ಮಂಗಳೂರು: ಅಟ್ಲಾಂಟಿಕ್ ಮಹಾಸಾಗರದಲ್ಲಿ 22 ದಿನಗಳಿಂದ ಹಡಗಿನಲ್ಲೇ ದಿನ ಕಳೆಯುತ್ತಿದ್ದೇವೆ. ಕೋವಿಡ್19 ಭೀತಿಯಿಂದ ಅಮೆರಿಕ ಅಥವಾ ಹತ್ತಿರದ ಬೇರೆ ಯಾವ ದೇಶದ ಬಂದರಿಗೂ ಪ್ರವೇಶಾವಕಾಶ ಇಲ್ಲ. ಭಾರತ ಸರಕಾರ ನಮ್ಮನ್ನು ಇಲ್ಲಿಂದ ಪಾರು ಮಾಡಲಿ, ತಾಯ್ನಾಡಿಗೆ ಮರಳಲು ಅವಕಾಶ ಮಾಡಿಕೊಡಲಿ…
-ಇದು ಅಮೆರಿಕದ ಮಯಾಮಿ ಸಿಟಿಯಲ್ಲಿ ರಾಯಲ್ ಕೆರಿಬಿಯನ್ ಕ್ರೂಝ್ ವಿಲಾಸಿ ನೌಕಾಯಾನ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕು ಕಲ್ಲಡ್ಕ ನಿವಾಸಿ ಜಯಪ್ರಕಾಶ್ ಅವರ ನೋವು ತುಂಬಿದ ವಿನಂತಿ.
ಸಾಗರ ಮಧ್ಯದಿಂದಲೇ ಜಯಪ್ರಕಾಶ್ “ಉದಯವಾಣಿ’ ಜತೆಗೆ ದೂರವಾಣಿಯಲ್ಲಿ ಮಾತನಾಡಿದರು. ಆರು ವರ್ಷ ಗಳಿಂದ ಅಮೆರಿಕದ ಕ್ರೂಝ್ ಹಡಗಿನಲ್ಲಿ ಕೆಲಸ ಮಾಡು ತ್ತಿದ್ದೇನೆ. ಕೋವಿಡ್ 19 ಕಾಟಕ್ಕೆ ಮುನ್ನ ನಮ್ಮ ಜೀವನ ಚೆನ್ನಾಗಿತ್ತು. ಆರು ತಿಂಗಳಿಗೊಮ್ಮೆ ತಾಯ್ನಾಡಿಗೆ ಬರುತ್ತಿದ್ದೆ. ಈಗ ನಮ್ಮ ಜೀವನಕ್ಕೆ ಬಹುದೊಡ್ಡ ಸಂಕಟ ಎದುರಾಗಿದೆ. ನಾವು ಈಗ ಹಡಗಿನಿಂದ ಹೊರ ಬರಲಾರದೆ ಸಮಸ್ಯೆಯಲ್ಲಿದ್ದೇವೆ. ಭಾರತ ಸರಕಾರ ನಮ್ಮನ್ನು ಇಲ್ಲಿಂದ ಏರ್‌ಲಿಫ್ಟ್ ಮಾಡಿ ತಾಯ್ನಾಡು ಸೇರುವ ಅವಕಾಶ ಕಲ್ಪಿಸಬೇಕು ಎಂದರು ಜಯಪ್ರಕಾಶ್.
“ನಾವಷ್ಟೇ ಬಾಕಿ!’
ಹಲವು ದೇಶದವರು ನಮ್ಮ ಜತೆಗಿದ್ದರು. ಆಯಾ ಸರಕಾರ ಗಳು ಅವರೆಲ್ಲರನ್ನೂ ವಾಪಸ್ ಕರೆಸಿಕೊಂಡಿವೆ. ಬಾಕಿ ಇರುವ ನಮ್ಮನ್ನು ಚಾರ್ಟರ್ಡ್ ವಿಮಾನದ ಮೂಲಕ ಕಳುಹಿಸಿ ಕೊಡಲು ಕಂಪೆನಿಯೂ ಸಿದ್ಧವಿದೆ. ಆದರೆ ಭಾರತದಲ್ಲಿ ಲಾಕ್‌ಡೌನ್ ಕಾರಣದಿಂದ ಅನು ಮತಿ ಸಿಗ ತ್ತಿಲ್ಲ. ಕೇಂದ್ರ ಸರಕಾರ ವಿಶೇಷ ಮುತುವರ್ಜಿ ವಹಿಸಿ ನಮ್ಮನ್ನು ಕರೆಸಿಕೊಳ್ಳಬೇಕು. – ಜಯಪ್ರಕಾಶ್,
ಬಂಟ್ವಾಳ ಮೂಲದ ಕ್ರೂಝ್ ಉದ್ಯೋಗಿ