Advertisement

ಮೈತ್ರಿಗೆ ಮೈಸೂರು ಕಗ್ಗಂಟು

12:30 AM Mar 12, 2019 | Team Udayavani |

ಬೆಂಗಳೂರು: ಲೋಕಸಭೆ ಮಹಾ ಸಮರಕ್ಕೆ ದಿನಾಂಕ ಘೋಷಣೆಯಾಗಿದ್ದು ಎಲ್ಲಾ ರಾಜಕೀಯ ಪಕ್ಷಗಳಲ್ಲಿ ಬಿರುಸಿನ ಚಟುವಟಿಕೆಗಳು ಕಾಣಿಸಿಕೊಂಡಿವೆ. ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಡುವೆ ಸೀಟು ಹಂಚಿಕೆ ಬಿಕ್ಕಟ್ಟು ಮುಂದುವರಿದಿದ್ದು, ಹಾಲಿ ಸಂಸದರಿರುವ ಕ್ಷೇತ್ರಗಳನ್ನು ಬಿಟ್ಟುಕೊಡಲು ಕೈ ಪಾಳಯ ಹಿಂದೇಟು ಹಾಕುತ್ತಿದೆ. ಅದರಲ್ಲೂ ಮೈಸೂರು ಕ್ಷೇತ್ರ ಬಿಟ್ಟುಕೊಡಲು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಒಪ್ಪದೇ ಇರುವುದರಿಂದ ಇದು ಇನ್ನಷ್ಟು ಕಗ್ಗಂಟಾಗುವ ಸಾಧ್ಯತೆ ಇದೆ.

Advertisement

ದೆಹಲಿಯಲ್ಲಿ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌ ನೇತೃತ್ವದಲ್ಲಿ ಸ್ಕ್ರೀನಿಂಗ್‌ ಕಮಿಟಿ ಸಭೆ ನಡೆದರೂ, ಜೆಡಿಎಸ್‌ಗೆ ಯಾವ ಕ್ಷೇತ್ರಗಳನ್ನು ಬಿಟ್ಟುಕೊಡಬೇಕು ಎಂಬುದರ ಬಗ್ಗೆ ಇನ್ನೂ ನಿರ್ಧಾರವಾಗಲಿಲ್ಲ. ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌, ಡಿಸಿಎಂ ಡಾ. ಜಿ.ಪರಮೇಶ್ವರ್‌ ಹಾಗೂ ರಾಜ್ಯ ಉಸ್ತುವಾರಿ ಕಾರ್ಯದರ್ಶಿಗಳು ಪಾಲ್ಗೊಂಡಿದ್ದ ಸಭೆಯಲ್ಲಿ ಜೆಡಿಎಸ್‌ಗೆ ಕ್ಷೇತ್ರಗಳನ್ನು ಬಿಟ್ಟುಕೊಡುವ ವಿಚಾರದಲ್ಲಿ ಸುದೀರ್ಘ‌ ಚರ್ಚೆಯಾಗಿದೆ. ಹಾಲಿ ಸಂಸದರಿರುವ ಕ್ಷೇತ್ರಗಳನ್ನು ಜೆಡಿಎಸ್‌ಗೆ ಬಿಟ್ಟು ಕೊಡಬಾರದು ಎಂದು ರಾಜ್ಯ ನಾಯಕರು ಮತ್ತೆ ಹೈಕಮಾಂಡ್‌ಗೆ ಮನವಿ ಮಾಡಿದ್ದಾರೆ. ಆದರೂ, ತುಮಕೂರು ಮತ್ತು ಚಿಕ್ಕಬಳ್ಳಾಪುರ ಕ್ಷೇತ್ರಗಳನ್ನು ಬಿಟ್ಟುಕೊಡುವ ಪ್ರಸಂಗ ಎದುರಾಗಬಹುದು ಎಂಬ ಮಾತುಗಳು ಕಾಂಗ್ರೆಸ್‌ ವಲಯದಲ್ಲಿ ಕೇಳಿ ಬರುತ್ತಿವೆ. ಈ ನಿಟ್ಟಿನಲ್ಲಿ ಹೈಕಮಾಂಡ್‌ ನಿರ್ಧಾರಕ್ಕೆ ಬದ್ಧರಾಗಿರಲು ರಾಜ್ಯ ನಾಯಕರು ತೀರ್ಮಾನಿಸಿದ್ದಾರೆ ಎನ್ನಲಾಗಿದೆ.

