Advertisement

ಅರಳುವ ಹೂಗಳೇ ಆಲಿಸಿರಿ

06:30 AM Feb 20, 2018 | |

ಪರೀಕ್ಷೆಯ ದಿನಗಳು ಹತ್ತಿರಾಗುತ್ತಿವೆ. ಹೆತ್ತವರ ನಿರೀಕ್ಷೆಗಳೂ ಹೆಚ್ಚುತ್ತಲೇ ಇವೆ. ಆದರೆ, ವಿದ್ಯಾರ್ಥಿಗಳಿಗೇ ಒಂಥರಾ ನಿರಾಸಕ್ತಿ. ಕೆಲವರು ಸರಿಯಾಗಿ ಶಾಲೆ/ ಕಾಲೇಜಿಗೇ ಬರುತ್ತಿಲ್ಲ. ಬಂದವರು ಶ್ರದ್ಧೆಯಿಂದ ಓದುತ್ತಿಲ್ಲ. “ಓದಿ ಯಾವನು ಉದ್ಧಾರ ಆಗಿದ್ದಾನ್ರೀ…’ ಎಂಬ ಯಾರೋ ಹೀರೋ ಹೇಳಿದ ಡೈಲಾಗನ್ನೇ ಹಲವರು ನಿಜವೆಂದು ಭಾವಿಸಿದ್ದಾರೆ!

Advertisement

ಇಂಥ ಸಂದರ್ಭಗಳನ್ನು ದಿನವೂ ನೋಡುವ, ಸರ್ಕಾರಿ ಕಾಲೇಜಿನ ಪ್ರಾಚಾರ್ಯರೂ ಆಗಿರುವ, ಸೂಕ್ಷ್ಮ ಸಂವೇದನೆಗಳ ಕವಯಿತ್ರಿ ಎಂ.ಆರ್‌. ಕಮಲಾ ಅವರು ತಮ್ಮ ಇಬ್ಬರೂ ಮಕ್ಕಳ ಚಿತ್ರವನ್ನು ಎದುರಿಗಿಟ್ಟುಕೊಂಡು, ಕಾಲೇಜಿನ ಎಲ್ಲ ಮಕ್ಕಳ ಭವಿಷ್ಯದ ಕುರಿತೂ ಯೋಚಿಸುತ್ತಾ, ಗಾಬರಿಯಾಗುತ್ತಾ, ಒಂದು ಪತ್ರ ಗೀಚಿದ್ದಾರೆ…

ಪ್ರೀತಿಯ ಅಮ್ಮಿ,
ಬೇಸರವಾಗಿದೆ. ಕಾಲೇಜಿಗೆ ಬಾರದೆ ತಮ್ಮದೇ ಲೋಕದಲ್ಲಿ ಕಳೆದುಹೋಗುತ್ತಾ, ಏನನ್ನೋ ಅರಸುತ್ತಾ ಬೀದಿ ಬೀದಿಯಲ್ಲಿ ಅಡ್ಡಾಡುವವರನ್ನು, ಮಂಕಾಗಿ ಆಟದ ಮೈದಾನದ ಮೂಲೆಯಲ್ಲಿ ಕುಳಿತುಕೊಳ್ಳುವವರನ್ನು “ಸರಿಪಡಿಸಿ’ ಎಂದು ಸಹೋದ್ಯೋಗಿಗಳು ನನ್ನ ಬಳಿ ಕರೆತರುತ್ತಾರೆ. ಶಿಕ್ಷಣದ ಮಹತ್ವ, ಭವಿಷ್ಯದ ಬದುಕು ಇತ್ಯಾದಿಗಳ ಬಗ್ಗೆ ಕಿತ್ತುಹೋದ ಡೈಲಾಗ್‌ಗಳನ್ನು ಹೇಳಿ ಸೋತು ಸುಣ್ಣವಾಗಿದ್ದೇನೆ.

