Advertisement

ಸಾವಯವ ಕೃಷಿಗೆ ಜಾನುವಾರುಗಳೂ ಸಾಥ್‌

07:04 PM Feb 24, 2021 | Team Udayavani |

ವಿಜಯಪುರ: ಸಾವಯವ ಕೃಷಿ ಮಾಡಲು ಭೂಮಿಯಷ್ಟೇ ಮುಖ್ಯವಾಗಿ ಜಾನುವಾರುಗಳ ಲಭ್ಯತೆ ಅಗತ್ಯವಾಗಿದೆ. ಸಾವಯವನ್ನೇ ಉಸಿರಾಗಿಸಿಕೊಂಡಿರುವ ಜಿಲ್ಲೆಯ ರೈತರು ಆಧುನಿಕ ಕೃಷಿಯಲ್ಲಿ ಯಂತ್ರಗಳ ಬಳಕೆ ಆರಂಭಿಸಿದ್ದರೂ ಜಾನುವಾರುಗಳ ಮೇಲಿನ ಪ್ರೀತಿಯನ್ನು ಕಳೆದುಕೊಂಡಿಲ್ಲ. ಪರಿಣಾಮ ತನ್ನ ಸಂಗಾತಿಯಾದ ಗೋವು, ಎಮ್ಮೆ, ಕುರಿ-ಮೇಕೆ, ಕೋಳಿಗಳ ಸಾಕಾಣಿಕೆಯಲ್ಲೂ ಬಸವನಾಡಿನ ಅನ್ನದಾತ ಮುಂದಿದ್ದಾನೆ.

Advertisement

ವಿಜಯಪುರ ಜಿಲ್ಲೆಯಲ್ಲಿ ಸಾವಯವ ಕೃಷಿಗೆ ಹೆಚ್ಚಿನ ಆದ್ಯತೆ ನೀಡುತ್ತಿರುವ ರೈತರು ರಸಾಯನಿಕ ಬಳಕೆಗೆ ಒಗ್ಗಿಕೊಳ್ಳಲು ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಂಡಿಲ್ಲ. ಪರಿಣಾಮ ಪಾರಂಪರಿಕ ಕೃಷಿಯನ್ನು ಉಸಿರಾಡುತ್ತಿರುವ ಜಿಲ್ಲೆಯಲ್ಲಿ ರೈತರು ತಿಪ್ಪೆ ಗೊಬ್ಬರವನ್ನೇ ಕೃಷಿಯಲ್ಲಿ ಹೆಚ್ಚಾಗಿ ಬಳಸುತ್ತಿದ್ದಾರೆ.

ಹೀಗಾಗಿ ಜಿಲ್ಲೆಯಲ್ಲಿ ಕಳೆದ ವರ್ಷದ ನಡೆದ ದನ ಗಣತಿಯಲ್ಲಿ 2,02,111 ಆಕಳು-ಎತ್ತು, 1,77,079 ಎಮ್ಮೆ-ಕೋಣ, 3,47,070 ಕುರಿ, 5,69,098 ಮೇಕೆ,
19,462 ಹಂದಿ, 2,56,590 ಕೋಳಿಗಳೂ ಇವೆ. ರೈತರು ತಮ್ಮ ಬದುಕಿನ ಭಾಗವಾಗಿ ಸಾಕುವ ನಾಯಿಗಳಿಗೂ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದು, 42,372
ನಾಯಿಗಳು ಜಿಲ್ಲೆಯ ಅನ್ನದಾತನಿಗೆ ರಕ್ಷಣೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿವೆ.

ಜಿಲ್ಲೆಯಲ್ಲಿ ಸ್ಥಳೀಯ ಕೃಷ್ಣಾವ್ಯಾಲಿ, ದೇವಣಿ ಆಕಳು ಮಾತ್ರವಲ್ಲದೇ ಜಾನುವಾರುಗಳು ಮಾತ್ರವಲ್ಲದೇ ಗೀರ್‌, ಸಾಹೇವಾಲ್‌, ಕಾಂಕ್ರೇಜ್‌ ದೇಶಿ ಆಕಳು ತಳಿ,
ಮುರ್ರಾ, ಸುರತಿ ಎಮ್ಮೆ ತಳಿಗಳು ಜಿಲ್ಲೆಯ ಹೈನೋದ್ಯಮ ಬಲವರ್ಧನೆ ಮುಂದಾಗಿವೆ. ಜಿಲ್ಲೆಯ ರೈತರು ಉತ್ತರ ಭಾರತದ ಲಕ್ಷಾಂತರ ಮೌಲ್ಯದ ದೇಶಿ ತಳಿವಯ ವಿವಿಧ ಗೋವುಗಳು, ಎಮ್ಮೆ ಸಾಕಾಣಿಕೆ ಮೂಲಕ ಪ್ರಯೋಗದ ಜೊತೆಗೆ ನಿರೀಕ್ಷೆ ಮೀರಿ ಫಲಿತಾಂಶವನ್ನೂ ಪಡೆಯುತ್ತಿದ್ದಾರೆ.

