ನಂಗಿದು ಬೇಡ, ಬೇರೆ ಮಾಡಿಕೊಡು” ಎಂದು ರಚ್ಚೆ ಹಿಡಿದು ಅಳುತ್ತ ನೆಲದಲ್ಲಿ ಹೊರಳಾಡುತ್ತಿದ್ದ ಹತ್ತು ವರ್ಷದ ಮೊಮ್ಮಗನ ಹಠಕ್ಕೆ ಮಣಿದು, ನೋಯುತ್ತಿದ್ದ ತನ್ನ ಮೊಣಕಾಲುಗಳನ್ನು ನೀವಿಕೊಳ್ಳುತ್ತಲೇ, ಅವನೆದುರು ತುಂಬಿಟ್ಟ ತಿಂಡಿಯ ತಟ್ಟೆಯನ್ನೆತ್ತಿಕೊಂಡು ಒಳನಡೆದಿದ್ದಳಜ್ಜಿ. ತುಂಬ ಹೊತ್ತಿನಿಂದ ಮಗನ ಹಠವನ್ನು, ಮನೆಯ ಕೆಲಸಗಳನ್ನು ಗಡಿಬಿಡಿಯಲ್ಲಿ ಮುಗಿಸಿ ಸ್ವಲ್ಪ ಹೊತ್ತಿನಲ್ಲೇ ಆಫೀಸಿಗೆ ಹೊರಡಲೇಬೇಕಿದ್ದ ತನ್ನ ಅಸಹಾಯಕತೆಯನ್ನು ಅನುಭವಿಸುತ್ತಿದ್ದ ಆಕೆ ಅತ್ತೆಯ ಕೈಯಿಂದ ತಿಂಡಿಯ ತಟ್ಟೆ ತೆಗೆದುಕೊಂಡು ಕಣ್ಣಿನಲ್ಲೇ ಅತ್ತೆಗೆ ಸನ್ನೆ ಮಾಡಿ ಮಗನ ಪಕ್ಕಕ್ಕೆ ನಡೆದಳು. ಒಳ ಕೋಣೆಯಲ್ಲೇ ನಿಂತು ನೋಡುತ್ತಿದ್ದ ಅತ್ತೆಗೆ ಕಾಣಿಸಿದ್ದು ಮೊಮ್ಮಗನ ಪಕ್ಕದಲ್ಲೇ ಇದ್ದ ಕುರ್ಚಿಯಲ್ಲಿ ಕುಳಿತು ತಿಂಡಿಯ ತಟ್ಟೆಯನ್ನು ಪಟ್ಟಾಗಿ ಖಾಲಿ ಮಾಡುತ್ತಿದ್ದ ಸೊಸೆ. ಇನ್ನೇನೋ ಹೊಸ ತಿಂಡಿ ಬರುತ್ತದೆ ಎಂದು ಕಾದಿದ್ದವನಿಗೆ ಅದೇ ತಿಂಡಿಯ ತಟ್ಟೆ ಹೊತ್ತ ಅಮ್ಮ ತನ್ನನ್ನು ನೋಡಿಯೂ ನೋಡದಂತೆ ಕುಳಿತು ತಿಂಡಿ ತಿನ್ನುವುದು ಕಂಡು ಮರಳಿ ತನ್ನ ರಾಗಾಲಾಪಕ್ಕೆ ಶುರುಮಾಡಿದ. ಅದು ತನಗೆ ಕೇಳಿಸಲೇ ಇಲ್ಲವೇನೋ ಎಂಬಂತೆ ತಟ್ಟೆಯಲ್ಲಿದ್ದ ತಿಂಡಿಯಲ್ಲಿ ಒಂದು ತುಣುಕೂ ಉಳಿಯದಂತೆ ಮುಗಿಸಿದ ಆಕೆ ಮಗನ ಕಡೆ ತಿರುಗಿ, “”ತಿಂಡಿ ಬೇಕಿದ್ರೆ ಇದನ್ನೇ ತಿನ್ನು, ರುಚಿಯಾಗಿದೆ. ಬೇರೇನೂ ಸಿಗದು ನಿನಗೆ” ಎನ್ನುತ್ತಲೇ ಆಫೀಸಿಗೆ ಹೊರಡಲು ಬ್ಯಾಗ್ ಹೆಗಲಿಗೇರಿಸಿಕೊಂಡಿದ್ದಳು.
