆಗೆ ಮುನ್ನುಡಿ ಬರೆಯುತ್ತದಷ್ಟೇ. ಯಾರು ಮಾನಸಿಕ ಸಮಸ್ಯೆಗಳಿಂದ ದೂರ ಓಡಲು ವ್ಯಸನಕ್ಕೆ ಅಂಟಿಕೊಳ್ಳುತ್ತಾರೋ, ಅವರಲ್ಲೇ ಮಾನಸಿಕ ಸಮಸ್ಯೆಗಳು ಅಧಿಕವಾಗುತ್ತವೆ ಎನ್ನುತ್ತದೆ ಮನಃಶಾಸ್ತ್ರ. ನೀವು ಮದ್ಯ – ಧೂಮಪಾನ ವ್ಯಸನಿಗಳಾಗಿದ್ದು, ಏಕಾಏಕಿ ಲಾಕ್‌ಡೌನ್‌ನಿಂದಾಗಿ ಮಾನಸಿಕ ತೊಂದರೆಯಾಗುತ್ತಿದ್ದರೆ, ಮನೋವೈದ್ಯರನ್ನು ಸಂಪರ್ಕಿಸಿ.