ಜೀವನ ಎಂದರೆ ಸಾವಿರಾರು ಅಮೂಲ್ಯ ನೆನಪುಗಳ ಒಂದು ಗುಚ್ಚ. ಜೀವನದ ಪ್ರತಿಯೊಂದು ಎಳೆಯ ನಮಗೆ ಒಂದೊಂದು ಪಾಠವನ್ನು ಕಲಿಸಿಕೊಡುತ್ತದೆ. ಸಂತೋಷದ ಕ್ಷಣಗಳು ಖುಷಿಯನ್ನು ಕೊಟ್ಟರೆ, ದುಃಖ ಕ್ಷಣಗಳು ಮುಂದಿನ ಜೀವನಕ್ಕೆ ದಾರಿಯನ್ನು ತೋರಿಸುತ್ತದೆ. ಇಂತಹ ಒಂದು ನೆನಪಿನ ಸಾಗರದಲ್ಲಿ ನಾವು ನಾವಾಗಿ ಮತ್ತು ನಮಗಾಗಿ ಬದುಕಬೇಕು.
ಇನ್ನೊಬ್ಬರನ್ನು ನೋಡಿ ಅವರು ಹಾಗೆ ಯಾಕೆ ನಾವಿಲ್ಲ ಎಂಬ ಪ್ರಶ್ನೆ ನಮ್ಮಲ್ಲಿ ಬರಬಾರದು, ಅಥವಾ ಅವರೇನು ಅನ್ನುತ್ತಾರೋ ಇವರೇನು ಅನ್ನುತ್ತಾರೋ ಎಂಬ ವಿಷಯಗಳಿಗೆ ತಲೆಕೂಡಿಸಿಕೊಳ್ಳಬಾರದು ಇನ್ನೊಬ್ಬರನ್ನು ನೋಡಿ ನಾವು ನಮ್ಮನ್ನು ಅವರೊಂದಿಗೆ ಹೋಲಿಸಿಕೊಳ್ಳಬಾರದು. ಅವರಿಗೆ ಜಾಸ್ತಿ ಅಂಕ ಬಂತು ನನಗೆ ಕಡಿಮೆ, ಅವರ ಬಳಿ ಶ್ರೇಷ್ಠ ಬಟ್ಟೆ ಇದೆ ನನ್ನ ಬಳಿ ಇಲ್ಲ, ಅಥವಾ ಅವರ ಚರ್ಮ ಬಿಳಿ ನಾವು ಕಪ್ಪು ಬಣ್ಣ ದೇಹ ಉಡುಗೆ ತೊಡುಗೆ ಯಾವುದರ ಬಗ್ಗೆಯೂ ಅಂದರೆ ನಮ್ಮ ಬಗ್ಗೆ ನಾವು ಕೆಟ್ಟದಾಗಿ ಯೋಚಿಸಬಾರದು. ಮೊದಲು ನಮ್ಮನ್ನು ನಾವು ಪ್ರೀತಿಸಲು ಗೌರವಿಸಲು ಕಲಿಯಬೇಕು ಜೀವನದಲ್ಲಿ ನಮ್ಮಲ್ಲಿರುವ ವಸ್ತುಗಳಿಂದ ನೆಮ್ಮದಿಯನ್ನು ಕಾಣಬೇಕು.
ಯಾವಾಗ ನಾವು ನಾವಾಗಿ ಬದುಕುತ್ತೇವೆ ನಮಗಾಗಿ ಬದುಕುತ್ತೇವೆ ಅವಾಗ ನಾವು ಎಲ್ಲ ಒಳ್ಳೆಯ ಶಕ್ತಿಯನ್ನು ನಮ್ಮೆಡೆಗೆ ಎಳೆಯುತ್ತೇವೆ. ಸಮಾಜದ ಮೇಲೆ ಟಿಕೆ ಟಿಪ್ಪಣಿ ಇದ್ದೇ ಇರುತ್ತದೆ ಅದನ್ನು ಅ ಗೌರವ ಎಂದು ಭಾವಿಸದೆ ಅದು ಅವರ ಅಭಿಪ್ರಾಯ ಎಂದುಕೊಳ್ಳಬೇಕು. ಆದ್ದರಿಂದ ಯಾವುದೇ ಬಣ್ಣ ,ಆಕಾರ, ಜಾತಿ ಧರ್ಮ ಅದರಲ್ಲಿ ನಮ್ಮನ್ನು ನಾವು ಗೌರವಿಸಬೇಕು ಪ್ರೀತಿಸಬೇಕು ನಾವು ನಮಗಾಗಿ ಮತ್ತು ನಮ್ಮವರಿಗಾಗಿ ಬದುಕಬೇಕು.
ಯಾವಾಗ ನಾವು ನಮ್ಮನ್ನು ಅರ್ಥ ಮಾಡಿಕೊಂಡು ಬದುಕುತ್ತೇವೋ ಅವಾಗ ನಾವು ಸಂತೋಷದ ಹಾದಿಯಲ್ಲಿ ನಡೆಯುತ್ತೇವೆ. ಅವಾಗ ಬದುಕಿನ ಪ್ರತಿಯೊಂದು ಕ್ಷಣ ಜೇನಿನಂತೆ ಸಿಹಿಯಾಗಿ ಕಳೆಯುತ್ತದೆ ಅದೇ ನಾವು ನಾವಾಗಿ ಬದುಕದೆ ತೋರಿಕೆಯ ಜೀವನವನ್ನು ನಡೆಸಿದರೆ ಬದುಕು ಕಹಿಯಾದ ಹಾಗಲಕಾಯಿಯಂತೆ ಬೇರೆಯವರ ಚಿಂತೆಯಲ್ಲಿ ಕಳೆದುಹೋಗುತ್ತದೆ. ಆದ್ದರಿಂದ ಇಲ್ಲಿ ಸಿಹಿಯಾದ ಜೇನು ಬೇಕು ಅಥವಾ ಕಹಿಯಾದ ಹಾಗಲಕಾಯಿ ಬೇಕು ಎಂದು ನಿರ್ಧರಿಸುವವರು ನಾವು. ಬದುಕು ಎಂಬುದು ಒಂದು ಖಾಲಿ ಪುಸ್ತಕದಂತೆ ಅಲ್ಲಿ ಹುಟ್ಟು ಮತ್ತು ಸಾವು ಎಂಬ ಎರಡು ಪುಟಗಳು ಮೊದಲೇ ನಿಶ್ಚಯವಾಗಿರುತ್ತದೆ. ಮಧ್ಯ ಪುಟಗಳು ಮಾತ್ರ ನಮಗೆ ಖಾಲಿ ಇರುತ್ತದೆ. ಅದರಲ್ಲಿ ನಾವು ನಮ್ಮ ಅನುಭವವನ್ನು ದಾಖಲಿಸಬೇಕೆ ಹೊರತು ಬೇರೆಯವರ ಅಭಿಪ್ರಾಯವನಲ್ಲ. ಆದ್ದರಿಂದ ನಾವು ನಮಗಾಗಿ ನಮ್ಮವರಿಗಾಗಿ ಬದುಕಬೇಕೆ ಹೊರತು ತೋರಿಕೆಗಾಗಿ ಅಲ್ಲ.
ತೇಜಸ್ವಿನಿ ದೇವಾಡಿಗ
ಎಸ್‌ಡಿಎಂ ಉಜಿರೆ