Advertisement

ಸರಕಾರಿ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ಆರಂಭಿಸಲು ಯೋಚನೆ

12:54 PM May 22, 2018 | |

ಧಾರವಾಡ: ಗ್ರಾಮ ಪಂಚಾಯತಿಗಳ ಸಹಕಾರದೊಂದಿಗೆ ಪ್ರತಿಯೊಂದೂ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಎಲ್‌
ಕೆಜಿ-ಯುಕೆಜಿ ತರಗತಿಗಳನ್ನು ಆರಂಭಿಸಲು ಯೋಜಿಸಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ವಾಯವ್ಯ ಕರ್ನಾಟಕ ಶೈಕ್ಷಣಿಕ ವಲಯದ ಅಪರ ಆಯುಕ್ತ ಮೇಜರ್‌ ಸಿದ್ದಲಿಂಗಯ್ಯ ಹಿರೇಮಠ ಹೇಳಿದರು.

Advertisement

ಇಲ್ಲಿಯ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಡೆಪ್ಯೂಟಿ ಚೆನ್ನಬಸಪ್ಪ ಸಮಾವೇಶ ಭವನದಲ್ಲಿ ಸೋಮವಾರ ಜರುಗಿದ ಶಿಕ್ಷಣ ಇಲಾಖೆಯ ಬೆಳಗಾವಿ ವಿಭಾಗ ಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇದಕ್ಕೆ ಪೂರಕವಾಗಿ 500 ಗ್ರಾಮಗಳ ಅಂಗನವಾಡಿ ಕೇಂದ್ರಗಳನ್ನು ಸರಕಾರಿ ಪ್ರಾಥಮಿಕ ಶಾಲಾ ಕಟ್ಟಡಗಳಿಗೆ ಸ್ಥಳಾಂತರಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು. 

ಬೆಳಗಾವಿ ವಿಭಾಗದಲ್ಲಿ 50ಕ್ಕಿಂತ ಕಡಿಮೆ ಮಕ್ಕಳನ್ನು ಹೊಂದಿರುವ ಒಟ್ಟು 4956 ಶಾಲೆಗಳಿದ್ದು, ಅಧಿಕಾರಿಗಳು ಈ ಗ್ರಾಮಗಳಿಗೆ ಭೇಟಿ ನೀಡಿ ಗ್ರಾಮದ ಹಿರಿಯರ ಜೊತೆ ಸಭೆ ನಡೆಸಿ ಶಾಲೆಗಳ ಸಬಲೀಕರಣಕ್ಕೆ ಅಗತ್ಯ ಕ್ರಮ ಕೈಕೊಳ್ಳಬೇಕು. ಸರಕಾರದಿಂದ ಬರುವ ಉಚಿತ ಸೌಲಭ್ಯಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು ಎಂದರು.

ಸಾರ್ವಜನಿಕ ಶಿಕ್ಷಣ ಇಲಾಖೆಯ ಎಲ್ಲ ಅಧಿಕಾರಿಗಳು ನಿತ್ಯವೂ ಒಂದು ಸರಕಾರಿ ಶಾಲೆಗೆ ಮುಂಜಾನೆ ಪ್ರಾರ್ಥನಾ ವೇಳೆಗೆ ಭೇಟಿ ನೀಡಿ ಮಾರ್ಗದರ್ಶನ ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ. ವಿಭಾಗದ ಎಲ್ಲ ಡಿಡಿಪಿಐ, ಬಿಇಒ, ವಿಷಯ ಪರಿವೀಕ್ಷಕರು, ಬಿಆರ್‌ಸಿ ಸಮನ್ವಯಾ ಧಿಕಾರಿಗಳು ಸೇರಿದಂತೆ ಎಲ್ಲಾ ಹಂತದ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಸರಕಾರಿ ಶಾಲೆಗೆ ಭೇಟಿ ನೀಡುವುದು ಒಂದು ಉಪಕ್ರಮವಾಗಿ ಹೊಸ ವಾತಾವರಣ ನಿರ್ಮಾಣಕ್ಕೆ ನಾಂದಿಯಾಗಲಿದೆ ಎಂದರು.