ಹಠದಿಂದ ಕುಳಿತ. ಅಜ್ಜಿ ತನ್ನ ಕೋಪಕ್ಕೆ ಸೋಲಬಹುದು, ಸೋತು ತನಗೆ ಬೇಕಾದ್ದನ್ನು ಮಾಡಿಕೊಡಬಹುದು ಎಂದು ಕಾದ. ಅಜ್ಜಿ ಮೊಮ್ಮಗನನ್ನು ಅವನ ಪಾಡಿಗೆ ಬಿಟ್ಟು ತನ್ನ ಕೆಲಸ ಮಾಡಿಕೊಳ್ಳತೊಡಗಿದಳು. ಕೇಳುವವರ್ಯಾರೂ ಇರದ ಮೇಲೆ ಅತ್ತೇನು ಪ್ರಯೋಜನವೆಂಬಂತೆ ಮೊಮ್ಮಗನ ಅಳು ತಗ್ಗಿತು. ಹೊತ್ತು ಕಳೆದಂತೆ ಹಸಿವೆ ಹೆಚ್ಚಿತು. ಹಿತ್ತಲಲ್ಲಿ ಕುಳಿತು ಮಲ್ಲಿಗೆ ಹೂವಿನ ಮಾಲೆ ಕಟ್ಟುತ್ತಿದ್ದ ಅಜ್ಜಿ ಕಾಣಿಸಿದಳು. ಅಡುಗೆ ಕೋಣೆಗೆ ಮೆತ್ತಗೆ ನಡೆದವನಿಗೆ ಮುಚ್ಚಿಟ್ಟ ಬೆಳಗಿನ ತಿಂಡಿ ಕಾಣಿಸಿತು. ತಿನ್ನುವಾಗ, ತನಗಿಷ್ಟವಿಲ್ಲ ಎಂದು ರಂಪಾಟ ಮಾಡಿದ ತಿಂಡಿಯೂ ಅತಿ ರುಚಿ ಎನ್ನಿಸಿತು.
ಮೊದಲ ಸಲ ಮಗಳು ತಮ್ಮನ್ನೆಲ್ಲ ಬಿಟ್ಟು ದೂರದ ಊರಿನ ಹಾಸ್ಟೆಲ್ಲಿನಲ್ಲಿ ವಾಸ ಮಾಡಲಿದ್ದಾಳಿನ್ನು ಎಂಬುದನ್ನು ನೆನೆದೇ ಅಮ್ಮನಿಗೆ ನಿದ್ರೆ ದೂರವಾಗಿತ್ತು. “”ಅಮ್ಮಾ ಇವತ್ತು ಆ ಅಡುಗೆ ಮಾಡು, ಈ ಅಡುಗೆ ಮಾಡು” ಎಂದೆಲ್ಲ ಕಾಡಿಸಿ ಪೀಡಿಸುತ್ತಿದ್ದ ಮಗಳಿಗೆ ಈಗ ಯಾರು ಅಂತದ್ದನ್ನೆಲ್ಲ ಮಾಡಿಕೊಡುವವರು ಎಂಬುದೇ ತಾಯಿಯ ಅಳಲು. ದೂರದ ಊರಿನ ವಾಸದ ಹತ್ತುಹಲವು ಸಮಸ್ಯೆಗಳಿಗಿಂತಲೂ ಅವಳು ಓದು ಮುಖ್ಯವಾದ್ದರಿಂದ ಹೋಗುವುದು ಅನಿವಾರ್ಯವೇ ಆಗಿತ್ತು. ಮೊದಮೊದಲು ದಿನಕ್ಕೆ ನಾಲ್ಕು ಸಲ ಫೋನ್ ಮಾಡಿ ಮಗಳು, “”ಅಮ್ಮಾ, ನಿನ್ನ ಕೈ ಅಡುಗೆಯುಣ್ಣಬೇಕು ಎಂದು ಆಸೆಯಾಗುತ್ತಿದೆ” ಎಂದು