ಈ ಮಕ್ಕಳು ಎದುರಾಡುವುದಿಲ್ಲ, ತುಟಿ ಪಿಟಿಕ್ಕೆನ್ನುವುದಿಲ್ಲ, ಕಾರಣವನ್ನೂ ಹೇಳುವುದಿಲ್ಲ. ಒಂದು ದಿನವೂ ಕಾಲೇಜಿಗೆ ಬಾರದವರನ್ನು ಪರೀಕ್ಷೆಗೆ ಕೂರಿಸಲಾಗುವುದಿಲ್ಲ ಎಂದು ತಿಳಿದ ತಕ್ಷಣ ಪೋಷಕರು ಬಂದು ಅತ್ತು ಕರೆಯುತ್ತಾರೆ. ಅವರನ್ನು ನೋಡಲಾಗದೆ ಇನ್ನು ಹದಿನೈದು ದಿನ ನೋಡುತ್ತೇವೆ ಎಂದು ಸಮಾಧಾನ ಹೇಳಿ ಕಳುಹಿಸಿದರೆ ಮತ್ತದೇ ಗೋಳು. ಓದಿನ ಬಗ್ಗೆ ಈ ರೀತಿಯ ನಿರ್ಲಕ್ಷ್ಯ ದಿನೇದಿನೆ ಹೆಚ್ಚುತ್ತಲೇ ಹೋಗುತ್ತಿದೆ.

ಹಿಂದೆಲ್ಲ ತರಗತಿಯಲ್ಲಿ ಒಬ್ಬಿಬ್ಬರು ಇರುತ್ತಿದ್ದರೆ, ಈಗ ಇಂಥವರು ಲೆಕ್ಕಕ್ಕೇ ಸಿಗುತ್ತಿಲ್ಲ. ಯಾವ ಲೋಕದಲ್ಲಿ, ಯಾವ ಅವಮಾನದಲ್ಲಿ, ಯಾವ ವ್ಯಥೆಯಲ್ಲಿ ಈ ಮಕ್ಕಳು ಬಾಹ್ಯದ ಪರಿವೆಯಿಲ್ಲದಂತೆ ಕಳೆದುಹೋಗುತ್ತಿದ್ದಾರೆ? ಇವರೇನು ಹಗಲುಗನಸು ಕಾಣುತ್ತಿದ್ದಾರೋ, ಓದಿನಲ್ಲಿ ಆಸಕ್ತಿ ಇಲ್ಲವೋ, ಪಲಾಯನವಾದಿಗಳ್ಳೋ, ಹದಿಹರೆಯದ ಸಮಸ್ಯೆಗಳ್ಳೋ, ಊಹಿಸಲು ಸಾಧ್ಯವಿಲ್ಲದ ಸಂಕಷ್ಟಗಳಲ್ಲಿದ್ದಾರೋ,

Advertisement

ಈ ರೀತಿಯ ಸಾಂಪ್ರದಾಯಿಕ ಶಿಕ್ಷಣ ಅವರಿಗೆ ಹೊಂದಿಕೆಯಾಗುತ್ತಿಲ್ಲವೋ, ಅರ್ಥವೇ ಆಗುತ್ತಿಲ್ಲ. ಈ ಸಮಸ್ಯೆ ಬಿಡಿಸಿದಷ್ಟೂ ಗೋಜಲಾಗುತ್ತಿದೆ. ಪ್ರತಿ ಬಾರಿ ನನ್ನನ್ನು ಪೋಷಕಳ ಸ್ಥಾನದಲ್ಲಿ, ವಿದ್ಯಾರ್ಥಿಯ ಸ್ಥಾನದಲ್ಲಿ ನಿಲ್ಲಿಸಿಕೊಂಡು ಸಮಸ್ಯೆಯನ್ನು ಅರ್ಥಮಾಡಿಕೊಳ್ಳಲು ಯತ್ನಿಸುತ್ತೇನೆ.  ಮೊನ್ನೆ ಹೀಗೆಯೇ ಆಯಿತು. ಚೆನ್ನಾಗಿ ಓದುತ್ತಿದ್ದ ವಿದ್ಯಾರ್ಥಿನಿಯೊಬ್ಬಳು, ಒಂದು ವಾರ ಪತ್ತೆಯೇ ಇರಲಿಲ್ಲ.

