Advertisement

ದ್ವಿತೀಯ ಹಂತದಲ್ಲಿ ಮೀನುಗಾರರ ಸಾಲ ಮನ್ನಾ

10:14 AM Jul 20, 2018 | |

ಕುಂದಾಪುರ: ರೈತರ 11 ಸಾವಿರ ಕೋ.ರೂ. ಸಾಲ ಮನ್ನಾ ಮಾಡಲಾಗಿದ್ದು, ಎರಡನೇ ಹಂತದಲ್ಲಿ ಮೀನುಗಾರರ ಸಾಲವನ್ನೂ ಮನ್ನಾ ಮಾಡಲಾಗುವುದು ಎಂದು ರಾಜ್ಯ ಪಶುಸಂಗೋಪನೆ ಮತ್ತು ಮೀನುಗಾರಿಕೆ ಸಚಿವ ವೆಂಕಟರಾವ್‌ ನಾಡಗೌಡ ಹೇಳಿದರು. 

Advertisement

ಗುರುವಾರ ಗಂಗೊಳ್ಳಿಯ ಮೀನುಗಾರಿಕೆ ಬಂದರಿಗೆ ಭೇಟಿ ನೀಡಿ, 102 ಕೋ.ರೂ. ವೆಚ್ಚದ ಬ್ರೇಕ್‌ವಾಟರ್‌ ಕಾಮಗಾರಿ ಪರಿಶೀಲನೆ ನಡೆಸಿ, ಮೀನುಗಾರರ ಸಮಸ್ಯೆ ಆಲಿಸಿ ಅವರು ಮಾತನಾಡಿದರು. ಮೀನುಗಾರ ಮಹಿಳೆಯರಿಗೆ 50 ಸಾವಿರ ರೂ. ಬಡ್ಡಿರಹಿತ ಸಾಲ ನೀಡಲು ಸರಕಾರ ಯೋಜನೆ ಸಿದ್ಧಪಡಿಸಿದ್ದು, ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ಸರಕಾರ ಮೀನುಗಾರರ ಜತೆಗಿದೆ, ಅವರ ಸಮಸ್ಯೆ ಪರಿಹಾರಕ್ಕೆ ಬದ್ಧ ಎಂದರು.  ಬ್ರೇಕ್‌ ವಾಟರ್‌ 300 ಮೀ. ವಿಸ್ತರಣೆ, ಜೆಟ್ಟಿ ವಿಸ್ತರಣೆ ಮಾಡಬೇಕು, ಸಬ್ಸಿಡಿ ದರದಲ್ಲಿ ಸೀಮೆಎಣ್ಣೆ ಒದಗಿಸಬೇಕು ಎಂಬ ಅಹವಾಲನ್ನು ಮೀನುಗಾರರು ಸಚಿವರಿಗೆ ಮನವಿಯಲ್ಲಿ  ಸಲ್ಲಿಸಿದರು.  

ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ, ಮೀನುಗಾರಿಕೆ ನಿರ್ದೇಶಕ ಎಚ್‌.ಎಸ್‌. ವೀರಪ್ಪ ಗೌಡ, ಇಲಾಖೆಯ ಜಿಲ್ಲಾ ಉಪ ನಿರ್ದೇಶಕ ಪಾರ್ಶ್ವನಾಥ, ಗಂಗೊಳ್ಳಿ ಬಂದರಿನ ಸಹಾಯಕ ನಿರ್ದೇಶಕಿ ಅಂಜನಾದೇವಿ, ಜೆಡಿಎಸ್‌ ಜಿಲ್ಲಾಧ್ಯಕ್ಷ ಯೋಗಿಶ್‌ ಶೆಟ್ಟಿ, ತಾ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ನಾರಾಯಣ ಕೆ. ಗುಜ್ಜಾಡಿ, ತಾ.ಪಂ. ಸದಸ್ಯ ಸುರೇಂದ್ರ ಖಾರ್ವಿ, ಐಸ್‌ ಪ್ಲಾಂಟ್‌ ಅಸೋಸಿಯೇಶನ್‌ ಅಧ್ಯಕ್ಷ ರಾಜೇಂದ್ರ ಸುವರ್ಣ ಉಪಸ್ಥಿತರಿದ್ದರು. ನಾಡದೋಣಿ ಸಂಘದ ಅಧ್ಯಕ್ಷ ಮಂಜು ಬಿಲ್ಲವ ಸ್ವಾಗತಿಸಿದರು. ರಮೇಶ್‌ ಕುಂದರ್‌ ನಿರೂಪಿಸಿದರು ಬಂದರು ಅಭಿವೃದ್ಧಿ ಅಧ್ಯಕ್ಷ ಪುರುಷೋತ್ತಮ ಖಾರ್ವಿ ವಂದಿಸಿದರು.