ಅಲವತ್ತುಕೊಂಡಾಗಲೆಲ್ಲ ತಾಯಿ ಹೃದಯ ತನ್ನ ಹಸಿವನ್ನೂ ಮರೆತು ಅಳುತ್ತ ಉಪವಾಸ ಮಲಗುವಂತಾಗುತ್ತಿತ್ತು. ನಿಧಾನಕ್ಕೆ ಮಗಳ ಫೋನಿನಲ್ಲಿ ಅಮ್ಮನ ಅಡುಗೆಯ ರುಚಿಯ ಬಗ್ಗೆ ಮಾತುಗಳಿರದೇ ಇದ್ದಾಗಲೂ ಅಮ್ಮನಿಗೆ ಸಂಕಟ. “ಪಾಪ! ಮಗಳು ಹಸಿವು ನೀಗಿಸಿಕೊಳ್ಳುವುದಕ್ಕೆಂದು ಏನೆಲ್ಲಾ ತಿನ್ನುತ್ತಿದ್ದಾಳೇನೋ, ಈ ಸಲ ರಜೆಗೆ ಬಂದಾಗ ಅವಳಿಗಿಷ್ಟವಾದದ್ದನ್ನು ಮಾಡಿ ಕಳುಹಿಸಿಕೊಡಬೇಕು’ ಎಂದು ಅವಳು ಬರುವುದಕ್ಕೆ ವಾರಕ್ಕೆ ಮೊದಲೇ ತಯಾರಿ. ತಿಂಗಳ ದಿನಸಿ ವಾರದಲ್ಲೇ ಮುಗಿಯುವುದಕ್ಕೆ ಹುಬ್ಬೇರಿಸಿದ ಗಂಡನ ಕಡೆಗೆ “ನಿಮಗೇನು ಗೊತ್ತಾಗುತ್ತೆ?’ ಎಂಬರ್ಥದ ಉರಿ ನೋಟ. ರಜೆಯಲ್ಲಿ ಬಂದ ಮಗಳು ಹೊರಡುವಾಗ ಅಮ್ಮ ಕಟ್ಟಿ ಇಟ್ಟಿದ್ದ ತಿಂಡಿತೀರ್ಥಗಳ ಬ್ಯಾಗಿನ ಗಾತ್ರ ನೋಡಿಯೇ ದಂಗಾದಳು. “”ಅಯ್ಯೋ, ಇದನ್ನೆಲ್ಲ ಯಾಕೆ ಮಾಡಿದೆ. ಇಂತ¨ªೆಲ್ಲ ಅಲ್ಲಿಯೂ ಸಿಗುತ್ತೆ ಅಮ್ಮಾ, ನಮ್ಮ ಕಡೆಯ ತುಂಬಾ ವಿದ್ಯಾರ್ಥಿಗಳು ಅಲ್ಲಿರೋದ್ರಿಂದ ಈ ಕಡೆಯ ಅಡುಗೆಯನ್ನೂ ಅಲ್ಲಿ ಮಾಡ್ತಾರಮ್ಮಾ. ನೀನು ಮಾಡುವ ವಡೆ, ನಿಪ್ಪಟ್ಟು, ತಂಬಿಟ್ಟುಂಡೆಗಳೂ ಅಲ್ಲಿ ಬೇಕಾದಾಗ ಸಿಗುತ್ತೆ, ಆದರೆ ನಂಗೀಗ ಅಲ್ಲಿನ ಊಟವೂ ಸೇರುತ್ತದೆ. ಅಲ್ಲಿನ ವಾತಾವರಣಕ್ಕೆ ಅಲ್ಲಿನ ಊಟವೇ ಹಿತ ಅಮ್ಮಾ” ಎಂದಾಗ ಈ ಮಗಳು ಯಾವಾಗ ತನ್ನಿಂದಲೂ ದೊಡ್ಡವಳಾಗಿ ಬೆಳೆದುಬಿಟ್ಟಳು ಎಂದು ಅಮ್ಮನಿಗೆ ಅಚ್ಚರಿ.