ಮನೆಗೆ ಫೋನ್‌ ಮಾಡಿದೆ. “ಆರೋಗ್ಯ ಸರಿಯಿರಲಿಲ್ಲ, ನಾಳೆ ಬರ್ತಾಳೆ’ ಎಂದರು, ಪೋಷಕರು. ಮರುದಿನ ಗೆಲುವಾಗಿಯೇ ಬಂದಳು. “ಏನಾಗಿತ್ತು? ಯಾಕೆ ಬಂದಿರಲಿಲ್ಲ?’ ಕೇಳಿದೆ. “ಮನೆಯವರು ದೇವರಿಗೆ ಕೈಮುಗಿ ಅಂತಿದ್ರು, ದೇವರನ್ನು ಕಂಡರೆ ನನಗಾಗಲ್ಲ, ಇನ್ನೊಂದು ಸಲ ಹೀಗೆ ಹೇಳಬಾರದು ಅಂತ ಒಂದು ವಾರ ಬಾಗಿಲು ಹಾಕಿಕೊಂಡು ಕುಳಿತಿದ್ದೆ’ ಎಂದಳು. ಊಟ, ತಿಂಡಿಯೆಲ್ಲ ಕಿಟಕಿಯಲ್ಲೇ ಕೊಡುತ್ತಿದ್ದರಂತೆ!

“ಈ ಅವತಾರ ಎಲ್ಲ ಆಡೋ ಬದಲು ಗಟ್ಟಿ ಧ್ವನಿಯಲ್ಲಿ ನನಗೆ ನಂಬಿಕೆಯಿಲ್ಲ, ಕೈ ಮುಗಿಯೋದಿಲ್ಲ’ ಅಂದಿದ್ದರಾಗುತ್ತಿತ್ತು. ಇಲ್ಲ ಸ್ವಲ್ಪ ಚಾಲಾಕಿಯಾಗಿದ್ದರೆ ಅಮ್ಮನ ಬಳಿ ಕೈಮುಗೀತೀನಿ ಅಂತ ಹೇಳಿ ಮುಗಿಯದೆ ಬಂದಿದ್ದರಾಗುತ್ತಿತ್ತು’ ಎಂದೆ. ಹುಡುಗಿ ವಿಚಾರವಾದಿ ಎಂದು ನೀನು ತೀರ್ಮಾನಿಸುವ ಅಗತ್ಯವೇನಿಲ್ಲ. ಕೆಲವು ಗೆಳತಿಯರನ್ನು ಕಟ್ಟಿಕೊಂಡು ದಾರಿಯಲ್ಲಿರುವ ದೇವಸ್ಥಾನಗಳ ದೇವರಿಗೆಲ್ಲ ಕೈಯಲ್ಲಿ ಮುತ್ತುಕೊಟ್ಟುಕೊಂಡು ಎದೆಗೆ ಒತ್ತಿಕೊಳ್ಳುವುದನ್ನು ಕಣ್ಣಾರೆ ಕಂಡಿದ್ದೇನೆ.