ದೇಶಿಗೋವುಗಳ ಹಾಲು, ಮೊಸರು, ಮಜ್ಜಿಗೆ, ಬೆಣ್ಣೆ, ತುಪ್ಪ, ಸಗಣೆ, ಕುರುಳು, ಗೋಮೂತ್ರ, ಅರ್ಕ, ಅರ್ಕದ ಫಿನೈಲ್‌, ಸೊಳ್ಳೆಬತ್ತಿ ತಯಾರಿಕೆಯಂಥ ಉತ್ಪನ್ನಗಳಿಗೆ ಜಿಲ್ಲೆಯ ಆಚೆಗೂ ಮಾರುಕಟ್ಟೆ ಕಂಡುಕೊಂಡಿದ್ದಾರೆ ಜಿಲ್ಲೆಯ ದೇಶಿ ತಳಿ ಗೊವು ಸಂವರ್ಧಕರು. ಜಮುನಾಪಾರಿ, ಮಲಬಾರಿ, ಸೋಜತ್‌, ಸ್ಮಾನಾಬಾದಿ, ಕೆಂಗುರಿ, ಬಂಡೂರು, ನಾರಿಸುವರ್ಣ ಹೀಗೆ ವಿವಿಧ ತಳಿಯ ಮೇಕೆ-ಕುರಿಗಳ ತಳಿಗಳನ್ನು ಆಧುನಿಕ ಪದ್ಧತಿಯಲ್ಲಿ ಸಾಕಿ, ಸಾವಯವ
ಕೃಷಿಗೆ ಬೇಕಾದ ಪರಿಶುದ್ಧ ಗೊಬ್ಬರ ಕೊಡುವಲ್ಲಿ ಜಿಲ್ಲೆಯ ರೈತ ಹೆಚ್ಚಿನ ಆಸಕ್ತಿ ತೋರುತ್ತಿದ್ದಾನೆ. ಇದರೊಂದಿಗೆ ಜೊತೆಗೆ ಸಾವಯವ ಕೃಷಿಗೆ ಅಗತ್ಯ ಇರುವ ಗೊಬ್ಬರ ಪೂರೈಕೆಯಲ್ಲಿ ಜಿಲ್ಲೆ ರೈತರು ವಿಶೇಷ ಆಸಕ್ತಿ ತೋರುತ್ತಿದ್ದಾರೆ.

Advertisement

ಇದಲ್ಲದೇ ಕೃಷಿಕರ ಪಾಲಿಗೆ ರಕ್ಷಕನಾಗಿ ಕೆಲಸ ಮಾಡುವ ವಿವಿಧ ತಳಿಗಳ ಶ್ವಾನಗಳೂ ಜಿಲ್ಲೆಯಲ್ಲಿ ಅಭಿವೃದ್ಧಿ ಆಗುತ್ತಿವೆ. ವಿದೇಶಿ ತಳಿಯ ಜರ್ಮನ್‌ ಶಫರ್ಡ್‌, ಜರ್ಮನ್‌ ಶಾಥೈರ್ಡ್‌ ಪಾಯಿಂಟರ್‌, ಲ್ಯಾಬ್ರೋಡರ್‌, ಗೋಲ್ಡನ್‌ ರಿಟ್ರೀವರ್‌, ಫ್ರೆಚ್‌ ಬುಲ್‌ ಡಾಗ್‌, ಬುಲ್‌ ಡಾಗ್‌, ಪುಡಲ್‌, ರ್ಯಾಟ್‌ ವಿಲ್ಲರ್‌ ಮಾತ್ರವಲ್ಲದೇ ಭಾರಿ ಸೇನೆಯಲ್ಲಿ ಜಿಲ್ಲೆಯ ಕೀರ್ತಿ ಹೆಚ್ಚಿಸಿರುವ ಮುಧೋಳ ತಳಿ, ತಮಿಳುನಾಡಿನ ಕೊಂಬೈ ತಳಿ ನಾಯಿಗಳು ಜಿಲ್ಲೆಯ ರೈತರ ಮನೆಗಳಲ್ಲಿ ಪ್ರೀತಿಪಾತ್ರವಾಗಿ ಬೆಳೆಯುತ್ತಿವೆ.

