Advertisement

ಲಿಟ್ಲ ಸೂಪರ್‌ಸ್ಟಾರ್

06:40 AM Nov 10, 2017 | Harsha Rao |

ಪ್ರತಿ ನಟರಿಗೂ ಒಂದು ಆಸೆ ಇರುತ್ತದೆ. ಅದೇನೆಂದರೆ ತಮ್ಮ ನಂತರ ಚಿತ್ರರಂಗದಲ್ಲಿ ತಮ್ಮ ಕುಟುಂಬದ ಒಬ್ಬರಾದರೂ ಇರಬೇಕೆಂಬುದು. ಅದೇ ಕಾರಣದಿಂದ ನೀವು ಯಾವುದೇ ಭಾಷೆಯ ಚಿತ್ರರಂಗವನ್ನು ತೆಗೆದರೂ ಅಲ್ಲಿನ ಸ್ಟಾರ್‌ ನಟರ ಅಥವಾ ಹಿರಿಯ ನಟರ ಕುಟುಂಬದ ಕುಡಿಯೊಂದು ಚಿತ್ರರಂಗದಲ್ಲಿ ಇದ್ದೇ ಇರುತ್ತದೆ. ಅದಕ್ಕೆ ಕಾರಣ ಬಣ್ಣದ ಲೋಕದ ಸೆಳೆತ ಎಂದರೆ ತಪ್ಪಲ್ಲ. ಅದೇ ಕಾರಣದಿಂದ ಮಕ್ಕಳಲ್ಲಿ ಬಾಲ್ಯದಿಂದಲೇ ಸಿನಿಮಾದ ಆಸಕ್ತಿ ಬೆಳೆಸುತ್ತಿದ್ದಾರೆ. ಅದರಲ್ಲೂ ಗಂಡು ಮಕ್ಕಳೆಂದರೆ ಸಿನಿಮಾಕ್ಕೆ ಬಂದೇ ಬರುತ್ತಾರೆಂಬ ನಂಬಿಕೆ ಚಿತ್ರರಂಗದಲ್ಲಿ ಹಿಂದಿನಿಂದಲೂ ನಡೆಯುತ್ತಾ ಬಂದಿದೆ. ಈಗ ಯಾಕೆ ಈ ವಿಷಯ ಎಂದು ನೀವು ಕೇಳಬಹುದು. ಅದಕ್ಕೆ ಕಾರಣ, ಆ ಹಳೆಯ ಟ್ರೆಂಡ್‌ ಈಗಲೂ ಮುಂದುವರಿಯುತ್ತಾ ಬಂದಿದೆ. ಇವತ್ತಿಗೂ ಸ್ಟಾರ್‌ ನಟರು ತಮ್ಮ ಮಕ್ಕಳಿಗೆ ಬಾಲ್ಯದಲ್ಲೇ ನಟನೆಯ ಆಸಕ್ತಿ ಹುಟ್ಟಿಸುತ್ತಿದ್ದಾರೆ. ಅದು ತಮ್ಮ ನಟನೆಯ ಅಥವಾ ಬೇರೆ ಯಾವುದಾದರೂ ಸಿನಿಮಾದಲ್ಲಿ ಬಣ್ಣ ಹಚ್ಚುವಂತೆ ಮಾಡುವ ಮೂಲಕ. 

