Advertisement

Cloud Creation: ಸ್ಥಳೀಯವಾಗಿ ಮೋಡ ಸೃಷ್ಟಿ; ಬೇಸಗೆ ಮಳೆ ನಿರೀಕ್ಷೆ

10:31 AM Mar 21, 2024 | Team Udayavani |

ಮಂಗಳೂರು: ವಾತಾವರಣದಲ್ಲಿ ಉಷ್ಣಾಂಶ ಏರಿಕೆಯಾಗುತ್ತಿದ್ದು, ವಾರದೊಳಗೆ ಕರಾವಳಿಗೆ ಪೂರ್ವ ಮುಂಗಾರು ಮಳೆ ಸುರಿಯುವ ನಿರೀಕ್ಷೆ ಇದೆ. ಹವಾಮಾನ ಇಲಾಖೆ ಪ್ರಕಾರ ಈ ಬಾರಿ ವಾಡಿಕೆಯಂತೆ ಮಳೆಯಾಗುವ ಸಾಧ್ಯತೆಯಿದೆ.

Advertisement

ವಾಡಿಕೆಯಂತೆ ಕರಾವಳಿ ಭಾಗದಲ್ಲಿ ಮಾರ್ಚ್‌ ಎರಡನೇ ವಾರದಲ್ಲಿ ಬೇಸಗೆ ಮಳೆ ಆರಂಭಗೊಳ್ಳುತ್ತದೆ. ಆದರೆ ಜಾಗತಿಕ ತಾಪಮಾನ ವೈಪರೀತ್ಯದ ಪರಿಣಾಮ ಕಳೆದ ಕೆಲವು ವರ್ಷಗಳಿಂದ ವಾತಾವರಣದಲ್ಲಿ ಬದಲಾವಣೆಯಾಗುತ್ತಿದೆ. ಈ ಬಾರಿ ಚಳಿಗಾಲದ ಅವಧಿಯಲ್ಲಿ ಚಳಿಯ ಪ್ರಮಾಣ ಕಡಿಮೆಯಾದ ಪರಿಣಾಮ ಕರಾವಳಿಯಲ್ಲಿ ಗರಿಷ್ಠ ಉಷ್ಣಾಂಶದಲ್ಲಿ ಭಾರೀ ಏರಿಕೆ ಕಾಣುತ್ತಿದೆ. ಅದರಲ್ಲೂ ಕಳೆದ ಕೆಲ ದಿನಗಳಿಂದ 36 ಡಿ.ಸೆ.ಗೂ ಅಧಿಕ ಉಷ್ಣಾಂಶ ಮಂಗಳೂರಿನಲ್ಲಿ ದಾಖಲಾಗುತ್ತಿದೆ. ಬಿಸಿಲಿನ ಉರಿಯಿಂದಾಗಿ ಬಾನಿನಲ್ಲಿ ಮೋಡಗಳು ಸೃಷ್ಟಿಯಾಗುತ್ತಿವೆ. ಇದರಿಂದ ರಾಜ್ಯದ ಕೆಲವು ಕಡೆಗಳಲ್ಲಿ ಮಳೆ ಸುರಿಯಲು ಆರಂಭವಾಗಿದೆ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಸದ್ಯದಲ್ಲೇ ಸ್ಥಳೀಯವಾಗಿ ಮೋಡ ತುಂಬಿ ಸದ್ಯದಲ್ಲೇ ಮಳೆಯಾಗುವ ಸಾಧ್ಯತೆ ಇದೆ. ಬಳಿಕ ಗರಿಷ್ಠ ಉಷ್ಣಾಂಶವೂ ತುಸು ಕಡಿಮೆಯಾಗಲಿದೆ.