ಇದೊಂದು ಶುದ್ಧ “ತಲೆತಿರುಕತನ’ ಎಂದು ಗೊತ್ತಿದ್ದೂ ಮಾತನಾಡಿದೆನಲ್ಲ ಎಂದು ಬೇಸರವಾಗಿ ಹೋಯಿತು. ಸದ್ಯಕ್ಕೆ ಅವಳಿಗೆ ದೆವ್ವ ಹಿಡಿದಿದೆ ಎಂದು ಮನೆಯವರು ಪೂಜೆ ಮಾಡಿಸುತ್ತಿದ್ದಾರೆ! ತರಗತಿಯಲ್ಲಿ ಹಿಂದುಳಿದವರ, ಉಪೇಕ್ಷೆಗೆ ಗುರಿಯಾದವರ, ಮನೆಯ ಪರಿಸ್ಥಿತಿಯಿಂದಾಗಿ ಅವಮಾನ ಸಂಕಟಕ್ಕೊಳಗಾದವರ ನೋವು ಅರ್ಥವಾಗುತ್ತದೆ. ಆದರೆ, ಈ ತಲೆತಿರುಕತನ ಮಾತ್ರ ನನ್ನನ್ನು ಸಿಟ್ಟಿಗೆಬ್ಬಿಸಿಬಿಡುತ್ತದೆ.

“ಈ ಡಿಗ್ರಿ, ಸರ್ಟಿಫಿಕೇಟ್‌ ಎಲ್ಲ ದಂಡ, ಹರಿದೆಸೆಯಿರಿ’ ಎಂದು ಯಾವನೋ ಹೀರೋ ಹೊಡೆದ ಡೈಲಾಗ್‌ ಹಿಡಿದುಕೊಂಡು ಹಾರಾಡುವ ಇವರಿಗೆ ಏನು ಹೇಳಬೇಕೋ ತಿಳಿಯುತ್ತಲೇ ಇಲ್ಲ. ಇವತ್ತು ಪರೀಕ್ಷೆಯಲ್ಲಿ ಬರೆಯುವುದನ್ನು ಬಿಟ್ಟು ಒಬ್ಬರಿಗೊಬ್ಬರು “ಹುಬ್ಬು ಹಾರಿಸುತ್ತ’ ಕುಳಿತಿದ್ದರು. ಭರತನಾಟ್ಯ ಕಲಿತಿರುವ ನನಗೆ ಹುಬ್ಬು ಹಾರಿಸುವುದು ಕಷ್ಟವೇನಿರಲಿಲ್ಲವಾದದ್ದರಿಂದ ನಾನೂ ಒಮ್ಮೆ ಹಾರಿಸಿದೆ.

ಬೆಚ್ಚಿಬಿದ್ದು ಬರೆಯಲಾರಂಭಿಸಿದರು. ಯಾವುದೋ ಮಲಯಾಳಂ ಚಿತ್ರದ ಟ್ರೆಂಡ್‌ ಎಂದು ಈಗತಾನೇ ಪುಟ್ಟು ಹೇಳಿದ. ಶಾಲೆಯನ್ನು ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದ ಪುಟ್ಟುವಿಗೆ ಚಿಕ್ಕವನಿದ್ದಾಗ ಅನೇಕ ಬಾರಿ ಏಟು ಕೊಟ್ಟಿದ್ದು ಇದೆ. ಆದರೆ, ಮರುಕ್ಷಣವೇ ಮರುಗಿ ಸಮಾಧಾನ ಪಡಿಸಿದ್ದೂ ಇದೆ. ನೀನಂತೂ ನೂರೆಂಟು ತರಗತಿಗಳಿಗೆ ಸೇರಿಕೊಂಡು ಹೋಗಿದ್ದಕ್ಕಿಂತ ಬಿಟ್ಟಿದ್ದೇ ಹೆಚ್ಚು!