ಕೇಂದ್ರ ಸರ್ಕಾರ ಆಧಾರ್‌ ಯೋಜನೆ ಮಾದರಿಯಲ್ಲಿ ದೇಶದ ಜಾನುವಾರುಗಳಿಗೂ 12 ಅಂಕಿಗಳ ಇನಾಫ್‌ ಯೋಜನೆಯನ್ನು ಜಿಲ್ಲೆ ನೀಡಿದೆ. ಆಕಳು, ಎತ್ತು, ಎಮ್ಮೆ, ಕೋಣ, ಮೇಕೆ, ಕುರಿ ಸೇರಿದಂತೆ ಎಲ್ಲ ರೀತಿಯ ಜಾನುವಾರುಗಳಿಗೆ ಆಧಾರ್‌ ಮಾದರಿಯಲ್ಲಿ ಇನಾಫ್‌ (ಇನಾ ರ್ಮೇಶನ್‌ ನೆಟ್‌ವರ್ಕ್‌ ಫಾರ್‌ ಎನಿಮಲ್‌
ಪ್ರೊಡಕ್ಷನ್‌-ಹೆಲ್ತ್‌) ಎಂಬ ಯೋಜನೆ ಜಾರಿಗೆ ತಂದಿದೆ. ಇದರಿಂದ ಪ್ರತಿ ಜಾನುವಾರು ಆಧಾರ್‌ ಮಾದರಿಯಲ್ಲಿ ಇನಾಫ್‌ ನೋಂದಣಿ ಸಂಖ್ಯೆ ಲಭ್ಯವಾಗಲಿದೆ.
ಕರ್ನಾಟಕದಲ್ಲಿ ಮೊದಲ ಹಂತದಲ್ಲಿ 17 ಜಿಲ್ಲೆಗಳಲ್ಲಿ ಇನಾಫ್‌ ಯೋಜನೆ ಅನುಷ್ಠಾದ ಪಟ್ಟಿಯಲಿ ವಿಜಯಪುರ ಆಯ್ಕೆಯಾಗಿರುವುದು ಇಲ್ಲಿನ ಜಾನುವಾರುಗಳ
ಸಂಖ್ಯೆಗಳಿಂದಲೇ.

ಜಾನುವಾರುಗಳಿಗೆ ತುರ್ತು ಆರೋಗ್ಯ ಸೇವೆ ನೀಡಲು 108 ಆಂಬ್ಯುಲೆನ್ಸ್‌ ಸೇವೆ ಮಾದರಿಯಲ್ಲಿ ಪಶು ಸಂಜೀವಿನಿ ಆಂಬ್ಯುಲೆನ್ಸ್‌ ಸೇವೆ ಆರಂಭಿಸಿದೆ. ರಾಜ್ಯದಲ್ಲೇ ಮೊಟ್ಟ ಮೊದಲ ಬಾರಿಗೆ ಮೊದಲ ಹಂತದಲ್ಲಿ ಆಯ್ಕೆಯಾದ 15 ಜಿಲ್ಲೆಗಳಲ್ಲಿ ವಿಜಯಪುರ ಜಿಲ್ಲೆ ಒಂದಾಗಿದೆ.

ಯಾವುದೇ ಜಾನುವಾರು ಅನಾರೋಗ್ಯಕ್ಕೆ ಸಿಕ್ಕು ತುರ್ತು ಆರೋಗ್ಯ ಸೇವೆಯ ಅಗತ್ಯವಿದ್ದರೆ ಪಶು ಸಂಜೀವಿನಿ-1962 ಸಂಖ್ಯೆಗೆ ಕರೆ ಮಾಡಿದರೆ ನುರಿತ-ತಜ್ಞ
ಪಶು ವೈದ್ಯರು ರೈತರ ಮನೆ ಬಾಗಿಲಿಗೆ ಬಂದು ರೋಗ ಪೀಡಿತ ಜಾನುವಾರುಗಳಿಗೆ ಚಿಕಿತ್ಸೆ ನೀಡುತ್ತಾರೆ. ಪಶು ಸಂಜೀವಿನಿ ಯೋಜನೆ ಪಟ್ಟಿಗೆ ವಿಜಯಪುರ ಜಿಲ್ಲೆಯೂ ಸೇರಲು ಇಲ್ಲಿರುವ ಅನ್ನದಾತರ ಜಾನುವಾರುಗಳ ಮೇಲಿನ ಮಮಕಾರವೂ ಕಾರಣ ಎಂಬುದು ಗಮನೀಯ.