Advertisement

ಇತ್ತೀಚಿನ ಒಂದು ಟ್ರೆಂಡ್‌ ಗಮನಿಸಿ. ದರ್ಶನ್‌, ವಿಜಯ್‌, ಗಣೇಶ್‌, ಪ್ರೇಮ್‌, ಕಿಟ್ಟಿ, ಉಪೇಂದ್ರ … 
ಹೀಗೆ ಅನೇಕರ ನಟರ ಮಕ್ಕಳು ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ. ಈ ಮೂಲಕ ಭವಿಷ್ಯದಲ್ಲಿ ಸಿನಿಮಾಕ್ಕೆ ಬರುವ ಲಕ್ಷಣ ತೋರುತ್ತಿದ್ದಾರೆ. ಜೊತೆಗೆ ಬಾಲ್ಯದಲ್ಲೇ ಮಕ್ಕಳಲ್ಲಿ ಸಿನಿಮಾಸಕ್ತಿ ಬೆಳೆಸುತ್ತಿದ್ದಾರೆ. ಈಗಾಗಲೇ ದರ್ಶನ್‌ ಪುತ್ರ ವಿನೀಶ್‌ “ಐರಾವತ’ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆ ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ದರ್ಶನ್‌ ಅವರಂತೆ ವಿನೀಶ್‌ ಕೂಡಾ ಪೊಲೀಸ್‌ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದರು. “ನೆನಪಿರಲಿ’ ಪ್ರೇಮ್‌ ಮಗ ಕೂಡಾ “ಮಾಮು ಟೀ ಅಂಗಡಿ’ ಚಿತ್ರದಲ್ಲಿ ನಟಿಸಿದ್ದರು. ಕಿಟ್ಟಿ ಮಗಳು “ಮಾಸ್‌ ಲೀಡರ್‌’ ಸಿನಿಮಾದಲ್ಲಿ ಶಿವರಾಜಕುಮಾರ್‌ ಅವರ ಮಗಳಾಗಿ ಗ್ರ್ಯಾಂಡ್‌ ಆಗಿಯೇ 
ಎಂಟ್ರಿಕೊಟ್ಟಿದ್ದರು. 

ಗಣೇಶ್‌ ಮಗಳು ಚಾರಿತ್ರ್ಯ ಹಾಗೂ ಉಪೇಂದ್ರ  ಮಗಳು ಐಶ್ವರ್ಯ ಕೂಡಾ ಈಗಾಗಲೇ ಬಣ್ಣ ಹಚ್ಚಿದ್ದಾರೆ. ಗಣೇಶ್‌ ಅವರ “ಚಮಕ್‌’ ಚಿತ್ರದಲ್ಲಿ ಚಾರಿತ್ರ್ಯ ಮಗಳಾಗಿಯೇ ನಟಿಸಿದ್ದಾರೆ. ಇನ್ನು, ಉಪೇಂದ್ರ ಮಗಳು ಐಶ್ವರ್ಯಾ ತನ್ನ ತಾಯಿ ಜೊತೆ ತೆರೆಹಂಚಿಕೊಂಡಿದ್ದಾರೆ. ಅದು “ಹೌರಾ ಬ್ರಿಡ್ಜ್’ ಚಿತ್ರದಲ್ಲಿ. ನಟ “ದುನಿಯಾ’ ವಿಜಯ್‌ ತಮ್ಮ ಮಗ ಸಾಮ್ರಾಟ್‌ನನ್ನು ದೊಡ್ಡ ಮಟ್ಟದಲ್ಲೇ ಬಾಲನಟನಾಗಿ ಲಾಂಚ್‌ ಮಾಡಬೇಕೆಂದು ಕನಸು ಕಂಡಿದ್ದಾರೆ. ಅದು “ಕುಸ್ತಿ’ ಎಂಬ ಸಿನಿಮಾ ಮೂಲಕ. ಈ ಚಿತ್ರದಲ್ಲಿ ವಿಜಯ್‌ ಅವರ ಬಾಲ್ಯದ ಪಾತ್ರವನ್ನು ಮಾಡುತ್ತಿದ್ದಾರೆ. ಈಗಾಗಲೇ ಮಗನನ್ನು ವಿಜಯ್‌ ಸಿದ್ಧಪಡಿಸುತ್ತಿದ್ದಾರೆ ಕೂಡಾ. ಇಷ್ಟೇ ಅಲ್ಲ, ಇನ್ನೂ ಅನೇಕ ನಟರು ತಮ್ಮ ಮಕ್ಕಳನ್ನು ಸಿನಿಮಾದಲ್ಲಿ ಬಾಲ ನಟರನ್ನಾಗಿ ಎಂಟ್ರಿಕೊಡಿಸಲು ಯೋಚಿಸುತ್ತಿದ್ದಾರೆ.

