Advertisement
ಮೂರು ತಂಡವಾಗಿ ಗುಹಾ ಪಯಣ ಆರಂಭಿಸಿದ ಭಕ್ತರು ತೀರ್ಥ ಗುಂಪೆಯಲ್ಲಿ ಶುಚಿಯಾಗಿ ಗೋವಿಂದನ ನಾಮಸ್ಮರಣೆಯೊಂದಿಗೆ ಕಣಿವೆ ಮಾರ್ಗವಾಗಿ ಸಂಚರಿಸಿ ಸುಮಾರು 200 ಮೀ. ದೂರವಿರುವ ವಿಭೂತಿ ಗುಹೆಗೆ ಸಮೀಪಿಸಿ ಕತ್ತಲ ಗುಹೆಯನ್ನು ಪ್ರವೇಶಿಸಿದರು. ತೀರ ಬೆಳಕಿನ ಅಭಾವವಿರುವ ಗುಹೆ ಪ್ರವೇಶಿಸಲು ದೀಪ ನಿಷಿದ್ಧವಿರುವ ಕಾರಣ ಒಬ್ಬರ ಹಿಂದೆ ಒಬ್ಬರಂತೆ ಕೈ ಹಿಡಿದು ಗುಹಾ ಸುರಂಗದಲ್ಲಿ ಸಂಚರಿಸಿ ವಿಭೂತಿ ಸಂಗಹಿಸುವ ಮೂಲಕ ಪುನೀತರಾದರು.
ವಿಭೂತಿ ಧಾರಣೆಯಂತಹ ನಿತ್ಯ ಅನುಷ್ಠಾನ ಕ್ರಮಗಳು ಜನಸಾಮಾನ್ಯರಲ್ಲಿ ಕಡಿಮೆಯಾಗುತ್ತಿದ್ದರೂ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ವಿಭೂತಿಗೆ ಮಹತ್ವವಿದೆ. ವರ್ಷದಿಂದ ವರ್ಷಕ್ಕೆ ಗುಂಪೆಯ ಪವಿತ್ರ ಗುಹೆಗೆ ಪ್ರವೇಶಿಸಿ ವಿಭೂತಿ ಸಂಗ್ರಹ ನಡೆಸುವವರ ಸಂಖ್ಯೆ ಇಮ್ಮಡಿಯಾಗುತ್ತಿದೆ. ಪೊಸಡಿ ಗುಂಪೆಯ ಗುಹಾ ಪ್ರವೇಶ ಅಧ್ಯಾತ್ಮಿಕ ಅನುಭೂತಿಯನ್ನು ನೀಡುತ್ತದೆ ಎನ್ನುತ್ತಾರೆ ವಿಷ್ಣು ಪ್ರಸಾದ್ ಆವಳ ಮಠ ಅವರು. ವಿಭೂತಿ ಸಂಗ್ರಹದ ಮಹತ್ವ
ಪುರಾತನ ಕಾಲದಿಂದ ನಡೆದು ಬರುತ್ತಿರುವ ಪರಂಪರೆಯಂತೆ ತೀರ್ಥ ಅಮಾವಾಸ್ಯೆಯ ಪುಣ್ಯ ದಿನದಂದು ಪೊಸಡಿ ಗುಂಪೆಯ ಪವಿತ್ರ ಗುಹೆಗೆ ಪ್ರವೇಶಿಸಿ ವಿಭೂತಿ ಸಂಗ್ರಹಿಸುವುದು ವಾಡಿಕೆಯಾಗಿದೆ. ಶಾಕ್ತ ಹಾಗೂ ಶೈವ ಸಂಪ್ರದಾಯದಂತೆ ವಿಭೂತಿಧಾರಣೆ ಮಾಡುವ ಪ್ರತಿಯೊಬ್ಬ ವ್ಯಕ್ತಿಗೂ ಪೊಸಡಿ ಗುಂಪೆ ಗುಹಾ ಪ್ರವೇಶ ವಿಶೇಷವಾಗಿದೆ.