ಸಾಲಿಗ್ರಾಮದ ನಾರಾಯಣ ಪೂಜಾರಿ ಅವರು ಗುರುವಾರ ರಾತ್ರಿ ನಿಧನ ಹೊಂದಿದ್ದರು. ಅವರ ಇಬ್ಬರು ಪುತ್ರರು ಹಾಸನದಲ್ಲಿ ಉದ್ಯೋಗದಲ್ಲಿದ್ದು, ವಿಷಯ ತಿಳಿಯುತ್ತಿದ್ದಂತೆ ತತ್‌ಕ್ಷಣ ಬಾಡಿಗೆ ವಾಹನ ಮಾಡಿಕೊಂಡು ಶಿವಮೊಗ್ಗದ ಮೂಲಕ ಹೊಸಂಗಡಿ ಮಾರ್ಗವಾಗಿ ಸಾಲಿಗ್ರಾಮಕ್ಕೆ ಹೊರಟಿ
ದ್ದರು. ಹೊಸಂಗಡಿ ಪೊಲೀಸ್ ಚೆಕ್‌ಪೋಸ್ಟ್‌ನಲ್ಲಿ ಪೊಲೀಸರು ಅವರನ್ನು ಜಿಲ್ಲೆಯ ಪ್ರವೇಶಕ್ಕೆ ನಿರ್ಬಂಧಿಸಿದರು. ಎಷ್ಟೇ ವಿನಂತಿಸಿಕೊಂಡರೂ ಮೇಲಧಿಕಾರಿಗಳ ಆದೇಶವಿದ್ದ ಕಾರಣ ಸ್ಥಳದಲ್ಲಿದ್ದ ಅಮಾಸೆಬೈಲು ಪೊಲೀಸರು ಏನೂ ಮಾಡುವಂತಿಲ್ಲ ಎಂದು ಕೈಚೆಲ್ಲಿದರು. ಹಿರಿಯ ಅಧಿಕಾರಿಗಳು ತಮಗೆ ಸರಕಾರದಿಂದ ಖಡಕ್ ಆದೇಶ ಇದ್ದು, ವಾಹನಗಳನ್ನು ಬಿಡಲು ಸಾಧ್ಯವಿಲ್ಲ ಎಂದರು. ಬೆಳಗ್ಗೆ 10ಕ್ಕೆ ಚೆಕ್‌ಪೋಸ್ಟ್ ತಲುಪಿದ್ದ ವ್ಯಕ್ತಿಗಳು ಮಧ್ಯಾಹ್ನ 2.30ರ ವರೆಗೂ ಕಾಯುವಂತಾಯಿತು. ಬಳಿಕ ಪೊಲೀಸರೇ ಉಡುಪಿ ಜಿಲ್ಲೆಯ ಇನ್ನೊಂದು ಬಾಡಿಗೆ ವಾಹನವನ್ನು ತರಿಸಿ ಮೃತ ವ್ಯಕ್ತಿಯ ಮಕ್ಕಳನ್ನು ಮಾತ್ರ ತಂದೆಯ ಅಂತ್ಯಸಂಸ್ಕಾರಕ್ಕೆ ಕಳುಹಿಸಿದರು.
Advertisement
ಮಧ್ಯರಾತ್ರಿಯೇ ಹಾಸನದಿಂದ ಹೊರಟ ಕುಟುಂಬಕ್ಕೆ ಚೆಕ್‌ಪೋಸ್ಟ್‌ನಲ್ಲಿ ಕರ್ತವ್ಯ ನಿರತ ಪೊಲೀಸರು ಚಾ ಹಾಗೂ ಬಿಸ್ಕೆಟ್ ಮತ್ತು ಮಧ್ಯಾಹ್ನ ಊಟದ ವ್ಯವಸ್ಥೆ ಕಲ್ಪಿಸಿದರು.
ಎಎಸ್‌ಪಿ ಹರಿರಾಂ ಅವರು ಅಂತ್ಯಸಂಸ್ಕಾರಕ್ಕೆ ಹೋಗುವ ಮಕ್ಕಳಿಗೆ ಉಡುಪಿ ಜಿಲ್ಲೆಯ ಬಾಡಿಗೆ ವಾಹನದಲ್ಲಿ ಹೋಗುವಂತೆ ಸೂಚಿಸಿದರು. ಕೊರೊನಾ ಭೀತಿ ಹಾಗೂ ಬಾಡಿಗೆದಾರರನ್ನು ಬಿಟ್ಟು ವಾಪಸ್ ಬರುವಾಗ ಪೊಲೀಸರು ತಡೆಯುತ್ತಾರೆ ಎಂಬ ಭೀತಿಯಿಂದ ಬಾಡಿಗೆಗೆ ಹೋಗಲು ಯಾವುದೇ ವಾಹನ ಚಾಲಕರು ಒಪ್ಪಲಿಲ್ಲ. ಕೊನೆಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಪೊಲೀಸರ ಸೂಚನೆ ಮೇರೆಗೆ ಚಾಲಕರೊಬ್ಬರು ತನ್ನ ವಾಹನದಲ್ಲಿ ಕರೆದೊಯ್ದರು. ಅಮಾಸೆಬೈಲು ಠಾಣೆಯ ಪೊಲೀಸರು ಹಾಗೂ ಆರೋಗ್ಯ ಇಲಾಖೆ ಸಿಬಂದಿ ಸ್ಕ್ರೀನಿಂಗ್ ಮಾಡಿ ಅವರನ್ನು ಕಳುಹಿಸಿದರು.