Advertisement

ಪ್ರೀತಿ-ವಿಶ್ವಾಸದಿಂದ ಸಾಮರಸ್ಯದ ಬದುಕು: ಸಿರಿಗೆರೆ ಶ್ರೀ

04:57 PM Sep 12, 2022 | Team Udayavani |

ಹರಿಹರ: ಮಾನವ ಸಂಬಂಧಗಳಲ್ಲಿ ಪರಸ್ಪರ ಪ್ರೀತಿ, ವಿಶ್ವಾಸಗಳಿದ್ದಾಗ ಮಾತ್ರ ಸಾಮರಸ್ಯದ ಬದುಕು ಸಾಧ್ಯ ಎಂದು ಸಿರಿಗೆರೆ ತರಳಬಾಳು ಪೀಠದ ಜಗದ್ಗುರು ಡಾ| ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

Advertisement

ತಾಲೂಕಿನ ಕೊಂಡಜ್ಜಿ ಗ್ರಾಮದಲ್ಲಿ ಲಿಂಗೈಕ್ಯ ಶಿವಕುಮಾರ ಶ್ರೀಗಳ 30ನೇ ಶ್ರದ್ಧಾಂಜಲಿ ಕಾರ್ಯಕ್ರಮದ ದಾಸೋಹಕ್ಕೆ ನಡೆದ ಭಕ್ತಿ ಸಮರ್ಪಣಾ ಸಮಾರಂಭದ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು. ಇಂದು ಸಂಬಂಧಗಳು ವ್ಯಾವಹಾರಿಕವಾಗುತ್ತಿದ್ದು, ಜಾತಿ, ಮತ ಬೇಧಗಳೇ ವಿಜೃಂಭಿಸುತ್ತಿವೆ. ಎಲ್ಲರ ದೇಹದಲ್ಲಿ ಹರಿಯುವುದು ಒಂದೇ ರಕ್ತ. ಮಾನವ ಧರ್ಮ ಎಲ್ಲಕ್ಕಿಂತ ದೊಡ್ಡದು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು.

ಧರ್ಮ ಕಾರ್ಯದಲ್ಲಿ ಸ್ವಾರ್ಥವಿರಬಾರದು, ರಾಜಕೀಯ ಸೇರಬಾರದು. ಲಿಂಗೈಕ್ಯ ಗುರುಶಾಂತ ದೇಶೀಕೇಂದ್ರ ಶ್ರೀಗಳು ಸಮಾಜ ಸುಧಾರಣೆಗೆ ಅವಿರತವಾಗಿ ಶ್ರಮಿಸಿದರು. ಅವರ ಮಾರ್ಗದದಲ್ಲೇ ನಡೆದ ಶಿವಕುಮಾರ ಶ್ರೀಗಳಿಂದ ಸಮಾಜದ ಅಭಿವೃದ್ಧಿಯಾಗಿದೆ ಎಂದರು. ಕಾರ್ಯಕ್ರಮದಲ್ಲಿ ರಕ್ತದಾನ ಮತ್ತು ಆರೋಗ್ಯ ಶಿಬಿರ ಹಮ್ಮಿಕೊಳ್ಳುವ ಮೂಲಕ ಹೊಸ ಮಾದರಿಯನ್ನು ಸಮಾಜಕ್ಕೆ ಪರಿಚಯಿಸುತ್ತಿದ್ದೇವೆ.ಕೊರೊನಾ ನಿಮಿತ್ತ ಎರಡು ವರ್ಷಗಳ ಹಿಂದೆ ನಡೆಯಬೇಕಿದ್ದ ಕಾರ್ಯಕ್ರಮ ಈಗ ನಡೆಯುತ್ತಿದೆ.ಕೊಂಡಜ್ಜಿ ಭಕ್ತರು ನೀಡಿರುವ ಸೇವೆ ಮಠಕ್ಕೆ ಅರ್ಪಣೆಯಾಗಿದೆ ಎಂದು ತಿಳಿಸಿದರು.

