ನವದೆಹಲಿ: ಭಾರತದಲ್ಲಿ ಮೊದಲ ಬಾರಿಗೆ ಜಮ್ಮು-ಕಾಶ್ಮೀರದಲ್ಲಿ ಲಿಥಿಯಮ್ ನಿಕ್ಷೇಪ ಪತ್ತೆಯಾಗಿದೆ ಎಂದು ಭಾರತೀಯ ಭೌಗೋಳಿಕ ಸರ್ವೇಕ್ಷಣಾ ಸಂಸ್ಥೆ ತಿಳಿಸಿದೆ.
ಇದನ್ನೂ ಓದಿ:ಸಂಪೂರ್ಣ ಬಾರ್ಡರ್- ಗಾವಸ್ಕರ್ ಟ್ರೋಫಿ ಸರಣಿಯಿಂದ ಹೊರಬಿದ್ದ ಬುಮ್ರಾ
ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯ ಸಲಾಲ್ ಹೈಮಾನಾ ಪ್ರದೇಶದಲ್ಲಿ ಮೊದಲ ಬಾರಿಗೆ ಜಿ3 ಸಂಪನ್ಮೂಲ ಹೊಂದಿರುವ 5.9 ಮಿಲಿಯನ್ ಟನ್ ಗಳಷ್ಟು ಲಿಥಿಯಂ ನಿಕ್ಷೇಪವನ್ನು ಭಾರತೀಯ ಭೌಗೋಳಿಕ ಸರ್ವೇಕ್ಷಣಾ ಸಂಸ್ಥೆ ಪತ್ತೆ ಹಚ್ಚಿರುವುದಾಗಿ ಗಣಿಗಾರಿಕೆ ಸಚಿವಾಲಯ ಮಾಹಿತಿ ನೀಡಿದೆ.
ಪತ್ತೆಯಾದ ಲಿಥಿಯಮ್ ಮತ್ತು ಚಿನ್ನ ಸೇರಿದಂತೆ 51 ಮಿನರಲ್ ಬ್ಲಾಕ್ಸ್ ಗಳನ್ನು ಆಯಾ ರಾಜ್ಯ ಸರ್ಕಾರಗಳಿಗೆ ಹಸ್ತಾಂತರಿಸಲಾಗಿದೆ. 51 ಮಿನರಲ್ ಬ್ಲಾಕ್ಸ್ ಗಳಲ್ಲಿ 5 ಚಿನ್ನಕ್ಕೆ ಸಂಬಂಧಿಸಿದ್ದಾಗಿದ್ದು, ಇತರ ಬ್ಲಾಕ್ ಗಳು ಪೊಟ್ಯಾಶ್, ಮಾಲಿಬ್ಡಿನಮ್ ಹಾಗೂ ಮೂಲ ಲೋಹಗಳಿಗೆ ಸಂಬಂಧಿಸಿದ ನಿಕ್ಷೇಪಗಳಾಗಿವೆ.
ಈ ನಿಕ್ಷೇಪಗಳು ಜಮ್ಮು-ಕಾಶ್ಮೀರ ಸೇರಿದಂತೆ ಆಂಧ್ರಪ್ರದೇಶ, ಚತ್ತೀಸ್ ಗಢ್, ಗುಜರಾತ್, ಜಾರ್ಖಂಡ್, ಕರ್ನಾಟಕ, ಮಧ್ಯಪ್ರದೇಶ, ಒಡಿಶಾ, ರಾಜಸ್ಥಾನ, ತಮಿಳುನಾಡು ಮತ್ತು ತೆಲಂಗಾಣ ರಾಜ್ಯಗಳಲ್ಲಿ ಲಭ್ಯವಿರುವುದಾಗಿ ಸಚಿವಾಲಯ ತಿಳಿಸಿದೆ.
ಲಿಥಿಯಮ್ ಯಾವುದಕ್ಕೆ ಬಳಸಲಾಗುತ್ತದೆ:
ಲಿಥಿಯಮ್ ನಾನ್ ಫೆರಸ್ ಲೋಹವಾಗಿದ್ದು, ಇದರಲ್ಲಿನ ಪರಮಾಣು ಸಂಖ್ಯೆ 3ರ ಅಂಶವನ್ನು ವಿಮಾನ ಮತ್ತು ಬ್ಯಾಟರಿ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಅಷ್ಟೇ ಅಲ್ಲ ಬೈಪೋಲಾರ್ ನಂತಹ ಮಾನಸಿಕ ಕಾಯಿಲೆಗಳ ಚಿಕಿತ್ಸೆಗಾಗಿ ಇದನ್ನು ಔಷಧಗಳಲ್ಲಿ ಬಳಸಲಾಗುತ್ತದೆ. ಲಿಥಿಯಮ್ ಅನ್ನು ಎಲೆಕ್ಟ್ರಿಕ್ ವಾಹನಗಳ ಬ್ಯಾಟರಿಗಳಲ್ಲಿ ಪ್ರಮುಖವಾಗಿ ಬಳಕೆ ಮಾಡಲಾಗುತ್ತದೆ. ಭವಿಷ್ಯದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಲಿಥಿಯಮ್ ನಿಕ್ಷೇಪಗಳು ಪ್ರಮುಖ ಪಾತ್ರವಹಿಸಲಿದೆ. ಎಲೆಕ್ಟ್ರಿಕ್ ವಾಹನಗಳ ಬೇಡಿಕೆ ಹೆಚ್ಚಾಗುವ ಸಂದರ್ಭದಲ್ಲಿ ಲಿಥಿಯಮ್ ಬ್ಯಾಟರಿಗಳ ಬೇಡಿಕೆ ಪೂರೈಸಲು ನೆರವಾಗಲಿದೆ ಎಂದು ವರದಿ ವಿವರಿಸಿದೆ.