ಜಂಟಿ ನಿರ್ದೇಶಕ ಡಾ|ಬಿ.ಕೆ.ಎಸ್‌.ವರ್ಧನ್‌ ಮಾತನಾಡಿ, ಬಾಕಿ ಇರುವ ಕಡತಗಳ ವಿಲೇವಾರಿಗೆ ಅಗತ್ಯ ಕ್ರಮ ಕೈಕೊಳ್ಳಬೇಕು. ಶಿಕ್ಷಕ-ಶಿಕ್ಷಕಿಯರಿಗೆ ಲಭಿಸಬೇಕಾದ ಕಾಲಮಿತಿ ವೇತನ ಬಡ್ತಿ ಸೌಲಭ್ಯ ಸೇರಿದಂತೆ ಎಲ್ಲ ಆರ್ಥಿಕ ಸೌಲಭ್ಯ ಒದಗಿಸಬೇಕು. ತಿಂಗಳ 5ನೇ ದಿನಾಂಕದೊಳಗೆ ಶಿಕ್ಷಕರ ವೇತನ ಬಟವಡೆ ಪೂರ್ಣಗೊಳ್ಳಬೇಕು ಎಂದರು.

Advertisement

ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರಾದ ಪ್ರಸನ್ನಕುಮಾರ, ಮಮತಾ ನಾಯಕ, ರಾಜು ನಾಯಕ, ಉಪನಿರ್ದೇಶಕ ಎಂ.ಎಫ್‌. ಕುಂದಗೋಳ ಸೇರಿದಂತೆ ಬೆಳಗಾವಿ, ಬಾಗಲಕೋಟೆ, ವಿಜಯಪುರ, ಧಾರವಾಡ, ಗದಗ, ಹಾವೇರಿ, ಉತ್ತರಕನ್ನಡ, ಚಿಕ್ಕೋಡಿ ಹಾಗೂ ಶಿರಸಿ ಜಿಲ್ಲೆಗಳ ಡಿಡಿಪಿಐ, ಡಯಟ್‌ ಪ್ರಿನ್ಸಿಪಾಲ್‌, 59 ತಾಲೂಕುಗಳ ಬಿಇಒ ಸೇರಿದಂತೆ ವಿವಿಧ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು. ಹಿರಿಯ ಸಹಾಯಕ ನಿರ್ದೇಶಕ ಎ.ಎನ್‌. ಕಂಬೋಗಿ ಸ್ವಾಗತಿಸಿದರು. ಕಾರ್ಯಕ್ರಮ ಅಧಿಕಾರಿ ಶಾಂತಾ ಮಿಸೆ ನಿರೂಪಿಸಿದರು.

ಮಾನ್ಯತೆ ರದ್ದು ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಶೂನ್ಯ ಫಲಿತಾಂಶ ಸಂಪಾದನೆ ಮಾಡಿರುವ ಅನುದಾನಿತ ಹಾಗೂ ಅನುದಾನ ರಹಿತ ಪ್ರೌಢಶಾಲೆಗಳ ಮಾನ್ಯತೆ ರದ್ದುಪಡಿಸಲಾಗಿದೆ. ಸರಕಾರಿ ಪ್ರೌಢಶಾಲೆಗಳ ಫಲಿತಾಂಶ ಕಳಪೆ ಮಟ್ಟದ್ದಾದರೆ ಅಲ್ಲಿರುವ ಶಿಕ್ಷಕ ಹಾಗೂ ಶಿಕ್ಷಕಿಯರನ್ನು ಬೇರೆ ಜಿಲ್ಲೆಯ ದೂರದ ಶಾಲೆಗಳಿಗೆ ವರ್ಗಾವಣೆ ಮಾಡಲಾಗುವುದು ಎಂದು ಮೇಜರ್‌ ಸಿದ್ದಲಿಂಗಯ್ಯ ಹಿರೇಮಠ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next