ಮಳೆಗಾಲ ಅಲ್ಲದಿದ್ದರೂ ವಾಡಿಕೆ ಪ್ರಕಾರ ಈವರೆಗೆ ತಿಂಗಳಲ್ಲಿ ರಾಜ್ಯದಲ್ಲಿ 4 ಮಿ.ಮೀ. ವರೆಗೆ ಮಳೆ ಸರಿಯಬೇಕು. ಅದರೆ ಈ ಬಾರಿ ಇಲ್ಲಿಯ ವರೆಗೆ ಅಷ್ಟು ಮಳೆ ಸುರಿದಿಲ್ಲ. ದ.ಕ. ಜಿಲ್ಲೆಯಲ್ಲಿ 7 ಮಿ.ಮೀ., ಉಡುಪಿ ಜಿಲ್ಲೆಯಲ್ಲಿ 3 ಮಿ.ಮೀ. ಮತ್ತು ಉತ್ತರ ಕನ್ನಡದಲ್ಲಿ 1 ಮಿ.ಮೀ. ಸಹಿತ ಕರಾವಳಿಯಲ್ಲಿ ಒಟ್ಟು 3 ಮಿ.ಮೀ. ಮಳೆಯಾಗಬೇಕು. ಆದರೆ ಈವರೆಗೆ 1 ಮಿ.ಮೀ. ಕೂಡ ಮಳೆ ಸುರಿದಿಲ್ಲ.

ಕಳೆದ ವರ್ಷ ಶೇ. 61 ಮಳೆ ಪ್ರಮಾಣ ಇಳಿಕೆ

ಕರಾವಳಿ ಭಾಗದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ವರ್ಷ ಪೂರ್ವ ಮುಂಗಾರು ಅವಧಿಯ ಮಳೆಯಲ್ಲಿ (ಮಾರ್ಚ್‌ -ಮೇ) ವಾಡಿಕೆಗಿಂತ ಭಾರೀ ಪ್ರಮಾಣದಲ್ಲಿ ಇಳಿಕೆ ಕಂಡಿತ್ತು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 245.2 ಮಿ.ಮೀ. ವಾಡಿಕೆ ಮಳೆ ಪ್ರಮಾಣದಲ್ಲಿ 119.4 ಮಿ.ಮೀ. ಮಳೆಯಾಗಿ ಶೇ. 51ರಷ್ಟು ಕಡಿಮೆ, ಉಡುಪಿ ಜಿಲ್ಲೆಯಲ್ಲಿ 200.8 ಮಿ.ಮೀ. ವಾಡಿಕೆ ಮಳೆಯಲ್ಲಿ 53.4 ಮಿ.ಮೀ. ಮಳೆಯಾಗಿ ಶೇ.51 ಮಳೆ ಪ್ರಮಾಣ ಕಡಿಮೆ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ 103 ಮಿ.ಮೀ. ವಾಡಿಕೆ ಮಳೆಯಲ್ಲಿ 38.9 ಮಿ.ಮೀ. ಮಳೆಯಾಗಿ ಶೇ.62ರಷ್ಟು ಮಳೆ ಪ್ರಮಾಣ ಏರಿಕೆ ಕಂಡಿತ್ತು. ಒಟ್ಟಾರೆ ಕರಾವಳಿ ಭಾಗದಲ್ಲಿ 158.2 ಮಿ.ಮೀ. ವಾಡಿಕೆ ಮಳೆಯಲ್ಲಿ 62.2 ಮಿ.ಮೀ. ಮಳೆಯಾಗಿ ಶೇ. 61ರಷ್ಟು ಮಳೆ ಪ್ರಮಾಣ ಇಳಿಕೆಯಾಗಿತ್ತು.

Advertisement

ಕರಾವಳಿಯಲ್ಲಿ ಕೆಲವು ದಿನಗಳಿಂದ ಗರಿಷ್ಠ ತಾಪಮಾನ ಏರಿಕೆಯಾಗುತ್ತಿದೆ. ವಾರದೊಳಗೆ ಸ್ಥಳೀಯವಾಗಿ ಮೋಡ ಸೃಷ್ಟಿಯಾಗಿ ಜಿಲ್ಲೆಯ ಅಲ್ಲಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಬಳಿಕ ತಾಪಮಾನದಲ್ಲಿಯೂ ಇಳಿಕೆಯಾಗಬಹುದು. ಸದ್ಯದ ಮುನ್ಸೂಚನೆ ಪ್ರಕಾರ ಈ ಬಾರಿ ವಾಡಿಕೆಯಂತೆ ಬೇಸಗೆ ಮಳೆ ಸುರಿಯಲಿದೆ. – ಡಾ| ರಾಜೇಗೌಡ, ಹವಾಮಾನ ವಿಜ್ಞಾನಿ, ಕೃಷಿ ವಿ.ವಿ. ಬೆಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next