Advertisement

ಮಕ್ಕಳ ಮಾತು ಕೇಳಿಸಿ ಕೊಳ್ಳಿ…

07:16 PM Oct 08, 2019 | Lakshmi GovindaRaju |

ಮಕ್ಕಳ ಮನಸ್ಸು ಹಸಿ ಮಣ್ಣಿನಂತೆ. ಬಾಲ್ಯದಲ್ಲಿ ಅವರ ಬುದ್ಧಿ, ಯೋಚನೆ ಯಾವ ರೂಪ ಪಡೆಯುತ್ತದೋ, ಅದೇ ಮುಂದೆಯೂ ಉಳಿದುಕೊಳ್ಳುತ್ತದೆ. ಹಾಗಾಗಿ, ಮಗುವಿನ ಬದುಕಿನ ಮೊದಲ ಹತ್ತು ವರ್ಷಗಳಲ್ಲಿ ಹೆತ್ತವರ ಪಾತ್ರ ಅತಿ ಮುಖ್ಯವಾದುದು. ಅತಿಯಾಗಿ ಮುದ್ದು ಮಾಡದೆ, ಶಿಸ್ತಿನ ಜೊತೆಗೆ ಸಂಸ್ಕಾರವನ್ನೂ ಕಲಿಸಿ, ಅವರ ಮನಸ್ಸಿನಲ್ಲಿ ಮೇಲರಿಮೆ, ಕೀಳರಿಮೆ ಮೂಡದಂತೆ ಬೆಳೆಸುವುದು ಸಾಮಾನ್ಯ ಸಂಗತಿಯಲ್ಲ.

Advertisement

ಮನೆಯಲ್ಲಿ ಒಬ್ಬರಿಗಿಂತ ಹೆಚ್ಚು ಮಕ್ಕಳಿದ್ದರೆ, ಪಾಲನೆಯಲ್ಲಿ ಇನ್ನೂ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ನಡುವೆ ಭೇದ- ಭಾವ, ಹೋಲಿಕೆ, ಅವಹೇಳನ, ಪೈಪೋಟಿ ಸಲ್ಲದು. “ಅವನನ್ನು ನೋಡಿ ಕಲಿ’, “ನೋಡು, ಅವಳೆಷ್ಟು ಚೆನ್ನಾಗಿ ಓದುತ್ತಾಳೆ’, “ನೀನೂ ಅವರಂತೆ ಫ‌ಸ್ಟ್‌ ರ್‍ಯಾಂಕ್‌ ಪಡೆಯಬೇಕು’ ಇತ್ಯಾದಿ ಮಾತುಗಳು ಮಗುವಿನಲ್ಲಿ ಕೀಳರಿಮೆ ಬೆಳೆಸುತ್ತವೆ, ಒತ್ತಡಕ್ಕೆ ಈಡು ಮಾಡುತ್ತವೆ.

ನಾನು ಅಪ್ರಯೋಜಕ, ನನ್ನ ಕೈಯಲ್ಲಿ ಏನೂ ಸಾಧ್ಯವಿಲ್ಲ, ಅಪ್ಪ- ಅಮ್ಮನಿಗೆ ನಾನು ಇಷ್ಟವಿಲ್ಲ ಎಂಬ ಯೋಚನೆಗಳು ಮೂಡಿ, ಆ ಮಗು ಖಿನ್ನತೆಗೆ ಜಾರಬಹುದು. ಇನ್ನು, ಮಕ್ಕಳ ಜೊತೆಗೆ ಕಠಿಣವಾಗಿದ್ದರೆ ಮಾತ್ರ, ಅವರನ್ನು ಸರಿದಾರಿಗೆ ತರಲು ಸಾಧ್ಯ ಅಂತ ಅವರನ್ನು ಗದರಿಸುವುದು, ಪ್ರತಿ ಕೆಲಸದ ಮೇಲೂ ಕಟ್ಟೆಚ್ಚರ ವಹಿಸುವುದು ಮಾಡಿದರೆ, ಅಪ್ಪ- ಅಮ್ಮನ ಬಗ್ಗೆ ಮಕ್ಕಳಲ್ಲಿ ಪ್ರೀತಿಯ ಬದಲು, ಹೆದರಿಕೆ ಹುಟ್ಟಬಹುದು. ಹಾಗಾಗಿ, ಹೆತ್ತವರು ಕೆಲವು ವಿಷಯಗಳನ್ನು ನೆನಪಿಟ್ಟುಕೊಳ್ಳಲೇಬೇಕು.

-ಮಗುವನ್ನು ಇನ್ನೊಬ್ಬರೊಂದಿಗೆ ಹೋಲಿಸಿ ಮಾತನಾಡಬೇಡಿ. ನೀನೂ ಅವನಂತೆಯೇ ಆಗಬೇಕು ಎಂದು, ಒತ್ತಡ ಹೇರಬೇಡಿ.