ಈ ತರಹದ ಟ್ರೆಂಡ್‌ ಕನ್ನಡ ಚಿತ್ರರಂಗಕ್ಕೆ ಹೊಸದೇನಲ್ಲ. ಪುನೀತ್‌ ರಾಜಕುಮಾರ್‌ ಆರು ತಿಂಗಳ ಪಾಪು ಆಗಿದ್ದಾಗಲೇ ತೆರೆಮೇಲೆ ಕಾಣಿಸಿಕೊಂಡಿದ್ದರು. ಡಾ.ರಾಜ್‌ಕುಮಾರ್‌ ಅವರ “ಪ್ರೇಮದ ಕಾಣಿಕೆ’ಯಲ್ಲಿ ಆರು ತಿಂಗಳ ಮಗುವಾಗಿದ್ದ ಪುನೀತ್‌ ಕೂಡಾ ಇದ್ದರು. ಅಲ್ಲಿಂದಲೇ ಅವರ ಸಿನಿಜರ್ನಿ ಆರಂಭವಾಗಿತ್ತು ಎಂದರೆ ತಪ್ಪಲ್ಲ. ಆ ನಂತರ ಅವರು ಬಾಲನಟರಾಗಿ ಮಿಂಚಿದ್ದು, ಪ್ರಶಸ್ತಿಗೆ ಭಾಜನರಾಗಿದ್ದು,  ಈಗ ಸ್ಟಾರ್‌ ನಟರಾಗಿರೋದೆಲ್ಲವೂ ನಿಮಗೆ ಗೊತ್ತೇ ಇದೆ.

ಇನ್ನು, ಶಿವರಾಜಕುಮಾರ್‌ ಅವರ “ಅಂಡಮಾನ್‌’ ಚಿತ್ರದಲ್ಲಿ ಅವರ ಮಗಳು ನಿವೇದಿತಾ ಕೂಡಾ ಬಾಲನಟಿಯಾಗಿ ಕಾಣಿಸಿಕೊಂಡಿದ್ದರು ಮತ್ತು ಅವರ ನಟನೆಗೆ ಪ್ರಶಸ್ತಿ ಕೂಡಾ ಬಂದಿತ್ತು. ನಂತರ ನಿವೇದಿತಾ ನಟನೆ ಮುಂದುವರಿಸಲಿಲ್ಲ.

Advertisement

ಇಲ್ಲಿ ನೀವು ಒಂದಂಶವನ್ನು ಸೂಕ್ಷ್ಮವಾಗಿ ಗಮನಿಸಬಹುದು. ಅಂದಿನಿಂದಲೂ ಸ್ಟಾರ್‌ ನಟರು ತಮ್ಮ ಮಕ್ಕಳನ್ನು ಸಿನಿಮಾದಲ್ಲಿ ಎಂಟ್ರಿಕೊಡಿಸುತ್ತಲೇ ಬಂದಿದ್ದಾರೆ. ಮುಖ್ಯವಾಗಿ ಬಾಲ ನಟ/ನಟಿಯರಾಗಿ ಚಿತ್ರಗಳಲ್ಲಿ ಪರಿಚಯಿಸುತ್ತಾ ಬಂದಿದ್ದಾರೆ. ಹೀಗೆ ಬಾಲ ನಟರಾದವರು ಬೆಳೆದು ಕೆಲವರು ಚಿತ್ರರಂಗದಲ್ಲೇ ಮುಂದುವರೆದರೆ, ಇನ್ನು ಕೆಲವರ ಆಸಕ್ತಿ ಬೇರೆ ಕ್ಷೇತ್ರದತ್ತ ವಾಲಿದೆ. ಅದೇನೇ ಆದರೂ ಸ್ಟಾರ್‌ ನಟರು ತಮ್ಮ ಮಕ್ಕಳಿಗೂ ಬಣ್ಣ ಹಚ್ಚುತ್ತಿದ್ದಾರೆಂಬುದು ಸತ್ಯ. 
ಸದ್ಯ ಕನ್ನಡ ಚಿತ್ರರಂಗದ ಸ್ಟಾರ್‌ ನಟರ ಮಕ್ಕಳು ಬಾಲ ನಟರಾಗಿ ಎಂಟ್ರಿಕೊಟ್ಟಾಗಿದೆ. ಮುಂದೆ ಇವರು ಹೀರೋಗಳಾಗಿ ಬೆಳೆಯುತ್ತಾರಾ ಅಥವಾ ಅವರ ಆಸಕ್ತಿ ಬೇರೆ ಕ್ಷೇತ್ರದತ್ತ ಇರುತ್ತಾ ಎಂಬುದನ್ನು ತಿಳಿಯಲು ಇನ್ನೂ ಸಾಕಷ್ಟು ವರ್ಷ ಕಾಯಲೇಬೇಕು. 

– ರವಿಪ್ರಕಾಶ್‌ ರೈ

Advertisement

Udayavani is now on Telegram. Click here to join our channel and stay updated with the latest news.

Next