ಮರವಂತೆ ಬಂದರಿಗೂ ಭೇಟಿ
ಮರವಂತೆ ಬಂದರಿಗೂ ಭೇಟಿ ನೀಡಿ, ಅಲ್ಲಿನ ಮೀನುಗಾರರ ಸಮಸ್ಯೆ ಆಲಿಸಿದರು. ಕಡಲ್ಕೊರೆತದಿಂದ ಮನೆ ಕಳೆದುಕೊಂಡವರಿಗೆ ಮನೆ ಕಟ್ಟಿಕೊಡಲು ಸರಕಾರ ಬದ್ಧವಾಗಿದೆ ಎಂದ ಸಚಿವರು ಅಲ್ಲಿಂದಲೇ ಜಿಲ್ಲಾಧಿಕಾರಿಗಳಿಗೆ ಕರೆ ಮಾಡಿ ಸ್ಥಳ ಗೊತ್ತು ಪಡಿಸುವಂತೆ ಸೂಚಿಸಿದರು. ಬ್ರೇಕ್‌ವಾಟರ್‌ ಕಾಮಗಾರಿಯಿಂದಾಗಿ ಗಂಗೊಳ್ಳಿ ಹಾಗೂ ಮರವಂತೆ ಬಂದರುಗಳಲ್ಲಿ ಹೂಳು ತುಂಬಿದ್ದು, ಅದನ್ನು ತೆರವು ಮಾಡಿ ದೋಣಿಗಳು ನಿಲ್ಲಲು ಅವಕಾಶ ಕಲ್ಪಿಸುವಂತೆ ಆದೇಶಿಸಿದರು. 

ಬಂದರು ಅಭಿವೃದ್ಧಿ: ಪರಿಶೀಲನೆ
ಗಂಗೊಳ್ಳಿ ತೀರಾ ಹಿಂದುಳಿದ ಬಂದರಾಗಿದ್ದು, ಈವರೆಗೆ ಎಲ್ಲ ಸರಕಾರಗಳು ನಿರ್ಲಕ್ಷ ವಹಿಸಿವೆ. ಇದರ ಅಭಿವೃದ್ಧಿಗೆ ಸುಮಾರು 10 ಕೋ.ರೂ. ಯೋಜನೆ ಸಿದ್ಧಪಡಿಸಿ ಪ್ರಸ್ತಾ ವನೆ ಸಲ್ಲಿಸಿದರೂ ಮನ್ನಣೆ ನೀಡಿಲ್ಲ ಎನ್ನುವ ಬೇಡಿಕೆಗೆ ಪ್ರತಿಕ್ರಿಯಿಸಿದ ಸಚಿವರು, ಕೂಡಲೇ ಪರಿಶೀಲಿಸಿ ಅಭಿವೃದ್ಧಿಗೆ ಯತ್ನಿಸಲಾಗುವುದು ಎಂದರು. 

Advertisement

ನಾಡದೋಣಿ ಮೀನುಗಾರರಿಗೆ ಈ ವರ್ಷವೂ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯಿಂದಲೇ ಸಬ್ಸಿಡಿ
ದರದಲ್ಲಿ ಸೀಮೆ ಎಣ್ಣೆ ಪೂರೈಸಲು ಸರಕಾರ ಕ್ರಮ ಕೈಗೊಂಡಿದೆ. ಭವಿಷ್ಯದಲ್ಲಿ ದೋಣಿಗಳಿಗೆ ಎಲೆಕ್ಟ್ರಾನಿಕ್‌ ಮೋಟಾರು ಅಳವಡಿಸಿ, ಮೀನುಗಾರರಿಗೆ ಒಪ್ಪಿಗೆಯಾದರೆ ಅದನ್ನು ಮುಂದುವರಿಸಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next