ವಿದೇಶದಲ್ಲಿದ್ದ ಮಗ ಊರಿಗೆ ಬರುವುದೆಂದರೆ ಇರಬೇಕಿದ್ದ ಸಂಭ್ರಮದ ಬದಲು ಆ ಮನೆಯಲ್ಲಿದ್ದುದು ಸೂತಕದ ಛಾಯೆ. ಹಾಗೆಂದು ಆ ಮನೆಯಲ್ಲೇನೂ ಅಶುಭ ಘಟಿಸಿರಲಿಲ್ಲ. ಮಗ ಅಲ್ಲಿ ಸಿಗುತ್ತಿದ್ದ ಆಹಾರಕ್ಕೆ ಹೊಂದಿಕೊಳ್ಳಲಾಗದೇ ಕೆಲಸಬಿಟ್ಟು ಮನೆಗೆ ಬರುತ್ತೇನೆಂಬ ಬಾಂಬು ಸಿಡಿಸಿದ್ದ. ಮನೆಮಂದಿಯೆಲ್ಲ ಹೊಟ್ಟೆಬಟ್ಟೆ ಕಟ್ಟಿ ಆತನನ್ನು ಓದಿಸಿದ್ದು ಮಗನ ವಿದೇಶದ ಕೆಲಸದಿಂದ ಮುಂದೆ ಮನೆಗೆ ಸಹಾಯವಾದೀತೆಂಬ ಆಲೋಚನೆಯ ಬೆನ್ನು ಹತ್ತಿಯೇ. ಈಗ ಆತನ ಈ ಮಾತುಗಳನ್ನು ಅರಗಿಸಿಕೊಳ್ಳಲಾಗದೇ ಮನೆ ಮಂದಿಯೆಲ್ಲ ಒದ್ದಾಡುತ್ತಿದ್ದರು. ಅವನ ತಂಗಿಗೆ ಅಣ್ಣ ಇಂತಹ ಒಳ್ಳೆಯ ಉದ್ಯೋಗಾವಕಾಶವನ್ನು ಕೇವಲ ಆಹಾರದ ದೆಸೆಯಿಂದ ಕಳೆದುಕೊಳ್ಳುತ್ತಿದ್ದಾನಲ್ಲ ಎಂಬ ನೋವು. ಹಲವಾರು ವಿಡಿಯೋ ಕಾಲ್‌ಗಳಲ್ಲಿ ಅಣ್ಣನನ್ನು ತನ್ನ ನಿರ್ಧಾರದಿಂದ ಹಿಂದೆ ಸರಿಯುವಂತೆ ಮಾಡಲು ಪ್ರಯತ್ನಿಸಿ ವಿಫಲಳಾಗಿದ್ದಳು. ದೂರದಲ್ಲಿ ಕುಳಿತು ಎಲೆಅಡಿಕೆ ಗುದ್ದುತ್ತಿದ್ದ ಅಜ್ಜಿಯ ಮಂದ ಕಿವಿಗಳಿಗೂ ವಿಷಯ ತಲುಪಿ, ಆಗೀಗ ಮೊಮ್ಮಗಳ ಮೊಬೈಲಿನಲ್ಲಿ ಮೊಮ್ಮಗನ ಮುಖ ನೋಡಿ ಆನಂದಪಡುತ್ತಿದ್ದ ಆಕೆಗೆ ತಾನೆತ್ತಿ ಆಡಿಸಿದ ಮೊಮ್ಮಗ ಹೀಗೆ ಸೋತು ಬರುವುದು ಸುತಾರಾಂ ಇಷ್ಟವಾಗಲಿಲ್ಲ. ಮೊಮ್ಮಗಳು