Advertisement

ಸ್ಥಳೀಯ ಸಂಸ್ಥೆ ಶಕ್ತಿ ಕುಂದಿಸುತ್ತಿದೆ ಬಿಜೆಪಿ ಸರ್ಕಾರ: ಅನ್ಸಾರಿ

06:18 PM Nov 30, 2021 | Team Udayavani |

ಗಂಗಾವತಿ: ಬಿಜೆಪಿ ರಾಜ್ಯ ಮತ್ತು ಕೇಂದ್ರ ಸರಕಾರಗಳು ಗ್ರಾಪಂ ಸೇರಿ ಸ್ಥಳೀಯ ಸಂಸ್ಥೆಗಳ ಶಕ್ತಿ ಕುಂದಿಸುವ ಕಾರ್ಯ ನಿರಂತರವಾಗಿ ಮಾಡುತ್ತಿವೆ, ಸೋಲಿನ ಭೀತಿಯಿಂದ ಜಿಪಂ, ತಾಪಂ ಚುನಾವಣೆಯನ್ನು ಷಡ್ಯಂತ್ರದಿಂದ ಬಿಜೆಪಿಯವರು ಮುಂದೂಡಿದ್ದಾರೆ. ಕಾಂಗ್ರೆಸ್‌ ಅಭ್ಯರ್ಥಿ ಗೆಲುವು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಮಾಜಿ ಸಚಿವ ಇಕ್ಬಾಲ್‌ ಅನ್ಸಾರಿ ಭವಿಷ್ಯ ಹೇಳಿದರು.

Advertisement

ಅವರು ಸೋಮವಾರ ನಗರದ ಖಾಸಗಿ ಹೋಟೆಲ್‌ನಲ್ಲಿ ರಾಯಚೂರು-ಕೊಪ್ಪಳ ವಿಧಾನಪರಿಷತ್‌ ಚುನಾವಣೆಯ ಕಾಂಗ್ರೆಸ್‌ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಕಾಂಗ್ರೆಸ್‌ ಪಕ್ಷ ಗ್ರಾಮ ಸ್ವರಾಜ್‌ಗೆ ಹೆಚ್ಚಿನ ಆದ್ಯತೆ ನೀಡಿದೆ. ಬಿಜೆಪಿ ಪ್ರಧಾನಮಂತ್ರಿಯಿಂದ ಹಿಡಿದು ಗ್ರಾಪಂ ಸದಸ್ಯರು ಜನತೆಗೆ ಬರೀ ಸುಳ್ಳು ಹೇಳುತ್ತಿದ್ದಾರೆ.

ಜೀವ ಜಲ ಮೀಷನ್‌ ಯೋಜನೆ ಮೂಲಕ ಗ್ರಾಮಗಳಲ್ಲಿ ಕಳಪೆ ಕಾಮಗಾರಿ ನಡೆಸಿ ವ್ಯಾಪಕ ಭ್ರಷ್ಟಾಚಾರ ನಡೆಯಲು ಕಾರಣವಾಗಿದೆ. ಬಿಜೆಪಿ ಸರಕಾರ ಬಂದ ನಂತರ ಒಂದೂ ಮನೆ ಕೊಟ್ಟಿಲ್ಲ. ತಾವು ಶಾಸಕರಾಗಿದ್ದ ವೇಳೆ ಸುಮಾರು 720 ಕೋಟಿ ರೂ. ಅನುದಾನ ತಂದು ಇಡೀ ಕ್ಷೇತ್ರ ಹಾಗೂ ಗಂಗಾವತಿ ನಗರವನ್ನು ಸಮಗ್ರ ಅಭಿವೃದ್ಧಿ ಮಾಡಲಾಗಿದೆ. ಈಗಿನ ಶಾಸಕರ ಅಭಿವೃದ್ಧಿ ಕಾರ್ಯ ಶೂನ್ಯವಾಗಿದೆ. ಆದ್ದರಿಂದ ಎಂಎಲ್ಸಿ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಶರಣೇಗೌಡ ಬಯ್ನಾಪುರ ಅವರಿಗೆ ಮತ ಹಾಕಿ ಗೆಲ್ಲಿಸಿ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯವರನ್ನು ಮನೆಗೆ ಕಳಿಸಬೇಕೆಂದು ಮನವಿ ಮಾಡಿದರು.