ಈ ಮಧ್ಯೆ, ಜೆಡಿಎಸ್‌ ಕೇಳಿರುವ 10ರಲ್ಲಿ ಕಡೇ ಪಕ್ಷ ಎಂಟು ಬಿಟ್ಟುಕೊಡುವ ಪ್ರಸಂಗ ಎದುರಾಗಬಹುದು. ಇಂಥ ಸಂದರ್ಭದಲ್ಲಿ ಯಾವ ಕ್ಷೇತ್ರಗಳನ್ನು ಬಿಟ್ಟುಕೊಡಬಹುದು ಎಂಬ ಬಗ್ಗೆಯೂ ಚರ್ಚಿಸಲಾಗಿದೆ. ಸದ್ಯ ಜೆಡಿಎಸ್‌ನ ಹಾಲಿ ಕ್ಷೇತ್ರಗಳ ಜತೆಗೆ ಶಿವಮೊಗ್ಗ, ಬೆಂಗಳೂರು ಉತ್ತರ, ವಿಜಯಪುರ  ಸೇರಿ ಒಟ್ಟು ಆರು ಕ್ಷೇತ್ರಗಳನ್ನು ಬಿಟ್ಟು ಕೊಡುವ ಕುರಿತು ನಾಯಕರಲ್ಲಿ ಸಹಮತ ವ್ಯಕ್ತವಾಗಿದೆ ಎಂದು ತಿಳಿದು ಬಂದಿದೆ. ಆದರೆ, ಉತ್ತರ ಕನ್ನಡ ಮತ್ತು ಉಡುಪಿ-ಚಿಕ್ಕಮಗಳೂರು ಕ್ಷೇತ್ರಗಳ ಬಿಟ್ಟುಕೊಡುವ ಬಗ್ಗೆ ಸಹಮತ ವ್ಯಕ್ತವಾಗಿಲ್ಲ ಎನ್ನಲಾಗಿದೆ.

ಮೈಸೂರು ಫ್ರೆಂಡ್ಲಿ ಫೈಟ್‌?: ಜೆಡಿಎಸ್‌ ಪ್ರಮುಖವಾಗಿ ಪಟ್ಟು ಹಿಡಿದಿರುವ ಮೈಸೂರು ಲೋಕಸಭಾ ಕ್ಷೇತ್ರವನ್ನು ಯಾವುದೇ ಕಾರಣಕ್ಕೂ ಬಿಟ್ಟು ಕೊಡುವುದು ಬೇಡ ಎಂದು ಸಿದ್ದರಾಮಯ್ಯ ಸ್ಪಷ್ಟವಾಗಿ ಹೇಳಿದ್ದಾರೆ ಎಂದು ತಿಳಿದು ಬಂದಿದೆ. ಅಗತ್ಯ ಬಿದ್ದರೆ ಮೈಸೂರಿನಲ್ಲಿ ಫ್ರೆಂಡ್ಲಿ ಫೈಟ್‌ ಮಾಡಬಹುದು ಎಂಬ ಸಲಹೆಯನ್ನೂ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಸದ್ಯಕ್ಕೆ ಬಿಡುಗಡೆ ಇಲ್ಲ: ಜೆಡಿಎಸ್‌ ಜೊತೆ ಮೈತ್ರಿ ಮಾಡಿಕೊಂಡಿರುವುದರಿಂದ ಜೆಡಿಎಸ್‌ ಜೊತೆಗೆ ಸೀಟು ಹಂಚಿಕೆ ಪೂರ್ಣಗೊಳ್ಳುವವರೆಗೂ ಕಾಂಗ್ರೆಸ್‌ ಅಧಿಕೃತ ಪಟ್ಟಿ ಬಿಡುಗಡೆ ಮಾಡದಿರಲು ನಿರ್ಧರಿಸಿದೆ. ಸದ್ಯ ಎರಡು-ಮೂರು ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಸಿದ್ಧªಪಡಿಸಿಕೊಂಡಿದ್ದರೂ, ಮಾರ್ಚ್‌ 16ರಂದು ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅಧ್ಯಕ್ಷತೆಯ ಕೇಂದ್ರ ಚುನಾವಣಾ ಸಮಿತಿ ಎದುರು ಚರ್ಚಿಸಿ ಪಟ್ಟಿ ಅಂತಿಮಗೊಳಿಸಲು ನಿರ್ಧರಿಸಲಾಗಿದೆ ಎನ್ನಲಾಗಿದೆ.