ಶಾಸಕ ಎಸ್‌. ರಾಮಪ್ಪ ಮಾತನಾಡಿ,ಸಿರಿಗೆರೆ ಶ್ರೀಗಳು ಒಂದು ಸಮಾಜದ ಪೀಠಾಧಿಪತಿಯಾಗಿದ್ದರೂ ಎಲ್ಲ ವರ್ಗದ ಜನರಿಗೆ ನೀರುಣಿಸುವ ಕಾರ್ಯ ಮಾಡಿದ್ದಾರೆ. ಜಾತಿ, ಮತ ಬೇಧವಿಲ್ಲದೆ ಎಲ್ಲರ ಕಷ್ಟಕ್ಕೆ ಸ್ಪಂದಿಸುವ, ಭಕ್ತರಲ್ಲಿ ಏನೇ ವಿವಾದಗಳಿದ್ದರೂ ನ್ಯಾಯಸಮ್ಮತವಾಗಿ ಇತ್ಯರ್ಥಪಡಿಸುವ ನ್ಯಾಯಾಧೀಶರ ಪಾತ್ರ ನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಎಸ್‌.ಎಂ. ವೀರೇಶ್‌ ಮಾತನಾಡಿ, ಸರ್ಕಾರಗಳು ಮಾಡದ ಸೇವಾ ಕಾರ್ಯ ಶ್ರೀಗಳಿಂದ ಆಗುತ್ತಿದೆ. ಭಕ್ತರ ಸಂಕಷ್ಟಗಳನ್ನು ಸೂಕ್ಷ್ಮವಾಗಿ ಗಮನಿಸಿ ಅದಕ್ಕೆ ಪರಿಹಾರ ನೀಡುವ ವಿಶಿಷ್ಟ ಕೈಂಕರ್ಯ ಸ್ವಾಮೀಜಿಯಿಂದ ಆಗುತ್ತಿದೆ ಎಂದು ಬಣ್ಣಿಸಿದರು. ತರಳಬಾಳು ಕೃಷಿ ಕೇಂದ್ರದ ಮುಖ್ಯಸ್ಥ ದೇವರಾಜ್‌ ಮಾತನಾಡಿ, ಶ್ರೀಗಳು ಶಿಕ್ಷಣದ ಜೊತೆಯಲ್ಲಿ ಬರ ಪ್ರದೇಶದ ಕೆರೆಗಳಿಗೆ ನೀರು ತುಂಬಿಸುವ ಮಹಾತ್ಕಾರ್ಯಕ್ಕೆ ಮುಂದಾಗಿದ್ದಾರೆ. ಪೀಠದಿಂದ ಕೃಷಿ ವಿಜ್ಞಾನ ಕೇಂದ್ರ ಸ್ಥಾಪಿಸಿ ಎಲ್ಲಾ ರೈತರಿಗೆ ಅನುಕೂಲ ಮಾಡಿಕೊಟ್ಟಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.

Advertisement

ಭಕ್ತರು ಶ್ರೀಮಠಕ್ಕೆ 50 ಕ್ವಿಂಟಾಲ್‌ ತೊಗರಿಬೇಳೆ ಸಮರ್ಪಿಸಿದರು. 40 ಯುವಕರು ರಕ್ತದಾನ ಮಾಡಿದರು. ನಂತರ ತಜ್ಞ ವೈದ್ಯರ ತಂಡದಿಂದ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ 980 ಜನರು ಭಾಗವಹಿಸಿದ್ದರು. ಸಾಧು ವೀರಶೈವ ಲಿಂಗಾಯತ ಸಮಾಜದ ತಾಲೂಕು ಅಧ್ಯಕ್ಷ ಮಹಾದೇವಪ್ಪ ಗೌಡ್ರು, ಉಪಾಧ್ಯಕ್ಷ ಹಲಸಬಾಳು ಶಿವಾನಂದಪ್ಪ, ಪ್ರಧಾನ ಕಾರ್ಯದರ್ಶಿ ನಿಟ್ಟೂರು ಶಿವಣ್ಣ ಇಟಿಗಿ, ಬಸವನಗೌಡ, ಕಸಾಪ ಜಿಲ್ಲಾಧ್ಯಕ್ಷ ವಾಮದೇವಪ್ಪ, ಮುಖಂಡರಾದ ನಿಖಿಲ್‌ ಕೊಂಡಜ್ಜಿ, ಗೌಡ್ರು ಸಂಗಪ್ಪ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next