Advertisement

ಧಾರ್ಮಿಕ ಪರಂಪರೆಯಿಂದ ಬದುಕು ಸಾರ್ಥಕ

02:59 PM May 04, 2019 | pallavi |

ಹಾವೇರಿ: ಧಾರ್ಮಿಕತೆ ಹಾಗೂ ಧಾರ್ಮಿಕ ಪರಂಪರೆಗಳನ್ನಿಟ್ಟುಕೊಂಡು ಬದುಕು ಕಟ್ಟಿಕೊಂಡಾಗ ಮಾತ್ರ ಜೀವನ ಸಾರ್ಥಕವಾಗುತ್ತದೆ ಎಂದು ಅಕ್ಕಿಆಲೂರ ವಿರಕ್ತಮಠದ ಶಿವಬಸವ ಸ್ವಾಮೀಜಿ ನುಡಿದರು.

Advertisement

ನಗರದ ಹರಸೂರು ಬಣ್ಣದಮಠದ ಮಲ್ಲಿಕಾರ್ಜುನ ಸ್ವಾಮೀಜಿಗಳ 34ನೇ ಪುಣ್ಯ ಸ್ಮರಣೋತ್ಸವ ಹಾಗೂ ಅಭಿನವರುದ್ರ ಚನ್ನಮಲ್ಲಿಕಾರ್ಜುನ ಸ್ವಾಮೀಜಿಗಳ 9ನೇ ವರ್ಧಂತಿ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ್ದ ಧರ್ಮೋತ್ತೇಜಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಧಾರ್ಮಿಕ ಕಾರ್ಯಗಳಲ್ಲಿ ನೀಡಲಾಗುವ ಸಂದೇಶಗಳನ್ನು ಮನವಿಟ್ಟು ಕೇಳುವುದರೊಂದಿಗೆ ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದಕ್ಕೆ ಮುಂದಾಗುವುದು ಇನ್ನು ಅಪರೂಪವಾಗುತ್ತಿದೆ. ಇಂದಿನ ಯುವ ಜನಾಂಗ ಧಾರ್ಮಿಕ ಕಾರ್ಯಗಳಿಂದ ದೂರವಾಗುತ್ತಿರುವುದು ವಿಷಾದನೀಯ. ಇದು ಹೀಗೆಯೇ ಮುಂದುವರಿದರೆ ಮುಂದಿನ ಜನಾಂಗಕ್ಕೆ ಧರ್ಮದ ಅರಿವೇ ಇರದೇ ಧರ್ಮ ಸಂಕಷ್ಟದಲ್ಲಿ ಸಿಲುಕುತ್ತದೆ. ಯುವ ಜನತೆಯೊಂದಿಗೆ ಮಕ್ಕಳನ್ನು ಧಾರ್ಮಿಕ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸುವುದು ಬಹಳ ಅವಶ್ಯಕವಾಗಿದೆ ಎಂದರು.

ಹಣದಿಂದ ಪುಸ್ತಕವನ್ನು ಕೊಳ್ಳಬಹುದೇ ಹೊರತು ವಿದ್ಯೆಯನ್ನು ಕೊಳ್ಳಲು ಸಾಧ್ಯವಿಲ್ಲ. ಹಣದಿಂದ ಔಷಧಿ ಕೊಳ್ಳಬಹುದೇ ಹೊರತು ಆರೋಗ್ಯವನ್ನು ಕೊಳ್ಳಲು ಆಗದು. ಹಣದಿಂದ ಸಂತೆಯಲ್ಲಿ ಏನೆಲ್ಲ ಕೊಳ್ಳಬಹುದು ಆದರೆ, ಭಕ್ತಿ ಕೊಳ್ಳಲಾಗದು. ಮಠಮಾನ್ಯಗಳಲ್ಲಿ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ಮಾತ್ರ ಭಕ್ತಿ ದೊರೆಯಲು ಸಾಧ್ಯ. ನಾವು ಮಾಡುವ ಧಾರ್ಮಿಕ ಪುಣ್ಯಕಾರ್ಯಗಳಿಂದ ನಮಗಲ್ಲದೆ ನಮ್ಮ ಮುಂದಿನ ಜನಾಂಗಕ್ಕೂ ದೊರೆಯುತ್ತದೆ. ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವಂತೆ ಹೇಳಿದರು.

ಸಮ್ಮುಖ ವಹಿಸಿ ಮಾತನಾಡಿದ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ, ವಿಶ್ವದ ಅನೇಕ ರಾಷ್ಟ್ರಗಳು ವಿವಿಧ ಕ್ಷೇತ್ರಗಳಲ್ಲಿ ಮುಂದುವರೆದಿರಬಹುದು. ಆದರೆ, ಆ ದೇಶಗಳಲ್ಲಿ ಧಾರ್ಮಿಕತೆ ಕುಸಿತವನ್ನು ಕಂಡಿದ್ದರೆ ಭಾರತದಲ್ಲಿ ಮಾತ್ರ ಧಾರ್ಮಿಕತೆಯೊಂದಿಗೆ ಭವ್ಯ ಭಾರತ ನಿರ್ಮಾಣವಾಗುತ್ತಿದೆ ಎನ್ನುವುದು ಕಂಡುಬರುತ್ತಿದೆ ಎಂದು ತಿಳಿಸಿದರು.