ಜಿಲ್ಲೆಯಲ್ಲಿ ಸಾವಯವ ಕೃಷಿಗೆ ಪೂರಕವಾಗಿ ರೈತರು ಕೃಷಿ ಉಪ ಕಸಬುಗಳಾದ ಹೈನುಗಾರಿಕೆ, ಕುರಿ-ಮೇಕೆ ಸಾಕಾಣಿಕೆ, ಕೋಳಿ ಸಾಕಾಣಿಕೆ ಮಾಡುತ್ತಿದ್ದು ಎಲ್ಲ
ಜಾನುವಾರುಗಳ ಗೊಬ್ಬರಕ್ಕೆ ಭಾರಿ ಬೇಡಿಕೆ ಇದೆ. ಹೀಗಾಗಿ ಜಿಲ್ಲೆಯ ರೈತರು ತಮಗೇ ಅರಿವಿಲ್ಲದಂತೆ ಸಾವಯವ ಕೃಷಿಗೆ ಪೂರಕವಾದ ಜಾನುವಾರುಗಳ ಸಾಕಾಣಿಕೆ ಮೂಲಕ ಬಸವನಾಡನ್ನು ಪಾರಂಪರಿಕ ಸಾವಯವ ಕೃಷಿಯಲ್ಲಿ ಉಳಿಸಿಕೊಂಡಿದ್ದಾನೆ. ಜಿಲ್ಲೆಗೆ ಸಾವಯವ ಕೃಷಿ ವಿಶ್ವವಿದ್ಯಾಲಯ ಸ್ಥಾಪಿಸಿದಲ್ಲಿ ಜಾನುವಾರುಗಳ ಹೈನೋದ್ಯಮ, ಕುರಿ-ಮೇಕೆ ಸಾಕಾಣಿಕೆ ಸಾಕಾಣಿಕೆ ಸೇರಿದಂತೆ ಕೃಷಿ ಪೂರಕ ಉಪ ಕಸಬುಗಳು ಜಿಲ್ಲೆಯ ರೈತರ ಜೀವನ ರೂಪಿಸುವಲ್ಲಿ ಆರ್ಥಿಕ ಶಕ್ತಿ ನೀಡಲಿವೆ.

ಕೇವಲ ಮಣ್ಣು-ನೀರಿದ್ದರೆ ಸಾವಯವ ಕೃಷಿ ಅಸಾಧ್ಯ. ಪಾರಂಪರಿಕ ಕೃಷಿ ಪದ್ಧತಿಗೆ ಪೂರಕವಾದ ಹೈನು, ಕುರಿ-ಮೇಕೆ, ಕೋಳಿ ಸಾಕಾಣಿಕೆಯಂಥ ಕೃಷಿ ಉಪ ಕಸಬುಗಳು ಜಿಲ್ಲೆಯ ರೈತರು ಬದುಕಿನ ಭಾಗವಾಗಿವೆ. ಸಾವಯವ ಕೃಷಿ ವಿಶ್ವವಿದ್ಯಾಲಯ ಸ್ಥಾಪನೆಗೆ ಸೂಕ್ತ ಹಾಗೂ ಯೋಗ್ಯ ಸ್ಥಳವಾದ ವಿಜಯಪುರ ಜಿಲ್ಲೆಗೆ ಸರ್ಕಾರ ಅವಕಾಶ ನೀಡಬೇಕು.
ಸಿದ್ದಪ್ಪ ಭೂಸಗೊಂಡ
ಮಾದರಿ ಸಾವಯವ ಕೃಷಿಕ, ತಿಕೋಟಾ

ವಿಜಯಪುರ ರೈತರು ಈಚೆಗೆ ಕೃಷಿ ಉಪ ಕಸಬುಗಳಲ್ಲಿ ದೇಶದ ಎಲ್ಲ ತಳಿಗಳ ಆಕಳು, ಎಮ್ಮೆ, ಮೇಕೆ, ಕುರಿ, ಖಡಕನಾಥ ಕೋಳಿಗಳಂಥ ಎಲ್ಲ ಪ್ರಾಣಿ-ಪಕ್ಷಿಗಳನ್ನು ಸಾಕಾಣಿಕೆ ಮಾಡುತ್ತಿದ್ದಾರೆ. ಏನೆಲ್ಲ ಸಂಕಷ್ಟಗಳ ಮಧ್ಯೆ ದೇಶಿ ಕೃಷಿ ಯನ್ನು ಜೀವಂತ ಇರಿಸಿಕೊಂಡಿರುವ ವಿಜಯಪುರ ಜಿಲ್ಲೆಗೆ ಸಾವಯವ ಕೃಷಿ ವಿಶ್ವವಿದ್ಯಾಲಯ ಸ್ಥಾಪನೆ ಅಗತ್ಯವಾಗಿ ಬೇಕಿದೆ.
ಅಶ್ವಿ‌ನಿ ರಡ್ಡಿ
ಗೀರ್‌ ತಳಿ ಗೋವು ಸಂರಕ್ಷಕಿ, ಮನಗೂಳಿ

ಜಿ.ಎಸ್‌. ಕಮತರ

Advertisement

Udayavani is now on Telegram. Click here to join our channel and stay updated with the latest news.

Next