Advertisement
ವೇತನ ಹೆಚ್ಚಿಸುವಂತೆ ಪೊಲೀಸರಿಂದ ಬಂದ ಬೇಡಿಕೆಯ ಹಿನ್ನೆಲೆಯಲ್ಲಿ ರಚಿಸಿದ್ದ ಔರಾದ್ಕರ್ ನೇತೃತ್ವದ ಸಮಿತಿ ನೀಡಿದ ವರದಿ ಆಧರಿಸಿ ಈ ಭತ್ತೆ ಕಲ್ಪಿಸಲಾಗಿದೆ. ವೇತನ ಹೆಚ್ಚಳಕ್ಕೆ ಸಂಬಂಧಿಸಿದಂತೆ ಸಮಿತಿ ವರದಿಯನ್ನು ಹೊಸ ವೇತನ ಆಯೋಗದ ಮುಂದಿ ಡಲಾಗುವುದಲ್ಲದೇ ಆಯೋಗದ ನಿರ್ಧಾರದಂತೆ ಸರಕಾರ ಮುಂದಿನ ಕ್ರಮ ತೆಗೆದುಕೊಳ್ಳಲಿದೆೆ ಎಂದರು. ಪೊಲೀಸರಿಗೆ ಪ್ರತಿ ಹತ್ತು ವರ್ಷಕ್ಕೊಮ್ಮೆ ಮುಂಭಡ್ತಿ ನೀಡಲಾಗುವುದು. ಪೊಲೀಸರಲ್ಲಿ ಅಶಿಸ್ತಿನ ನಡೆ ಕಂಡುಬಂದಲ್ಲಿ ಸರಕಾರ ಗಂಭೀರವಾಗಿ ತೆಗೆದುಕೊಳ್ಳುವುದು ಎಂದರು. ಪೊಲೀಸ್ ಇಲಾಖೆಯಲ್ಲಿ ಖಾಲಿ ಇದ್ದ ಸುಮಾರು 25,000 ಸಿಬಂದಿಯಲ್ಲಿ ಈಗಾಗಲೇ 20,000 ಸಿಬಂದಿ ನೇಮಕಾತಿ ಮೂಲಕ ಸಿಬಂದಿ ಕೊರತೆಯನ್ನು ಪರಿಹರಿಸಲು ಇಲಾಖೆ ಗಮನಾರ್ಹ ಹೆಜ್ಜೆ ಇಟ್ಟಿದೆ ಎಂದು ಡಾ| ಪರಮೇಶ್ವರ್ ಹೇಳಿದರು. ಕರಾವಳಿ ಕಾವಲು ಪೊಲೀಸರಿಗೆ ತರಬೇತಿ ನೀಡಲು ಅನುಕೂಲವಾಗುವಂತೆ ಉಡುಪಿ ಜಿಲ್ಲೆಯಲ್ಲಿ ಮೆರೈನ್ ಟ್ರೈನಿಂಗ್ ಸೆಂಟರ್ ತೆರೆಯುವ ಚಿಂತನೆ ಸರಕಾರದ ಮುಂದಿದೆ ಎಂದರು.
ಪ್ರತಿ ಜಿಲ್ಲಾ ಕೇಂದ್ರದಲ್ಲಿ ಮಹಿಳಾ ಠಾಣೆ ಇರಬೇಕು ಎನ್ನುವ ಸರಕಾರದ ನಿರ್ಧಾರದಂತೆ ಕುಂದಾಪುರದಲ್ಲಿ ಕಾರ್ಯಾಚರಿಸುತ್ತಿದ್ದ ಮಹಿಳಾ ಠಾಣೆಯನ್ನು ಉಡುಪಿಗೆ ವರ್ಗಾಯಿಸಲಾಗಿದೆ. ಆದರೆ ಈಗಾಗಲೇ ಇಲ್ಲಿನ ಮಹಿಳಾ ಸಂಘಟನೆಯವರಿಂದ ಬಹಳಷ್ಟು ಒತ್ತಡಗಳು ಬಂದ ಹಿನ್ನೆಲೆಯಲ್ಲಿ ಕುಂದಾಪುರದಲ್ಲೂ ಮಹಿಳಾ ಠಾಣೆ ಒದಗಿಸುವ ಬಗ್ಗೆ ಮರುಪರಿಶೀಲನೆ ನಡೆಸಲಾಗುವುದು ಎಂದು ಗೃಹ ಸಚಿವರು ತಿಳಿಸಿದರು.