Advertisement

700 ಕೋಟಿ ವೆಚ್ಚದ ʼಕಲ್ಕಿ 2898 ಎಡಿʼ.. ಇಲ್ಲಿದೆ ಅತ್ಯಂತ ದುಬಾರಿ ಭಾರತೀಯ ಚಿತ್ರಗಳ ಪಟ್ಟಿ

11:51 AM Jun 30, 2024 | Team Udayavani |

ಭಾರತೀಯ ಚಿತ್ರರಂಗ ವರ್ಷ ಕಳೆದಂತೆ ಶ್ರೀಮಂತ ಚಿತ್ರರಂಗವಾಗುವತ್ತ ಹೆಜ್ಜೆ ಹಾಕುತ್ತಿದೆ. ಕಳೆದ ಕೆಲ ವರ್ಷಗಳಲ್ಲಿ ಬಂದಿರುವ ದುಬಾರಿ ಸಿನಿಮಾಗಳು ಹಾಲಿವುಡ್‌ ವೇದಿಕೆಯಲ್ಲೂ ಸದ್ದು ಮಾಡಿರುವುದು ಭಾರತೀಯ ಚಿತ್ರರಂಗಕ್ಕೆ ಹೆಮ್ಮೆತರುವ ವಿಚಾರ.

Advertisement

‘ಮಗಧೀರʼ, ʼಬಾಹುಬಲಿʼ(1,2), ʼಪೊನ್ನಿಯಿನ್ ಸೆಲ್ವನ್‌ʼ(1,2), ʼಕೆಜಿಎಫ್(1‌,2).. ಹೀಗೆ ಕಳೆದ ಕೆಲ ವರ್ಷಗಳಲ್ಲಿ ಬಂದ ಈ ಸಿನಿಮಾಗಳು ಭಾರತೀಯ ಚಿತ್ರರಂಗದ ದಿಕ್ಕನ್ನೇ ಬದಲಾಯಿಸಿವೆ ಎಂದರೆ ತಪ್ಪಾಗದು. ಈ ಎಲ್ಲಾ ಚಿತ್ರಗಳು ಲಕ್ಷ ರೂ. ಖರ್ಚುಗಳಲ್ಲಿ ನಿರ್ಮಾಣವಾಗಿರುವಂಥದ್ದಲ್ಲ. ಈ ಚಿತ್ರಗಳ ತಯಾರಿಗೆ ವರ್ಷಗಳ ಪರಿಶ್ರಮ, ಕೋಟಿ ಕೋಟಿ ಬಂಡವಾಳಗಳನ್ನು ನೀರಿನಂತೆ ಸುರಿಯಲಾಗಿದೆ.

ದುಬಾರಿ ಸೆಟ್‌, ವಿಎಫ್‌ ಎಕ್ಸ್‌,ನುರಿತ ತಂತ್ರಜ್ಞರು, ವಿದೇಶಿ ತಂತ್ರಜ್ಞಾನ, ಲೋಕೇಷನ್‌, ಎಲ್ಲವನ್ನೂ ಅಳವಡಿಸಿಕೊಂಡು ಈ ಚಿತ್ರಗಳನ್ನು ನಿರ್ಮಿಸಲಾಗುತ್ತದೆ.

ಕೋಟಿ ಕೋಟಿ ಖರ್ಚು ಮಾಡಿದರೂ ಲಾಭವನ್ನು ತರುವ ವ್ಯಾಪಾರವನ್ನು ಈ ಚಿತ್ರಗಳು ಮಾಡಿಕೊಟ್ಟಿವೆ. ಅದರ ಹಿಂದೆಯೂ ವಿಭಿನ್ನ ಪ್ರಚಾರದ ಕ್ಯಾಂಪೇನ್‌, ಪ್ಯಾನ್‌ ಇಂಡಿಯಾ ಎಂಬ ಕಾನ್ಸೆಪ್ಟ್‌ ಕೂಡ ಅಡಗಿದೆ.