ಆಟವಾಡಲು ಪುರುಸೊತ್ತಿಲ್ಲದಂತೆ ಮಣಭಾರದ ಹೊರೆಯನ್ನು ಹೊತ್ತು ನಡೆಯುವ ಪುಟ್ಟಮಕ್ಕಳು ನನ್ನಲ್ಲಿ ತೀರಾ ಕಸಿವಿಸಿ ಹುಟ್ಟಿಸಿಬಿಡುತ್ತಾರೆ. ಹಾಗಾಗಿಯೇ, ಕೆಲವು ಮಕ್ಕಳು ಈ ವಾಸ್ತವ ಲೋಕದ ಕ್ರೌರ್ಯವನ್ನು ಮರೆಯಲು ಕನಸಿಗೆ ಜಾರಿ, ಬಾಹ್ಯ ಲೋಕಕ್ಕೂ ತಮಗೂ ಸಂಬಂಧವಿಲ್ಲದಂತೆ ಇದ್ದುಬಿಡುತ್ತಾರೆ ಅನ್ನಿಸುತ್ತದೆ. ಆಟವಾಡುವುದಕ್ಕೂ ಬಿಡದೇ ಸಂಜೆಯ ಸಮಯದಲ್ಲಿ ಪೋಷಕರು ಟ್ಯೂಷನ್‌ ಎಂಬ ಕತ್ತಲ ಮನೆಗಳಿಗೆ ಕಳಿಸುವುದನ್ನು ಕಂಡಾಗಂತೂ ಹುಚ್ಚು ಹಿಡಿದಂತಾಗುತ್ತದೆ. 

ನಿನಗಿಂದು ವಿ.ಜಿ. ಭಟ್ಟರ “ಕನಸಿನಲ್ಲಿ’ ಎಂಬ ಕವಿತೆಯ ಬಗ್ಗೆ ಹೇಳುತ್ತೇನೆ. ಈ ಕವನದ ಕೇಂದ್ರ ವ್ಯಕ್ತಿ ಬಾಲಕಿಯೋ ಬಾಲಕನೋ ತಿಳಿಯುವುದಿಲ್ಲ. ತಂದೆ- ಮಗು ಎಂದು ಭಾವಿಸೋಣ. ತಂದೆ ಮಗುವಿಗೆ ವಾತ್ಸಲ್ಯವನ್ನು ತೋರದೆ ದಂಡಿಸುವ ಸ್ವಭಾವದನಾದದ್ದುರಿಂದ ಮಗುವಿಗೆ ಪ್ರೀತಿಗಿಂತ ಹೆಚ್ಚು ಭಯವೇ ತುಂಬಿಕೊಂಡಿದೆ. ಇದೆಲ್ಲದರಿಂದ ತಪ್ಪಿಸಿಕೊಳ್ಳಲು ಬಾಲಕ ಕನಸಿನಲ್ಲಿ ಕಾಡಿಗೆ ಓಡುತ್ತಾನೆ. ತಂದೆ ಕೊಡುವ ಏಟು, ಕಾಡಿನ ಪಶು ಪಕ್ಷಿಗಳು ಮಾಡುವ ಉಪಚಾರ ವಿರುದ್ಧ ಕ್ರಿಯೆಗಳು.

“ಕಾಡಿಗೆ ಹೋದೆನು ಕನಸಿನಲಿ 
ಒಯ್ದಿತು ನನ್ನನು ಪಟ್ಟೆ ಹುಲಿ
ಸೊಂಡಿಲಿನಲಿ ತಣ್ಣೀರನು ತಂದು 
ಆನೆಯು ಜಳಕವ ಮಾಡಿಸಿತು
ಮರಗಳು ನೀಡಿದ ಹಣ್ಣುಗಳನ್ನು 
ಸಿಂಹವು ಊಡಿಸಿತು

ಹಂಸಗಳೆಲ್ಲ ಹಾಸಿಗೆ ಮಾಡಿ
ಹಕ್ಕಿಗಳೆಲ್ಲ ಹಾಡನು ಹಾಡಿ
ಹೊಲಗಳು ಕತೆಯನ್ನು ಹೇಳಿದವು 
ನಿಮ್ಮೂರಿನ ಮಳೆ ಬೆಳೆ ಹೇಗೆಂದು 
ನರಿಗಳು ಕೇಳಿದವು.”

