ಹೆಮ್ಮಾಡಿ: ಬೈಂದೂರು ವಿಧಾನಸಭಾ ಕ್ಷೇತ್ರದ ಹೆಮ್ಮಾಡಿ ಗ್ರಾ.ಪಂ. ವ್ಯಾಪ್ತಿಯ ಕಟ್ಟುವಿನಲ್ಲಿ ಸುಬ್ರಾಯ ಆಚಾರ್ ಅವರ ಕುಟುಂಬ ಕಳೆದ 17 ವರ್ಷಗಳಿಂದ ಗುಡಿಸಲಲ್ಲಿಯೇ ವಾಸಿಸುತ್ತಿದೆ. ಆಶ್ರಯ ಯೋಜನೆಯಡಿ ಮನೆಗಾಗಿ ಅರ್ಜಿ ಸಲ್ಲಿಸಿದರೂ ಇನ್ನೂ ಮಂಜೂರಾಗಿಲ್ಲ. 5 ಜನರಿರುವ ಈ ಕುಟುಂಬ ಗುಡಿಸಲಲ್ಲಿ ಸಂಕಷ್ಟದ ಬದುಕು ಸಾಗಿಸುತ್ತಿದೆ.
ಈ ಕುಟುಂಬದ ಯಜಮಾನ ಸುಬ್ರಾಯ ಆಚಾರ್ ಅವರು ಹುಟ್ಟಿನಿಂದಲೇ ದೈಹಿಕ ನ್ಯೂನತೆ ಹೊಂದಿದ್ದು, ಪತ್ನಿ ಸತ್ಯವತಿ ಸುಬ್ರಾಯ ಆಚಾರ್ ಅವರು ಕೂಲಿ ಕೆಲಸ ಮಾಡಿಕೊಂಡು ಕುಟುಂಬದ ನಿರ್ವಹಣೆ ಮಾಡುತ್ತಿದ್ದಾರೆ. ಇವರಿಗೆ ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿ.
ಸೌಕರ್ಯ ವಂಚಿತ :
ಕೇಂದ್ರ ಸರಕಾರ ಬಡವರಿಗಾಗಿಯೇ ಉಜ್ವಲ ಯೋಜನೆಯಲ್ಲಿ ಗ್ಯಾಸ್ ಸಂಪರ್ಕ ಜಾರಿಗೆ ತಂದಿದ್ದರೂ ಇವರಿಗೆ ಮಾತ್ರ ಆ ಸೌಲಭ್ಯವೂ ಸಿಕ್ಕಿಲ್ಲ. ಪಂಚಾಯತ್‌ನಿಂದ ನಳ್ಳಿ ಸಂಪರ್ಕವಿದ್ದರೂ, ಸರಿಯಾಗಿ ಸರಬರಾಜು ಆಗದ ಕಾರಣ, ಬೆಳಗ್ಗೆ ಬೇರೆಯವರ ಮನೆಯಿಂದ ನೀರು ತರಬೇಕಾದ ಸ್ಥಿತಿ ಇವರದು. ಬಡವರಿಗಾಗಿಯೇ ಆಶ್ರಯ ಮನೆ ಯೋಜನೆ ಜಾರಿಗೆ ತಂದಿದ್ದರೂ ಇವರಿಗೆ ಮಾತ್ರ ಇನ್ನೂ ಸಿಕ್ಕಿಲ್ಲ. ಅಕ್ರಮ ಸಕ್ರಮ, ಕುಮ್ಕಿ ಭೂಮಿ ಹಕ್ಕು, 94ಸಿ, 94 ಸಿಸಿ ಎಲ್ಲ ಯೋಜನೆಗಳಿದ್ದರೂ, ಈ ಕುಟುಂಬ ಅರ್ಹವಾಗಿದ್ದರೂ ಇನ್ನೂ ಹಕ್ಕುಪತ್ರ ಸಿಕ್ಕಿಲ್ಲ.
ಕಳೆದ 17 ವರ್ಷದಿಂದ ನಮ್ಮ ಕುಟುಂಬ ಗುಡಿಸಲಲ್ಲ ವಾಸವಿದ್ದು, ಆಶ್ರಯ ಯೋಜನೆಯಡಿ ಮನೆಗೆ ಅರ್ಜಿ ಸಲ್ಲಿಸಿದ್ದರೂ, ಸಿಕ್ಕಿಲ್ಲ. ನನಗೆ ಕೆಲಸ ಮಾಡಲು ಆಗೋದಿಲ್ಲ. ಪತ್ನಿ ಕೂಲಿ ಮಾಡಿ ನಮ್ಮ ಸಾಕುವ ಜತೆ ನನ್ನ ಆರೋಗ್ಯ ನೋಡಿಕೊಳ್ಳುತ್ತಿದ್ದಾಳೆ. ಪ್ರತಿ ತಿಂಗಳು ಸಿಗುತ್ತಿದ್ದ ಅಂಗವಿಕಲ ಮಾಸಿಕ ವೇತನವೂ ಕಳೆದೊಂದು ವರ್ಷದಿಂದ ಸಿಕ್ಕಿಲ್ಲ. ಮನೆಯೊಂದು ಮಂಜೂರಾದರೆ ಅಷ್ಟೇ ಸಾಕು.
– ಸುಬ್ರಾಯ ಆಚಾರ್, ಹೆಮ್ಮಾಡಿ ಕಟ್ಟು ನಿವಾಸಿ
ಸುಬ್ರಾಯ ಆಚಾರ್ ಅವರ ಕುಟುಂಬ ಆಶ್ರಯ ಯೋಜನೆಯಡಿ ಅರ್ಜಿ ಕೊಟ್ಟ ಬಗ್ಗೆ ಮಾಹಿತಿಯಿಲ್ಲ. ಅರ್ಜಿ ಕೊಟ್ಟಲ್ಲಿ ಕೂಡಲೇ ಪರಿಶೀಲನೆ ನಡೆಸಿ, ಅನುದಾನ ಮಂಜೂರಾತಿಗೆ ಪ್ರಯತ್ನಿಸಲಾಗುವುದು.
– ಮಂಜು ಬಿಲ್ಲವ, ಹೆಮ್ಮಾಡಿ ಗ್ರಾ.ಪಂ. ಪಿಡಿಒ