ಹಾಗಂತ ದುಬಾರಿ ವೆಚ್ಚದಲ್ಲಿ ತಯಾರಾದ ಚಿತ್ರಗಳೆಲ್ಲವೂ ಹಿಟ್‌ ಆಗಿವೆ ಅಥವಾ ಅಷ್ಟೇ ದೊಡ್ಡಮಟ್ಟದಲ್ಲಿ ಹಣಗಳಿಸಿದೆ ಎಂದರೆ ಇಲ್ಲ. ʼಆದಿಪುರುಷ್‌ʼ ನಂತಹ ಚಿತ್ರ 500+ ಕೋಟಿಯ ಚಿತ್ರ ಬಾಕ್ಸ್‌ ಆಫೀಸ್‌ ನಲ್ಲಿ ಸೋತು ಸುಣ್ಣವಾದ ಉದಾಹರಣೆ ಕೂಡ ನಮ್ಮಲ್ಲಿದೆ.

Advertisement

ಸದ್ಯ ಭಾರತೀಯ ಚಿತ್ರರಂಗ ಹಾಲಿವುಡ್‌ ರೇಂಜ್‌ ನಲ್ಲಿ ತನ್ನ ವಿಎಫ್‌ ಎಕ್ಸ್‌ ವಿಚಾರಕ್ಕೆ ಸದ್ದು ಮಾಡಿದೆ. ಅದು ನಾಗ್‌ ಅಶ್ವಿನ್‌ ಅವರ ʼಕಲ್ಕಿ 2898 ಎಡಿʼ ಚಿತ್ರದಿಂದಾಗಿ.!  ಹೌದು ಹಾಲಿವುಡ್‌ ನ ʼಡ್ಯೂನ್ʼ,  ʼಓಪನ್‌ಹೈಮರ್ʼ ಪ್ರಾಜೆಕ್ಟ್‌ ಗಾಗಿ ಕೆಲಸ ಮಾಡಿದ ವಿಎಫ್‌ ಎಕ್ಸ್‌ ಸಂಸ್ಥೆ ʼಕಲ್ಕಿʼಗಾಗಿ ಕೆಲಸ ಮಾಡಿದೆ. ಸುಮಾರು 600-700 ಕೋಟಿ ವೆಚ್ಚದಲ್ಲಿ ಚಿತ್ರ ನಿರ್ಮಾಣವಾಗಿದೆ.

ಅಮೋಘ ಹಾಗೂ ದುಬಾರಿ ದೃಶ್ಯ ಕಾವ್ಯದಿಂದ ಜನಮನವನ್ನು ʼಕಲ್ಕಿʼ ಗೆದ್ದಿದೆ. ʼಕಲ್ಕಿʼಯಂತೆಯೇ ದುಬಾರಿ ವೆಚ್ಚದಲ್ಲಿ ತಯಾರಾದ ಭಾರತೀಯ ಚಿತ್ರಗಳನ್ನು ಪಟ್ಟಿ ಮಾಡುತ್ತಾ ಹೋದರೆ ಹಲವು ಚಿತ್ರಗಳು ಲಿಸ್ಟ್‌ ನಲ್ಲಿವೆ..

2.0: ಶಂಕರ್‌ ಅವರ 2.0 ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಸಿನಿಮಾಗಳಲ್ಲಿ ಒಂದು. 570 ಕೋಟಿ ರೂ. ಬಂಡವಾಳದಲ್ಲಿ ದುಬಾರಿ ವಿಎಫ್‌ ಎಕ್ಸ್‌ ನಲ್ಲಿ ಬಂದ ಈ ಸಿನಿಮಾ 699 ಕೋಟಿ ಗೂ ಅಧಿಕ ಕಮಾಯಿ ಮಾಡುವ ಮೂಲಕ ಬಾಕ್ಸ್‌ ಆಫೀಸ್‌ ನಲ್ಲಿ ಲಾಭವನ್ನು ತಂದುಕೊಟ್ಟಿತು.

ʼಆರ್‌ ಆರ್‌ ಆರ್‌ʼ, ʼಪೊನ್ನಿಯಿನ್ ಸೆಲ್ವನ್‌ʼ(1ʼ2): ಭಾರತೀಯ ಚಿತ್ರ ಜಗತ್ತಿನಲ್ಲಿ ಈ ಎರಡೂ ಸಿನಿಮಾಗಳಿಗೆ ಪ್ರೇಕ್ಷಕರ ಹೃದಯದಲ್ಲಿ ವಿಶೇಷ ಸ್ಥಾನವಿದೆ. ಇಬ್ಬರು ಖ್ಯಾತ ನಿರ್ದೇಶಕರ ಕಣ್ಣಿನಲ್ಲಿ ಮೂಡಿಬಂದ ಯುದ್ದ ಲೋಕದ ಈ ಸಿನಿಮಾ ಅಂತಾರಾಷ್ಟ್ರೀಯ ರಂಗದಲ್ಲಿ ಮಿಂಚಿವೆ.

