Advertisement

ಮೀಸಲಾತಿ ಕಲ್ಪಿಸದೆ ಸ್ಥಳೀಯ ಸಂಸ್ಥೆ ಚುನಾವಣೆ ಮಾಡಬಾರದು: ಸಿದ್ದರಾಮಯ್ಯ

01:14 PM Mar 31, 2022 | Team Udayavani |

ಬೆಂಗಳೂರು: ಮೀಸಲು ಸೌಲಭ್ಯ ಕಲ್ಪಿಸದೆ ನಗರ ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಿದರೆ ಹಿಂದುಳಿದ ವರ್ಗಗಳಿಗೆ ಅನ್ಯಾಯವಾಗುತ್ತದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

Advertisement

ಹಿಂದುಳಿದ ವರ್ಗಗಳಿಗೆ ಮೀಸಲು ಸೌಲಭ್ಯ ಕಲ್ಪಿಸುವ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ವಿಧಾನ ಮಂಡಲದ ಉಭಯ ಸದನ ನಾಯಕರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಈಗ ಹಿಂದುಳಿದ ವರ್ಗಗಳಿಗೆ ಮೀಸಲು ಸೌಲಭ್ಯ ಕಗ್ಗಂಟಾಗಿ ಪರಿಣಮಿಸಿದೆ. ಹೀಗಾಗಿ ಮೀಸಲು ಸೌಲಭ್ಯ ಒದಗಿಸುವ ಕುರಿತು ಸರ್ಕಾರ ಗಂಭೀರ ಚಿಂತನೆ ನಡೆಸಬೇಕು. ಕಾನೂನಾತ್ಮಕವಾಗಿ ಪರಿಶೀಲಿಸಬೇಕು ಎಂದರು.

ಮೀಸಲು ಸೌಲಭ್ಯ ಒದಗಿಸುವ ಮುನ್ನ ಸಮೀಕ್ಷೆ ನಡೆಸಬೇಕು ಎಂದು ನ್ಯಾಯಾಲಯ ಹೇಳಿದೆ. ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ಈಗಾಗಲೇ ಆರ್ಥಿಕ, ಶೈಕ್ಷಣಿಕ ಸ್ಥಿತಿಗತಿ ಕುರಿತು ಸಮೀಕ್ಷೆ ನಡೆಸಿ ವರದಿ ಸಲ್ಲಿಸಿದೆ. ಆ ವರದಿಯನ್ನು ಪರಿಗಣಿಸುವ ಸಾಧ್ಯತೆ ಕುರಿತಾಗಿಯೂ ಪರಿಶೀಲನೆ ನಡೆಸಬೇಕು ಎಂದು ಮನವಿ ಮಾಡಿದರು.

ಇದನ್ನೂ ಓದಿ:ದಾವಣಗೆರೆ ಬಜೆಟ್ ಸಭೆಯಲ್ಲಿ ಬಡಾವಣೆ ಹೆಸರು ಚರ್ಚೆ; ಬಿಜೆಪಿ-ಕಾಂಗ್ರೆಸ್ ಸದಸ್ಯರ ಮಾತಿನ ಚಕಮಕಿ

Advertisement

ಒಂದು ವೇಳೆ ಇದು ಸಾಧ್ಯವಾಗದಿದ್ದರೆ ಮತ್ತೊಂದು ಆಯೋಗವನ್ನು ರಚನೆ ಮಾಡಿ ಸಮೀಕ್ಷೆ ನಡೆಸುವುದು ಸೂಕ್ತ. ಅಲ್ಲಿಯವರೆಗೆ ನಗರ ಹಾಗೂ ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಬಾರದು. ಇಲ್ಲದಿದ್ದರೆ ಹಿಂದುಳಿದ ವರ್ಗಗಳಿಗೆ ರಾಜಕೀಯ ಪ್ರಾತಿನಿಧ್ಯ ಸಿಗದಂತೆ ಆಗುತ್ತದೆ. ಆ ವರ್ಗಗಳಿಗೆ ಭಾರಿ ಅನ್ಯಾಯವಾಗುತ್ತದೆ. ಹಿಂದುಳಿದ ವರ್ಗದವರನ್ನು ಸಾಮಾನ್ಯ ವರ್ಗದಲ್ಲಿ ಸೇರಿಸಿ ಚುನಾವಣೆ ನಡೆಸಲು ಸಾಧ್ಯವಿಲ್ಲ ಎಂದು ತಿಳಿಸಿದರು.

ಮೀಸಲು ಪ್ರಮಾಣ ಹೆಚ್ಚಿಸಬೇಕೆಂದ ಬೇಡಿಕೆ ಮುಂದಿಟ್ಟುಕೊಂಡು ವಾಲ್ಮೀಕಿ ಸಮುದಾಯದ ಸ್ವಾಮೀಜಿಯವರು ಕಳೆದ 50 ದಿನಗಳಿಂದ ಧರಣಿ ನಡೆಸುತ್ತಿದ್ದಾರೆ. ಆ ಬೇಡಿಕೆ ಈಡೇರಿಸುವ ಕುರಿತಾಗಿಯೂ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್, ಸಚಿವರಾದ ಗೋವಿಂದ ಕಾರಜೋಳ, ಈಶ್ವರಪ್ಪ, ಮಾಧುಸ್ವಾಮಿ, ಕೋಟಾ ಶ್ರೀನಿವಾಸ ಪೂಜಾರಿ, ಬೈರತಿ ಬಸವರಾಜ್, ಎಂ.ಟಿ.ಬಿ. ನಾಗರಾಜ್ ಮತ್ತಿತರರು ಸಭೆಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next