Advertisement

ಇಂದಿನ ತಾಂತ್ರಿಕ ಯುಗದಲ್ಲಿ ಆರ್ಥಿಕವಾಗಿ ಸದೃಢರಾದಂತೆ ಐಶಾರಾಮಿ ಜೀವನಕ್ಕೆ ಮಾರುಹೋಗಿ ಧಾರ್ಮಿಕ ಪರಂಪರೆ, ಸಂಸ್ಕೃತಿ, ಸಂಸ್ಕಾರ ಹಾಗೂ ಭಕ್ತಿಯನ್ನು ಮರೆಯುತ್ತಿದ್ದೇವೆ. ಉನ್ನತ ಜೀವನ ನಡೆಸುವುದರೊಂದಿಗೆ ಇವೆಲ್ಲವನ್ನು ಎಲ್ಲರೂ ಮತ್ತೆ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದರೊಂದಿಗೆ ಮುಂದಿನ ಜನಾಂಗಕ್ಕೂ ಕೊಡುಗೆ ಆಗಿ ನೀಡಬೇಕಾಗಿದೆ ಎಂದು ಹೇಳಿದರು.

ಸಾನ್ನಿಧ್ಯ ವಹಿಸಿ ಮಾತನಾಡಿದ ಕರ್ಜಗಿ ಗೌರಿಮಠ ಹಾಗೂ ನಗರದ ಗುರುಪಾದ ದೇವರ ಮಠದ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ, ಮಕ್ಕಳಿಗೆ ಆಸ್ತಿಯನ್ನು ಮಾಡದೇ ಅವರಿಗೆ ಉನ್ನತ ಶಿಕ್ಷಣ, ಧಾರ್ಮಿಕತೆ, ಸಂಸ್ಕೃತಿಯನ್ನು ಹಾಗೂ ಸಂಸ್ಕಾರ ನೀಡುವ ಮೂಲಕ ಅವರನ್ನೇ ಒಂದು ಆಸ್ತಿಯನ್ನಾಗಿ ಮಾಡಿರಿ ಎಂದರು.

ಅತಿಥಿಗಳ ಪರವಾಗಿ ನಗರಸಭೆ ಸದಸ್ಯ ಮಲ್ಲಿಕಾರ್ಜುನ ಸಾತೇನಹಳ್ಳಿ ಮಾತನಾಡಿ, ಟಿವಿ ಬಂದ ನಂತರ ಜನತೆ ವಿಶೇಷವಾಗಿ ಮಹಿಳೆಯರು ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೋಳ್ಳುವ ಸಂಖ್ಯೆ ಕ್ಷೀಣಿಸುತ್ತಿದೆ. ಟಿವಿಯಲ್ಲಿನ ದಾರವಾಹಿಗಳನ್ನು ನೋಡುವುದನ್ನು ಬಿಟ್ಟು ಇಂದಿನ ಧಾರ್ಮಿಕ ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರೂ ಧನ್ಯವಾದಗಳು ಎನ್ನುವ ಮೂಲಕ ಜನತೆ ಧಾರ್ಮಿಕ ಕಾರ್ಯಗಳಿಂದ ದೂರವಿರುವುದು ಮತ್ತು ಟಿವಿಯಲ್ಲಿನ ಧಾರವಾಹಿಗಳಿಗೆ ಎಷ್ಟು ಮಾರು ಹೋಗಿದ್ದಾರೆ ಎನ್ನುವುದನ್ನು ಸೂಚ್ಯವಾಗಿ ಹೇಳಿದರು.

ಹರಸೂರು ಬಣ್ಣದಮಠದ ಅಭಿನವರುದ್ರ ಚನ್ನಮಲ್ಲಿಕಾರ್ಜುನ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಮೂರು ದಿನಗಳ ಕಾರ್ಯಕ್ರಮ ಸಮಿತಿ ಅಧ್ಯಕ್ಷ ಜಗದೀಶ ಕನವಳ್ಳಿ, ಉಪಾಧ್ಯಕ್ಷ ಶಿವಯೋಗಿ ಹುಲಿಕಂತಿಮಠ, ನಿಕಟಪೂರ್ವ ಅಧ್ಯಕ್ಷ ಮಹಲಿಂಗಸ್ವಾಮಿ ಹಿರೇಮಠ, ನಗರಸಭೆ ಸದಸ್ಯರಾದ ರೇಣುಕಾ ಪುತ್ರನ್‌, ಚೈತ್ರಾ ಹತ್ತಿ, ಚೌಡೇಶ್ವರಿ ಮಹಿಳಾ ಮಂಡಳದ ಅಧ್ಯಕ್ಷೆ ಶಾಂತಾ ದಾವಣಗೆರೆ ಪ್ರಸ್ತಾವಿಕವಾಗಿ ಮಾತನಾಡಿದರು. ಗಿರಿಜಾ ಸಾತೇನಹಳ್ಳಿ ಸ್ವಾಗತಿಸಿದರು. ನಾಗರಾಜ ನಡುವಿನಮಠ ನಿರ್ವಹಿಸಿದರು. ಎಸ್‌ಆರ್‌ಎಸ್‌ ಸ್ವರ ರಾಗ ಸಂಗಮ ಕಲಾ ಬಳಗದಿಂದ ಸಂಗೀತ ಸಂಗೀತ ಸಂಜೆ ಕಾರ್ಯಕ್ರಮ ನಡೆಯಿತು.

ಪೃಥ್ವಿ ನೃತ್ಯ ಲೋಕದ ಕಲಾವಿದರು ನೃತ್ಯ ಪ್ರದರ್ಶಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next