ರಾಜಮೌಳಿ ಅವರ ʼಆರ್‌ ಆರ್‌ ಆರ್ʼ ಹಾಗೂ ಮಣಿರತ್ನಂ ಅವರ ʼ ʼಪೊನ್ನಿಯಿನ್ ಸೆಲ್ವನ್‌ʼ 550 ಕೋಟಿ ರೂ.ಬಜೆಟ್‌ ನಲ್ಲಿ ತಯಾರಾಗಿತ್ತು. ‘ಆರ್‌ ಆರ್‌ ಆರ್‌ʼ ವರ್ಲ್ಡ್‌ ವೈಡ್‌ 1,387.26 ಕೋಟಿ ರೂ. ಗಳಿಕೆ ಕಂಡರೆ, ʼಪೊನ್ನಿಯಿನ್ ಸೆಲ್ವನ್‌ʼ ಎರಡೂ ಭಾಗಗಳು ಸೇರಿ 500 ಕೋಟಿಗೂ ಅಧಿಕ ಕಲೆಕ್ಷನ್‌ ಮಾಡಿತ್ತು.

ʼಆದಿಪುರುಷ್‌ʼ: ಪ್ರಭಾಸ್‌ ವೃತ್ತಿ ಬದುಕಿನ ದೊಡ್ಡ ಸೋಲುಗಳಲ್ಲಿ ʼಆದಿಪುರುಷ್‌ʼ ಕೂಡ ಒಂದು. ದುಬಾರಿ ವಿಎಫ್‌ ಎಕ್ಸ್‌ ಎಂದು ಕಳಪೆ ಗುಣಮಟ್ಟದ ವಿಎಫ್‌ ಎಕ್ಸ್‌ ಗಾಗಿ ಕೋಟಿ ಸುರಿದ ಈ ಚಿತ್ರದ ಬಗ್ಗೆ ನೆಗೆಟಿವ್‌ ಕಾಮೆಂಟ್‌ ಗಳೇ ಹೆಚ್ಚಾಗಿ ಹರಿದಾಡಿತ್ತು. 500 -700 ಕೋಟಿ ಅಧಿಕ ಬಜೆಟ್‌ ನಲ್ಲಿ ನಿರ್ಮಾಣವಾದ ಈ ಚಿತ್ರದ ಕೊನೆಗೆ ಗಳಿಸಿದ್ದು ಬರೀ 450 ಕೋಟಿ ರೂ. ಮಾತ್ರ.

ಬಾಹುಬಲಿ(1,2): ರಾಜಮೌಳಿ ಮುಟ್ಟಿದ್ದೆಲ್ಲಾ ಚಿನ್ನವೆಂದು ಹೇಳಲಾಗುತ್ತಿದ್ದ ಮಾತನ್ನೇ ಮತ್ತೊಮ್ಮೆ ಈ ಎರಡೂ ಸಿನಿಮಾಗಳ ಮೂಲಕ ಸಾಬೀತು ಪಡಿಸಿದ್ದರು. ಪ್ರಭಾಸ್‌ ವೃತ್ತಿ ಬದುಕಿಗೆ ದೊಡ್ಡ ತಿರುವು ಕೊಟ್ಟು ಅವರನ್ನು ಗ್ಲೋಬಲ್‌ ಸ್ಟಾರ್‌ ನ್ನಾಗಿ ಮಾಡಿದ್ದು ಈ ಸಿನಿಮಾವೆಂದರೆ ತಪ್ಪಾಗದು. ಮೊದಲ ಭಾಗ 180 ಕೋಟಿ ರೂ ವೆಚ್ಚದಲ್ಲಿ ತಯಾರಾದರೆ, ಎರಡನೇ ಭಾಗ 250 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿತ್ತು. ಮೊದಲ ಭಾಗ 600 ರಿಂದ 650 ಕೋಟಿ ರೂ. ವರ್ಲ್ಡ್‌ ವೈಡ್‌ ಗಳಿಕೆ ಕಂಡಿತು. ಎರಡನೇ ಭಾಗ 1500 ಕೋಟಿ ರೂ. ಕಮಾಯಿ ಮಾಡಿತು.