-ಶಾಲೆಯ, ವಠಾರದ ಎಲ್ಲ ಮಕ್ಕಳೊಡನೆ ಆಟವಾಡುವಂತೆ ಪ್ರೇರೇಪಿಸಿ.

Advertisement

ಮಗುವಿನ ಆಸಕ್ತಿಯನ್ನು ಗಮನಿಸಿ, ಅದರಂತೆ ಮುಂದುವರಿಯಲು ಬಿಡಿ. ಪಕ್ಕದ ಮನೆಯವನು ಸಂಗೀತ ಕಲಿಯುತ್ತಿದ್ದಾನೆ, ನೀನೂ ಕಲಿ ಅಂತೆಲ್ಲಾ ಒತ್ತಾಯಿಸುವುದು ಸರಿಯಲ್ಲ.

-ಶಾಲೆ/ ಮನೆಯಲ್ಲಿ ಮಕ್ಕಳು ಬೇರೆಯವರೊಂದಿಗೆ ಜಗಳವಾಡಿದಾಗ, ತಪ್ಪು ಯಾರದ್ದೆಂದು ಗುರುತಿಸಿ, ನ್ಯಾಯದ ಪರ ನಿಲ್ಲಿ. ನಿಮ್ಮ ಮಗುವಿನದ್ದೇ ತಪ್ಪಿದ್ದರೂ, ಅವನ ಪರ ವಹಿಸಿಕೊಳ್ಳಬೇಡಿ.

-ಶಾಲೆಯಿಂದ ಬಂದ ಮಗು ಏನೋ ಹೇಳುತ್ತಿದ್ದರೆ, ಆ ಮಾತುಗಳನ್ನು ಆಸಕ್ತಿಯಿಂದ ಕೇಳಿಸಿಕೊಳ್ಳಿ. ಪುರಾಣ ಸಾಕು, ಹೋಂವಕ್‌ ಮಾಡ್ಕೊà ಅಂತ ಗದರಿಸಿ ಸುಮ್ಮನಾಗಿಸಬೇಡಿ.

-ಬೌದ್ಧಿಕವಾಗಿ ಸ್ವಲ್ಪ ಬೆಳೆದ ಮಕ್ಕಳಲ್ಲಿ ವಾಸ್ತವದ ಅರಿವು ಮೂಡಿಸಬೇಕು. ಅವರು ಕಲ್ಪನೆ, ಭ್ರಮೆಯಲ್ಲಿ ಮುಳುಗುವಂತಾಗದಿರಲಿ.

-ಮಗುವಿನಲ್ಲಿ ಕೀಳರಿಮೆಯ ಭಾವವಿದ್ದರೆ, ಪ್ರೀತಿ, ಕಳಕಳಿ, ಸಹಾನುಭೂತಿ ತೋರಿಸಿ. ಸಣ್ಣ ವಿಷಯಕ್ಕೂ ಮೆಚ್ಚುಗೆ ಸೂಚಿಸಿ. ಅವರಲ್ಲಿ ಆತ್ಮವಿಶ್ವಾಸ ಹೆಚ್ಚುವಂತೆ ನೋಡಿಕೊಳ್ಳಿ.

-ಅವರ ಕೆಲಸಗಳನ್ನು (ಹೋಂ ವರ್ಕ್‌, ವೈಯಕ್ತಿಕ ಸ್ವಚ್ಛತೆ, ಬಟ್ಟೆ-ಪುಸ್ತಕ, ಹಾಸಿಗೆ ಜೋಡಿಸಿಕೊಳ್ಳುವುದು ಇತ್ಯಾದಿ) ಅವರೇ ಮಾಡಿಕೊಳ್ಳಲು ಬಿಡಿ.

-ಮಕ್ಕಳು ಮಾಡಿದ್ದು ತಪ್ಪು ಎನ್ನಿಸಿದಾಗ ದಂಡಿಸುವ ಬದಲು, “ನೀನು ಮಾಡಿದ ಕೆಲಸ ಸರಿಯಾ?’ ಅಂತ ನಯವಾದ ಮಾತಿನಲ್ಲೇ ಕೇಳಿ.

-ಮಕ್ಕಳು ನಾವು ಹೇಳುವುದನ್ನು ಕೇಳುವುದಿಲ್ಲ, ನಮ್ಮ ನಡವಳಿಕೆಗಳನ್ನು ಅನುಕರಿಸುತ್ತವೆ. ಹಾಗಾಗಿ, ಮೊದಲು ನಮ್ಮನ್ನು ನಾವು ಸರಿಪಡಿಸಿಕೊಳ್ಳಲು ಕಲಿಯೋಣ.

* ಶಿವಲೀಲಾ ಸೊಪ್ಪಿಮಠ

Advertisement

Udayavani is now on Telegram. Click here to join our channel and stay updated with the latest news.

Next