Advertisement

ಜೆಡಿಎಸ್‌ ನಾಯಕರ ಜೊತೆ ಮತ್ತೂಂದು ಸಭೆ: ಸೀಟು ಹಂಚಿಕೆ ಕುರಿತು ಈಗಾಗಲೇ ಜೆಡಿಎಸ್‌ ನಾಯಕರ ಜೊತೆ ಮೂರು ಬಾರಿ ಸಭೆಗಳನ್ನು ನಡೆಸಿರುವ ಕಾಂಗ್ರೆಸ್‌ ನಾಯಕರು, ಮಾ.16 ರೊಳಗೆ ಮತ್ತೆ ಜೆಡಿಎಸ್‌ ನಾಯಕರ ಜೊತೆ ಅಂತಿಮ ಸುತ್ತಿನ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.

ಹಿರಿಯರ ಅಭಿಪ್ರಾಯ ಪಡೆದ ಕೆಸಿ: ಸ್ಕ್ರೀನಿಂಗ್‌ ಕಮಿಟಿ ಸಭೆಗೂ ಮುನ್ನ ಕೆ.ಸಿ.ವೇಣುಗೋಪಾಲ್‌ ಅವರು ಲೋಕಸಭೆಯ ಕಾಂಗ್ರೆಸ್‌ ಸಂಸದೀಯ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಹಿರಿಯ ನಾಯಕರಾದ ಎಂ.ವೀರಪ್ಪ ಮೊಯಿಲಿ, ಕೆ.ಎಚ್‌.ಮುನಿಯಪ್ಪ, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್‌ ಖಂಡ್ರೆ, ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್‌ ಅವರೊಂದಿಗೆ ಚರ್ಚಿಸಿದ್ದಾರೆ.

ಕಾಂಗ್ರೆಸ್‌ ಹಾಲಿ ಸಂಸದರಿರುವ ಕ್ಷೇತ್ರಗಳನ್ನು ಬಿಟ್ಟುಕೊಡುವ ಬಗ್ಗೆ ನಿರ್ಧಾರವಾಗಿಲ್ಲ. ಜೆಡಿಎಸ್‌ಗೆ ಎಷ್ಟು ಸ್ಥಾನ ಬಿಟ್ಟು ಕೊಡಲಾಗುವುದು ಎಂದು ನಾನು ಹೇಗೆ ಹೇಳಲಿ, ಮೈಸೂರು ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟು ಕೊಡುವ ಬಗ್ಗೆ ಪಕ್ಷದ ಸಭೆಯಲ್ಲಿ ನನ್ನ ನಿರ್ಧಾರ ತಿಳಿಸಿದ್ದೇನೆ
– ಸಿದ್ದರಾಮಯ್ಯ, ಶಾಸಕಾಂಗ ಪಕ್ಷದ ನಾಯಕ

Advertisement

Udayavani is now on Telegram. Click here to join our channel and stay updated with the latest news.

Next