ಕವನ ಹೀಗೆ ಮುಂದುವರಿಯುತ್ತದೆ. ಆದರೆ, ಕನಸಿನಲ್ಲೂ ತಂದೆ ಮಾತ್ರ ಛಡಿಯನ್ನು ಹಿಡಿದು ಹೊಡೆಯಲು ಬರುತ್ತಾನೆ. ಪ್ರಾಣಿಗಳೆಲ್ಲ ಹೆದರಿ ಓಡುತ್ತವೆ. ಬೆನ್ನಿಗೆ ಏಟು ಬೀಳುತ್ತಿದೆ ಎಂದು ಮಗು ಕಿರುಚುವಾಗ ಎಚ್ಚರವಾಗುತ್ತದೆ. ಕ್ರೂರ ಪ್ರಾಣಿಗಳೆಲ್ಲ ಮಗುವಿನೊಡನೆ ಮೃದುವಾಗಿ ವರ್ತಿಸಿದರೆ, ಕನಸಿನಲ್ಲೂ ತಂದೆ ಕ್ರೂರಿಯಾಗಿ ಕಾಣುತ್ತಾನೆ.

ಪೋಷಕರು ನನ್ನ ಕಣ್ಣೆದುರಿಗೆ ಹೀಗೆ ಮಕ್ಕಳನ್ನು ಬಡಿಯಲು ಕಾರಣವೇನು? ಸರೀಕರ ಮುಂದೆ ತಮಗಾಗುವ ಅವಮಾನ, ಬಡತನ, ಅಸಹಾಯಕತೆ, ತಾವು ಸಾಧಿಸಲಾಗದ್ದನ್ನು ಮಕ್ಕಳು ಮಾಡಲಿ ಎಂಬ  ಕನಸು ಇತ್ಯಾದಿಗಳನ್ನು ಕೊಂಚ ಅರ್ಥಮಾಡಿಕೊಳ್ಳಬಹುದೇನೋ ಆದರೆ, ಹೊಡೆಯುವುದನ್ನಲ್ಲ! ನಿಷ್ಕಾರಣ ಮಕ್ಕಳನ್ನು ಬಡಿಯುವ ಜನರ ಕ್ರೌರ್ಯ ನೆತ್ತರನ್ನು ಹೆಪ್ಪುಗಟ್ಟಿಸಿಬಿಡುತ್ತದೆ.

ಕನಸು ಕಾಣುತ್ತಿರುವ ಸಮಯದಲ್ಲೂ ಮಗುವಿಗೆ ತಂದೆಯ ಕ್ರೂರತನ ಕಾಡುತ್ತಿದೆ ಎಂದರೆ ಅದೆಷ್ಟು ಭಯಾನಕ. ಹೊರಗಿನ ಪೈಪೋಟಿಗೆ ಸಿಲುಕಿ ಮಕ್ಕಳಿಗೆ ವಿಚಿತ್ರವಾದ ಮಾನಸಿಕ, ದೈಹಿಕ ಹಿಂಸೆಗಳನ್ನು ಕೊಡುವುದನ್ನು ಪೋಷಕರು ನಿಲ್ಲಿಸಿ ಅವರ ಪ್ರತಿಭೆ ಸಹಜವಾಗಿ ಅರಳುವಂತೆ ನೋಡಿಕೊಳ್ಳಬೇಕು. ಆದರೆ, ನಮ್ಮ ಈಗಿನ ವಿದ್ಯಾಭ್ಯಾಸ ಕ್ರಮ ಅದಕ್ಕೆ ಪೂರಕವಾಗಿಲ್ಲ. ಆ ಬಗ್ಗೆ ಮತ್ತೂಮ್ಮೆ ಬರೆಯುತ್ತೇನೆ.

ನಿನ್ನ ಅಮ್ಮ
* ಎಂ.ಆರ್‌. ಕಮಲಾ

Advertisement

Udayavani is now on Telegram. Click here to join our channel and stay updated with the latest news.

Next