ಆಗೀಗ ಅಜ್ಜಿಯ ಹಾಡುಗಳನ್ನು, ಎಲೆಅಡಿಕೆ ಗುದ್ದುವುದನ್ನು ವಿಡಿಯೋ ಮಾಡಿ ತೋರಿಸುತ್ತಿದ್ದುದೂ ಅಜ್ಜಿಗೂ ಗೊತ್ತಿತ್ತಲ್ಲ. ಘಾಟಿ ಅಜ್ಜಿ ತಯಾರಾಗಿಯೇ ಬಿಟ್ಟಿದ್ದಳು ಹೊಸಲೋಕಕ್ಕೆ ತೆರೆದುಕೊಳ್ಳುವುದಕ್ಕೆ. ಮೊಮ್ಮಗನಿಗೆ ಇಷ್ಟವಾದ ಅಡುಗೆಗಳನ್ನು ಬಹು ಸುಲಭವಾಗಿ ಹೇಗೆ ಮಾಡುವುದೆಂದು ತಾನು ಹೇಳಿಕೊಡುವ ವಿಡಿಯೋಗಳನ್ನು ಮಾಡಿಸಿ ಮೊಮ್ಮಗಳ ಮೂಲಕ ಅವನಿಗೆ ತಲುಪಿಸಿದಳು. ಅಜ್ಜಿಯ ಮಾತಿನ ಮೇಲೆ ವಿಶ್ವಾಸವಿಡುವ ಪ್ರಯತ್ನ ಮಾಡುವುದರಲ್ಲಿ ತಪ್ಪೇನಿದೆ ಎಂದುಕೊಂಡ. ಈಗ ತಾನು ಕೆಲಸಕ್ಕೆ ಹೋಗುವುದರ ಜೊತೆಗೆ ಅಡುಗೆ ಮಾಡುವುದನ್ನು ಆಟದಂತೆ ಅಭ್ಯಾಸ ಮಾಡಿಕೊಂಡವನು ಅದರ ವಿಡಿಯೋಗಳನ್ನು ಮಾಡಿಯೂ ಹಣ ಸಂಪಾದಿಸುತ್ತಾನಂತೆ- ಎಂದು ತನ್ನ ಮಗ-ಸೊಸೆ ಹೆಮ್ಮೆಯಿಂದ ಹೇಳುವುದನ್ನು ಕಂಡ ಅಜ್ಜಿ, ಮೊಮ್ಮಗ ಬಂದಾಗ ಅವನ ಕೈ ಅಡುಗೆ ಉಣ್ಣುವ ಆಸೆಯಲ್ಲಿ ಕಾದಿದ್ದಾಳೆ.
ಬದುಕು ಪ್ರತಿಸಲ ನಮಗಿಷ್ಟವಾದುದನ್ನೇ ತುಂಬಿಕೊಡುವುದಿಲ್ಲ. ಯಾವುದನ್ನು ಕೊಟ್ಟಿದೆಯೋ ಅದನ್ನು ಇಷ್ಟವಾಗಿಸಿಕೊಳ್ಳುವ ಜಾಣತನ ನಮ್ಮಲ್ಲಿರಬೇಕು. ಅದಿಲ್ಲವೋ, ನಮಗಿಷ್ಟವಾದುದನ್ನೇ ಪಡೆಯುವ ಪ್ರಯತ್ನ ನಮ್ಮದಾಗಬೇಕು.
(ಅಂಕಣ ಮುಕ್ತಾಯ)
ಅನಿತಾ ನರೇಶ ಮಂಚಿ