ಬೆಂಗಳೂರು: ಹೈದರಾ ಬಾದ್ ಹಾಗೂ ಹೊಸದಿಲ್ಲಿಯಲ್ಲಿ ಹಾವಳಿ ಎಬ್ಬಿಸುತ್ತಿದ್ದ ಚೀನ ಮೂಲದ ಲೋನ್ ಆ್ಯಪ್‌ನ ಬ್ಲ್ಯಾಕ್‌ಮೇಲ್ ಕಪಿಮುಷ್ಠಿಗೆ ಸಿಲುಕಿದ್ದ ಬೆಂಗಳೂರಿನ ಎಂಜಿನಿಯರಿಂಗ್ ವಿದ್ಯಾರ್ಥಿ ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬೆಂಗಳೂರಿನ ಜಾಲಹಳ್ಳಿ ಸಮೀಪದ ಎಚ್‌ಎಂಟಿ ಕ್ವಾಟ್ರಸ್ ನಿವಾಸಿ ತೇಜಸ್ (22) ಆತ್ಮಹತ್ಯೆ ಮಾಡಿಕೊಂಡವರು. ನಗರದ ಎಂಜಿನಿಯರಿಂಗ್ ಕಾಲೇಜೊಂದರಲ್ಲಿ ಮೆಕಾನಿಕಲ್ ವಿಭಾಗದಲ್ಲಿ 6ನೇ ಸೆಮಿಸ್ಟರ್‌ನಲ್ಲಿ ಓದುತ್ತಿದ್ದ ಈತ ತರಗತಿಗೆ ಟಾಪರ್ ಆಗಿದ್ದು, ಕೆಲವು ತಿಂಗಳ ಹಿಂದೆ ಸ್ನೇಹಿತ ಮಹೇಶ್‌ಗೆ ಸ್ಲೈಲ್ಸ್ ಪೇ, ಕಿಸಾತ್ ಹಾಗೂ ಕೋಟೆಕ್ ಎಂಬ ಆನ್‌ಲೈನ್ ಲೋನ್ ಆ್ಯಪ್‌ಗಳಲ್ಲಿ 15 ಸಾವಿರ ರೂ. ಸಾಲ ಪಡೆದು ಕೊಟ್ಟಿದ್ದ. ಆದರೆ ಮಹೇಶ್ ಸಾಲ ಮರುಪಾವತಿಸದ ಹಿನ್ನೆಲೆಯಲ್ಲಿ ಬಡ್ಡಿ ಸೇರಿ 46 ಸಾವಿರ ರೂ. ಬಾಕಿ ಉಳಿದುಕೊಂಡಿತ್ತು.
ಸಾಲ ಹಿಂದಿರುಗಿಸದ ಹಿನ್ನೆಲೆ ಯಲ್ಲಿ ಸಾಲ ನೀಡಿದ ಕಂಪೆನಿಯ ಸಿಬಂದಿ ತೇಜಸ್‌ನನ್ನು ಭೇಟಿಯಾಗಿ ಏಕವಚನದಲ್ಲಿ ಬೆದರಿಸಿದ್ದರು. ಯುವತಿಯ ಜತೆಗೆ ಅಶ್ಲೀಲ ಭಂಗಿಯಲ್ಲಿರುವ ಯುವಕನ ಫೋಟೊಗೆ ತೇಜಸ್ ಫೋಟೊವನ್ನು ಎಡಿಟ್ ಮಾಡಿ ಆತನ ವಾಟ್ಸ್‌ಆ್ಯಪ್‌ಗೆ ಕಳುಹಿಸಿದ್ದರು. ಬಡ್ಡಿ ಸಮೇತ ಸಾಲ ಹಿಂದಿರುಗಿಸದಿದ್ದರೆ ಅಶ್ಲೀಲ ಫೋಟೊಗಳನ್ನು ಸಾಮಾಜಿಕ ಜಾಲತಾಣ, ಕುಟುಂಬಸ್ಥರು, ಫೇಸ್‌ಬುಕ್ ಸ್ನೇಹಿತರಿಗೆ ಕಳುಹಿಸುವುದಾಗಿ ಬೆದರಿಸಿದ್ದರು. ಇದರಿಂದ ನೊಂದ ತೇಜಸ್ ಮಂಗಳವಾರ ಸಂಜೆ ಡೆತ್‌ನೋಟ್ ಬರೆದಿಟ್ಟು ತಾಯಿಯ ವೇಲ್‌ನಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತೇಜಸ್ ಕೊಠಡಿಯ ಬಾಗಿಲು ತೆಗೆಯದೇ ಇದ್ದಾಗ ಆತಂಕಗೊಂಡ ತಾಯಿ ಕೊಠಡಿಯೊಳಗೆ ಇಣುಕಿದಾಗ ಕೃತ್ಯ ಬೆಳಕಿಗೆ ಬಂದಿದೆ. ಜಾಲಹಳ್ಳಿ ಠಾಣೆ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲಿಸಿದಾಗ ಡೆತ್‌ನೋಟ್ ಪತ್ತೆಯಾಗಿತ್ತು.
ಡೆತ್‌ನೋಟ್‌ನಲ್ಲೇನಿದೆ ?
“ಅಮ್ಮ, ಅಪ್ಪ ನನ್ನನ್ನು ಕ್ಷಮಿಸಿಬಿಡಿ. ನಾನು ಮಾಡಿರುವ ತಪ್ಪಿಗೆ ಬೇರೆ ದಾರಿಯಿಲ್ಲ. ನನ್ನ ಹೆಸರಿನಲ್ಲಿ ಮಾಡಿರುವ ಸಾಲ ತೀರಿಸಲು ಆಗುತ್ತಿಲ್ಲ. ಅದಕ್ಕಾಗಿ ಇದು ನನ್ನ ಅಂತಿಮ ನಿರ್ಧಾರ. ಥ್ಯಾಂಕ್ ಯು ಗುಡ್ ಬೈ…’ ಎಂದು ಡೆತ್‌ನೋಟ್‌ನಲ್ಲಿ ಉಲ್ಲೇಖೀಸಿದ್ದಾನೆ.
ಬುಧವಾರವೂ ಬಂದಿದ್ದ ಸಿಬಂದಿ?
ಕನ್ನಡ ಒಕ್ಕೂಟದ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಆತ್ಮಹತ್ಯೆ ಮಾಡಿಕೊಂಡ ತೇಜಸ್ ತಂದೆಯ ಆಪ್ತ ಗಿರೀಶ್ ಗೌಡರು ಈ ಕುರಿತು “ಉದಯವಾಣಿ’ ಜತೆ ಮಾತನಾಡಿದ್ದು, “ಸಾಲ ಕೊಟ್ಟ ಆ್ಯಪ್‌ನ ಸಿಬಂದಿ ಮಂಗಳವಾರ ಬೆಳಗ್ಗೆಯೂ ತೇಜಸ್‌ಗೆ ಕಿರುಕುಳ ಕೊಟ್ಟಿದ್ದಾರೆ.