ಮಾಜಿ ಸಚಿವ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಶಿವರಾಜ್‌ ತಂಗಡಗಿ, ಮಾಜಿ ಸಂಸದರಾದ ಶಿವರಾಮಗೌಡ, ಬಿ.ವಿ.ನಾಯಕ, ಶಾಸಕ ಅಮರೇಗೌಡ ಬಯ್ನಾಪುರ, ಮಾಜಿ ಶಾಸಕರಾದ ಹಂಪನಗೌಡ ಬಾದರ್ಲಿ, ಹಸನಸಾಬ್‌ ದೋಟಿಹಾಳ, ಕಾಂಗ್ರೆಸ್‌ ಮುಖಂಡರಾದ ಸಿದ್ದಪ್ಪ ನೀರಲೂಟಿ, ಕೆ. ಕರಿಯಪ್ಪ, ಮಾಲತಿ ನಾಯಕ, ಶಾಮೀದ್‌ ಮನಿಯಾರ್‌, ಫಕೀರಪ್ಪ ಎಮ್ಮಿ, ಇಮ್ತಿಯಾಜ್‌ ಅನ್ಸಾರಿ, ರೆಡ್ಡಿ ಶ್ರೀನಿವಾಸ, ಶರಣಬಸವರಾಜ ರೆಡ್ಡಿ, ನೆಕ್ಕಂಟಿ ಸೂರಿಬಾಬು, ನಾಗನಗೌಡ, ಅಮರೇಶ ಗೋನಾಳ ಸೇರಿ ಅನೇಕರಿದ್ದರು.

ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ ಎಸ್ಟಿ ಸಮುದಾಯಕ್ಕೆ 7.5 ಮೀಸಲಾತಿ ಕಲ್ಪಿಸಲಾಗುತ್ತದೆ. ಬಿ. ಶ್ರೀರಾಮುಲು ಅವರನ್ನು ಉಪಮುಖ್ಯಮಂತ್ರಿ ಮಾಡಲಾಗುತ್ತದೆ ಎಂದು ಚುನಾವಣೆ ಸಂದರ್ಭದಲ್ಲಿ ಯಡಿಯೂರಪ್ಪ ಸೇರಿ ಬಿಜೆಪಿ ಪ್ರಮುಖ ನಾಯಕರು ಭರವಸೆ ನೀಡಿ ಮತ್ತೂಂದು ವಿಧಾನಸಭೆ ಚುನಾವಣೆ ಬಂದರೂ ಕೊಟ್ಟ ಮಾತು ಉಳಿಸಿಕೊಳ್ಳಲು ಆಗುತ್ತಿಲ್ಲ. ಇದರಿಂದ ಬೇಸತ್ತು ಮಾತೃ ಪಕ್ಷ ಕಾಂಗ್ರೆಸ್‌ಗೆ ತಾವು ಮರಳುತ್ತಿದ್ದು, ಇಕ್ಬಾಲ್‌ ಅನ್ಸಾರಿ ನಾಯಕತ್ವದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲಾಗುತ್ತದೆ. ನಾಯಕ ಸಮಾಜದ ಗ್ರಾಪಂ, ನಗರಸಭೆ ಸದಸ್ಯರು ಕಾಂಗ್ರೆಸ್‌ ಅಭ್ಯರ್ಥಿಗಳಿಗೆ ಮತ ನೀಡಿ ಬಿಜೆಪಿಗೆ ಬುದ್ಧಿ ಕಲಿಸಲಿದ್ದಾರೆ.
ವಡ್ರಟ್ಟಿ ವೀರಭದ್ರಪ್ಪ ನಾಯಕ, ಕಾಂಗ್ರೆಸ್‌
ಸೇರಿದ ಬಿಜೆಪಿ ನಾಯಕ

Advertisement

ಜಿಲ್ಲೆಯಲ್ಲಿ ಸಚಿವ ಕೆ.ಎಸ್‌. ಈಶ್ವರಪ್ಪ ನಡೆಸುತ್ತಿರುವ ಎಂಎಲ್ಸಿ ಚುನಾವಣೆಯ ಪ್ರಚಾರ ಸಭೆಯಲ್ಲಿ ಖಾಲಿ ಕುರ್ಚಿಗಳು ಕಾಣುತ್ತಿದ್ದು, ಬಿಜೆಪಿಗೆ ಜನರು ಸೋಲಿನ ರುಚಿ ತೋರಿಸಲು ಸಿದ್ಧರಾಗಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಗಂಗಾವತಿಗೆ ಪ್ರಚಾರಕ್ಕೆ ಬಂದಿದ್ದ ಪ್ರಧಾನಿ ಮೋದಿಯವರು ತುಂಗಭದ್ರಾ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಣೆ ಮಾಡಿ ನವಲಿ ಡ್ಯಾಂ ನಿರ್ಮಾಣಕ್ಕೆ 10 ಸಾವಿರ ಕೋಟಿ ನೀಡುವುದಾಗಿ ಘೋಷಣೆ ಮಾಡಿದ್ದರು. ಆದರೆ ಇದುವರೆಗೂ ಇದರ ಬಗ್ಗೆ ಚಕಾರವೆತ್ತುತ್ತಿಲ್ಲ. ಇದರಿಂದ ಗೊತ್ತಾಗುತ್ತದೆ ಬಿಜೆಪಿಯವರು ಸುಳ್ಳಿನ ಶೂರರೆಂದು.
ಶಿವರಾಜ್‌ ತಂಗಡಗಿ, ಮಾಜಿ ಸಚಿವರು

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next