ಬ್ರಹ್ಮಾಸ್ತ್ರ ಪಾರ್ಟ್‌ -1(ಶಿವ): ಅಯಾನ್‌ ಮುಖರ್ಜಿ ಅವರ ʼಬ್ರಹ್ಮಾಸ್ತ್ರʼ ರಣ್ಬೀರ್‌ ಕಪೂರ್‌ ಅವರ ವೃತ್ತಿ ಬದುಕಿನಲ್ಲಿ ಸಿಕ್ಕ ವಿಶೇಷ ಸಿನಿಮಾ. ಅದಕ್ಕೆ ಕಾರಣ ಈ ಸಿನಿಮಾದ ಬಳಿಕ ಅವರ ಬೇಡಿಕೆ ಬಿಟೌನ್‌ ನಲ್ಲಿ ಹೆಚ್ಚಾಯಿತು. ಇದಾದ ಬಳಿಕ ಅವರು ʼಅನಿಮಲ್‌ʼ ಸಿನಿಮಾದಲ್ಲಿ ಕಾಣಿಸಿಕೊಂಡು ಮತ್ತೊಮ್ಮೆ ಕೋಟಿ ಕ್ಲಬ್‌ ಸೇರಿದರು. ಬ್ರಹ್ಮಾಸ್ತ್ರ ಕಥೆಯ ವಿಚಾರದಲ್ಲಿ ಎಷ್ಟು ಸದ್ದು ಮಾಡಿತ್ತೋ, ವಿಎಫ್‌ ಎಕ್ಸ್‌ ನಿಂದಲೂ ಅಷ್ಟೇ ಸದ್ದು ಮಾಡಿತ್ತು. 375 -400 ಕೋಟಿ ವೆಚ್ಚದಲ್ಲಿ ತಯಾರಾದ ಈ ಸಿನಿಮಾ ಒಟ್ಟು 418 ಕೋಟಿ ಗಳಿಕೆ ಕಂಡು ಭರ್ಜರಿ ಲಾಭವನ್ನು ತಂದುಕೊಟ್ಟಿತು.

ʼಸಾಹೋʼ ಮತ್ತು ʼಬಡೇ ಮಿಯಾನ್ ಚೋಟೆ ಮಿಯಾನ್ʼ : ಕೆಲ ಚಿತ್ರಗಳ ಮೇಲೆ ರಿಲೀಸ್‌ ಗೂ ಮುನ್ನ ದೊಡ್ಡ ನಿರೀಕ್ಷೆಗಳಿರುತ್ತದೆ. ಪೋಸ್ಟರ್‌, ಟೀಸರ್‌ನಿಂದ ಅವುಗಳ ಹೈಪ್‌ ಹೆಚ್ಚಾಗುತ್ತ ಹೋಗುತ್ತದೆ. ಇದೇ ರೀತಿ ಈ ಎರಡು ಸಿನಿಮಾಗಳ ವಿಚಾರದಲ್ಲೂ ಆಗಿತ್ತು. ಈ ಎರಡು ಚಿತ್ರಗಳು 350 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿತ್ತು.  ಭಾರೀ ನಿರೀಕ್ಷೆಯನ್ನು ಹುಟ್ಟಿಹಾಕಿದ್ದ ಈ ಚಿತ್ರಗಳು ರಿಲೀಸ್‌ ಬಳಿ ನಿರಾಸೆಯಾಗಿಸಿತು.

ʼಸಾಹೋʼ ವರ್ಲ್ಡ್‌ ವೈಡ್‌ 419 ಕೋಟಿ ರೂ.ಗಳಿಸಿತು. ಇತ್ತ ಅಕ್ಷಯ್‌ ಕುಮಾರ್‌ ಟೈಗರ್‌ ಶ್ರಾಫ್‌ ಅವರ  ʼಬಡೇ ಮಿಯಾನ್ ಚೋಟೆ ಮಿಯಾನ್ʼ ಕೇವಲ 106 ಕೋಟಿ ರೂ. ಗಳಿಸಿತು.

