ಕುಂಬಳೆ: ವಿದ್ಯಾರ್ಥಿಗಳಿಗೆ ಚಿಕ್ಕಂದಿನಿಂದಲೇ ಓದುವ, ಬರೆಯುವ ಬಗ್ಗೆ ಆಸಕ್ತಿ ಮೂಡಿಸಬೇಕು.ವಿವಿಧ ರೀತಿಯ ಪುಸ್ತಕಗಳನ್ನು ಓದುವ ಹವ್ಯಾಸವನ್ನು ಬೆಳೆಸಬೇಕು. ಸಾಹಿತ್ಯ ಕೃಷಿ ಮಾಡಬೇಕಾದರೆ ಮುಖ್ಯವಾಗಿ ಶ್ರದ್ಧೆ ಹಾಗೂ ಏಕಾಗ್ರತೆ ಅತ್ಯಗತ್ಯ. ಈ ನಿಟ್ಟಿನಲ್ಲಿ ಮಕ್ಕಳನ್ನು ಬೆಳೆಸಬೇಕಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್‌ನ ಕೇರಳ ಗಡಿನಾಡ ಘಟಕದ ಅಧ್ಯಕ್ಷ ಎಸ್.ವಿ. ಭಟ್ ಹೇಳಿದ್ದಾರೆ.
ಕುಂಬಳೆ ಶೇಡಿಕಾವು ಶಂಕರಪುರಂ ಶ್ರೀಕೃಷ್ಣ ವಿದ್ಯಾಲಯದಲ್ಲಿ ಜರಗಿದ ಸಮಾರಂಭದಲ್ಲಿ ಶಾಲೆಯ ವಿವಿಧ ಕ್ಲಬ್‌ಗಳನ್ನು ದೀಪಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳು ತಮ್ಮ ಶೈಕ್ಷಣಿಕ ಅವಧಿ ಯಲ್ಲಿಯೇ ಉತ್ತಮ ಹವ್ಯಾಸಗಳನ್ನು ಬೆಳೆಸುವುದು ಕರ್ತವ್ಯ.ಶಾಲೆಗಳಲ್ಲಿ ಸಂಸ್ಕಾರಭರಿತ ಶಿಕ್ಷಣ ಲಭಿಸುವಂತೆ ಮಾಡಬೇಕು. ಅಧ್ಯಾಪಕರು ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪೂರಕವಾದ ಹಾಗೂ ಅವರ ಪ್ರತಿಭೆ ಗಳನ್ನು ಗುರುತಿಸುವ ಮಾರ್ಗದರ್ಶಕ ರಾಗಬೇಕು. ವಿದ್ಯಾರ್ಥಿಗಳೆಂಬ ಗಿಡಗಳನ್ನು ಪೋಷಿಸುವ ಕೆಲಸ ಆಗಬೇಕು. ಸಾಹಿತ್ಯ, ಕವಿತೆ, ಕಥೆ ಹೃದಯಾಂತರಾಳದಿಂದ ಮೂಡಿ ಬಂದಾಗ ಅದೊಂದು ಘಮಘಮಿಸುವ ಪುಷ್ಪವಾಗಿ ಅರಳಬಲ್ಲುದು ಎಂದವರು ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸಂದರ್ಭ ಶಾಲಾ ವಿದ್ಯಾರ್ಥಿ ಗಳಿಂದ ವಿವಿಧ ಚಟುವಟಿಕೆಗಳು ನಡೆ ದವು. ವಿಜ್ಞಾನ, ಗಣಿತ, ಹಿಂದಿ, ಇಂಗ್ಲಿಷ್ ಮುಂತಾದ ಸಂಘಗಳ ಕಾರ್ಯ ಚಟು ವಟಿಕೆ ಗಳಲ್ಲಿ ಶಾಲಾ ಮಕ್ಕಳು ಸಂಪೂರ್ಣ ತೊಡಗಿಸಿಕೊಂಡರು. ಕಾರ್ಯಕ್ರಮದಲ್ಲಿ ವಿದ್ಯಾಲಯದ ಪ್ರಧಾನ ಸಂಚಾಲಕ ಶೇಂತಾರು ನಾರಾಯಣ ಭಟ್ ಪ್ರಾಸ್ತಾವಿಕ ನುಡಿಗಳನ್ನಾಡಿ ಸ್ವಯಂ ರಚಿತ ಭಕ್ತಿಗೀತೆಗಳನ್ನು ಹಾಡಿದರು.
ಮುಖ್ಯೋಪಾಧ್ಯಾಯಿನಿ ಶಕುಂತಳಾ ಕಡಮಣ್ಣಾಯ ಉಪಸ್ಥಿತರಿದ್ದರು. ವೈಷ್ಣವಿ ಸಿ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ದ್ದರು. ಅಂಶಿಕಾ ಸ್ವಾಗತಿಸಿ, ವಂದಿಸಿದರು. ಸ್ನೇಹಾ ಕಾರ್ಯಕ್ರಮ ನಿರೂಪಿಸಿದರು.