ʼಥಗ್ಸ್‌ ಆಫ್‌ ಹಿಂದೂಸ್ತಾನ್ʼ: ಅಮೀರ್‌ ಖಾನ್‌, ಅಮಿತಾಭ್‌ ನಂತಹ ಬಿಗ್‌ ಸ್ಟಾರ್‌ ಗಳಿದ್ದರೂ ʼಥಗ್ಸ್‌ ಆಫ್‌ ಹಿಂದೂಸ್ತಾನ್‌ʼ ಹೀನಾಯವಾಗಿ ಸೋತ ಚಿತ್ರಗಳ ಸಾಲಿಗೆ ಸೇರಿತು. 2018 ರಲ್ಲಿ ಈ ಬಂದ ಈ ಸಿನಿಮಾ 220 ಕೋಟಿ ರೂ.ಬಜೆಟ್‌ ನಲ್ಲಿ ನಿರ್ಮಾಣವಾಗಿತ್ತು. 200 ಕೋಟಿ ಎಂದರೆ ಕಡಿಮೆ ಬಜೆಟ್‌ ಏನೂ ಅಲ್ಲ. ಆದರೆ ಈ ಸಿನಿಮಾ ನಿರೀಕ್ಷೆಯಂತೆ ಯಶಸ್ಸುಗಳಿಸಿಲ್ಲ. ಸಿನಿಮಾ 151 ಕೋಟಿ ರೂ.ಗಳಿಸಿತು.

ʼಸಲಾರ್‌ʼ, ʼಲಿಯೋʼ : ಇತ್ತೀಚೆಗೆ ದಕ್ಷಿಣ ಭಾರತದಲ್ಲಿ ಬಂದ ದೊಡ್ಡ ಸಿನಿಮಾಗಳಲ್ಲಿ ಈ ಎರಡು ಚಿತ್ರಗಳೂ ಸೇರುತ್ತವೆ. ಸ್ಟಾರ್‌ ನಟರಿಂದಲೇ ಗಮನ ಸೆಳೆದ ಈ ಸಿನಿಮಾಗಳ ಬಾಕ್ಸ್‌ ಆಫೀಸ್‌ ಗಳಿಕೆ ಬಜೆಟ್‌ ಗಿಂತ ಹೆಚ್ಚು ಎನ್ನುವುದು ವಿಶೇಷ.

ಪ್ರಶಾಂತ್‌ ನೀಲ್‌ – ಪ್ರಭಾಸ್‌ ಅವರ ʼಸಲಾರ್‌ʼ 270 ಕೋಟಿ ರೂ. ವೆಚ್ಚದಲ್ಲಿ ಹೊಂಬಾಳೆ ಫಿಲ್ಮ್ಸ್‌ ನಿರ್ಮಾಣ ಮಾಡಿತು. 700 ಕೋಟಿ ಅಧಿಕ ಗಳಿಕೆ ಕಾಣುವ ಮೂಲಕ ಪ್ಯಾನ್‌ ಇಂಡಿಯಾದಲ್ಲಿ ಬಿಗ್‌ ಹಿಟ್‌ ಆಗಿತ್ತು. ಇತ್ತ ದಳಪತಿ ವಿಜಯ್‌ – ಲೋಕೇಶ್‌ ಕನಕರಾಜ್‌ ಅವರ ʼಲಿಯೋʼ 300 ಕೋಟಿಯಲ್ಲಿ ತಯಾರಾಗಿ 550 ಕೋಟಿ ವರ್ಲ್ಡ್‌ ವೈಡ್‌ ಗಳಿಕೆ ಕಂಡಿತು.

ಇವಿಷ್ಟು ಮಾತ್ರವಲ್ಲದೆ ʼ83ʼ, ʼಟೈಗರ್‌ -3ʼ ಸಿನಿಮಾಗಳಿಗೂ ಕೋಟಿ ಕೋಟಿ ಹಣ ಸುರಿಯಲಾಗಿತ್ತು. ದುಬಾರಿ ವೆಚ್ಚದಲ್ಲಿ ಬಂದ ಈ ಸಿನಿಮಾಗಳು ಒಂದೊಂದು ದೃಶ್ಯಗಳಿಗೂ ಲಕ್ಷ ಲಕ್ಷ ಸುರಿದ ಉದಾಹರಣೆಯೂ ಇದೆ.

-ಸುಹಾನ್‌ ಶೇಕ್

Advertisement

Udayavani is now on Telegram. Click here to join our channel and stay updated with the latest news.

Next